ಬೆಂಗಳೂರು: ಆನ್‌ಲೈನ್ ಮೂಲಕ ಮೋಸ ಮಾಡುವ ಜಾಲ ಕೊರೊನಾ ಸಂಕಷ್ಟದ ನಡುವೆ ಸಕ್ರಿಯವಾಗಿ ಕೆಲಸ ಮಾಡುತ್ತಿದೆ. ಇಷ್ಟು ದಿನ ಲಕ್ಕಿ ಡ್ರಾ, ಬಂಪರ್ ಪ್ರೈಸ್, ಉಡುಗೊರೆ, ಸೆಕೆಂಡ್ಸ್ ಸೇಲ್ಸ್ ಮಾರ್ಕೆಟ್ ಮೂಲಕ ಮೊಸ ಮಾಡುತ್ತಿದ್ದ ಆನ್‌ಲೈನ್ ವಂಚಕರು ಸದ್ಯ ಜನರ ಜೀವನ್ಮರಣದ ಹೋರಾಟದ ನಡುವಿನೆ ನಂಬಿಕೆ ಹಾಗೂ ಮನಸ್ಥಿತಿಗಳ ಮೇಲೆ ಆಟ ಆಡಲು ತೋಡಗಿಕೊಂಡಿವೆ. ವಿಶ್ವಕ್ಕೆ ವ್ಯಾಪಿಸಿರುವ ಕೊರೊನಾ ಎರಡನೇ ಅಲೇ ಮನುಷ್ಯನ ಶ್ವಾಸಕೋಶದ ಮೇಲೆ ಪರಿಣಾಮ ಬೀರಿದೆ. ಮನುಷ್ಯ ಬದುಕಲು ಬೇಕಾದ ಪ್ರಾಣವಾಯು ಸದ್ಯ ಅತ್ಯಗತ್ಯ ವಸ್ತುವಾಗಿ ಮಾರುಕಟ್ಟೆಯಲ್ಲಿ ಮಾರಾಟವಾಗತೊಡಗಿದೆ.
ಕೊರೋನಾ ಸಂಕಷ್ಟದ ಕಾಲದಲ್ಲಿ ಲಸಿಕೆ, ಚುಚ್ಚುಮದ್ದು ಸೇರಿದಂತೆ ಆಕ್ಸಿಜನ್‌ಗಳನ್ನು ಅತ್ಯಧಿಕ ಬೆಲೆಗೆ ಕಾಳ ಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದ್ದು ಈಗಾಗಲೆ ಸಾಕಷ್ಟು ದಂದೆಕೋರರನ್ನ ಪೊಲೀಸರು ವಶಕ್ಕೆ ಪಡೆದು ಜೈಲಿಗಟ್ಟಿದ್ದಾರೆ. ಇಷ್ಟಾದರು ಬುದ್ಧಿ ಕಲಿಯದ ಆನ್‌ಲೈನ್ ದಂದೆ ಕೋರರು ತಮ್ಮ ಚಾಳಿಯನ್ನ ಪ್ರಾರಂಭ ಮಾಡಿದ್ದು ಆನ್‌ಲೈನ್‌ನಲ್ಲಿ ಆಕ್ಸಿಜನ್ ಕಾನ್ಸಂಟ್ರೇಟರ್ ಮಾರಾಟ ಮಾಡುವುದಾಗಿ ವಂಚನೆ ಮಾಡುತ್ತಿದ್ದಾರೆ.
ಜಾಹಿರಾತು ನೋಡಿ ಮೋಸ:
ನೆಲಮಂಗಲ ಮೂಲದ ಸೋಂಕಿತರೊಬ್ಬರಿಗೆ ಆಕ್ಸಿಜನ್ ಮಟ್ಟ 80 ಕ್ಕಿಂತ ಕಡಿಮೆಯಾದ ವೇಳೆ ತಕ್ಷಣಕ್ಕೆ ಆಕ್ಸಿಜನ್ ಬೆಡ್ ಸಿಗದ ಕಾರಣ ಸೋಂಕಿತನ ಕುಟುಂಬಸ್ಥರು ಆಕ್ಸಿಜನ್ ಸಿಲಂಡರ್‌ಗಾಗಿ ಹುಡುಕಾಟ ಪ್ರಾರಂಭಿಸಿದ್ದು, ವಾಟ್ಸ್‌ಆಪ್ ಮೂಲಕ ಬಂದ ಸಂದೇಶವನ್ನ ನೋಡಿ ಕಾನ್ಸಂಟ್ರೇಟರ್ ಸಿಗುತ್ತದೆ ಎನ್ನುವ ಆಶಾಭಾವದಿಂದ ಸಂದೇಶದಲ್ಲಿದ್ದ ನಂಬರ್‌ಗೆ ಕರೆ ಮಾಡಿದ್ದರು. ಆನ್‌ಲೈನ್ ವಂಚಕರು ವಿಳಾಸ ಪಡೆದು ಕಾನ್ಸಂಟ್ರೇಟರ್ ಕಳುಹಿಸುತ್ತೇವೆ ಎಂದು ಹೇಳಿದ್ದಾರೆ. ಸೋಂಕಿತರ ಕುಟುಂಬಸ್ಥರಿಗೆ ನಂಬಿಕೆ ಬರುವಂತೆ ವರ್ತಿಸಿ ಹಂತ ಹಂತವಾಗಿ ಫೋನ್ ಪೇ ಮೂಲಕ ಹದಿಮೂರು ಸಾವಿರ ಹಣ ಜಮಾವಣೆ ಮಾಡಿಸಿಕೊಂಡಿದ್ದಾರೆ.
ಮತ್ತಷ್ಟು ಹಣಕ್ಕೆ ಬೇಡಿಕೆ:
ಆಕ್ಸಿಜನ್ ಕಾನ್ಸಂಟ್ರೇಟರ್ ಆಸೆಗೆ ಸೋಂಕಿತರ ಕುಟುಂಬಸ್ಥರು ಹಣ ಜಮಾವಣೆ ಮಾಡಿದ್ದು, ಬ್ಯಾಂಕ್ ಖಾತೆ ಹಾಗೂ ಯುಪಿಐ ಮೂಲಕ ಮತ್ತಷ್ಟು ಹಣ ಪೀಕಲು ಯತ್ನಿಸಿದ್ದು ವಿಫಲವಾಗಿದ್ದಾರೆ. ಆದರೂ ಬೆಂಬಿಡದೆ ಮತ್ತಷ್ಟು ಹಣಕ್ಕೆ ಬೇಡಿಕೆ ಇಟ್ಟಿದ್ದು ಹಣ ಇಲ್ಲ ಎಂದ ಮರುಕ್ಷಣದಿಂದ ಇವರ ಫೋನ್ ರಿಸೀವ್ ಮಾಡಲಿಲ್ಲ ಎಂದು ಎನ್ನಲಾಗಿದೆ.
ಉಸಿರು ಚೆಲ್ಲಿದ ಸೋಂಕಿತ:
ವಂಚನೆಗೊಳಗಾದ ಬಳಿಕ ಸೋಂಕಿತನಿಗೆ ನೆಲಮಂಗಲ ಸರ್ಕಾರಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಬೆಡ್ ಸಿಕ್ಕಿದ್ದು, ಕೆಲ ದಿನಗಳು ಚಿಕಿತ್ಸೆ ಸಹ ನೀಡಲಾಗಿದೆ. ಸೋಂಕಿನ ಪ್ರಮಾಣ ಹೆಚ್ಚಾಗಿದ್ದರಿಂದ ಸೋಂಕಿತ ವ್ಯಕ್ತಿ ಬದುಕದೆ ಉಸಿರು ಚೆಲ್ಲಿದ್ದಾನೆ. ಘಟನೆ ಸಂಬಂಧ ಮೃತನ ಕುಟುಂಬಸ್ಥರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಟೌನ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.
ಕೈ ಮುಗಿದು ಮನವಿ:
ಪ್ರಾಣ ವಾಯುವಿನ ಆಸೆಗೆ ಆನ್‌ಲೈನ್ ಮೂಲಕ ವಂಚನೆ ಮಾಡುವವರ ಸಂಖ್ಯೆ ಹೇರಳವಾಗಿದ್ದು, ನಮ್ಮಂತಹ ಬಡವರ ಮನಸ್ಥಿತಿಯ ಮೇಲೆ ವಂಚಕರು ಆಟ ಆಡುತ್ತಿದ್ದಾರೆ. ನಮ್ಮಣ್ಣನಿಗೆ ಆಕ್ಸಿಜಮ್ ಬೆಡ್ ಸಿಕ್ಕರು ಉಳಿಯಲಿಲ್ಲ, ಹಣ ಕಳೆದುಕೊಂಡೆ ಅಣ್ಣನು ಉಳಿಯದೆ ಅಣ್ಣನನ್ನು ಕಳೆದುಕೊಂಡೆ, ಇಂತಹ ಆನ್‌ಲೈನ್ ವಂಚಕರ ಜಾಲದ ಒಳಗೆ ಸಿಲುಕುವ ಮೊದಲು ಎಚ್ಚರಿಕೆ ವಹಿಸಬೇಕೆಂದು ಮೃತ ಸೋಂಕಿತನ ಸಹೋದರ ಮನವಿ ಮಾಡಿದ್ದಾರೆ.
ಒಟ್ಟಾರೆ ಕೊವಿಡ್ ಸೋಂಕಿತರ ಪರಿಸ್ಥಿತಿಯನ್ನ ವಂಚಕರು ದುರ್ಬಳಕೆ ಮಾಡಿಕೊಳ್ಳುತ್ತಿದ್ದು, ಸರ್ಕಾರ ಸೋಂಕಿತರ ಚಿಕಿತ್ಸೆಗೆ ಬೇಕಾದ ಎಲ್ಲಾ ವ್ಯವಸ್ಥೆಯನ್ನು ಕಲ್ಪಿಸಿದರೆ, ಇಂತಹ ವಂಚನೆಯನ್ನ ತಪ್ಪಿಸಬಹುದಾಗಿದ್ದು, ವಂಚಕರನ್ನ ಪೊಲೀಸರು ಬಂಧಿಸಿ ವಂಚನೆಗೊಳಗಾದವರ ನೆರವಿಗೆ ನಿಲ್ಲಬೇಕಿದೆ.
ಇದನ್ನೂ ಓದಿ:
ಕೊರೊನಾ ಸೋಂಕು ಗ್ರಾಮಗಳಲ್ಲಿ ಹರಡದಂತೆ ಎಚ್ಚರಿಕೆ; ವಿನೂತನ ಪ್ರಯೋಗಕ್ಕೆ ಸಾಕ್ಷಿಯಾದ ದಾವಣಗೆರೆ ಜಿಲ್ಲಾಡಳಿತ
ರೆಮ್ಡಿಸಿವಿರ್ ಅಕ್ರಮ ಮಾರಾಟ ಕೇಸ್ನಲ್ಲಿ ಲಂಚ ವಸೂಲಿ ಆರೋಪ; ಸಂಜಯ್‌ನಗರ ಠಾಣೆ ಸಿಬ್ಬಂದಿ ವಿರುದ್ಧ ಗಂಭೀರ ಆರೋಪ