ಚಿಕ್ಕಬಳ್ಳಾಪುರ: ಸರ್ಕಾರಿ ಶಾಲಾ ಶಿಕ್ಷಕ ದಂಪತಿಯ ಮನೆಯ ಮೇಲೆ ಕಣ್ಣು ಹಾಕಿದ ಕಳ್ಳರು, ಹಾಡಹಗಲೆ ಮನೆಗೆ ನುಗ್ಗಿ ನಾಲ್ಕು ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು (Gold Ornaments) ಕದ್ದು ಪರಾರಿಯಾಗಿದ ಘಟನೆ ನಡೆದಿದೆ. ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ಪಟ್ಟಣದ 21 ನೇ ವಾರ್ಡ್ ನಿವಾಸಿ ಮುನಿರಾಜು ಆರ್.ವಿ. ಹಾಗೂ ಭಾಗ್ಯಮ್ಮ ಅನ್ನೊ ಶಿಕ್ಷಕ ದಂಪತಿಯ (Teacher couple) ಮನೆಯಲ್ಲಿ ಕಳ್ಳತನವಾಗಿದೆ (House Theft). ಶಿಕ್ಷಕ ಮುನಿರಾಜು ಪ್ರಸ್ತುತ ಬಾಗೇಪಲ್ಲಿಯಲ್ಲಿ (Bagepalli) ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ಬಿ ಐ ಇ ಆರ್ ಟಿ ಸಂಪನ್ಮೂಲ ವ್ಯಕ್ತಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇನ್ನು ಮುನಿರಾಜು ಪತ್ನಿ ಭಾಗ್ಯಮ್ಮ ಸಹ ಶಿಕ್ಷಕಿಯಾಗಿದ್ದು, ಬಾಗೇಪಲ್ಲಿ ತಾಲೂಕು ಮಿಟ್ಟೇಮರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಮುನಿರಾಜು ಆರ್.ವಿ. ಹಾಗೂ ಭಾಗ್ಯಮ್ಮ ಇಬ್ಬರೂ ಶಿಕ್ಷಕರು. ಅವರು ಕರ್ತವ್ಯಕ್ಕೆ ಹಾಜರಾಗಿದ್ದ ವೇಳೆ, ಮೊನ್ನೆ ಮಧ್ಯಾಹ್ನ ಮನೆಯಲ್ಲಿ ಯಾರೂ ಇರಲಿಲ್ಲ. ದಂಪತಿಯ ಮಕ್ಕಳೂ ಸಹ ಶಾಲೆಗೆ ಹೋಗಿದ್ದರು. ಇದನ್ನು ಗಮನಿಸಿದ ಕಳ್ಳರು… ದಂಪತಿಯ ಮನೆಯ ಕಿಟಕಿ ಮೂಲಕ ಮನೆಯೊಳಗೆ ನುಸುಳಿ ಕಳ್ಳತನ ಮಾಡಿದ್ದಾರೆ.
ಮುನಿರಾಜು ಆರ್.ವಿ ಹಾಗೂ ಭಾಗ್ಯಮ್ಮ ದಂಪತಿಯ ಮನೆಯ ರೂಮಿನ ಬೀರುವಿನಲ್ಲಿದ್ದ ಬೀಗಗಳನ್ನು ತೆಗೆದುಕೊಂಡು ಬೀರುವಿನಲ್ಲಿಟ್ಟಿದ್ದ
1) ಸುಮಾರು 40 ಗ್ರಾಂ ತೂಕದ ಬಿಳಿಕಲ್ಲಿನ ಕತ್ತಿನ ನಕ್ಲೇಸ್, 2) ಸುಮಾರು 40 ಗ್ರಾಂ ತೂಕದ ಬಂಗಾರದ ಹಾರ, 3) ಸುಮಾರು 15 ಗ್ರಾಂ ತೂಕದ ಗಂಡಸಿನ ಬಂಗಾರದ ಕತ್ತಿನ ಚೈನ್, 4) ಸುಮಾರು 20 ಗ್ರಾಂ ತೂಕದ ಹೆಂಗಸಿನ ಬಂಗಾರದ ಕತ್ತಿನ ಚೈನ್, 5) ಸುಮಾರು 5 ಗ್ರಾಂ ತೂಕದ ಹಸಿರು ಕಲ್ಲಿನ ಬಂಗಾರದ ಉಂಗುರ ಒಟ್ಟು ಅಂದಾಜು 4 ಲಕ್ಷ ಮೌಲ್ಯದ 120 ಗ್ರಾಂ ತೂಕದ ಬಂಗಾರದ ಒಡವೆಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ.
ಮನೆಯಲ್ಲಿದ್ದ ಚಿನ್ನಾಭರಣಗಳನ್ನು ಕಳ್ಳತನ ಮಾಡಿಕೊಂಡು ಕಳ್ಳರು ಎಸ್ಕೇಪ್ ಆಗಿರುವ ಬಗ್ಗೆ ಶಿಕ್ಷಕ ಮುನಿರಾಜು ಬಾಗೇಪಲ್ಲಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಐಪಿಸಿ ಸೇಕ್ಷನ್ ಕಲಂ 380, 454 ರಡಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸಿದ್ದಾರೆ.
ವರದಿ: ಭೀಮಪ್ಪ ಪಾಟೀಲ, ಟಿವಿ 9, ಚಿಕ್ಕಬಳ್ಳಾಪುರ