ಚಿಕ್ಕಬಳ್ಳಾಪುರ: ನಗರದ ಜನತೆಗೆ ಯುಗಾದಿ (Ugadi) ಹಬ್ಬದ ಉಡುಗೊರೆಯಾಗಿ ಬಿಎಂಟಿಸಿ ಬಸ್ ಸೇವೆ (BMTC Bus Service) ಕಾರ್ಯಾರಂಭ ಮಾಡುತ್ತಿರುವುದು ಅತ್ಯಂತ ಸಂತಸ ತಂದಿದೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ (K Sudhakar) ಹೇಳಿದರು. ಚಿಕ್ಕಬಳ್ಳಾಪುರ ನಗರದಲ್ಲಿ ಬಿಎಂಟಿಸಿ ಹವಾನಿಯಂತ್ರಿತ ಬಸ್ಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಜಿಲ್ಲೆಗೆ ಬಿಎಂಟಿಸಿ ಸೇವೆ ತರಲು ಶ್ರಮಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು. ಈ ಹಿಂದೆ ತಮ್ಮನ್ನು ಹಲವರು ಹೈಟೆಕ್ ಶಾಸಕರು ಎಂದು ಕರೆಯುತ್ತಿದ್ದರು, ಇದೀಗ ಜಿಲ್ಲೆಯಾದ್ಯಂತ ಎಲ್ಲ ಅಭಿವೃದ್ಧಿ ಹೈಟೆಕ್ ಮಾಡುವ ಗುರಿ ಹೊಂದಿರುವುದಾಗಿ ಅವರು ಹೇಳಿದರು. ಹವಾನಿಯಂತ್ರಿತ ಬಿಎಂಟಿಸಿ ಬಸ್ಗಳು ಪ್ರತಿನಿತ್ಯ ಬೆಂಗಳೂರಿಗೆ ನೇರವಾಗಿ ಸೇವೆ ಒದಗಿಸಲಿವೆ. ವಿದ್ಯಾರ್ಥಿಗಳು, ರೈತರು, ಉದ್ಯೋಗಿಗಳಿಗೆ ಇದು ಸಹಕಾರಿಯಾಗಲಿದೆ. ಈ ಸೇವೆ ಜಿಲ್ಲೆಗೆ ವಿಸ್ತರಿಸಲು ತಾಂತ್ರಿಕ ಸಮಸ್ಯೆ ಬರಲಿದೆ ಎಂದು ನಿರೀಕ್ಷೆ ಮಾಡಿರಲಿಲ್ಲ. ಈ ಸೇವೆ ಆರಂಭಿಸಲು ಕೆಎಸ್ಆರ್ಟಿಸಿ ಅವರ ಒಪ್ಪಿಗೆ ಬೇಕಿತ್ತು. ಅವರು ಪರವಾನಗಿ ನೀಡುವುದು ತಡವಾದ ಕಾರಣ ಮುಖ್ಯಮಂತ್ರಿಗಳಿಂದ ಎರಡು ಬಾರಿ ಸೂಚನೆ ಕೊಡಿಸಿ ಬಸ್ ಸೇವೆ ಆರಂಭಿಸಲಾಗಿದೆ ಎಂದರು.
ಬದ್ಧತೆ ಇದ್ದರೆ ಮಾತ್ರ ಇಂತಹ ಕೆಲಸ ಮಾಡಲು ಸಾಧ್ಯ, ಇಂತಹ ಬದ್ಧತೆ ಬಿಎಂಟಿಸಿ ಉಪಾಧ್ಯಕ್ಷ ನವೀನ್ ಕಿರಣ್ ಅವರು ತೋರಿಸಿರುವುದು ಅವರ ಕಾರ್ಯವೈಖರಿಗೆ ಹಿಡಿದ ಕನ್ನಡಿಯಾಗಿದೆ. ಅದೇ ರೀತಿಯಲ್ಲಿ ಖಾದಿ ಮಂಡಳಿಯಲ್ಲಿಯೂ ಅಧ್ಯಕ್ಷ ಕೆ.ವಿ. ನಾಗರಾಜ್ ಅವರು ಹೆಚ್ಚಿನ ಶ್ರಮ ಪಡುತ್ತಿದ್ದಾರೆ. ನಿರೀಕ್ಷೆಗೂ ಮೀರಿ ಮಂಡಳಿಯಲ್ಲಿ ವಹಿವಾಟು ನಡೆದಿದೆ. ಆದರೆ ಯುವಕರು ಖಾದಿ ಮಂಡಳಿ ಉಪಯೋಗ ಹೆಚ್ಚು ಪಡೆಯುತ್ತಿಲ್ಲ, ಎಷ್ಟೇ ಅರಿವು ಮೂಡಿಸಿದರೂ ಅದು ಸಾಧ್ಯವಾಗಿಲ್ಲ ಎಂದು ಸಚಿವರು ಬೇಸರ ವ್ಯಕ್ತಪಡಿಸಿದರು.
ಬಿಎಂಟಿಸಿ ಸಂಸ್ಥೆಗೆ ನಷ್ಟವಾಗದಂತೆ ಬಸ್ ಸೇವೆಯನ್ನು ಯಶಸ್ವಿಗೊಳಿಸಲು ಜನರು ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು, ಸಂಚಾರಿ ಸೇವೆಗಳನ್ನು ಬಳಸುವುದು ಕ್ರಮ ಆಗಬೇಕು, ಸಾರ್ವಜನಿಕ ಸಾರಿಗೆ ಸೇವೆ ವಿಶ್ವದಲ್ಲಿ ಅತ್ಯಂತ ಶ್ರೀಮಂತರೂ ಬಳಸುತ್ತಾರೆ. ಸಚಿವರು, ಪ್ರಧಾನಿಗಳೂ ಈ ಸೇವೆ ಬಳಕೆ ಮಾಡುತ್ತಾರೆ. ಇಂತಹ ಮನೋಭಾವ ನಮ್ಮಲ್ಲಿಯೂ ಬರಬೇಕು ಇದನ್ನು ಹೆಚ್ಚು ಬಳಸುವುದರಿಂದ ಸಂಚಾರ ದಟ್ಟಣೆಗೆ ನಿಯಂತ್ರಣ ಮಾಡಲು ಸಾಧ್ಯ ಎಂದು ಹೇಳಿದರು.
ಚಿಕ್ಕಬಳ್ಳಾಪುರದಲ್ಲಿಯೂ ಇತ್ತೀಚಿನ ದಿನಗಳಲ್ಲಿ ವಾಹನ ದಟ್ಟಣೆ ಹೆಚ್ಚಾಗಿದೆ. ಪ್ರತಿ ದಿನ 5 ಸಾವಿರ ವಾಹನಗಳು ಬೆಂಗಳೂರಿನಲ್ಲಿ ರಸ್ತೆಗೆ ಇಳಿಯುತ್ತಿವೆ. ಆದರೆ ರಸ್ತೆ ಹೆಚ್ಚಾಗುವುದಿಲ್ಲ, ಇದರಿಂದ ವಾಹನ ದಟ್ಟಣೆ ಹೆಚ್ಚಿ ಸಮಸ್ಯೆ ಎದುರಾಗುತ್ತಿದ್ದು, ನಾನೂ ಸೇರಿದಂತೆ ಎಲ್ಲರೂ ಈ ಬಗ್ಗೆ ಚಿಂತಿಸಬೇಕಾದ ಅಗತ್ಯವಿದೆ ಎಂದರು.
ಇದನ್ನೂ ಓದಿ: BMTC: ಇಂದಿನಿಂದ ಚಿಕ್ಕಬಳ್ಳಾಪುರಕ್ಕೆ ಬಿಎಂಟಿಸಿ ಬಸ್ ಸಂಚಾರ ಆರಂಭ; ಸಮಯ ಹೀಗಿದೆ
ಸಂಚಾರ ನಿಯಮ ತಪ್ಪದೇ ಪಾಲಿಸಬೇಕು, ಹದಿಹರಿಯದವರು ವಾಹನ ಚಲಾಯಿಸಬಾರದು, ರೋಗಗಳಿಗಿಂತ ಹೆಚ್ಚು ಅಪಘಾತಗಳಲ್ಲಿಯೇ ಸಾವು ಆಗುತ್ತಿದೆ. ಅದರಲ್ಲಿಯೂ ಯುವಕರೇ ಹೆಚ್ಚು ಸಾಯುತ್ತಿರುವುದು ದುರಂತ. ಎಲ್ಲರೂ ನಿಯಮಗಳನ್ನು ತಪ್ಪದೇ ಪಾಲಿಸುವ ಮೂಲಕ ಅನಾಹುತಗಳು ತಪ್ಪಿಸುವ ಜೊತೆಗೆ ವಾಹನ ದಟ್ಟಣೆ ಕಡಿಮೆ ಮಾಡಲು ಸಾಧ್ಯವಾಗಲಿದೆ. ಸಾರಿಗೆ ನೌಕರರಿಗೆ ಸರ್ಕಾರ ಶೇ.15 ರಷ್ಟು ವೇತನ ಹೆಚ್ಚಳ ಮಾಡಿದೆ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ