ಚಿಕ್ಕಬಳ್ಳಾಪುರ, ಡಿ.10: ಬೆಂಗಳೂರು ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿ 44ರ ಚಿಕ್ಕಬಳ್ಳಾಪುರ ಬೈಪಾಸ್ಗೆ ಹೊಂದಿಕೊಂಡಿರುವ ಅಮಾನಿ ಗೋಪಾಲಕೃಷ್ಣ ಕೆರೆಯ ನೀರಿಗೆ ಕಾರು ಉರುಳಿಬಿದ್ದು ನಾಲ್ಕು ಜನ ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ (Death). ಚಿಂತಾಮಣಿ ಪಟ್ಟಣದ ನೆಕ್ಕೂಂದಿಪೇಟೆ ನಿವಾಸಿ ಟ್ಯಾಗೂರು(21), ಚಿಕ್ಕಬಳ್ಳಾಪುರದ ನಿವಾಸಿಗಳಾದ ಪವನ್(22), ಆರ್ಯನ್(22), ಚಿಕ್ಕಬಳ್ಳಾಪುರದ ಹೆಚ್.ಎಸ್.ಗಾರ್ಡನ್ ನಿವಾಸಿ ವಸಂತ್(21) ಮೃತ ದುರ್ದೈವಿಗಳು.
ಬೆಂಗಳೂರು ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿ 44ರ ಮೂಲಕ ಬೆಂಗಳೂರಿನಿಂದ ಚಿಕ್ಕಬಳ್ಳಾಪುರಕ್ಕೆ ಕೆ.ಎ 03-ಎಂ.ಟಿ 0761 ರೆಡ್ ಕಲರ್ ವಾಕ್ಸವೋಗನ್ ಕಾರಿನಲ್ಲಿ ಹೊರಟಿದ್ದ ನಾಲ್ಕು ಜನ ವಿದ್ಯಾರ್ಥಿಗಳು, ಇನ್ನೇನು ಒಂದು ನಿಮಿಷ ಆಗಿದ್ರೆ ಮನೆ ಸೇರಿಕೊಳ್ತಿದ್ರು, ಆದ್ರೆ ಅದೇನ್ ಆಯಿತೋ ಚಿಕ್ಕಬಳ್ಳಾಪುರ ನಗರ ಹೊರಹೊಲಯದ ಬೈಪಾಸ್ ನಲ್ಲಿ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಕಾರು, ಅಮಾನಿ ಗೋಪಾಲಕೃಷ್ಣ ಕೆರೆಗೆ ಉರುಳಿಬಿದ್ದಿದೆ. ಕಾರು ನೀರಿನಲ್ಲಿ ಮುಳುಗಿದ ರಭಸಕ್ಕೆ ಕಾರಿನಲ್ಲಿದ್ದ ನಾಲ್ಕು ಜನರು ಸ್ಥಳದಲ್ಲಿ ಹೆಣವಾಗಿದ್ದಾರೆ. ಇನ್ನೂ ಹೆದ್ದಾರಿಯಲ್ಲಿ ಕಾರಿನ ಹಿಂದೆ ಸಂಚರಿಸುತ್ತಿದ್ದ ಆಂಬುಲೆನ್ಸ್ ಚಾಲಕನೋರ್ವ ಕಾರು ಉರುಳಿಬಿದ್ದಿನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.
ಇನ್ನೂ ತಕ್ಷಣ ಸ್ಥಳಕ್ಕೆ ಬಂದ ಚಿಕ್ಕಬಳ್ಳಾಪುರ ನಗರದ ಎಚ್.ಎಸ್ ಗಾರ್ಡನ್ ಬಡಾವಣೆಯ ನಿವಾಸಿಗಳು ಸಂಚಾರಿ ಠಾಣೆ ಪೊಲೀಸರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಹರಸಾಹಸ ಪಟ್ಟು, ಕಾರಿನಲ್ಲಿದ್ದವರನ್ನು ಹೊರಗೆ ತೆಗೆದ್ರು. ಆದ್ರೆ ಅಷ್ಟೊತ್ತಿಗೆ ನಾಲ್ಕು ಜನ ಕಾರಿನಲ್ಲಿ ಮೃತಪಟ್ಟಿದ್ದರು. ಕೊನೆಗೆ ಕ್ರೇನ್ ಮೂಲಕ ಕಾರನ್ನು ಮೇಲೆ ಎತ್ತಲಾಯಿತು. ಮೃತಪಟ್ಟವರನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರದ ನಿವಾಸಿ 21 ವರ್ಷದ ಟ್ಯಾಗೂರು, ಚಿಕ್ಕಬಳ್ಳಾಪುರ ನಗರದ ಎಚ್.ಎಸ್. ಗಾರ್ಡನ್ ಬಡಾವಣೆಯ 21 ವರ್ಷದ ವಸಂತ್, ಹಾಗೂ ಚಿಕ್ಕಬಳ್ಳಾಪುರ ಭಾರತಿ ಬಡಾವಣೆಯ ನಿವಾಸಿಗಳಾದ 22 ವರ್ಷದ ಪವನ್ ಹಾಗೂ 22 ವರ್ಷದ ಆರ್ಯನ್ ಎಂದು ಗುರ್ತಿಸಲಾಗಿದೆ. ಎಲ್ಲರೂ ಬೆಂಗಳೂರಿನ ರೇವಾ ಕಾಲೇಜಿನ ವಿದ್ಯಾರ್ಥಿಗಳು ಎನ್ನಲಾಗಿದೆ. ಪವನ್ ಅಜ್ಜಿ ಮನೆ ಚಿಕ್ಕಬಳ್ಳಾಪುರವಾಗಿದ್ದು ಅಜ್ಜಿ ಮನೆಗೆ ಬರುವಾಗ ಘಟನೆ ನಡೆದಿದೆ.
ಇದನ್ನೂ ಓದಿ: ಉಗ್ರಗಾಮಿಗಳಿಗೆ ಬೆಂಗಳೂರು ಸುರಕ್ಷಿತ ತಾಣ: ಬಸನಗೌಡ ಪಾಟೀಲ್ ಯತ್ನಾಳ್
ಇನ್ನೂ ಕಾರು ಪವನ್ ಗೆ ಸೇರಿದ್ದು, ಅದರ ಮಾಲಿಕತ್ವ ಬೆಂಗಳೂರಿನ ಕಾರ್ತಿಕ್ ಎನ್ನುವವರ ಹೆಸರಿನಲ್ಲಿದೆ, ಇತ್ತಿಚಿಗೆ ಕಾರುವೀಮೆ ಲ್ಯಾಪ್ಸ್ ಆಗಿದೆ, ನಾಲ್ಕು ಜನ ವಿದ್ಯಾರ್ಥಿಗಳು ಅತಿವೇಗವಾಗಿ ಕಾರು ಚಲಾಯಿಸಲು ಹೋಗಿ ಕೆರೆಗೆ ಉರುಳಿಬಿದ್ದಿರುವ ಸಾಧ್ಯತೆಯಿದೆ. ಸದ್ಯಕ್ಕೆ ಚಿಕ್ಕಬಳ್ಳಾಪುರ ಸಂಚಾರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆಯ ಕೈಗೊಂಡಿದ್ದು ಮೃತರ ಮನೆಯಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.
ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 7:19 am, Sun, 10 December 23