ಚಾಮರಾಜನಗರ ಜಿಲ್ಲೆಯ (Chamarajanagar) ಪ್ರಮುಖ ವಾಣಿಜ್ಯ ಬೆಳೆ ಅಂದ್ರೆ ಅರಿಶಿಣ. ಆದರೆ ಈಗಾ ಅರಿಶಿಣ ಬೆಳೆಯ ಬೆಲೆ ಪಾತಾಳಕ್ಕೆ ಇಳಿದಿದೆ. ಸದ್ಯ ಅರಿಶಿಣ ಬೆಳೆಗೆ ಬೆಂಬಲ ಬೆಲೆ ಘೋಷಣೆ ಮಾಡುವಂತೆ ರೈತರು ಹೋರಾಟಕ್ಕಿಳಿದಿದ್ದಾರೆ. ಪ್ರಧಾನಿಗೆ ಪತ್ರ ಚಳುವಳಿ ಮಾಡಿದ್ರೆ, ರಾಜ್ಯ ಸರ್ಕಾರಕ್ಕೆ ಒಂದು ವಾರದ ಗಡುವು ನೀಡಿದ್ದಾರೆ. ಹೌದು, ಕೇಂದ್ರದ ಆತ್ಮನಿರ್ಭರ್ ಯೋಜನೆಯಡಿ ಜಿಲ್ಲೆಗೊಂದು ಬೆಳೆ ಎಂದು ಹೇಳಲಾಗಿತ್ತು. ಇದರ ಅಡಿಯಲ್ಲಿ ಚಾಮರಾಜನಗರ ಜಿಲ್ಲೆ ಪ್ರಮುಖ ವಾಣಿಜ್ಯ ಬೆಳೆಯಾಗಿ ಅರಿಶಿನ ಆಯ್ಕೆ ಮಾಡಿಕೊಳ್ಳಲಾಗಿತ್ತು. ಆದ್ರೀಗಾ ಜಿಲ್ಲೆಯ ಪ್ರಮುಖ ಬೆಳೆಯಾದ ಅರಿಶಿಣಕ್ಕೆ ಸರಿಯಾದ ಬೆಲೆ ಇಲ್ಲದೆ ರೈತರು ಕಂಗಾಲಾಗಿದ್ದಾರೆ. ಇದರಿಂದ ರೈತರು ಬೀದಿಗಿಳಿದು ಹೋರಾಟದ ಹಾದಿ ಹಿಡಿದ್ದಾರೆ. ಸದ್ಯ ಜಿಲ್ಲೆಯಲ್ಲಿ 35 ಸಾವಿರ ಎಕರೆ ಪ್ರದೇಶದಲ್ಲಿ 20 ಸಾವಿರಕ್ಕೂ ಹೆಚ್ಚು ರೈತರು ಅರಿಶಿಣ ಬೆಳೆಯನ್ನ ಬೆಳೆದಿದ್ದಾರೆ. ಸದ್ಯ ಅರಿಶಿಣ ಬೆಳೆ ಕ್ವಿಂಟಾಲ್ ಗೆ 5 ರಿಂದ 6 ಸಾವಿರದ ವರೆಗೆ ಅರಶಿಣ ಮಾರಾಟವಾಗುತ್ತಿದೆ. ಇದರಿಂದ ರೈತರು ಬೆಳೆದ ಬೆಳೆಗೆ ಅಸಲು ಸಹ ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಸರಕಾರದ ಯೋಜನೆಯಡಿ ಆಯ್ಕೆಯಾಗಿರುವ ಬೆಳೆಗೆ ಸೂಕ್ತ ಬೆಲೆಯೇ ಇಲ್ಲ ಎಂಬುದು ದುರದೃಷ್ಟಕರ ಸಂಗತಿಯಾಗಿದೆ. ಈ ಕಾರಣದಿಂದ ಎಂಐಎಸ್ ಅಡಿಯಲ್ಲಿ (MIS) ಸರ್ಕಾರ ಅರಶಿಣ (Turmeric) ಬೆಳೆಯನ್ನ ಕನಿಷ್ಟ 17 ಸಾವಿರ ರೂಪಾಯಿಗೆ ಖರೀದಿ ಮಾಡಬೇಕು ಎಂಬುದು ರೈತರ ಆಗ್ರಹವಾಗಿದೆ.
ಅರಿಶಿಣ ಬೆಳೆ ಪಾತಾಳಕ್ಕೆ ಕುಸಿದಿರುವುದರಿಂದ ಸದ್ಯ ರೈತರು ಹೋರಾಟದ ಹಾದಿ ಹಿಡಿದಿದ್ದಾರೆ. ಕೃಷಿ ವಿವಿಗಳು ಹೇಳುವ ಪ್ರಕಾರ ಒಂದು ಎಕರೆ ಪ್ರದೇಶದಲ್ಲಿ ಸುಮಾರು 20 ರಿಂದ 25 ಕ್ವಿಂಟಾಲ್ ಬೆಳೆಯಬಹುದು ಎಂದು ಅಂದಾಜು ಮಾಡಲಾಗಿದೆ. ಎಂಎಸ್ಪಿ (Minimum Support Price -MSP) ಕಾನೂನು ಪ್ರಕಾರ 4.5 ಲಕ್ಷದಷ್ಟು ಒಂದು ಎಕರೆ ಪ್ರದೇಶಕ್ಕೆ ಖರ್ಚು ಬೀಳುತ್ತಿದೆ.
ಅದರಲ್ಲೂ 2012 ರಲ್ಲೇ 6,000 ಬೆಂಬಲ ಬೆಲೆ ನೀಡಿ ಸರ್ಕಾರ ಅರಿಶಿಣ ಖರೀದಿ ಕೇಂದ್ರ ಸ್ಥಾಪನೆ ಮಾಡಿತ್ತು. ಇದೀಗಾ ಖರ್ಚಿನ ಪ್ರಮಾಣ ಹೆಚ್ಚಾಗಿರುವುದರಿಂದ ಕನಿಷ್ಠ 17 ಸಾವಿರ ರೂ ಗೆ ಸರ್ಕಾರ ಖರೀದಿ ಕೇಂದ್ರ ಸ್ಥಾಪನೆ ಮಾಡಬೇಕು. ಇಲ್ಲದಿದ್ದರೆ ಚುನಾವಣೆ ಸಂದರ್ಭದಲ್ಲಿ ಪಾಠ ಕಲಿಸುವುದಾಗಿ ಸರ್ಕಾರಕ್ಕೆ ರೈತರು ಎಚ್ಚರಿಕೆ ನೀಡಿದ್ದಾರೆ.
ಒಟ್ಟಾರೆ, ಕೇಂದ್ರ ಸರ್ಕಾರ ಯೋಜನೆಯಡಿ ಆಯ್ಕೆಯಾಗಿರುವ ಜಿಲ್ಲೆಯ ಬೆಳೆಗೆ ಸದ್ಯ ಇಂತಹ ಸ್ಥಿತಿ ನಿರ್ಮಾಣವಾಗಿರುವುದು ದುರಂತವೆ ಸರಿ. ಈಗಲಾದರೂ ಈ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ರೈತರ ಸಂಕಷ್ಟಕ್ಕೆ ನೆರವಾಗುತ್ತ ಕಾದುನೋಡಬೇಕಿದೆ.
ವರದಿ: ದಿಲೀಪ್ ಚೌಡಹಳ್ಳಿ, ಟಿವಿ 9, ಚಾಮರಾಜನಗರ
Published On - 2:02 pm, Fri, 17 February 23