ಚಿಕ್ಕಬಳ್ಳಾಪುರ: 75ನೇ ವರ್ಷದ ಸ್ವಾತಂತ್ರ್ಯದ ಅಮೃತ ಮಹೋತ್ಸವ( Azadi Ka Amrit Mahotsav) ಪ್ರಯುಕ್ತ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲೂಕಿನ ಮಳ್ಳೂರು ಗ್ರಾಮದ ನಿವಾಸಿ 99 ವರ್ಷದ ಸ್ವಾತಂತ್ರ್ಯ ಹೋರಾಟಗಾರ ಜಿ. ನಾಗಪ್ಪ ರವರ ಮನೆಗೆ ಭೇಟಿ ನೀಡಿ ಸನ್ಮಾನ ಮಾಡಲಾಯಿತು.
ಸ್ವತಃ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಎಂಟಿಬಿ ನಾಗರಾಜ್ ಹಾಗೂ ಆರೋಗ್ಯ ಖಾತೆ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಯ ಸಚಿವ ಡಾ.ಕೆ.ಸುಧಾಕರ್ ಸ್ವಾತಂತ್ರ್ಯ ಹೋರಾಟಗಾರ ಜಿ. ನಾಗಪ್ಪ ರವರ ಮನೆಗೆ ಭೇಟಿ ನೀಡಿ ರಾಷ್ಟ್ರಧ್ವಜ ನೀಡುವುದರ ಮೂಲಕ ಸನ್ಮಾನ ಮಾಡಿ ಗೌರವಿಸಿದ್ರು, ಇದೆ ವೇಳೆ ಮಾತನಾಡಿದ ಆರೋಗ್ಯ ಖಾತೆ ಸಚಿವ ಡಾ.ಕೆ.ಸುಧಾಕರ್, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಆ.13 ರಿಂದ 15 ರವರೆಗೆ ದೇಶಾದ್ಯಂತ ಹಮ್ಮಿಕೊಂಡಿರುವ ಹರ್ ಘರ್ ತಿರಂಗಾ ಅಭಿಯಾನದ ಮೂಲಕ ದೇಶವಾಸಿಗಳಲ್ಲಿ ಅದರಲ್ಲಿಯೂ ಮುಖ್ಯವಾಗಿ ಯುವಜನರಲ್ಲಿ ದೇಶಭಕ್ತಿ ಮತ್ತು ದೇಶಪ್ರೇಮವನ್ನು ಪ್ರೇರೇಪಿಸುತ್ತಿದೆ. ದೇಶದ ಸ್ವಾತಂತ್ರ್ಯದ ಹಿಂದೆ ಲಕ್ಷಾಂತರ ದೇಶ ಪ್ರೇಮಿಗಳ ತ್ಯಾಗ ಬಲಿದಾನಗಳಿವೆ. ಇಂದು ಕೋಟ್ಯಂತರ ಜನ ಭಾರತೀಯರು ಸ್ವತಂತ್ರವಾಗಿ ಮತ್ತು ನೆಮ್ಮದಿಯಿಂದ ಬದುಕುವಲ್ಲಿ ದೇಶಪ್ರೇಮಿ ಸ್ವಾತಂತ್ರ್ಯ ಯೋಧರ ಅವಿರತ ಹೋರಾಟ ಮತ್ತು ಶ್ರಮವಿದೆ. ಸ್ವಾತಂತ್ರ್ಯಕ್ಕಾಗಿ ದುಡಿದವರನ್ನು ಸನ್ಮಾನಿಸಿ ಗೌರವಿಸುವುದು ಮತ್ತು ನೆನಪಿಸಿಕೊಳ್ಳುವುದು ಇವತ್ತಿನ ಪೀಳಿಗೆಗೆ ಅತ್ಯಂತ ಹೆಮ್ಮೆಯ ಸಂಗತಿ ಮತ್ತು ಸೌಭಾಗ್ಯ ಕೂಡ. ಸ್ವಾತಂತ್ರ್ಯ ಹೋರಾಟಗಾರರ ಆಶಯಗಳಿಗೆ ಅನುಗುಣವಾಗಿ ನಾವು ವರ್ತಮಾನ ಮತ್ತು ಭವಿಷ್ಯದಲ್ಲಿ ನಡೆದುಕೊಳ್ಳಬೇಕು ಎಂದರು.
ಸ್ವಾತಂತ್ರ್ಯ ಅಮೃತ ಮಹೋತ್ಸವದ ಪ್ರಯುಕ್ತ ಪ್ರಧಾನಮಂತ್ರಿಗಳ ಕರೆಯ ಮೇರೆಗೆ ಪ್ರತಿ ಮನೆ, ಕಚೇರಿ ಮತ್ತು ತಾವು ಕೆಲಸ ಮಾಡುವ ಸ್ಥಳದಲ್ಲಿ ರಾಷ್ಟ್ರಧ್ವಜವನ್ನು ಹಾರಿಸುವುದು ಒಂದು ರೀತಿಯ ಭಾವನಾತ್ಮಕ ಸಂಬಂಧವಾಗಿದೆ. ಈ ರೀತಿ ದೇಶದ ಎಲ್ಲರೂ ತಿರಂಗಾ ಹಾರಿಸುವುದರಿಂದ ದೇಶದ ಸಮಸ್ತ ಜನರ ಒಗ್ಗಟ್ಟು ತಿಳಿಯಲಿದೆ. ಜೊತೆಗೆ ದೇಶವಾಸಿಗಳ ಐಕ್ಯತೆಯ ಸಂದೇಶ ವಿಶ್ವಮಟ್ಟದಲ್ಲಿ ರವಾನೆಯಾಗಲಿದೆ. ಭಾರತೀಯರೆಲ್ಲರೂ ಒಂದೇ. ಶಾಂತಿ, ಅಹಿಂಸಾ ತತ್ವಗಳ ಪ್ರಿಯರಾಗಿರುವ ಭಾರತೀಯರು ಸೋದರತ್ವಕ್ಕೆ ಮೇಲ್ಪಂಕ್ತಿಯನ್ನು ಹಾಕಿಕೊಂಡಿದ್ದು ಅದನ್ನು ಮುಂದುವರೆಸಿಕೊಂಡು ಹೋಗುವ ನಿಟ್ಟಿನಲ್ಲಿ ಹರ್ ಘರ್ ತಿರಂಗಾ ವಿಶೇಷ ಸಂದೇಶವಾಗಲಿದೆ ಎಂದು ತಿಳಿಸಿದರು.
ಸನ್ಮಾನ ಸಂದರ್ಭದಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಎನ್. ಎಂ. ನಾಗರಾಜ್, ಎಸ್ಪಿ ಡಿ.ಎಲ್ ನಾಗೇಶ, ಉಪವಿಭಾಗಾಧಿಕಾರಿ ಡಾ.ಜಿ.ಸಂತೋಷ್ ಕುಮಾರ್ ಸೇರಿದಂತೆ ಸ್ಥಳಿಯ ಜನಪ್ರತಿನಿಧಿಗಳು ಹಾಗು ಅಧಿಕಾರಿಗಳು ಉಪಸ್ಥಿತರಿದ್ದರು.
ವರದಿ: ಭೀಮಪ್ಪ ಪಾಟೀಲ್, ಟಿವಿ9 ಚಿಕ್ಕಬಳ್ಳಾಪುರ