ಚಿಕ್ಕಬಳ್ಳಾಪುರ: ಮೊಮ್ಮಗಳ 40 ದಿನದ ಶಿಶುವನ್ನೇ ಕೊಂದಳೇ ಅಜ್ಜಿ? ಚೇಳೂರಿನಲ್ಲಿ ಮರ್ಯಾದಾ ಹತ್ಯೆ ಶಂಕೆ

ಹುಬ್ಬಳ್ಳಿಯಲ್ಲಿ ನಡೆದ ಭೀಕರ ಮರ್ಯಾದಾ ಹತ್ಯೆ ಪ್ರಕರಣದ ಕಹಿ ನೆನಪು ಮಾಸುವ ಮುನ್ನವೇ ಚಿಕ್ಕಬಳ್ಳಾಪುರ ಜಿಲ್ಲೆಯ ಚೇಳೂರು ಪಟ್ಟಣದಲ್ಲಿ ಮರ್ಯಾದಾ ಹತ್ಯೆಯ ಶಂಕೆ ವ್ಯಕ್ತವಾಗಿದೆ. 40 ದಿನಗಳ ಗಂಡುಶಿಶುವಿನ ಸಾವಿಗೆ ಮುತ್ತಜ್ಜಿಯೇ ಕಾರಣ ಎಂಬ ಅನುಮಾನ ವ್ಯಕ್ತವಾಗಿದ್ದು, ಪೊಲೀಸ್ ದೂರು ದಾಖಲಾಗಿದೆ. ಘಟನೆಯ ವಿವರ ಇಲ್ಲಿದೆ.

ಚಿಕ್ಕಬಳ್ಳಾಪುರ: ಮೊಮ್ಮಗಳ 40 ದಿನದ ಶಿಶುವನ್ನೇ ಕೊಂದಳೇ ಅಜ್ಜಿ? ಚೇಳೂರಿನಲ್ಲಿ ಮರ್ಯಾದಾ ಹತ್ಯೆ ಶಂಕೆ
ಸಾಂದರ್ಭಿಕ ಚಿತ್ರ (ಒಳಚಿತ್ರದಲ್ಲಿ ಆರೋಪಿ)
Edited By:

Updated on: Dec 25, 2025 | 6:50 AM

ಚಿಕ್ಕಬಳ್ಳಾಪುರ, ಡಿಸೆಂಬರ್ 25: ಚಿಕ್ಕಬಳ್ಳಾಪುರ (Chikkaballapur) ಜಿಲ್ಲೆಯ ಚೇಳೂರು ಪಟ್ಟಣದಲ್ಲಿ 40 ದಿನದ ನವಜಾತ ಗಂಡು ಶಿಶು ಸಾವಿನ ಪ್ರಕರಣ ಇದೀಗ ತೀವ್ರ ಅನುಮಾನಗಳಿಗೆ ಕಾರಣವಾಗಿದೆ. ಈ ಘಟನೆಯಲ್ಲಿ ಮರ್ಯಾದೆ ಹತ್ಯೆ ಶಂಕೆ ವ್ಯಕ್ತವಾಗಿದ್ದು, ಶಿಶುವಿನ ಸಾವಿನಲ್ಲಿ ಅಜ್ಜಿಯ ಕೈವಾಡವಿರಬಹುದೆಂಬ ಆರೋಪ ಕೇಳಿಬಂದಿದೆ. ಅಪ್ರಾಪ್ತ ಮೊಮ್ಮಗಳು ಹಿಂದೂ ಯುವಕನನ್ನು ಪ್ರೀತಿಸಿ ಮದುವೆ ಮಾಡಿಕೊಂಡಿದ್ದಕ್ಕೆ ದ್ವೇಷ ಹೊಂದಿದ್ದ ಅನ್ಯಕೋಮಿಗೆ ಸೇರಿದ ಅಜ್ಜಿ, ಮೊಮ್ಮಗಳ 40 ದಿನದ ನವಜಾತ ಶಿಶುವನ್ನು ಕೊಂದಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಪ್ರೀತಿಸಿ ಮದುವೆಯಾದ ದಂಪತಿಗೆ ಜನಸಿದ್ದ ಗಂಡು ಮಗು ಡಿಸೆಂಬರ್ 21 ರಂದು ಮೃತಪಟ್ಟಿದೆ.

ಸಾವು ಸಂಭವಿಸಿದ ವೇಳೆ ಮಗು ಅಜ್ಜಿ ಬಳಿ ಇತ್ತು. ಆದರೆ, ಈ ಕುರಿತು ಪೊಲೀಸರಿಗೆ ಮಾಹಿತಿ ನೀಡುವ ಅಗತ್ಯವಿಲ್ಲ ಎಂದು ಅಜ್ಜಿ ವಾದಿಸಿದ್ದಾಳೆ ಎನ್ನಲಾಗಿದೆ. ಆದರೆ ತನ್ನ ಮಗುವಿನ ಸಾವಿನಲ್ಲಿ ಅಜ್ಜಿಯ ಕೈವಾಡವಿದೆ ಎಂಬ ಅನುಮಾನ ವ್ಯಕ್ತಪಡಿಸಿದ 17 ವರ್ಷದ ಅಪ್ರಾಪ್ತ ಬಾಲಕಿ, ಚೇಳೂರು ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾಳೆ.

ಚೇಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಈ ದೂರಿನ ಆಧಾರದ ಮೇಲೆ ಬಿಎನ್ಎಸ್ 194 ಸೆಕ್ಷನ್ ಅಡಿ ಯುಡಿಆರ್ (ಅಸಹಜ ಸಾವು) ಪ್ರಕರಣ ದಾಖಲಿಸಲಾಗಿದೆ. ಪ್ರಕರಣದ ಗಂಭೀರತೆಯನ್ನು ಗಮನಿಸಿ ನವಜಾತ ಶಿಶುವಿನ ಮೃತದೇಹವನ್ನು ಹೊರತೆಗೆಯಲಾಗಿದ್ದು, ಚೇಳೂರು ತಹಶಿಲ್ದಾರ್ ಶ್ವೇತಾ ಅವರ ನೇತೃತ್ವದಲ್ಲಿ ಮರಣೋತ್ತರ ಶವ ಪರೀಕ್ಷೆ ನಡೆಸಲಾಗಿದೆ.

ಹಿಂದೂ ಯುವಕನ ವಿರುದ್ಧ ಪೋಕ್ಸೋ ಕೇಸ್

ಇನ್ನೊಂದೆಡೆ, ಅಪ್ರಾಪ್ತ ಬಾಲಕಿಯನ್ನು ಪ್ರೀತಿಸಿ ಮದುವೆ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಹಿಂದೂ ಯುವಕನ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರತ್ಯೇಕ ಪ್ರಕರಣ ದಾಖಲಿಸಲಾಗಿದೆ. ಅಪ್ರಾಪ್ತ ಬಾಲಕಿಯ ಮದುವೆ ಹಾಗೂ ಶಿಶು ಸಾವಿನ ಪ್ರಕರಣಗಳು ಇದೀಗ ಚೇಳೂರು ಪಟ್ಟಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿವೆ.

ಇದನ್ನೂ ಓದಿ: ಮನೆಗೆ ನುಗ್ಗಿ ಹೊಡೆಯುತ್ತಿದ್ದರು, ಅಂಗಲಾಚಿದರೂ ಯಾರೂ ನೆರವಿಗೆ ಬಂದಿಲ್ಲ: ಗರ್ಭಿಣಿ ಹತ್ಯೆ ಬಗ್ಗೆ ಪತಿ ವಿವೇಕಾನಂದ ಕಣ್ಣೀರ ಮಾತು

ನವಜಾತ ಶಿಶುವಿನ ಮರಣಕ್ಕೆ ನಿಖರ ಕಾರಣ ಏನು, ಇದರಲ್ಲಿ ಅಜ್ಜಿಯ ಪಾತ್ರವಿದೆಯೇ ಎಂಬುದನ್ನು ತಿಳಿಯಲು ಪೊಲೀಸರು ಮರಣೋತ್ತರ ವರದಿ ನಿರೀಕ್ಷಿಸುತ್ತಿದ್ದಾರೆ. ಪ್ರಕರಣವನ್ನು ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ