ಚಾಮರಾಜನಗರ: ರಾಜ್ಯ ವಿಧಾನಸಭಾ ಚುನಾವಣೆಗೆ(Karnataka Assembly Elections 2023) ದಿನಾಂಕ ಘೋಷಣೆಯಾಗಿದ್ದು ಮೇ 10ರಂದು ಮತದಾನ ನಡೆಯಲಿದೆ. ಮೇ 13ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ಹೀಗಾಗಿ ಸರ್ಕಾರಿ ನೌಕರರಿಗೆ ಚುನಾವಣೆ ತರಬೇತಿ ನೀಡಲಾಗುತ್ತಿದೆ. ಈ ರೀತಿ ಚುನಾವಣೆ ತರಬೇತಿಯಲ್ಲಿದ್ದ ನೌಕರ ಹೃದಯಾಘಾತದಿಂದ(Heart Attack) ಮೃತಪಟ್ಟ ಘಟನೆ ನಡೆದಿದೆ. ಜಗದೀಶ್ (40) ಮೃತ ನೌಕರ.
ಹನೂರಿನ ವಿವೇಕಾನಂದ ಶಾಲೆಯಲ್ಲಿ ಏರ್ಪಡಿಸಿದ್ದ ತರಬೇತಿ ಆರಂಭವಾಗುತ್ತಿದ್ದಂತೆ ಎದೆನೋವಿನಿಂದ ಕುಸಿದು ಬಿದ್ದ ಜಗದೀಶ್, ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಉಸಿರು ನಿಲ್ಲಿಸಿದ್ದಾರೆ. ಜಗದೀಶ್ ತಾಲೂಕು ಖಜಾನೆಯಲ್ಲಿ ಕೆಲಸ ಮಾಡುತ್ತಿದ್ದರು. ಸ್ಥಳಕ್ಕೆ ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ರಾಮನಗರ: ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆ ನೀತಿ ಸಂಹಿತೆ ಜಾರಿ ಮಾಡಲಾಗಿದೆ. ಸದ್ಯ ರಾಮನಗರ ಜಿಲ್ಲೆ ಹಾರೋಹಳ್ಳಿ ತಾಲೂಕಿನ ಗಂಟಕನದೊಡ್ಡಿ ಚೆಕ್ಪೋಸ್ಟ್ನಲ್ಲಿ ಚುನಾವಣಾಧಿಕಾರಿಗಳು ದಾಖಲೆ ಇಲ್ಲದ ವಾಹನದಲ್ಲಿ ಸಾಗಿಸುತ್ತಿದ್ದ 2 ಕೋಟಿ ಹಣ ಜಪ್ತಿ ಮಾಡಿದ್ದಾರೆ. ರಾಮನಗರ ಜಿಲ್ಲಾ ವರಿಷ್ಠಾಧಿಕಾರಿ ಕಾರ್ತಿಕ್ ಹಾಗು ಚುನಾವಣೆ ಅಧಿಕಾರಿ ಅವಿನಾಶ್ ಮೆನನ್ ರಾಜೇಂದ್ರ ನೇತೃತ್ವದಲ್ಲಿ ಎಟಿಎಂಗೆ ಹಣ ಹಾಕುವ ವಾಹನದಲ್ಲಿ ತೆಗೆದುಕೊಂಡು ಹೋಗುತ್ತಿದ್ದ ಎರಡು ಕೋಟಿ ಹಣ ಜಪ್ತಿ ಮಾಡಲಾಗಿದೆ.
ಎಟಿಎಂಗೆ ಹಣ ಹಾಕುವ ವಾಹನದಲ್ಲಿ ದಾಖಲೆ ಇಲ್ಲದೆ ಸಂಜೆ 6 ಗಂಟೆ ಬಳಿಕ ಹಣ ಸಾಗಿಸುತ್ತಿದ್ದರಿಂದ ಅನುಮಾನಗೊಂಡ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಆಗ ಹಣ ಸಿಕ್ಕಿದೆ.ಸಾಗಿಸಲಾಗುತ್ತಿದ್ದ ಹಣಕ್ಕೆ ಅಗತ್ಯ ದಾಖಲೆ ಇಲ್ಲದ ಹಿನ್ನೆಲೆ ಹಣವನ್ನು ವಶಕ್ಕೆ ಪಡೆಯಲಾಗಿದೆ. ಗನ್ಮ್ಯಾನ್ ಇಲ್ಲದೆ ವಾಹನದಲ್ಲಿ ಹಣ ಸಾಗಿಸುತ್ತಿದ್ದ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಹಾರೋಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 12:30 pm, Tue, 18 April 23