ಚಿಕ್ಕಬಳ್ಳಾಪುರ: ಜಿಲ್ಲೆಯ ರೈತರು ಕಷ್ಟ ಜೀವಿಗಳು. ಸಾವಿರಾರು ಅಡಿಗಳಷ್ಟು ಪಾತಾಳದಿಂದ ಹನಿ ಹನಿ ನೀರು ಬಸಿದು ತೋಟ, ಹೊಲ, ಗದ್ದೆ ಮಾಡಿ ಬೆಳೆ ಬೆಳೆಯುತ್ತಿದ್ದರು. ಆದರೆ ಇತಿಹಾಸದಲ್ಲೆ ಕಂಡು ಕೇಳರಿಯದ ಮಹಾಮಳೆ ಸುರಿದು ಇತ್ತೀಚೆಗೆ ರೈತರು ಬೆಳೆದಿದ್ದ ಬೆಳೆಗಳು ನೀರು ಪಾಲಾಗಿದ್ದವು. ಇದರಿಂದ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವಂತೆ ರೈತರ ಬದುಕಾಗಿದೆ. ಸದ್ಯ ಮಳೆ ಹಾನಿಗೆ ರೈತರ (Farmers) ಬೆಳೆಗಳು ಹಾಳಾದ ದೃಶ್ಯ ವಿಕ್ಷಿಸಲು ಕೇಂದ್ರ ಅತಿವೃಷ್ಟಿ ಅಧ್ಯಯನ ತಂಡ ಇಂದು ಚಿಕ್ಕಬಳ್ಳಾಪುರ ಜಿಲ್ಲೆಗೆ ಭೇಟಿ ನೀಡಿದೆ. ಇದರಿಂದ ಸೂಕ್ತ ಪರಿಹಾರಕ್ಕೆ ರೈತರು ಆಗ್ರಹಿಸಿದ್ದಾರೆ.
ಮಳೆಯಿಂದ ರಾಗಿ, ಜೋಳ, ತೊಗರಿ, ಸೌತೆಕಾಯಿ, ಟೊಮೆಟೋ, ಹೂಗಳು ಎಲ್ಲಾ ಹಾಳಾಗಿವೆ. ಇರೊ ಬರೊ ಹಣವನ್ನು ಬೆಳೆಗೆ ಹಾಕಿದ್ದ ರೈತರು ಇನ್ನೂ ಮಾಡಿದ ಸಾಲ ತೀರಿಸಲು ಕಷ್ಟ ಸಾಧ್ಯವಾಗಿದೆ. ಇನ್ನೂ ಸರ್ಕಾರ ನೀಡಿರುವ ಮಳೆಹಾನಿ ಪರಿಹಾರ ರೈತರ ಖಾತೆ ತಲುಪಿಲ್ಲ. ಹಸಿದ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎನ್ನುವ ಹಾಗೆ ಸರ್ಕಾರ ಮಳೆ ಹಾನಿಯಾದ ಪ್ರದೇಶದ ಕುಂಟೆ ಜಮೀನಿಗೆ ಚಿಲ್ಲರೆ ಕಾಸು ನಿಗದಿ ಮಾಡಿದೆ. ಇದರಿಂದ ರೈತರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯೊಂದರಲ್ಲೇ ಬರೋಬ್ಬರಿ 65 ಸಾವಿರ ಹೆಕ್ಟರ್ ಪ್ರದೇಶದಲ್ಲಿ ಬೆಳೆದಿದ್ದ ಕೃಷಿ ಹಾಗೂ ತೋಟಗಾರಿಕೆ ಬೆಳೆಗಳು ಸಂಪೂರ್ಣ ಹಾಳಾಗಿವೆ. 690 ಕೋಟಿ ರೂಪಾಯಿ ಮೌಲ್ಯದ ಬೆಳೆಗಳು ಹಾಳಾಗಿವೆ. ಇನ್ನೂ ಸರ್ಕಾರ ಘೋಷಣೆ ಮಾಡಿರುವ ಬೆಳೆ ಹಾನಿ ಪರಿಹಾರ ರೈತರ ಕೈ ಸೇರಿಲ್ಲ. ಸರ್ಕಾರ ನಿರ್ಧಾರ ಮಾಡಿರುವ ಪರಿಹಾರ ಮೊತ್ತ ಬೆಳೆಯ ಬೀಜಕ್ಕೂ ಸಮನಾಂತರವಾಗಿಲ್ಲ. ಇದರಿಂದ ಪ್ರಸ್ತುತ ಇರುವ ಎನ್ಡಿಆರ್ಎಫ್ ಗೈಡ್ ಲೈನ್ಸ್ ಬದಲಾವಣೆ ಮಾಡಿ ಸೂಕ್ತ ಪರಿಹಾರ ನಿಡುವಂತೆ ಬೆಳೆ ಹಾನಿಯಾದ ರೈತ ಸತ್ಯನಾರಾಯಣ ಮನವಿ ಮಾಡಿದ್ದಾರೆ.
ವರದಿ: ಭೀಮಪ್ಪ ಪಾಟೀಲ
ಇದನ್ನೂ ಓದಿ:
Farmers Protest ಬಹುತೇಕ ಎಲ್ಲ ಬೇಡಿಕೆಗಳನ್ನು ಅಂಗೀಕರಿಸಿದ ಸರ್ಕಾರ, ರೈತರು ನಡೆಸುತ್ತಿದ್ದ ಪ್ರತಿಭಟನೆ ಹಿಂಪಡೆಯುವ ಸಾಧ್ಯತೆ
Crop Relief Fund: ಬೆಳೆಹಾನಿಯಾದ 45,586 ರೈತರಿಗೆ 38.64 ಕೋಟಿ ಬೆಳೆ ಪರಿಹಾರ: ಕಂದಾಯ ಸಚಿವ ಆರ್ ಅಶೋಕ್ ಘೋಷಣೆ