ಚಾಮರಾಜನಗರ: ಡಿಸೆಂಬರ್ 8ರಂದು ನಾಡಿನಾದ್ಯಂತ ಷಷ್ಠಿ ಪಂಚಮಿ ಆಚರಣೆ ನಡೆದಿದೆ. ಷಷ್ಠಿ ಪಂಚಮಿ ಹಿನ್ನೆಲೆ ಜನ ಹುತ್ತಕ್ಕೆ ಹಾಲು, ತುಪ್ಪ ಎರೆದು ಪೂಜಿಸುವ ವಾಡಿಕೆ ಇದೆ. ಆದ್ರೆ ಚಾಮರಾಜನಗರದ ಹಲವೆಡೆ ಕೆಲ ಜನಾಂಗದವ್ರು ಹುತ್ತಕ್ಕೆ ಕೋಳಿ ಬಲಿ ಕೊಡ್ತಾರೆ. ಕೋಳಿಗಳ ಕಾಲು ಕಟ್ಟಿ, ರೆಕ್ಕೆ ಬಿಗಿ ಹಿಡಿದು ಹುಂಜಗಳನ್ನ ಮಿಸುಕಾಡೋಕೂ ಬಿಡದೆ, ಕುತ್ತಿಗೆ ಹಿಡಿದು ಕೆಳಗಿರುವ ಹುತ್ತಕ್ಕೆ ಪೂಜೆ ಪುನಸ್ಕಾರ ಮಾಡ್ತಾರೆ. ಗಂಧದ ಕಡ್ಡಿಯ ಹೊಗೆಯ ನಡುವೆ, ಹುತ್ತಕ್ಕೆ ರಕ್ತದ ನೈವೇದ್ಯ ನಡೆದಿದೆ.
ಹೌದು, ಇದು ಭಯಾನಕ ಅನ್ನಿಸಿದ್ರೂ, ಈ ಜನರ ಪಾಲಿಗೆ ಮಾತ್ರ ಇದು ಹಬ್ಬ. ಯಾಕಂದ್ರೆ, ಚಂಪಾಷಷ್ಠಿಯಲ್ಲಿ ಎಲ್ರೂ ಹುತ್ತಕ್ಕೆ ಹಾಲು, ತುಪ್ಪ ಎರೆಯುತ್ತಾರೆ. ಆದ್ರೆ, ಚಾಮರಾಜನಗರದ ಹಲವೆಡೆ ಕೆಲ ಜನಾಂಗದವ್ರು ಹುತ್ತಕ್ಕೆ ಕೋಳಿ ಬಲಿ ಕೊಡ್ತಾರೆ. ಮಲ್ಲೇಯ್ಯನಪುರ, ಮೂಡಲಪುರ, ಎಡಪುರ ಸೇರಿದಂತೆ ಹಲವೆಡೆ ಹುತ್ತಕ್ಕೆ ಕೋಳಿ ಬಲಿ ಕೊಟ್ಟಿದ್ದಾರೆ. ಅಂದಹಾಗೇ, ಷಷ್ಠಿ ದಿನ ಮನೆಯವ್ರೆಲ್ಲ ಉಪವಾಸದ ಹಬ್ಬ ಆಚರಿಸುತ್ತಾರೆ. ಮಹಿಳೆಯರು-ಪುರುಷರೆಲ್ಲ ಜೊತೆಯಾಗಿ ಹೋಗಿ ಹುತ್ತಕ್ಕೆ ಹಾಲು, ತುಪ್ಪದ ನೈವೇದ್ಯ ಮಾಡುತ್ತಾರೆ. ಜೊತೆಗೆ ವರ್ಷದಿಂದ ಸಾಕಿದ ಕೋಳಿಯನ್ನ ತಂದು ಕೂಯ್ದು, ಹುತ್ತಕ್ಕೆ ರಕ್ತವನ್ನ ಎರೆಯುತ್ತಾರೆ. ಹಾಗೆ, ಕೋಳಿಯ ತಲೆಯನ್ನ ಹುತ್ತಕ್ಕೆ ಹಾಕಿ, ನಾಗಪ್ಪನಲ್ಲಿ ಪ್ರಾರ್ಥನೆ ಮಾಡ್ತಾರೆ.
ಹುತ್ತಕ್ಕೆ ಕೋಳಿ ರಕ್ತ, ಅದರ ತಲೆ, ಮೊಟ್ಟೆ ಹಾಕುವ ಪದ್ದತಿ ಇಂದಿನದಲ್ಲ. ತಲೆತಲಾಂತರದಿಂದಲೂ ಇದು ರೂಢಿಯಲ್ಲಿದೆ. ಇದನ್ನ ಹಿಂದುಳಿದ ವರ್ಗಗಳು, ಪರಿಶಿಷ್ಟರು ಆಚರಿಸುತ್ತಾರೆ. ನಗರ, ಗ್ರಾಮಾಂತರ ಪ್ರದೇಶವೆನ್ನದೆ ಇದನ್ನ ಆಚರಿಸಲಾಗುತ್ತೆ. ರೈತ ಜಮೀನಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ಸರ್ಪ ಕಾಣಿಸಿಕೊಳ್ಳಬಾರದು, ತೊಂದರೆ ನೀಡಬಾರದು ಎಂಬ ಉದ್ದೇಶದಿಂದ ಹುತ್ತಕ್ಕೆ ಹಾಲು, ತುಪ್ಪ, ಮೊಟ್ಟೆ ಹಾಗೂ ಕೋಳಿ ಬಲಿ ನೀಡಲಾಗುತ್ತಂತೆ.
ಏನೇ ಹೇಳಿ, ವೈಜ್ಞಾನಿಕವಾಗಿ ಹಾವು ಹಾಲನ್ನ ಕುಡಿಯೋದಿಲ್ಲ ಅಂತಾರೆ.. ಆದ್ರೆ, ಜನ ಮಾತ್ರ ಹಬ್ಬ, ಆಚರಣೆಗಾಗಿ ಹುತ್ತಕ್ಕೆ ಕೋಳಿ ಬಲಿ ಕೊಡ್ತಿದ್ದಾರೆ. ಪ್ರಪಂಚ ಬದಲಾದ್ರೂ, ಕೆಲವು ಆಚರಣೆಗಳು ಹಾಗೇ ಇದೆ ಅನ್ನೋದಕ್ಕೆ ಇದೇ ಸಾಕ್ಷಿ.
ವರದಿ: ದಿಲೀಪ್ ಚೌಡಹಳ್ಳಿ, ಟಿವಿ9 ಚಾಮರಾಜನಗರ
ಇದನ್ನೂ ಓದಿ: ಕತ್ರಿನಾ ಮದುವೆ ಉಂಗುರದ ಬೆಲೆ ತಿಳಿದು ಅಚ್ಚರಿ ವ್ಯಕ್ತ ಪಡಿಸಿದ ಫ್ಯಾನ್ಸ್; ಅಬ್ಬಬ್ಬಾ ಎಷ್ಟು ದುಬಾರಿ ಈ ವಿವಾಹ