BMTC: ಇಂದಿನಿಂದ ಚಿಕ್ಕಬಳ್ಳಾಪುರಕ್ಕೆ ಬಿಎಂಟಿಸಿ ಬಸ್ ಸಂಚಾರ ಆರಂಭ; ಸಮಯ ಹೀಗಿದೆ
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಇಂದಿನಿಂದ ಕೆಎಸ್‌ಆರ್‌ಟಿಸಿ ವ್ಯಾಪ್ತಿಗೆ ಕಾಲಿಡಲಿದೆ. ಆರಂಭಿಕ ಪ್ರತಿರೋಧದ ನಂತರ ಇದೀಗ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು (KSRTC) BMTC ತನ್ನ ಅಧಿಕಾರ ವ್ಯಾಪ್ತಿಯ ಹೊರಗೆ ಬಸ್‌ಗಳನ್ನು ಓಡಿಸಲು ಅನುಮತಿ ನೀಡಿದ್ದು, ಸಮಯ ಹೀಗಿದೆ.
ಬೆಂಗಳೂರು: ಇಂದಿನಿಂದ (ಮಾ.21) ಚಿಕ್ಕಬಳ್ಳಾಪುರಕ್ಕೆ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC)ಯ ವೋಲ್ವೋ ಎರಡು ಹವಾನಿಯಂತ್ರಿತ ಬಸ್‌ಗಳು(AC Bus) ಪ್ರಾಯೋಗಿಕವಾಗಿ ಕಾರ್ಯಾರಂಭ ಮಾಡಲಿವೆ. ಸಾಕಷ್ಟು ಹಗ್ಗ ಜಗ್ಗಾಟದ ನಂತರ ಚಿಕ್ಕಬಳ್ಳಾಪುರ ಜನರ ಬಹು ದಿನಗಳ ಕೂಗಿಗೆ ಜಯ ಸಿಕ್ಕಿದೆ. ಮಾ.17 ರಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC)ದ ವ್ಯವಸ್ಥಾಪಕ ನಿರ್ದೇಶಕ ವಿ. ಅನ್ಬುಕುಮಾರ್ ಅವರು ಬಿಎಂಟಿಸಿ ಸಂಚಾರಕ್ಕೆ ಒಪ್ಪಿಗೆ ಸೂಚಿಸಿದ್ದರು.
ಈ ಹಿನ್ನಲೆ ಇಂದಿನಿಂದ ಬಿಎಂಟಿಸಿ ಕೆಂಪೇಗೌಡ ಬಸ್ ನಿಲ್ದಾಣ (ಮೆಜೆಸ್ಟಿಕ್) ನಿಂದ ಹೆಬ್ಬಾಳ, ಯಲಹಂಕ ಮತ್ತು ರಾಣಿ ಸರ್ಕಲ್/ದೇವನಹಳ್ಳಿ ಮೂಲಕ ಚಿಕ್ಕಬಳ್ಳಾಪುರಕ್ಕೆ ಹವಾನಿಯಂತ್ರಿತ ವೋಲ್ವೋ ಬಸ್‌ಗಳು ಸಂಚರಿಸಲಿವೆ. ಪ್ರತಿ ಬಸ್ ದಿನಕ್ಕೆ ಮೂರು ಟ್ರಿಪ್ ಮಾಡುತ್ತವೆ.
ಯಾವ ಬಸ್ ನಿಲ್ದಾಣಗಳಿಂದ ಎಷ್ಟುಗಂಟೆಗೆ ಬಸ್ ಹೊರಡಲಿದೆ ವೇಳಾಪಟ್ಟಿ ಇಲ್ಲಿದೆ
ಚಿಕ್ಕಬಳ್ಳಾಪುರ ಬಸ್ ನಿಲ್ದಾಣದಿಂದ ಬಸ್ ಹೊರಡಲಿರುವ ಸಮಯ
ಬೆಳಿಗ್ಗೆ 8.10, 8.20, ಮಧ್ಯಾಹ್ನ 12.35, 1.05, ಸಂಜೆ 7.15, 7.35 ಕ್ಕೆ ಚಿಕ್ಕಬಳ್ಳಾಪುರದಿಂದ ಬೆಂಗಳೂರಿಗೆ ಹೊರಡಲಿದೆ.
ಕೆಂಪೇಗೌಡ ಬಸ್ ನಿಲ್ದಾಣದಿಂದ ಬಸ್ ಹೊರಡಲಿರುವ ಸಮಯ
ಬೆಳಿಗ್ಗೆ 10.25, 11.00, ಸಂಜೆ 5.30, 5.45, ರಾತ್ರಿ 9.15, 9. 35 ಕ್ಕೆ ಬೆಂಗಳೂರಿನಿಂದ ಚಿಕ್ಕಬಳ್ಳಾಪುರಕ್ಕೆ ಸಂಚರಿಸಲಿದೆ.
ಚಿಕ್ಕಬಳ್ಳಾಪುರ ಜನತೆಗೆ ಯುಗಾದಿ ಕೊಡುಗೆ ಎಂದಿದ್ದ ಸುಧಾಕರ್
ಕೆಎಸ್‌ಆರ್‌ಟಿಸಿ ಒಪ್ಪಿಗೆ ಸೂಚಿಸಿದ ನಂತರ ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಟ್ವೀಟ್ ಮಾಡಿ “ಚಿಕ್ಕಬಳ್ಳಾಪುರ ಜನತೆಗೆ ಯುಗಾದಿ ಕೊಡುಗೆ ಎಂದಿದ್ದರು. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಬಸ್ಸುಗಳನ್ನು ಚಿಕ್ಕಬಳ್ಳಾಪುರಕ್ಕೆ ವಿಸ್ತರಿಸುವ ಜಿಲ್ಲೆಯ ಜನತೆಯ ಬಹುನಿರೀಕ್ಷಿತ ಬೇಡಿಕೆಯಂತೆ ಬಿಎಂಟಿಸಿ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಲಾಗಿದ್ದು, ಇನ್ನು ಮುಂದೆ ಬಿಎಂಟಿಸಿ ಬಸ್ಸುಗಳು ನಮ್ಮ ಚಿಕ್ಕಬಳ್ಳಾಪುರಕ್ಕೂ ಸಂಚರಿಸಲಿವೆ. ಇದರಿಂದ ರೈತರು, ವಿದ್ಯಾರ್ಥಿಗಳು, ಸಣ್ಣ ವ್ಯಾಪಾರಸ್ಥರು, ಉದ್ಯೋಗಿಗಳು ಸೇರಿದಂತೆ ದಿನನಿತ್ಯ ಬೆಂಗಳೂರಿಗೆ ಓಡಾಡುವ ಚಿಕ್ಕಬಳ್ಳಾಪುರದ ಎಲ್ಲ ನಾಗರಿಕರಿಗೂ ಇದರಿಂದ ಅನುಕೂಲವಾಗಲಿದ್ದು, ಜಿಲ್ಲೆಯ ಆರ್ಥಿಕ ಪ್ರಗತಿಗೂ ವೇಗ ದೊರೆಯಲಿದೆ. ಚಿಕ್ಕಬಳ್ಳಾಪುರದ ಜನತೆಯ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಹಾಗೂ ಸಾರಿಗೆ ಸಚಿವ ಶ್ರೀರಾಮುಲು ಅವರಿಗೆ ಜಿಲ್ಲೆಯ ಜನತೆಯ ಪರವಾಗಿ ಕೃತಜ್ಞತೆಗಳು. ಈ ಬೇಡಿಕೆಯನ್ನು ಸಾಕಾರಗೊಳಿಸಲು ಶ್ರಮಿಸಿದ ಬಿಎಂಟಿಸಿ ಉಪಾಧ್ಯಕ್ಷರಾದ ನವೀನ್ ಕಿರಣ್ ಅವರಿಗೆ ಅಭಿನಂದನೆಗಳು”. ಎಂದು ಟ್ವೀಟ್ ಮಾಡಿದ್ದರು.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:37 am, Tue, 21 March 23