ಚಾಮರಾಜನಗರ: ಸರ್ಕಾರಿ ನೌಕರಿಗೆ ಸೇರಿ ನಿವೃತ್ತಿ ಅಂಚಿಗೆ ಬಂದರೂ ಸ್ವಂತ ಮನೆ ಕಟ್ಟಿಸಿ ಕೊಳ್ಳುವ ಪೌರ ಕಾರ್ಮಿಕರ ಕನಸು ನನಸಾಗಿಯೇ ಉಳಿದಿತ್ತು. ಜಿಲ್ಲೆಯ ಗುಂಡ್ಲುಪೇಟೆ ಪಟ್ಟಣದ ಪೌರ ಕಾರ್ಮಿಕರಿಗೆ ಕಳೆದ ನಾಲ್ಕು ವರ್ಷಗಳ ಹಿಂದೆ ಸರ್ಕಾರ ಗೃಹ ಭಾಗ್ಯ ಯೋಜನೆ ಅಡಿ ಮನೆ ಮಂಜೂರು ಮಾಡಿತ್ತು. ಇನ್ನೇನು ಮನೆ ಸಿಗಲಿದೆ ಎಂದು ನಾಲ್ಕು ವರ್ಷಗಳಿಂದ ಜಾತಕ ಪಕ್ಷಿಗಳ ರೀತಿ ಕಾಯುತ್ತಿದ್ದ ಅವರಿಗೆ ನಿನ್ನೆ ಮನೆಯ ಕೀ ಹಸ್ತಾಂತರ ಕೂಡ ಸಚಿವರಿಂದ ಆಯಿತು. ಆದರೆ ಮನೆ ಹಸ್ತಾಂತರ ಆದ ಮರು ಕ್ಷಣವೇ ಪೌರ ಕಾರ್ಮಿಕರು ಅಸಮಧಾನ ಹೊರ ಹಾಕಿದ್ದಾರೆ.
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಪಟ್ಟಣದ ಹದಿನೈದು ಮಂದಿ ಪೌರ ಕಾರ್ಮಿಕರಿಗೆ ನೂತನ ಮನೆಗಳ ಹಂಚಿಕೆ ಮಾಡಲಾಯಿತು. ಗುಂಡ್ಲುಪೇಟೆ ಪುರಸಭಾ ವ್ಯಾಪ್ತಿಯಲ್ಲಿ ಒಟ್ಟು 19 ಪೌರ ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದಾರೆ. 19 ಪೌರ ಕಾರ್ಮಿಕರ ಪೈಕಿ 15 ಮಂದಿಗೆ ಮಾತ್ರ ಪುರಸಭೆ ಅಧಿಕಾರಿಗಳು ಮನೆ ನಿರ್ಮಾಣ ಮಾಡಿ ಹಂಚಿಕೆ ಮಾಡಿದ್ದಾರೆ. ರಾಜ್ಯ ಸರ್ಕಾರದ ಗೃಹ ಭಾಗ್ಯ ಯೋಜನೆ ಅಡಿಯಲ್ಲಿ ಮನೆ ನಿರ್ಮಾಣ ಮಾಡಲಾಗಿದೆ. 2016-17ನೇ ಸಾಲಿನಲ್ಲಿ ರಾಜ್ಯ ಸರ್ಕಾರ ಪೌರ ಕಾರ್ಮಿಕರಿಗೆ ಗೃಹ ಭಾಗ್ಯ ಯೋಜನೆ ಅಡಿ ಮನೆ ಮಂಜೂರು ಮಾಡಿತ್ತು. ರಾಜ್ಯ ಸರ್ಕಾರ ಆರುವರೆ ಲಕ್ಷ ರುಪಾಯಿ ನೀಡಿದರೆ, ಕೇಂದ್ರ ಸರ್ಕಾರದ ಒಂದು ಲಕ್ಷ ರುಪಾಯಿ ಅನುದಾನ ಸೇರಿ ಏಳುವರೆ ಲಕ್ಷ ರುಪಾಯಿ ವೆಚ್ಚದಲ್ಲಿ ಮನೆ ನಿರ್ಮಾಣ ಮಾಡಲಾಗಿದೆ. 20+30 ಅಳತೆಯ ನಿವೇಶನದಲ್ಲಿ ಒಟ್ಟು ಆರು ಮನೆ ನಿರ್ಮಾಣ ಮಾಡಲಾಗಿದೆ. ನೆಲ ಮಾಳಿಗೆ, ಮೊದಲನೇ ಮತ್ತು ಎರಡನೇ ಅಂತಸ್ತು ಸೇರಿ ಒಟ್ಟು ಆರು ಮನೆ ನಿರ್ಮಾಣ ಮಾಡಲಾಗಿದೆ. ಅದೇ ರೀತಿ ಒಟ್ಟು 15 ಮನೆಗಳ ನಿರ್ಮಾಣ ಆಗಿದೆ. ಪ್ರತಿ ಮನೆಯಲ್ಲೂ ಸಿಂಗಲ್ ಬೆಡ್ ರೂಂ, ಅಡುಗೆ ಮನೆ, ಸ್ನಾನದ ಗೃಹ ಮತ್ತು ಒಂದು ಹಾಲ್ ಇದೆ. ನೆಲಕ್ಕೆ ಟೈಲ್ಸ್ ಕೂಡ ಹಾಕಲಾಗಿದೆ. ಆದರೆ ಮಾಡಿರುವ ಕಾಮಗಾರಿ ಕಳಪೆ ಗುಣಮಟ್ಟದಿಂದ ಕೂಡಿದೆ ಎಂಬುದು ಪೌರ ಕಾರ್ಮಿಕರ ಆರೋಪವಾಗಿದೆ. ಕಟ್ಟಲಾಗಿರುವ ಮನೆಗಳು ಈಗಾಗಲೇ ಸೋರುತ್ತಿವೆ. ನೆಲಕ್ಕೆ ಹಾಕಿದ ಟೈಲ್ಸ್ ಒಡೆದು ಹೋಗಿವೆ. ಜೊತೆಗೆ ನಲ್ಲಿಗಳ ಸಂಪರ್ಕವೇ ಇಲ್ಲ. ನೀರಿನ ತೊಂಬೆ ಕಟ್ಟಿರುವುದಾಗಿ ಅಧಿಕಾರಿಗಳು ಹೇಳಿದ್ದು, 100 ಲೀಟರ್ ನೀರು ಸಂಗ್ರಹವಾಗುವುದಿಲ್ಲ. ತಲಾ ಒಂದೊಂದು ಮನೆಗೆ ನಾಲ್ಕೈದು ಲಕ್ಷ ವೆಚ್ಚ ಮಾಡಿ ಕಳಪೆ ಗುಣಮಟ್ಟದ ಮನೆ ನಿರ್ಮಾಣ ಮಾಡಿದ್ದಾರೆ ಎಂದು ಪೌರ ಕಾರ್ಮಿಕರು ಆರೋಪಿಸಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಫಲಾನುಭವಿಗಳಿಗೆ ಕೀ ಹಸ್ತಾಂತರ ಮಾಡಿದ್ದಾರೆ. ನಿರ್ಮಿತಿ ಕೇಂದ್ರದವರು ಮನೆಗಳ ನಿರ್ಮಾಣ ಮಾಡಿದ್ದಾರೆ. ಉಳಿದವರಿಗೂ ಮನೆ ನಿರ್ಮಾಣ ಮಾಡಿ ಕೊಡಲು ಹೇಳಲಾಗಿದೆ. ಮನೆ ನಿರ್ಮಾಣದ ವೇಳೆ ಆಗಿರುವ ಸಣ್ಣಪುಟ್ಟ ಲೋಪಗಳನ್ನ ಸರಿಡಿಸುವಂತೆ ಅಧಿಕಾರಿಗಳಿಗೆ ತಿಳಿಸಿರುವುದಾಗಿ ಸಚಿವರು ಹೇಳಿದ್ದಾರೆ.
ದೇವರು ವರ ಕೊಟ್ಟರು ಪೂಜಾರಿ ಪ್ರಸಾದ ಕೊಡಲಿಲ್ಲ ಎನ್ನುವ ಹಾಗೆ ಆಗಿದೆ ಪೌರ ಕಾರ್ಮಿಕರ ಸ್ಥಿತಿ. ಸರ್ಕಾರ ಲಕ್ಷ ಲಕ್ಷ ಹಣ ಕೊಟ್ಟರು ನಿರ್ಮಿತಿ ಕೇಂದ್ರದವರು ಕಳಪೆ ಗುಣಮಟ್ಟದ ಮನೆ ನಿರ್ಮಾಣ ಮಾಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಹೊಸ ಮನೆ ಪಡೆದೆವು ಎಂಬ ಖುಷಿಯಲ್ಲಿ ಇರುವ ಕಾರ್ಮಿಕರಿಗೆ ಇದೇಷ್ಟು ದಿನ ಬಾಳಕೆ ಬರಲಿದೆ ಎಂಬ ಆತಂಕ ಕೂಡ ಎದುರಾಗಿದೆ.
ಇದನ್ನೂ ಓದಿ
ಹೋಳಿ, ಯುಗಾದಿ, ಗುಡ್ ಫ್ರೈ ಡೇ ಸೇರಿ ಎಲ್ಲಾ ಹಬ್ಬವೂ ನಿಷೇಧ ಮಾಡಲಾಗಿದೆ: ಆರೋಗ್ಯ ಸಚಿವ ಡಾ.ಕೆ.ಸುಧಾಕರ್
23 ವರ್ಷದ ಯುವತಿ ಜತೆ ವೃದ್ಧನ ಮದುವೆ – ಕರಾವಳಿಯ ಲವ್ ಜಿಹಾದ್ ಪ್ರಕರಣಕ್ಕೆ ಟ್ವಿಸ್ಟ್