ಚಿಕ್ಕಬಳ್ಳಾಪುರ; ಮಾಜಿ ಸಚಿವ ಡಾ. ಸುಧಾಕರ್ ಮೇಲೆ ಮೆಡಿಕಲ್ ಕಾಲೇಜು ಹಗರಣದ ತೂಗುಗತ್ತಿ
ಹಿಂದಿನ ಬಿಜೆಪಿ ಸರ್ಕಾರದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಡಬಲ್ ಖಾತೆಗಳ ಸರದಾರ ಎಂದೇ ಖ್ಯಾತಿಯಾಗಿದ್ದ ಮಾಜಿ ಸಚಿವ ಡಾ. ಕೆ. ಸುಧಾಕರ್ ಅವರನ್ನು ಟಾರ್ಗೆಟ್ ಮಾಡಿ, ಒಂದರ ಮೇಲೊಂದು ನ್ಯಾಯಾಂಗ ತನಿಖೆ, ಒಂದರ ಮೇಲೊಂದು ಎಸ್.ಐ.ಟಿ. ತನಿಖೆ, ಒಂದರ ಮೇಲೊಂದು ಇಲಾಖೆ ತನಿಖೆ ನಡೆಸುತ್ತಿರುವುದು ಬಯಲಾಗಿದೆ.
ಚಿಕ್ಕಬಳ್ಳಾಪುರ, ಸೆಪ್ಟೆಂಬರ್ 01: ಹಿಂದಿನ ಬಿಜೆಪಿ ಸರ್ಕಾರದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಡಬಲ್ ಖಾತೆಗಳ ಸರದಾರ ಎಂದೇ ಖ್ಯಾತಿಯಾಗಿದ್ದ ಮಾಜಿ ಸಚಿವ ಡಾ. ಕೆ. ಸುಧಾಕರ್ (Dr K Sudhakar) ಅವರನ್ನು ಟಾರ್ಗೆಟ್ ಮಾಡಿ, ಒಂದರ ಮೇಲೊಂದು ನ್ಯಾಯಾಂಗ ತನಿಖೆ, ಒಂದರ ಮೇಲೊಂದು ಎಸ್.ಐ.ಟಿ. ತನಿಖೆ, ಒಂದರ ಮೇಲೊಂದು ಇಲಾಖೆ ತನಿಖೆ ನಡೆಸುತ್ತಿರುವುದು ಬಯಲಾಗಿದೆ. ಇನ್ನು ಹಾಲಿ ವೈದ್ಯಕೀಯ ಶಿಕ್ಷಣ ಖಾತೆ ಸಚಿವರಾಗಿರುವ ಡಾ. ಶರಣ ಪ್ರಕಾಶ್ ಪಾಟೀಲ್ ಇಂದು ನೂತನ ಚಿಕ್ಕಬಳ್ಳಾಪುರ ಸರ್ಕಾರಿ ಮೆಡಿಕಲ್ ಕಾಲೇಜಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಚಿಕ್ಕಬಳ್ಳಾಪುರ ತಾಲ್ಲೂಕು, ಅರೂರು ಗ್ರಾಮದ ಬಳಿ ಚಿಕ್ಕಬಳ್ಳಾಪುರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ತಲೆ ಎತ್ತಿದೆ. ಇನ್ನೂ ಕಾಲೇಜಿನ ಕಾಮಗಾರಿ ಪ್ರಗತಿಯಲ್ಲಿದೆ. ಇದರಿಂದ ಸಚಿವ ಶರಣಪ್ರಕಾಶ್ ಪಾಟೀಲ್, ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ.ಸುಧಾಕರ್, ಸ್ಥಳೀಯ ಶಾಸಕ ಪ್ರದೀಪ್ ಈಶ್ವರ್ ಸೇರಿದಂತೆ ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿತು. ಇದೇ ತಿಂಗಳ ಸೆಪ್ಟೆಂಬರ್-15 ರಂದು ವಿದ್ಯಾರ್ಥಿಗಳಿಗೆ ಪಾಠ, ಪ್ರವಚನಗಳನ್ನು ನಿರ್ಮಾಣ ಹಂತದ ಕಟ್ಟಡದಲ್ಲಿಯೇ ನಡೆಸಲು ತೀರ್ಮಾನಿಸಲಾಯಿತು.
ಮೆಡಿಕಲ್ ಕಾಲೇಜು ನಿರ್ಮಾಣದಲ್ಲಿ ಹಗರಣ
ಕಾಲೇಜು ಪರಿಶೀಲನೆ ನಡೆಸಿ ಮಾತನಾಡಿದ ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್, ಚಿಕ್ಕಬಳ್ಳಾಪುರ ಸರ್ಕಾರಿ ಮೆಡಿಕಲ್ ಕಾಲೇಜು ಅವ್ಯವಹಾರದ ಬಗ್ಗೆ ತನಿಖೆ ನಡೆಯುತ್ತಿದೆ. ಪಿಡಬ್ಲ್ಯುಡಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ಕಾಲೇಜು ಕಟ್ಟದ ನಿರ್ಮಾಣಕ್ಕೆ ಮಂಜೂರಾಗಿದ್ದು 525 ಕೋಟಿ ಆದರೆ 810 ಕೋಟಿಗೆ ಕಾಮಗಾರಿಯ ವೆಚ್ಚ ಏರಿಸಲಾಗಿದೆ ಅದರಲ್ಲಿ 467 ಕೋಟಿ ರೂಪಾಯಿ ಅನುದಾನ ಬಿಡುಗಡೆಯಾಗಿದೆ 285 ಕೋಟಿ ರೂಪಾಯಿಗಳಿಗೆ ಕ್ಯಾಬಿನೆಟ್ ಅನುಮೋದನೆ ಪಡೆದಿಲ್ಲ. ಅನುಮೋದನೆ ಪಡೆಯದೇ ಅದು ಹೇಗೆ ಕಾಮಗಾರಿ ನಡೆಸಲಾಗಿದೆ ಇದರ ಹಿಂದೆ ಇರುವ ಅಕ್ರಮ, ಅವ್ಯವಹಾರವನ್ನು ಪತ್ತೆ ಹಚ್ಚುವ ಕೆಲಸ ನಡೆದಿದೆ ತನಿಖೆಯ ವರದಿ ಬಂದ ನಂತರ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದರು.
ಕಾಲೇಜು ಉಪನ್ಯಾಸಕರ ನೇಮಕದಲ್ಲೂ ಹಗರಣ
ರಾಜ್ಯದ ಸರ್ಕಾರಿ ಮೆಡಿಕಲ್ ಕಾಲೇಜುಗಳಲ್ಲಿ ಈ ಹಿಂದೆ ಬಿಜೆಪಿ ಸರ್ಕಾರ ಉಪನ್ಯಾಸಕರು, ಸಹಾಯಕ ಉಪನ್ಯಾಸಕರು ಸೇರಿದಂತೆ ಅಧಿಕಾರಿಗಳ ನೇಮಕ ಮಾಡಿದೆ. ಆ ನೇಮಕಾತಿಯಲ್ಲಿಯೂ ಸಹಾ ಅಕ್ರಮ ಹಾಗೂ ಭ್ರಷ್ಟಾಚಾರ ಮಾಡಿರುವ ಬಗ್ಗೆ ದೂರುಗಳು ಕೇಳಿಬಂದಿವೆ. ಉಪನ್ಯಾಸಕರುಗಳ ನೇಮಕಾತಿಯಲ್ಲಿ ತಲಾ 45-60 ಲಕ್ಷ ರೂಪಾಯಿ ಲಂಚ ಪಡೆದಿರುವ ಬಗ್ಗೆ ದೂರುಗಳು ಬಂದಿವೆ. ಇದರಿಂದ ತನಿಖೆ ನಡೆಸಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ತಿಳಿಸಿದರು.
ಇದನ್ನೂ ಓದಿ: 2025ರ ವೇಳೆಗೆ ಕರ್ನಾಟಕದ ರಕ್ಷಣಾ ರಫ್ತು 25,000 ಕೋಟಿ ರೂ.ಗೆ; ಸಚಿವ ಎಂಬಿ ಪಾಟೀಲ್
ಯಾರನ್ನೂ ಟಾರ್ಗೆಟ್ ಮಾಡಿ ತನಿಖೆ ನಡೆಸುತ್ತಿಲ್ಲ
ನಾವೂ ಯಾರನ್ನೂ ಟಾರ್ಗೆಟ್ ಮಾಡಿ ತನಿಖೆ ನಡೆಸುತ್ತಿಲ್ಲ ಹಿಂದಿನ ಬಿಜೆಪಿ ಸರ್ಕಾರ ನಡೆದುಕೊಂಡ ರೀತಿ ಸರಿ ಇರಲಿಲ್ಲ. ಬಿಜೆಪಿ ಸರ್ಕಾರ ದೊಡ್ಡಮಟ್ಟದಲ್ಲಿ ಭ್ರಷ್ಟಾಚಾರದಲ್ಲಿ ತೊಡಗಿದ್ದ ಬಗ್ಗೆ ಗುಮಾನಿ ಇದೆ. ನಾವು ಜನರಿಗೆ ಮಾತು ಕೊಟ್ಟಂತೆ ಭ್ರಷ್ಟಾಚಾರ, ಅನ್ಯಾಯ, ಅಕ್ರಮ ನಡೆದಿರುವ ಕಡೆ ನಾವು ತನಿಖೆ ಮಾಡಿಸುತ್ತಿದ್ದೇವೆ ಯಾರ ಮೇಲೆ ಗೂಬೆ ಕೂರಿಸುವುದು, ರಾಜಕೀಯಕ್ಕೋಸ್ಕರ ತನಿಖೆ ನಡೆಸುತ್ತಿಲ್ಲ. ತನಿಖೆಯಲ್ಲಿ ಲೋಪದೋಷಗಳು ಕಂಡುಬಂದರೆ ರಾಜ್ಯದ ಹಿತದೃಷ್ಠಿಯಿಂದ ಕ್ರಮ ಕೈಗೊಳ್ಳುತ್ತೇವೆಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ