ಸಿಎಂ ಚಾಮರಾಜನಗರ ಭೇಟಿ; ಅಧಿಕಾರ ಕಳೆದುಕೊಳ್ಳುವ ಮೌಢ್ಯ ಅಳಿಸಲು ಮುಂದಾದ ಬೊಮ್ಮಾಯಿ: ಇಲ್ಲಿದೆ ಇತಿಹಾಸ

| Updated By: guruganesh bhat

Updated on: Oct 06, 2021 | 9:51 PM

CM Basavaraj Bommai Visit to Chamarajanagar: ಅಧಿಕಾರದಲ್ಲಿರುವಾಗ ಚಾಮರಾಜನಗರಕ್ಕೆ ಭೇಟಿ ನೀಡಿದರೆ ಅಧಿಕಾರ ಕಳೆದುಕೊಳ್ಳುವ ನಂಬಿಕೆಯೊಂದು ಕರ್ನಾಟಕದ ರಾಜಕಾರಣಿಗಳಲ್ಲಿದೆ. ಈ ಮೂಢ ನಂಬಿಕೆಯನ್ನು ಯಾರೆಲ್ಲ ಅನುಸರಿಸಿದ್ದಾರೆ? ಯಾರು ಧಿಕ್ಕರಿಸಿದ್ದಾರೆ ಎಂಬ ಕುತೂಹಲಕರ ಮಾಹಿತಿ ಇಲ್ಲಿದೆ.

ಸಿಎಂ ಚಾಮರಾಜನಗರ ಭೇಟಿ; ಅಧಿಕಾರ ಕಳೆದುಕೊಳ್ಳುವ ಮೌಢ್ಯ ಅಳಿಸಲು ಮುಂದಾದ ಬೊಮ್ಮಾಯಿ: ಇಲ್ಲಿದೆ ಇತಿಹಾಸ
ಚಾಮರಾಜನಗರಕ್ಕೆ ಬಸವರಾಜ ಬೊಮ್ಮಾಯಿ ಭೇಟಿ
Follow us on

ಮೈಸೂರು: ಬುಧವಾರ‌ ನಾನು ಚಾಮರಾಜನಗರಕ್ಕೆ ಭೇಟಿ ನೀಡುತ್ತೇನೆ. ಕೆಲವರು ಅಲ್ಲಿಗೆ ಹೋಗಬಾರದು ಇಲ್ಲಿಗೆ ಹೋಗಬಾರದು ಅಂತ ಏನೇನೋ ಹೇಳುತ್ತಾರೆ. ನಾವು ಸಿನಿಮಾ ನೋಡಬೇಕು ಅನಿಸಿದಾಗ ಥಿಯೇಟರ್‌ಗೆ ಹೋಗುತ್ತೇವೆ. ಥಿಯೇಟರ್ ಹೇಗಿರುತ್ತೆ ಅಂತ ನೋಡಲ್ಲ. ಏಕೆಂದರೆ ಯಾವುದೇ ಜಾಗದಲ್ಲಿ ದೋಷ ಇರುವುದಿಲ್ಲ. ಬದಲಿಗೆ ನಾವು ನೋಡುವ ದೃಷ್ಟಿಕೋನದಲ್ಲಿಯೇ ದೋಷ ಇರುತ್ತದೆ. ಅಭಿವೃದ್ಧಿ ದೃಷ್ಟಿಯಿಂದ ಯಾವಾಗ ಬೇಕಾದರೂ ಚಾಮರಾಜನಗರಕ್ಕೆ ಭೇಟಿ ನೀಡುತ್ತೇನೆ ಎಂದು ಮೈಸೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದರು.

ಮುಖ್ಯಮಂತ್ರಿ ಪದವಿಯಲ್ಲಿ ಇರುವವರು ಚಾಮರಾಜನಗರಕ್ಕೆ ಭೇಟಿ ನೀಡಿದರೆ ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ಮೂಢ ನಂಬಿಕೆಯನ್ನು ಸ್ಪಷ್ಟವಾಗಿ ಅಳಿಸಿಹಾಕುವ ಸಂದೇಶವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈಮೂಲಕ ನೀಡಿದ್ದಾರೆ.

ಈಹಿಂದೆ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ದೇವರಾಜ ಅರಸು, ಗುಂಡೂರಾವ್, ರಾಮಕೃಷ್ಣ ಹೆಗಡೆ, ಎಸ್.ಆರ್. ಬೊಮ್ಮಾಯಿ ಮತ್ತು ವೀರೇಂದ್ರ ಪಾಟೀಲ್ ಅವರುಗಳು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಚಾಮರಾಜನಗರಕ್ಕೆ ಭೇಟಿ ನೀಡಿದ್ದರು. ತಮ್ಮ ಚಾಮರಾಜನಗರ ಭೇಟಿಯ 6 ತಿಂಗಳ ಒಳಗೆ ಬೇರೆ ಬೇರೆ ಕಾರಣಗಳಿಗಾಗಿ ಈಎಲ್ಲರೂ ಮುಖ್ಯಮಂತ್ರಿ ಪಟ್ಟವನ್ನು ಕಳೆದುಕೊಂಡಿದ್ದರು. ಈ ಎಲ್ಲ ಬೆಳವಣಿಗೆಗಳು ಮುಖ್ಯಮಂತ್ರಿಯಾದವರು ಚಾಮರಾಜನಗರಕ್ಕೆ ಭೇಟಿ ನೀಡಿದರೆ ಅಧಿಕಾರ ಕಳೆದುಕೊಳ್ಳಬೇಕಾಗುತ್ತದೆ ಎಂಬ ಮೂಢನಂಬಿಕೆಯೊಂದು ಸೃಷ್ಟಿಯಾಗಿಬಿಟ್ಟಿತ್ತು.

ಇದೇ ನಂಬಿಕೆಗೆ ಕಟ್ಟುಬಿದ್ದು ನಂತರ ಮುಖ್ಯಮಂತ್ರಿಗಳಾಗಿ ಕಾರ್ಯನಿರ್ವಹಿಸಿದ ಎಸ್. ಬಂಗಾರಪ್ಪರನ್ನೂ ಸೇರಿ ವೀರಪ್ಪ ಮೊಯ್ಲಿ, ಎಚ್.ಡಿ. ದೇವೇಗೌಡ, ಜೆ.ಎಚ್. ಪಟೇಲ್, ಎಸ್. ಎಂ. ಕೃಷ್ಣ, ಧರಂಸಿಂಗ್ ಚಾಮರಾಜನಗರಕ್ಕೆ ಭೇಟಿ ನೀಡಲೇ ಇಲ್ಲ. ಆದರೆ ಈ ಮೌಢ್ಯವನ್ನು ಧಿಕ್ಕರಿಸಿದ ಎಚ್.ಡಿ.ಕುಮಾರಸ್ವಾಮಿ 2007ರ ಮೇ ತಿಂಗಳಲ್ಲಿ ಚಾಮರಾಜನಗರಕ್ಕೆ ಭೇಟಿ ನೀಡಿದ್ದರು. ಆದರೆ ಅವರೂ ಕೆಲ ತಿಂಗಳಲ್ಲೇ ಅಧಿಕಾರದಿಂದ ದೂರವಾಗಬೇಕಾಯಿತು. ಈಮೂಲಕ ಚಾಮರಾಜನಗರದ ಕುರಿತು ಹುಟ್ಟಿಕೊಂಡಿದ್ದ ನಂಬಿಕೆ ಇನ್ನಷ್ಟು ಬಲಗೊಂಡಿತು.

ನಂತರ  ಮುಖ್ಯಮಂತ್ರಿಯಾದ ಬಿ.ಎಸ್.ಯಡಿಯೂರಪ್ಪ ಸಹ ಚಾಮರಾಜನಗರಕ್ಕೆ ಭೇಟಿ ನೀಡಲಿಲ್ಲ. ಅದೇ ಹಾದಿಯನ್ನು ಅನುಸರಿಸಿದ ಸದಾನಂದ ಗೌಡ ಸಹ ಚಾಮರಾಜನಗರದಿಂದ ದೂರವೇ ಉಳಿದರು. ಜಗದೀಶ್ ಶೆಟ್ಟರ್ ತಮ್ಮ ಅಧಿಕಾರಾವಧಿಯ ಕೊನೆಯ ದಿನಗಳಲ್ಲಿ ಭೇಟಿ ನೀಡಿದ್ದರು

ಆದರೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾದಾಗ ಚಾಮರಾಜನಗರಕ್ಕೆ ಅಂಟಿದ್ದ ಕಳಂಕವನ್ನು ತೊಳೆದುಹಾಕಿದ್ದರು. ಚಾಮರಾಜನಗರಕ್ಕೆ ಹಲವು ಬಾರಿ ಭೇಟಿ ನೀಡಿದ ಅವರು ಸಾಕಷ್ಟು ಅನುದಾನವನ್ನು ಸಹ ಒದಗಿಸಿದರು. ಅಲ್ಲದೇ ಮುಖ್ಯಮಂತ್ರಿಯಾಗಿ  5 ವರ್ಷಗಳ ಅಧಿಕಾರವನ್ನು ಪೂರ್ಣಗೊಳಿಸಿದರು.

ಇದೀಗ ಬಸವರಾಜ ಬೊಮ್ಮಾಯಿ ಅವರು ಮೌಢ್ಯವನ್ನೆಲ್ಲ ಅಳಿಸಿಹಾಕುವ ನಿಟ್ಟಿನಲ್ಲಿ ಅಭಿವೃದ್ಧಿಯ ಜಪ ಮಾಡುತ್ತ ಚಾಮರಾಜನಗರಕ್ಕೆ ಭೇಟಿ ನೀಡಲಿದ್ದಾರೆ. ಹೀಗಾಗಿ ರಾಜಕೀಯ ಆಸಕ್ತರು ಅವರ ಭೇಟಿಯ ಬಗ್ಗೆ ಕುತೂಹಲ ತಳೆದಿದ್ದಾರೆ.

ಇದನ್ನೂ ಓದಿ: 

ಬೆಂಗಳೂರಿನ ರಸ್ತೆ ಗುಂಡಿ ಬಗ್ಗೆ ವರದಿ ಸಿದ್ಧಪಡಿಸಲು ಕಾರ್ಯಪಡೆ ರಚನೆ: ಬಸವರಾಜ ಬೊಮ್ಮಾಯಿ

ಬೆಳಗಾವಿಯ ಸುವರ್ಣ ಸೌಧದಲ್ಲೇ ಚಳಿಗಾಲದ ಅಧಿವೇಶನ: ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ

Published On - 7:12 pm, Wed, 6 October 21