
ಚಾಮರಾಜನಗರ: ಅದು ಬರದ ನಾಡು ಎಂಬ ಹಣೆಪಟ್ಟಿ ಕಟ್ಟಿಕೊಂಡು ಪರದಾಡುತ್ತಿರುವ ಜಿಲ್ಲೆ. ಮಳೆಯಾದರೆ ಅಲ್ಲಿ ಬೆಳೆ, ಇಲ್ಲವಾದರೆ ರೈತರ ಬದುಕು ಅಕ್ಷರಶಃ ಬೀದಿಪಾಲು. ಪರಿಸ್ಥಿತಿ ಹೀಗಿರುವಾಗ ಆ ಜಿಲ್ಲೆಯ ಅಂತರ್ಜಲ ವೃದ್ಧಿಗೆ ಅಂತಾ ಉಜ್ವಲವಾದ ಯೋಜನೆಯೊಂದನ್ನ ಸರ್ಕಾರ ಜಾರಿಗೆ ತಂದಿತ್ತು. ಆದ್ರೆ ಗಡುವಿನ ಒಳಗೆ ಕೆಲಸ ಮುಗಿಯುವ ಲಕ್ಷಣ ಕಾಣ್ತಿಲ್ಲ.
ಚಾಮರಾಜ ನಗರ ಜಿಲ್ಲೆಯಲ್ಲಿ ಮಳೆ ಬಾರದೆ ಕೆರೆಗಳು ಬತ್ತಿ ಹೋಗುತ್ತವೆ. ಹನಿ ಹನಿ ನೀರಿಗೂ ಜನ ಪರದಾಡುವಂತಹ ಪರಿಸ್ಥಿತಿ ಉಂಟಾಗುತ್ತದೆ. ಅಕಸ್ಮಾತ್ ಉತ್ತಮ ರೀತಿಯಲ್ಲಿ ಮಳೆ ಬಂದರೂ ಬೇಸಿಗೆ ಬರುವಷ್ಟರಲ್ಲೇ ನೀರಿನ ಮೂಲಗಳೆಲ್ಲಾ ಬಾಯಿತೆರೆದು ನಿಲ್ಲುತ್ತವೆ. ಹೀಗಾಗಿ ಜನ ಜಾನುವಾರುಗಳಿಗೆ ನೀರು ಒದಗಿಸಲು ಜಿಲ್ಲೆಯ ಜನ ಪರದಾಡುತ್ತಾರೆ.
ನೀರು ಇಂಗಿಸಿ ಅಂತರ್ಜಲ ವೃದ್ಧಿಸಲು ಮಾಸ್ಟರ್ ಪ್ಲ್ಯಾನ್!
ಹೀಗಾಗಿ, 5 ವರ್ಷಗಳ ಹಿಂದೆ ಜಿಲ್ಲೆಯ 20 ಕೆರೆಗಳಿಗೆ ನೀರು ತುಂಬಿಸಿ ಜನರ ದಾಹ ನೀಗಿಸಲು ಯೋಜನೆ ರೂಪಿಸಲಾಗಿತ್ತು. ಇದು ಯಶಸ್ಸು ಕಂಡಿತ್ತು. ಆದ್ರೆ ಕೆರೆಗೆ ನೀರು ತುಂಬಿಸುವ ಯೋಜನೆ ಕೆಲವೇ ಕ್ಷೇತ್ರಗಳಿಗೆ ಸೀಮೀತವಾಗಿದ್ದರಿಂದ ಎಲ್ಲೆಡೆ ಅನುಕೂಲ ಆಗಿರಲಿಲ್ಲ.
ಜಿಲ್ಲೆಯ ಎಲ್ಲಾ ಭಾಗಗಳಿಗೂ ಅನುಕೂಲ ಕಲ್ಪಿಸಲು ಅಧಿಕಾರಿಗಳು ಜಿಲ್ಲೆಯಾದ್ಯಂತ ಜಲಾಮೃತ ಯೋಜನೆ ಅನುಷ್ಠಾನಕ್ಕೆ ಮುಂದಾಗಿದ್ದಾರೆ. 29 ಕೆರೆಗಳನ್ನ ಈ ಯೋಜನೆ ವ್ಯಾಪ್ತಿಗೆ ಒಳಪಡಿಸಲಾಗಿದೆ. 5 ಕೋಟಿ ವೆಚ್ಚದಲ್ಲಿ ಬ್ಲೂಪ್ರಿಂಟ್ ತಯಾರಿಸಲಾಗಿದೆ. ಆದರೆ ಈ ಯೋಜನೆ ಅಂದುಕೊಂಡಿದ್ದಕ್ಕಿಂತ ಹೆಚ್ಚು ಕಾಲ ತೆಗೆದುಕೊಳ್ಳುತ್ತಿರುವುದಕ್ಕೆ ರೈತರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಒಟ್ನಲ್ಲಿ ದೇವರು ವರ ಕೊಟ್ಟರೂ ಪೂಜಾರಿ ಕೊಡಲಿಲ್ಲ ಅನ್ನೋ ಹಾಗೆ ಅಧಿಕಾರಿಗಳು ಬೇಗ ಬೇಗ ಕೆಲಸವನ್ನ ಮುಗಿಸದೇ ಇರೋದು ರೈತರ ಚಿಂತೆಗೆ ಕಾರಣವಾಗಿದೆ. ಮಳೆಗಾಲ ಆರಂಭಕ್ಕೂ ಮುನ್ನ ಯೋಜನೆ ಪೂರ್ಣಗೊಂಡರೆ ನೀರು ಶೇಖರಣೆ ಸುಲಭವಾಗುತ್ತದೆ. ಹಾಗೆ ಮುಂದಿನ ಬೇಸಿಗೆಗೆ ಉಪಯೋಗಕ್ಕೆ ಬರುತ್ತದೆ ಎಂಬ ಆಶಯ ರೈತರದ್ದು. ಆದ್ರೆ ಯೋಜನೆ ನಿಧಾನಗತಿಯಲ್ಲಿ ಸಾಗಿರೋದು ವಿಪರ್ಯಾಸ.
Published On - 1:28 pm, Sat, 22 February 20