ನಾಳೆಯಿಂದ ‘ಅನ್ನಸೇವೆ’ ಮೊಬೈಲ್ ಆ್ಯಪ್ ಲಭ್ಯ; ಮನೆಯಲ್ಲೇ ಇ-ಕೆವೈಸಿ ಮಾಡಲು ಸುವರ್ಣಾವಕಾಶ
ಕರ್ನಾಟಕ ಸರ್ಕಾರ 'ಅನ್ನಸೇವೆ' ಮೊಬೈಲ್ ಆ್ಯಪ್ ಬಿಡುಗಡೆ ಮಾಡಿದೆ. ಇದು ಅನ್ನಭಾಗ್ಯ ಸೇರಿದಂತೆ ಪಡಿತರ ಚೀಟಿ ಫಲಾನುಭವಿಗಳಿಗೆ e-KYC ಪ್ರಕ್ರಿಯೆಯನ್ನು ಸುಲಭಗೊಳಿಸುತ್ತದೆ. ನ್ಯಾಯಬೆಲೆ ಅಂಗಡಿಗಳಿಗೆ ಅಲೆದಾಡುವುದು ತಪ್ಪಲಿದೆ. ರಾಜ್ಯಾದ್ಯಂತ ಲಭ್ಯವಿರುವ ಈ ಆ್ಯಪ್ ಮೂಲಕ ಫೇಸ್ ಅಥೆಂಟಿಕೇಶನ್ ಬಳಸಿ e-KYC ಪೂರ್ಣಗೊಳಿಸಬಹುದು. ಅಕ್ಟೋಬರ್ 20 ಕೊನೆಯ ದಿನಾಂಕವಾಗಿದ್ದು, ಒಂದು ವರ್ಷದ ಹಿಂದೆ e-KYC ಮಾಡಿದವರೂ ಮತ್ತೆ ಮಾಡಿಸಬೇಕು.

ಬೆಂಗಳೂರು, ಅ.13 : ಅನ್ನಭಾಗ್ಯ ಸೇರಿದಂತೆ ಸಾರ್ವಜನಿಕ ಪಡಿತರ ವ್ಯವಸ್ಥೆಯ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಪಡಿತರ ಚೀಟಿ e-KYC ಪ್ರಕ್ರಿಯೆಯನ್ನು ಸುಲಭಗೊಳಿಸಲು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಮಹತ್ವದ ಹೆಜ್ಜೆ ಇಟ್ಟಿದೆ. ರಾಜ್ಯದಾದ್ಯಂತ ನಾಳೆಯಿಂದ ನೂತನ ‘ಅನ್ನಸೇವೆ’ (Anna Seve) ಮೊಬೈಲ್ ಆ್ಯಪ್ ಅಧಿಕೃತವಾಗಿ ಲೋಕಾರ್ಪಣೆಗೊಳ್ಳಲಿದೆ ಎಂದು ಆಹಾರ ಸಚಿವ ರಿಜ್ವಾನ್ ಅರ್ಷದ್ ಅವರು ಬೆಂಗಳೂರಿನಲ್ಲಿ ಘೋಷಿಸಿದ್ದಾರೆ. ರಾಷ್ಟ್ರೀಯ ಮಾಹಿತಿ ಕೇಂದ್ರ (NIC) ಹಾಗೂ ಇ-ಆಡಳಿತ ಇಲಾಖೆಯ ಜಂಟಿ ಸಹಯೋಗದಲ್ಲಿ ಈ ಸುಧಾರಿತ ಆ್ಯಪ್ ಅಭಿವೃದ್ಧಿಪಡಿಸಲಾಗಿದೆ.
ಈ ಹಿಂದೆ ಮೊದಲ ಹಂತದಲ್ಲಿ ಬೆಂಗಳೂರು, ಉಡುಪಿ, ಉತ್ತರ ಕನ್ನಡ ಹಾಗೂ ಬಳ್ಳಾರಿ ಸೇರಿದಂತೆ ರಾಜ್ಯದ 8 ಜಿಲ್ಲೆಗಳಲ್ಲಿ ಮಾತ್ರ ಈ ಆ್ಯಪ್ ಪ್ರಾಯೋಗಿಕವಾಗಿ ಚಾಲನೆಯಲ್ಲಿತ್ತು. ನಾಳೆಯಿಂದ ಗೂಗಲ್ ಪ್ಲೇ-ಸ್ಟೋರ್ ಮೂಲಕ ರಾಜ್ಯದ ಎಲ್ಲಾ ಜಿಲ್ಲೆಗಳ ಫಲಾನುಭವಿಗಳಿಗೆ ಈ ಆ್ಯಪ್ ಉಚಿತವಾಗಿ ಲಭ್ಯವಾಗಲಿದೆ. ಗೂಗಲ್ ಪ್ಲೇ-ಸ್ಟೋರ್‌ನಿಂದ ‘ಅನ್ನ ಸೇವೆ’ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು, ಯುಐಡಿಎಐನ ಫೇಸ್ ಅಥೆಂಟಿಕೇಶನ್ ತಂತ್ರಜ್ಞಾನದ ಮೂಲಕ ಫಲಾನುಭವಿಗಳು ತಾವೇ ಸ್ವತಃ e-KYC ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು. ಈ ಆ್ಯಪ್ ಬಳಕೆಯಿಂದಾಗಿ ಸಾರ್ವಜನಿಕರು ಹಾಗೂ ವೃದ್ಧರು ಇ-ಕೆವೈಸಿ ಮಾಡಿಸಲು ನ್ಯಾಯಬೆಲೆ ಅಂಗಡಿಗಳಿಗೆ (Ration Shops) ಕ್ಯೂ ನಿಲ್ಲುವುದು ಮತ್ತು ಕಚೇರಿಗಳಿಗೆ ಅಲೆದಾಡುವುದು ತಪ್ಪಲಿದೆ.
ಇದನ್ನೂ ಓದಿ: ಕರ್ನಾಟಕ ಸಾರಿಗೆ ನಿಗಮಗಳ ನೌಕರರಿಗೆ ಪಿಎಫ್ ಸಂಕಷ್ಟ! ಎರಡುವರೆ ಸಾವಿರ ಕೋಟಿ ಹಣ ಎಲ್ಲೋಯ್ತು?
ಅಕ್ಟೋಬರ್ 1 ರಿಂದ 12 ರವರೆಗೆ ಪ್ರಾಯೋಗಿಕವಾಗಿ ನಡೆಸಲಾದ ಅವಧಿಯಲ್ಲಿ ರಾಜ್ಯದ 1,60,267 ಫಲಾನುಭವಿಗಳು ಆ್ಯಪ್ ಮೂಲಕವೇ ಯಶಸ್ವಿಯಾಗಿ ಇ-ಕೆವೈಸಿ ಪೂರ್ಣಗೊಳಿಸಿದ್ದಾರೆ. ರಾಜ್ಯದ ಒಟ್ಟು 2.67 ಕೋಟಿ PDS ಫಲಾನುಭವಿಗಳ ಪೈಕಿ ಈಗಾಗಲೇ 2.06 ಕೋಟಿಗೂ ಅಧಿಕ ಮಂದಿ ಇ-ಕೆವೈಸಿ ಪ್ರಕ್ರಿಯೆ ಮುಗಿಸಿದ್ದಾರೆ. ಒಂದು ವರ್ಷದ ಹಿಂದೆ ಇ-ಕೆವೈಸಿ ಮಾಡಿಸಿದವರೂ ಸಹ ಕಡ್ಡಾಯವಾಗಿ ಮತ್ತೊಮ್ಮೆ ಇ-ಕೆವೈಸಿ ಪೂರ್ಣಗೊಳಿಸಬೇಕಾಗಿದೆ. ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಅಕ್ಟೋಬರ್ 20 ಕೊನೆಯ ದಿನಾಂಕವಾಗಿದೆ ಎಂದು ಇಲಾಖೆ ಸ್ಪಷ್ಟಪಡಿಸಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:07 pm, Tue, 13 October 26




