
ಚಿಕ್ಕಬಳ್ಳಾಪುರ, (ಅಕ್ಟೋಬರ್ 23): ಬೈಕ್ (Bike) ಹಾಗೂ ಶಾಲಾ ವಾಹನ (School Bus) ನಡುವೆ ಭೀಕರ ಅಪಘಾತ (Road Accident) ಸಂಭವಿಸಿದ್ದು, ಒಟ್ಟು ನಾಲ್ವರು ಸಾವನ್ನಪ್ಪಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕಿನ ಬುರುಡುಗುಂಟೆ ಬಳಿ ಈ ದುರ್ಘಟನೆ ಸಂಭವಿಸಿದೆ. ಮದುವೆಗೆಂದು ತಲಕಾಯಲಬೆಟ್ಟಕ್ಕೆ ತೆರಳುತ್ತಿದ್ದ ಬೈಕ್ ಹಾಗೂ ಖಾಸಗಿ ಶಾಲಾ ಬಸ್ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು, ಘಟನೆಯಲ್ಲಿ ಬೈಕ್ನಲ್ಲಿದ್ದ ಇಬ್ಬರು ಪುರುಷರು ಹಾಗೂ ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ. ಬಾಲಾಜಿ(34), ವೆಂಕಟೇಶಪ್ಪ(50), ಹರೀಶ್(12), ಆರ್ಯ(3) ಮೃತರು. ಇನ್ನು ಘಟನೆಯಲ್ಲಿ ಮತ್ತೊಂದು ಮಗುವಿಗೆ ಗಂಭೀರ ಗಾಯಗಳಾಗಿವೆ.
ಮದುವೆಯಲ್ಲಿ ಭಾಗಿಯಾಗಲು ಬೈಕ್‌ನಲ್ಲಿ ಇಬ್ಬರು ಪುರುಷರು ಮೂರು ಮಕ್ಕಳೊಂದಿಗೆ ತೆರಳುತ್ತಿದ್ದರು. ಈ ವೇಳೆ ಇನ್ನೊಂದೆಡೆ ಎದುರುಗಡೆ ಬಂದ ಖಾಸಗಿ ಶಾಲಾ ಬಸ್ ಹಾಗೂ ಬೈಕ್ ಮುಖಾಮುಖಿ ಡಿಕ್ಕಿಯಾಗಿವೆ. ಪರಿಣಾಮ ಘಟನೆಯಲ್ಲಿ ಐವರ ಪೈಕಿ ನಾಲ್ವರು ಮೃತಪಟ್ಟಿದ್ದು, ಇನ್ನೊಂದು ಮಗು ಗಂಭೀರವಾಗಿ ಗಾಯಗೊಂಡಿದೆ. ಸದ್ಯ ಮಗುವಿಗೆ ಬುರುಡುಗುಂಟೆ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಶಾಲಾ ವಾಹನದಲ್ಲಿದ್ದ ಮಕ್ಕಳಿಗೆ ಯಾವುದೇ ಅಪಾಯ ಸಂಭವಿಸಿಲ್ಲ. ಇನ್ನು ಮೃತರು ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲ್ಲೂಕಿನ ತಾಡಿಗೊಳ್ಳು ಗ್ರಾಮದ ನಿವಾಸಿಗಳು ಎಂದು ತಿಳಿದು ಬಂದಿದ್ದು, ಸಮಯಕ್ಕೆ ಸರಿಯಾಗಿ ಆ್ಯಂಬುಲೆನ್ಸ್ ಬಾರದ ಕಾರಣ ಮೃತರ ಸಂಖ್ಯೆ ಏರಿಕೆಯಾಗಿದೆ. ಬುರುಡುಗುಂಟೆ ಗ್ರಾಮ ಮತ್ತು ದಿಬ್ಬೂರಹಳ್ಳಿ ಗ್ರಾಮದಲ್ಲೂ ಆ್ಯಂಬುಲೆನ್ಸ್ ಇಲ್ಲದಿರುವುದು ಸುತ್ತಮುತ್ತಲಿನ ಹತ್ತು ಹಲವು ಗ್ರಾಮಗಳ ಜನತೆ ಸಂಕಷ್ಟ ಎದುರಿಸುವಂತಾಗಿದೆ.
Published On - 8:06 pm, Thu, 23 October 25