
ಚಾಮರಾಜನಗರ, ಜ.8: ಬರೋಬ್ಬರಿ 5 ತಿಂಗಳಿನಿಂದ ಅರಣ್ಯಾಧಿಕಾರಿಗಳ ನಿದ್ದೆಗೆಡಿಸಿದ್ದ ನಟೋರಿಯಸ್ ಗೋವಿಂದ (Govinda) ಅಲಿಯಾಸ್ ಮರಿ ವೀರಪ್ಪನ್ ಇದೀಗ ಕೊನೆಗೂ ಅರಣ್ಯಾಧಿಕಾರಿಗಳ ಕೈಯಲ್ಲಿ ಲಾಕ್ ಆಗಿದ್ದಾನೆ. ಈ ಮರಿ ವೀರಪ್ಪನ್ ಬಂಧನ ಮಲೆ ಮಹದೇಶ್ವರ ವನ್ಯ ಜೀವಿಧಾಮದ ಸಿಬ್ಬಂದಿಗೆ ದೊಡ್ಡ ಸವಾಲಾಗಿತ್ತು. ಇದೀಗ ನಿರಂತರ ಕಾರ್ಯಚರಣೆಯ ನಂತರ ಗೋವಿಂದನ್ನು ಬಂಧಿಸಲಾಗಿದೆ. ಪಚ್ಚೆದೊಡ್ಡಿ ಗ್ರಾಮದ ಬಳಿ ಹುಲಿಯನ್ನು ಕೊಂದು ಮೂರು ಭಾಗಗಳಾಗಿ ತುಂಡರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ನಟೋರಿಯಸ್ ಗೋವಿಂದ ಹುಡುಕಾಟ ನಡೆದಿತ್ತು. ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಪಚ್ಚೆದೊಡ್ಡಿ ಕಾಡಂಚಿನ ಗ್ರಾಮದಲ್ಲಿ ಈ ನಟೋರಿಯಸ್ ಗೋವಿಂದ ತಿರುಗಾಡುತ್ತಿದ್ದ ಎಂದು ಹೇಳಲಾಗಿತ್ತು.
ಇದೀಗ ಅರಣ್ಯಾಧಿಕಾರಿಗಳು ಮೈಸೂರಿನ ರೈಲ್ವೆ ನಿಲ್ಧಾಣದಲ್ಲಿ ಆರೋಪಿಯನ್ನು ಸೆರೆ ಹಿಡಿದಿದ್ದಾರೆ. ಗೋವಿಂದ ಹುಲಿಗಳಿಗೆ ಕಾರ್ಬೊಫ್ಯೂರಾನ್ ವಿಷ ಹಾಕಿ ಸತ್ತ ಬಳಿಕ ದೇಹವನ್ನು ಮೂರು ತುಂಡಗಳಾಗಿ ಕತ್ತರಿಸುತ್ತಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಪ್ರಕರಣ ಅರಣ್ಯಾಧಿಕಾರಿಗಳಿಗೆ ದೊಡ್ಡ ತಲೆನೋವಾಗಿತ್ತು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಪಚ್ಚಮಲ್ಲ, ಸಿದ್ದ, ಸಂಪು, ಚಂದು ಹಾಗೂ ಅಭಿಷೇಕ್ ಎಂಬುವವರನ್ನು ಬಂಧಿಸಲಾಗಿತ್ತು. ಆದರೆ ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿಗಳಿಗೆ ಇತ್ತೀಚೆಗಷ್ಟೆ ಕೊಳ್ಳೇಗಾಲ ಜೆಎಂಎಫ್ ಸಿ ನ್ಯಾಯಾಲಯದಿಂದ ಜಾಮೀನು ಮಂಜೂರು ಮಾಡಲಾಗಿತ್ತು. ಆದ್ರೆ 5 ತಿಂಗಳಿಂದ ಅರಣ್ಯ ಅಧಿಕಾರಿಗಳ ಕೈಗೆ ಸಿಗದೆ ಆಟವಾಡಿಸುತ್ತಿದ್ದ ಗೋವಿಂದನ ಖಚಿತ ಮಾಹಿತಿ ಸಿಕ್ಕ ತಕ್ಷಣ ಅರಣ್ಯಾಧಿಕಾರಿಗಳು ಅವನನ್ನು ಬಂಧಿಸಿದ್ದಾರೆ. ಬರೋಬ್ಬರಿ 30 ಮಂದಿ ಅರಣ್ಯ ಸಿಬ್ಬಂದಿಗಳು ಬೃಹತ್ ಕಾರ್ಯಾಚರಣೆ ನಡೆಸಿದ್ದಾರೆ.
ಇದನ್ನೂ ಓದಿ: ಗ್ರಾಹಕರ ಮೊಗದಲ್ಲಿ ಮಂದಹಾಸ ತಂದ ‘ಕೆಂಪು ರಾಣಿ’, ಸಂಕಷ್ಟದಲ್ಲಿ ರೈತರು
ಕಾಡುಗಳ್ಳ ವೀರಪ್ಪನ್ ಸತ್ತು ಹಲವು ವರ್ಷಗಳಾಗಿದ್ದರೂ, ಅವನಷ್ಟೇ ಅರಣ್ಯ ಪ್ರದೇಶದಲ್ಲಿ ಕ್ರೌರ್ಯ ಮೆರೆವ ಈ ಗೋವಿಂದನ್ನು ಮರಿ ವೀರಪ್ಪನ್ ಎಂದು ಕರೆಯಾಲಾಗಿತ್ತು. ಇತ್ತೀಚೆಗೆ (ನವೆಂಬರ್ 2025 ರಲ್ಲಿ) ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ವನ್ಯಧಾಮದಲ್ಲಿ ನಡೆದ ಭೀಕರ ಹುಲಿ ಬೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹೆಸರು ಮತ್ತೆ ಚರ್ಚೆಗೆ ಬಂದಿದೆ. ಮಲೆ ಮಹದೇಶ್ವರ ವನ್ಯಧಾಮದ ಪಚ್ಚೆದೊಡ್ಡಿ ಗಸ್ತಿನಲ್ಲಿ ಚಿರತೆ ಅಥವಾ ಹುಲಿಗಳನ್ನು ಗುರಿಯಾಗಿಸಿ ಇರಿಸಿದ್ದ ವಿಷವನ್ನು ಸೇವಿಸಿ ದೊಡ್ಡ ಹುಲಿಯೊಂದು ಸಾವನ್ನಪ್ಪಿತ್ತು. ಅದನ್ನು ಮೂರು ತುಂಡುಗಳಾಗಿ ಕತ್ತರಿಸಿ ಕಾಡಿನೊಳಗೆ ಬಿಸಾಡಿದ್ದರು. ಈ ಭೀಕರ ಕೃತ್ಯ ಅರಣ್ಯ ಇಲಾಖೆ ಮತ್ತು ಪೊಲೀಸರನ್ನು ಬೆಚ್ಚಿಬೀಳಿಸಿತ್ತು. ಇದು ಕೇವಲ ಬೇಟೆಯಲ್ಲ, ಅರಣ್ಯ ಅಧಿಕಾರಿಗಳ ಮೇಲಿನ ಆಕ್ರೋಶ ಎಂದು ಹೇಳಲಾಗಿತ್ತು. ಇದೀಗ ಆತನ ಬಂಧನ ಮಾಡಲಾಗಿದೆ.
ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:47 am, Thu, 8 January 26