ನಂದಿ ಹಿಲ್ಸ್ ನಲ್ಲಿಯೂ ಇಂದಿರಾ ಕ್ಯಾಂಟೀನ್ ಮಾದರಿ ಮಯೂರ್ ಹೋಟೆಲ್ ಆರಂಭ
ನಂದಿಗಿರಿಧಾಮಕ್ಕೆ ಸಾವಿರಾರು ಪ್ರವಾಸಿಗರು ಬರುತ್ತಾರೆ. ತೋಟಗಾರಿಕೆ ಇಲಾಖೆಯಿಂದ ಪ್ರವಾಸೋದ್ಯಮ ಇಲಾಖೆಯ ಕೆಎಸ್‌ಟಿಡಿಸಿಗೆ ಹಸ್ತಾಂತರ ಮಾಡಿದ ಮೇಲೆ ನಂದಿಗಿರಿಧಾಮ ಶ್ರೀಮಂತರ ವಿಲಾಸಿ ತಾಣವಾಗಿದೆ. ದುಡ್ಡಿದ್ದವರ ದುನಿಯಾ ಎನ್ನುವಂತಾಗಿತ್ತು. ಆದರೆ ಪ್ರವಾಸೋದ್ಯಮ ಇಲಾಖೆ ತಡವಾಗಿ ಎಚ್ಚೆತ್ತಿದ್ದು ಇಂದಿರಾ ಕ್ಯಾಂಟೀನ್ ಮಾದರಿಯಲ್ಲಿ ಕಡಿಮೆ ದರದಲ್ಲಿ ತಿಂಡಿ, ತಿನಿಸು ಸಿಗುವ ಹಾಗೆ, ದುಬಾರಿಯಲ್ಲದ ಕ್ಯಾಂಟೀನ್ ಆರಂಭಿಸಿದೆ.
ಚಿಕ್ಕಬಳ್ಳಾಪುರ, ಸೆಪ್ಟೆಂಬರ್ 2: ನಂದಿ ಹಿಲ್ಸ್ (Nandi Hills) ಅಂದರೆ ಶ್ರೀಮಂತರ ಮೋಜು ಮಸ್ತಿನ ತಾಣ, ಅಲ್ಲಿಗೆ ಹೋದರೆ ಅಲ್ಲಿ ಸಿಗುವ ತಿಂಡಿ ತಿನಿಸು ಕೊನೆಗೆ ಕುಡಿಯುವ ನೀರು ಸಹಾ ಅತ್ಯಂತ ದುಬಾರಿ ಎನ್ನುವಂತಾಗಿತ್ತು. ಇದರಿಂದ ಪ್ರವಾಸಿಗರು (Tourism) ಹಿಡಿಶಾಪ ಹಾಕುತ್ತಿದ್ದರು. ಇದನ್ನು ಮನಗಂಡ ಪ್ರವಾಸೋದ್ಯಮ ಇಲಾಖೆ (KSTDC) ತಡವಾಗಿ ಎಚ್ಚೆತ್ತಿದ್ದು ಇಂದಿರಾ ಕ್ಯಾಂಟೀನ್ (Indira canteen) ಮಾದರಿಯಲ್ಲಿ ಅತ್ಯಂತ ಕಡಿಮೆ ದರದಲ್ಲಿ ತಿಂಡಿ, ತಿನಿಸು ಸಿಗುವ ಹಾಗೆ, ದುಬಾರಿಯಲ್ಲದ ಕ್ಯಾಂಟೀನ್ (Mayur Hotel) ಆರಂಭಿಸಿದೆ.
ಪ್ರತಿದಿನ ಚಿಕ್ಕಬಳ್ಳಾಪುರ ತಾಲೂಕಿನ ನಂದಿಗಿರಿಧಾಮಕ್ಕೆ ಸಾವಿರಾರು ಜನ ಪ್ರವಾಸಿಗರು ಬರುತ್ತಾರೆ. ತೋಟಗಾರಿಕೆ ಇಲಾಖೆಯಿಂದ ಪ್ರವಾಸೋದ್ಯಮ ಇಲಾಖೆಯ ಕೆಎಸ್‌ಟಿಡಿಸಿಗೆ ಹಸ್ತಾಂತರ ಮಾಡಿದ ಮೇಲೆ ನಂದಿಗಿರಿಧಾಮ ಶ್ರೀಮಂತರ ವಿಲಾಸಿ ತಾಣವಾಗಿದೆ. ದುಡ್ಡಿದ್ದವರ ದುನಿಯಾ ಎನ್ನುವಂತಾಗಿತ್ತು. ಗಿರಿಧಾಮದ ಮೇಲೆ ಇರುವ ಪ್ರವಾಸೋದ್ಯಮ ಇಲಾಖೆಯ ಕ್ಯಾಂಟೀನ್‌ಗಳಲ್ಲಿ ಫೈಸ್ಟಾರ್ ಹೋಟಲ್ ಬೆಲೆ ನಿಗದಿಯಾಗಿತ್ತು. ಇದರಿಂದ ಬಡಬಗ್ಗರು ಊಟ, ತಿಂಡಿ, ನೀರು ಕೊಳ್ಳಲಾಗದೇ ಉಪವಾಸ ಪ್ರವಾಸ ಮಾಡುವಂತಾಗಿತ್ತು.
ಪ್ರವಾಸೋದ್ಯಮ ಸಚಿವರು ಆಶ್ಚರ್ಯ ವ್ಯಕ್ತಪಡಿಸಿದ್ರು: ಇತ್ತೀಚಿಗೆ ಚಿಕ್ಕಬಳ್ಳಾಪುರ ತಾಲೂಕಿನ ನಂದಿಗಿರಿಧಾಮಕ್ಕೆ ಆಗಮಿಸಿದ್ದ ಪ್ರವಾಸೋದ್ಯಮ ಸಚಿವ ಹೆಚ್.ಕೆ. ಪಾಟೀಲ್ ಆಗಮಿಸಿದ್ದರು. ಗಿರಿಧಾಮದಲ್ಲಿರುವ ಸೌಕರ್ಯಗಳ ಬಗ್ಗೆ ಪರಿಶೀಲನೆ ನಡೆಸಿದ್ರು. ಮಯೂರ್ ಹೋಟಲ್ ನಲ್ಲಿ ಇರುವ ತಿಂಡಿ ತಿನಿಸುಗಳ ಮೆನು ಗಮನಿಸಿದ್ರು. ಇಷ್ಟೊಂದು ದುಬಾರಿಯಾದ್ರೆ ಜನರು ಊಟ ತಿಂಡಿ ಹೇಗೆ ಮಾಡೋದು ಏನಾದರೂ ಪರ್ಯಾಯ ವ್ಯವಸ್ಥೆ ಮಾಡುವಂತೆ ಕೆ.ಎಸ್.ಟಿ.ಡಿ.ಸಿ. ಎಂಡಿ ಜಗದೀಶ್ ಗೆ ಸೂಚನೆ ನೀಡಿದ್ರು. ಇದರಿಂದ ಎಚ್ಚೆತ್ತ ಕೆ.ಎಸ್.ಟಿ.ಡಿ.ಸಿ. ವ್ಯವಸ್ಥಾಪಕ ನಿರ್ದೇಶಕರಾದ ಜಗದೀಶ್ ಅವರು ಇದೇ ಪ್ರಥಮ ಬಾರಿಗೆ ಗಿರಿಧಾಮದಲ್ಲಿ ಇಂದಿರಾ ಕ್ಯಾಂಟೀನ್ ಮಾದರಿಯಲ್ಲಿ ಕ್ಯಾಂಟೀನ್ ಆರಂಭಿಸಿದ್ದಾರೆ.
ನಂದಿ ಹಿಲ್ಸ್ ನಲ್ಲಿ ಮಯೂರ್ ಹೋಟಲ್ -ಮೆನು, ಬೆಲೆ ಎಷ್ಟು:
ನಂದಿಗಿರಿಧಾಮದ ಬಸ್ ನಿಲ್ದಾಣದ ಬಳಿ ಮಯೂರ ಕ್ಯಾಂಟೀನ್ ಆರಂಭಿಸಲಾಗಿದೆ. 20 ರೂಪಾಯಿಗೆ ಅನ್ನ ಸಾಂಬರ್, 15 ರೂಪಾಯಿಗೆ ಮೊಸರನ್ನ, 20 ರೂಪಾಯಿಗೆ ಕೇಸರಿಬಾತ್, 20 ರೂಪಾಯಿಗೆ ಉಪ್ಪಿಟ್ಟು, 20 ರೂಪಾಯಿಗೆ ಬಿಸಿಬೇಳೆಬಾತ್, 20 ರೂಪಾಯಿಗೆ ರೈಸ್‌ಬಾತ್ ಸೇರಿದಂತೆ 10 ರೂಪಾಯಿಗೆ ಟೀ/ಕಾಫಿ ಸವಿಯಬಹುದಾಗಿದೆ.
ನಂದಿ ಹಿಲ್ಸ್ ನಲ್ಲಿ ಇಂದಿರಾ ಕ್ಯಾಂಟೀನ್ ಮಾದರಿಗೆ ಪ್ರವಾಸಿಗರ ಸಂತಸ:
ಪ್ರವೇಶ ಶುಲ್ಕ, ಪಾರ್ಕಿಂಗ್ ಶುಲ್ಕ, ಕೆಎಸ್‌ಟಿಡಿಸಿ ವಾಹನ ಶುಲ್ಕದಿಂದ ಹಿಡಿದು ಮಯೂರ ಫೈ-ಸ್ಟಾರ್ ಹೋಟೆಲ್‌ವರೆಗೂ ಅತ್ಯಂತ ದುಬಾರಿ ಹಣ ನೀಡುವಂತಾಗಿದ್ದು, ಇದರ ಮಧ್ಯೆ ಇಂದಿರಾ ಕ್ಯಾಂಟೀನ್ ಮಾದರಿಯಲ್ಲಿ ಕ್ಯಾಂಟೀನ್ ತೆರೆದು ಬಡ ಪ್ರವಾಸಿಗರಿಗೂ ಅನುಕೂಲ ಕಲ್ಪಿಸಿರುವುದು ಸಾರ್ವಜನಿಕರ ಮೆಚ್ಚುಗೆಗೆ ಕಾರಣವಾಗಿದೆ.
ಚಿಕ್ಕಬಳ್ಳಾಪುರ ಜಿಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ