ಚಾಮರಾಜನಗರ: ಗಾಳಿ ಮಳೆಗೆ ಸಾವಿರಾರು ಎಕರೆ ಬಾಳೆ ತೋಟ ನಾಶ, 25 ಕೋಟಿ ರೂ. ನಷ್ಟ

|

Updated on: May 06, 2024 | 9:37 AM

ಹಲವಾರು ದಿನಗಳ ನಂತರ ಸುರಿದಿದ್ದ ಮಳೆ ನಗರವಾಸಿಗಳಲ್ಲಿ ಸಂಸತಸ ಮೂಡಿಸಿದ್ದರೆ ಚಾಮರಾಜನಗರದ ರೈತರಿಗೆ ಬವಣೆ ತಂದಿಟ್ಟಿದೆ. ನೀರಿನ ಕೊರತೆಯ ಮಧ್ಯೆಯೂ ಬಾಳೆಯ ಬಂಪರ್ ಬೆಳೆ ಬೆಳೆದಿದ್ದ ರೈತರ ಮುಖವನ್ನು ಕಳಾಹೀನವಾಗಿಸಿದೆ. ಶುಕ್ರವಾರ ಸುರಿದ ಭಾರಿ ಗಾಳಿ ಮಳೆ ಸಾವಿರಾರು ಎಕರೆ ಬಾಳೆ ತೋಟವನ್ನು ನಾಶ ಮಾಡಿದ್ದು, ಕೋಟ್ಯಂತರ ರೂ. ಮೌಲ್ಯದ ಬೆಳೆ ನಷ್ಟಕ್ಕೆ ಕಾರಣವಾಗಿದೆ. ಬೆಳೆ ನಷ್ಟ ಸಂಬಂಧಿತ ವಿವರ ಇಲ್ಲಿದೆ.

ಚಾಮರಾಜನಗರ: ಗಾಳಿ ಮಳೆಗೆ ಸಾವಿರಾರು ಎಕರೆ ಬಾಳೆ ತೋಟ ನಾಶ, 25 ಕೋಟಿ ರೂ. ನಷ್ಟ
ಸಾಂದರ್ಭಿಕ ಚಿತ್ರ
Follow us on

ಚಾಮರಾಜನಗರ, ಮೇ 6: ಚಾಮರಾಜನಗರ (Chamarajanagar) ಜಿಲ್ಲೆಯಲ್ಲಿ ಶುಕ್ರವಾರ ಸುರಿದ ಭಾರಿ ಮಳೆ ಮತ್ತು ಗಾಳಿಯಿಂದ ಸುಮಾರು 1,250 ಎಕರೆ ಪ್ರದೇಶದ ಬಾಳೆ ತೋಟ (Banana Farm) ನಾಶವಾಗಿರುವುದು ತಿಳಿದುಬಂದಿದೆ. 900ಕ್ಕೂ ಹೆಚ್ಚು ರೈತರು 25 ಕೋಟಿ ರೂ.ಗಳಷ್ಟು (Crop Loss) ನಷ್ಟ ಅನುಭವಿಸಿರುವ ಬಗ್ಗೆ ಅಂದಾಜಿಸಲಾಗಿದೆ. ಉತ್ತಮ ಬೆಲೆ ಸಿಗಬಹುದೆಂಬ ನಿರೀಕ್ಷೆಯಲ್ಲಿದ್ದ ರೈತರು ಮುಂದಿನ ವಾರದಲ್ಲಿ ಬೆಳೆ ತೆಗೆಯಲು ನಿರ್ಧರಿಸಿದ್ದರು. ಇದೀಗ ತೋಟಗಳು ಸಂಪೂರ್ಣ ಹಾಳಾಗಿರುವುದರಿಂದ ಕಂಗೆಟ್ಟಿದ್ದಾರೆ. ಪಪ್ಪಾಯಿ ಬೆಳೆಗಾರರು ಕೂಡ ಮಳೆಯ ಆರ್ಭಟಕ್ಕೆ ನಷ್ಟ ಅನುಭವಿಸಿದ್ದಾರೆ.

ಜಿಲ್ಲೆಯಲ್ಲಿ ಚಾಮರಾಜನಗರ, ಕೊಳ್ಳೇಗಾಲ, ಯಳಂದೂರು ಮತ್ತು ಹನೂರು ತಾಲೂಕುಗಳಲ್ಲಿ ಸುಮಾರು 700 ಎಕರೆ ಪ್ರದೇಶದಲ್ಲಿ ಬೆಳೆ ಹಾನಿಯಾಗಿದ್ದು, ಗುಂಡ್ಲುಪೇಟೆ ತಾಲೂಕಿನಲ್ಲಿ ಹೆಚ್ಚು ಹಾನಿಯಾಗಿದೆ.

ಎಕರೆಗೆ ಕನಿಷ್ಠ 2 ಲಕ್ಷ ರೂ. ನಷ್ಟ

ತೋಟಗಾರಿಕಾ ಇಲಾಖೆಯು ಬೆಳೆ ನಷ್ಟದ ಪ್ರಾಥಮಿಕ ಮಾಹಿತಿ ಸಂಗ್ರಹಿಸಿದ್ದು, ಕ್ಷೇತ್ರ ಸಹಾಯಕರು ಮತ್ತು ಗ್ರಾಮ ಲೆಕ್ಕಿಗರ ಮೂಲಕ ಇನ್ನೂ ವರದಿಗಳನ್ನು ಸಂಗ್ರಹಿಸುತ್ತಿದೆ. ಒಂದು ವಾರದಲ್ಲಿ ವಿವರವಾದ ವರದಿಯನ್ನು ನೀಡಲಾಗುವುದು ಎಂದು ಇಲಾಖೆ ತಿಳಿಸಿರುವುದಾಗಿ ‘ದಿ ನ್ಯೂ ಇಂಡಿಯನ್ ಎಕ್ಸ್​​ಪ್ರೆಸ್’ ವರದಿ ಮಾಡಿದೆ. ರೈತರೊಂದಿಗೆ ಸಮನ್ವಯ ಸಾಧಿಸಿ ಆದಷ್ಟು ಬೇಗ ದತ್ತಾಂಶ ಸಂಗ್ರಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಇದರಿಂದ ಬೆಳೆ ನಷ್ಟ ಅನುಭವಿಸಿದವರಿಗೆ ಶೀಘ್ರ ಪರಿಹಾರ ವಿತರಣೆ ಮಾಡಬಹುದಾಗಿದೆ. ರೈತರು ಎಕರೆಗೆ ಕನಿಷ್ಠ 2 ಲಕ್ಷ ರೂ. ನಷ್ಟ ಅನುಭವಿಸಿದ್ದಾರೆ ಎಂದು ತೋಟಗಾರಿಕಾ ಇಲಾಖೆಯ ಮೂಲಗಳು ತಿಳಿಸಿವೆ.

ಶೀಘ್ರ ಪರಿಹಾರದ ಭರವಸೆ

ನೀರಾವರಿ ಪಂಪ್‌ಸೆಟ್‌ಗಳಿಗೆ ಸರಿಯಾಗಿ ವಿದ್ಯುತ್ ಪೂರೈಕೆಯಾಗದಿದ್ದರೂ, ರೈತರು ಬಂಪರ್ ಬೆಳೆಯನ್ನು ಬೆಳೆದಿದ್ದರು. ಇದೀಗ ಗಾಳಿ ಮಳೆ ಅವರ ಬೆಳೆಯನ್ನು ನಾಶ ಮಾಡಿದೆ. ಬೆಳೆ ನಷ್ಟಕ್ಕೆ ಸಂಬಂಧಿಸಿದ ವರದಿ ಸಿದ್ಧವಾದ ನಂತರ ರಾಜ್ಯ ವಿಪತ್ತು ಪರಿಹಾರ ನಿಧಿ ಮಾರ್ಗಸೂಚಿಗಳ ಪ್ರಕಾರ ಪರಿಹಾರ ನೀಡುವುದಾಗಿ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಭರವಸೆ ನೀಡಿದ್ದಾರೆ.

ಮೈಸೂರು ತಾಲೂಕಿನ ಕತ್ತೂರು ಹಾಗೂ ಇತರೆಡೆ ಗಾಳಿ ಮಳೆಯಿಂದಾಗಿ ಬಾಳೆ ತೋಟಗಳು ನಾಶವಾಗಿವೆ. ಕಲ್ಲಂಗಡಿ ಬೆಳೆಗೂ ಹಾನಿಯಾಗಿದೆ.

ಇದನ್ನೂ ಓದಿ: ಬಂಧನ ಭೀತಿಯಿಂದ ಕಾಡು ಸೇರಿದ್ದ ಗ್ರಾಮಸ್ಥರನ್ನು ‌ನಾಡಿಗೆ ಕರೆತಂದ ಜಿಲ್ಲಾಡಳಿತ

ಶುಕ್ರವಾರ ಸಂಜೆ ಸುರಿದ ಭಾರಿ ಗಾಳಿ ಮಳೆಯಿಂದ ಚಾಮರಾಜನಗರದ ಹಲವೆಡೆ ಮತ್ತು ಮೈಸೂರಿನಲ್ಲಿ ಭಾರಿ ಹಾನಿ ಸಂಭವಿಸಿತ್ತು. ಮೈಸೂರು ನಗರದಲ್ಲಿ ಅನೇಕ ಮರಗಳು ಧರಾಶಾಯಿಯಾಗಿ ಸಂಚಾರಕ್ಕೆ ಅಡಚಣೆಯಾಗಿತ್ತು. ನಗರದ ಬಸ್ ನಿಲ್ದಾಣ ಪ್ರದೇಶಲ್ಲಿ ಅನೇಕ ಮರಗಳು ಧರೆಗುರುಳಿದ್ದವು. ಹೆಬ್ಬಾಳ, ದಟ್ಟಗಳ್ಳಿ, ಲಿಂಗಾಂಬುಧಿ ಸೇರಿದಂತೆ ಅನೇಕ ಪ್ರದೇಶಗಳಲ್ಲಿ ಮಳೆ ಸಂಬಂಧಿತ ಹಾನಿಯಾಗಿತ್ತು. ಹಲವೆಡೆ ವಿದ್ಯುತ್ ಕಂಬಗಳೂ ನೆಲಕ್ಕುರುಳಿದ್ದವು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ