
ಚಿಕ್ಕಬಳ್ಳಾಪುರ, ಜನವರಿ 10: ಪ್ರತಿಷ್ಠಿತ ಮಠದ ಸಾದ್ವಿ ವೃದ್ಧೆಯ ಸೇವೆಗೆಂದು ಬಂದ ವ್ಯಕ್ತಿಯೋರ್ವ ಮಠ ಮುನ್ನಡೆಸಿಕೊಂಡು ಹೋಗುತ್ತೇನೆಂದು ಮಠದ ಪೀಠಾಧಿಪತಿಯಾಗಿದ್ದ. ಕೊನೆಗೆ ಮಠದ ಅಭಿವೃದ್ಧಿಗೆ ಟ್ರಸ್ಟ್ ಒಂದನ್ನು ಮಾಡುತ್ತೇನೆ ಅಂತೇಳಿ ಟ್ರಸ್ಟ್ ನೋಂದಣಿ ನೆಪದಲ್ಲಿ ಮಠಕ್ಕೆ ಸೇರಿದ ಆಸ್ತಿಗಳನ್ನು (Property) ತನ್ನ ಹೆಸರಿಗೆ ಮಾಡಿಕೊಂಡಿದ್ದಾನೆಂದು ಆರೋಪಿಸಿ ಸಾದ್ವಿಯ ಸಂಬಂಧಿಕರು ಇಂದು ಮಠಕ್ಕೆ ನುಗ್ಗಿ, ಸ್ವಾಮೀಜಿಯನ್ನು ಹಿಡಿದು ಎಳೆದಾಡಿ ತಳ್ಳಾಡಿ, ನೂಕುನುಗ್ಗಲಾಗಿದ್ದು, ಕೈಕೈ ಮಿಲಾಯಿಸುವ ಹಂತಕ್ಕೆ ಹೋದ ಘಟನೆ ನಡೆದಿದೆ.
ಚಿಕ್ಕಬಳ್ಳಾಪುರ ತಾಲ್ಲೂಕಿನ ಕಳವಾರದ ಬಳಿ ಇರುವ ಓಂಕಾರ ಜ್ಯೋತಿ ಮಠ. ಬೆಂಗಳೂರಿನ ಬಿಬಿಎಂಪಿಯ ಕ್ಲಾಸ್-1 ಗುತ್ತಿಗೆದಾರ ಮರಿಯಪ್ಪಸ್ವಾಮಿ ಅವರ ಪತ್ನಿ ಜಯಮ್ಮ ಚಿಕ್ಕಬಳ್ಳಾಪುರದ ಬಳಿ ಜಮೀನು ಖರೀದಿಸಿ ಆಶ್ರಮ ಹಾಗೂ ಮಠ ನಡೆಸುತ್ತಿದ್ದರು. ಮರಿಯಪ್ಪಸ್ವಾಮಿ ನಿಧನದ ನಂತರ ಅವರ ಪತ್ನಿ ಜಯಮ್ಮ ಸಾದ್ವಿಯಾಗಿ ಮಠ, ಆಸ್ತಿಯನ್ನು ಮುನ್ನಡೆಸುತ್ತಿದ್ದರು. ಅವರ ಸೇವೆಗೆಂದು ಬಂದ ಉಮೇಶ್ ವೆಂಕಟರಮಣಪ್ಪ ಆಚಾರ್, ಮಠದಲ್ಲಿ ದೀಕ್ಷೆ ಪಡೆದು ಪಾರ್ಥಸಾರಥಿ ಸ್ವಾಮೀಜಿಯಾಗಿ ಪೀಠಾಧಿಪತಿಯಾಗಿದ್ದ. ಮಠಕ್ಕೆ ಸಂಬಂಧಿಸಿದ ಟ್ರಸ್ಟ್ ನೋಂದಣಿ ಮಾಡಿಸುವ ನೆಪದಲ್ಲಿ ಮಠ ಹಾಗೂ ಮಠಕ್ಕೆ ಸೇರಿದ ಕೋಟ್ಯಂತರ ರೂ ಮೌಲ್ಯದ ಜಮೀನನ್ನು ತನ್ನ ಹೆಸರಿಗೆ ದಾನ ಪತ್ರ ಮಾಡಿಸಿಕೊಂಡಿರುವ ಆರೋಪ ಕೇಳಿಬಂದಿದೆ.
ಇನ್ನು ಓಂಕಾರ ಜ್ಯೋತಿ ಆಶ್ರಮ ಹಾಗೂ ಮಠದ ಸಾದ್ವಿ ಜಯಮ್ಮ ಹೆಸರಿನಲ್ಲಿ ಒಂದು ಎಕರೆ ಹತ್ತು ಗುಂಟೆ ಜಮೀನು, ಆಶ್ರಮ ಕಟ್ಟಡವಿದೆ. ಇದೆಲ್ಲವನ್ನು ಉಮೇಶ್ ಅಲಿಯಾಸ್ ಪಾರ್ಥಸಾರಥಿ ಜಯಮ್ಮ ಅವರಿಗೆ ಅರಿವಿಲ್ಲದ ಹಾಗೆ ತನ್ನ ಹೆಸರಿಗೆ ಗಿಫ್ಟ್ ಡೀಡ್ ಮಾಡಿಕೊಂಡಿದ್ದಾನೆಂದು ಜಯಮ್ಮ ಸಂಬಂಧಿಗಳು ಇಂದು ಮಠಕ್ಕೆ ನುಗ್ಗಿ ಪಾರ್ಥ ಸ್ವಾಮೀಜಿಯ ಹುಟ್ಟುಹಬ್ಬದ ದಿನವೇ ಕೆಲವು ಮಠಾಧೀಶರ ಸಮ್ಮುಖದಲ್ಲೇ ಸ್ವಾಮೀಜಿಯನ್ನು ಹಿಡಿದು ಎಳೆದಾಡಿ, ನೂಕುನುಗ್ಗಲು ಮಾಡಿದರು. ಇದರಿಂದ ಮಠದಲ್ಲಿ ಕೆಲಕಾಲ ಉದ್ವಿಘ್ನ ಪರಿಸ್ಥಿತಿ ಉಂಟಾಯಿತು.
ಸಾದ್ವಿ ಜಯಮ್ಮ ಅವರಿಂದ ದೀಕ್ಷೆ ಸ್ವೀಕರಿಸಿದ್ದ ಉಮೇಶ್ ಅಲಿಯಾಸ್ ಪಾರ್ಥಸಾರಥಿ ಸ್ವಾಮೀಜಿ, ತಾನು ಯಾರಿಗೂ ಮೋಸ ಮಾಡಿಲ್ಲ, ಅನ್ಯಾಯ ಮಾಡಿಲ್ಲ. ಸ್ವತಃ ಜಯಮ್ಮ ಸೂಚನೆ ಮೇರೆಗೆ ಟ್ರಸ್ಟ್ ನೋಂದಣಿ ಹಾಗೂ ಟ್ರಸ್ಟ್ಗೆ ಆಸ್ತಿಯನ್ನು ಗಿಫ್ಟ್ ಡೀಡ್ ಮಾಡಿಕೊಂಡಿದ್ದೇನೆ. ಸ್ವತಃ ಸಾದ್ವಿ ಜಯಮ್ಮನವರೇ ಬಂದು ಮಾಡಿಕೊಟ್ಟಿದ್ದಾರೆಂದು ತಿಳಿಸಿದ್ದಾರೆ.
ಇದನ್ನೂ ಓದಿ: ಗದಗ: ಮನೆ ಕಟ್ಟಲು ಅಡಿಪಾಯ ತೆಗೆಯುವ ವೇಳೆ ನಿಧಿ ಪತ್ತೆ, ಎಷ್ಟು ಕೆಜಿ ಗೊತ್ತಾ?
ಒಟ್ಟಿನಲ್ಲಿ ಸಾದ್ವಿ ಸೇವೆಗೆಂದು ಬಂದ ಸಾಮಾನ್ಯ ವ್ಯಕ್ತಿಯೋರ್ವ ಮಠದ ಪೀಠಾಧಿಪತಿಯಾಗಿ ಕೊನೆಗೆ ಟ್ರಸ್ಟ್ನ ನೋಂದಣಿ ನೆಪದಲ್ಲಿ ಮಠದ ಸಾದ್ವಿಯ ಆಸ್ತಿಯನ್ನು ಟ್ರಸ್ಟ್ಗೆ ಮಾಡಿಸಿಕೊಂಡಿರುವುದು ಈಗ ವಿವಾದಕ್ಕೆ ಕಾರಣವಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.