ಚಿಕ್ಕಬಳ್ಳಾಪುರ, ಅಕ್ಟೋಬರ್ 11: ಇಲ್ಲಿನ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ಅಗತ್ಯ ಔಷಧಿಗಳು ಸಿಗದೆ ರೋಗಿಗಳು ಪರದಾಡುವಂತಾಗಿದ್ದು, ರೋಗಿಗಳು ರಾಜ್ಯ ಸರಕಾರ ಹಾಗೂ ಕ್ಷೇತ್ರದ ಶಾಸಕರಿಗೆ ಹಿಡಿ ಶಾಪ ಹಾಕುತ್ತಿದ್ದಾರೆ. ಆಸ್ಪತ್ರೆಯ ವೈದ್ಯರು ಬರೆದ ಔಷಧಿಗಳು ಸಿಗದೆ ರೋಗಿಗಳು ಪರದಾಟ ಅನುಭವಿಸುತ್ತಿದ್ದಾರೆ. ಆಸ್ಪತ್ರೆಯ ಫಾರ್ಮಸಿ ಹಾಗೂ ಜನೌಷಧಿ ಕೇಂದ್ರದಲ್ಲೂ ಕೆಲವು ಔಷಧಿಗಳು ಇಲ್ಲವೆಂದು ಹೊರಗಡೆಗೆ ಬರೆದು ಕಳುಹಿಸಲಾಗುತ್ತಿದೆ.
ಔಷಧಿಗಾಗಿ ಬಡ ರೋಗಿಗಳ ಪರದಾಟ:
ಅಮೊಕ್ಸಿಕ್ಲಾವ್ -625, 228.5 ಸಿರಪ್, ಅಜಿಟ್ರೋಮೈಸಿನ್ 500 ಎಂ.ಜಿ ಟ್ಯಾಬ್, ಸೈಪಿಕ್ಸಿಮ್ 200 ಎಂ.ಜಿ ಟ್ಯಾಬ್, ಮಲ್ಟಿವಿಟಮಿನ್ ಸಿರಪ್, ಸಿಪಿ.ಎಂ ಸಿರಪ್, ಸಿಪಿಕ್ಸಿಮ್ ಸಿರಪ್ 50 ಎಂ.ಜಿ, ಕ್ಯಾಲಸಿಯಂ ಸಿರಪ್, ಮಲ್ಟಿವಿಟಮಿನ್ , ಡೈಕ್ಲೊಪೇನಾಕ್ ಜೆಲ್, ಟ್ಯಾಮಸೋಸುಲಿನ್ ಟ್ಯಾಬ್ -4 ಎಂ.ಜಿ, ಸಿಟ್ರಿಜಿನ್ ಸಿರಪ್, ಸಿಪಿಕ್ಸಿಮ್ ಸಿ.ವಿ 200 ಟ್ಯಾಬ್, ಡೂಲಾಕ್ಸಿಟಿನ್ 20 ಎಂ.ಜಿ ಟ್ಯಾಬ್ ಕ್ಯಾಲಸಿಯಂ ಸೇರಿದಂತೆ ವಿವಿಧ ಔಷಧಿಗಳು ದೊರೆಯುತ್ತಿಲ್ಲ.
ಆಸ್ಪತ್ರೆ ಬದಲು ಖಾಸಗಿ ಮೆಡಿಕಲ್ ಶಾಪ್ ನಲ್ಲಿ ಔಷಧಿ ಖರೀದಿ:
ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ಬರುವ ರೋಗಿಗಳು ಅನಿವಾರ್ಯವಾಗಿ ಹೊರಗಡೆ ದುಬಾರಿ ದುಡ್ಡು ಕೊಟ್ಟು ಔಷಧಿ ಖರೀದಿ ಮಾಡಬೇಕಾಗಿದೆ. ಆಸ್ಪತ್ರೆ ಎದುರಗಡೆ ಇರುವ ಖಾಸಗಿ ಮೆಡಿಕಲ್ ಸ್ಟೋರ್ ಗಳಲ್ಲಿ ಔಷಧಿಗಳ ಖರೀದಿಗೆ ಬಡ ಜನ ಪರದಾಡುತ್ತಿದ್ದಾರೆ. ಆದರೆ ಆಸ್ಪತ್ರೆ ಆಡಳಿತ ಮಂಡಳಿ ಕಣ್ಣಿದ್ದೂ ಕುರುಡನಂತೆ ವರ್ತಿಸುತ್ತಿದೆ.
ಆಸ್ಪತ್ರೆಯಲ್ಲಿ ಒಳ ಜಗಳ:
ಆಸ್ಪತ್ರೆಯ ಆಡಳಿತ ಮಂಡಳಿಯಲ್ಲಿ ಒಳಜಗಳದ ಆರೋಪ ಹಿನ್ನಲೆ ಸಕಾಲಕ್ಕೆ ಔಷಧಿ ಖರೀದಿಸದೆ ನಿರ್ಲಕ್ಷ್ಯ ತೋರಲಾಗುತ್ತಿದೆ ಎನ್ನಲಾಗುತ್ತಿದೆ. ಮಕ್ಕಳ ತಜ್ಞರ ವಿಭಾಗ, ಇ.ಎನ್.ಟಿ ವಿಭಾಗ, ಮಾನಸಿಕ ಹಾಗೂ ನರ ಚಿಕಿತ್ಸೆ ವಿಭಾಗ, ಮೂಳೆ ಮತ್ತು ಕೀಲು ನೋವು ಚಿಕಿತ್ಸೆ ವಿಬಾಗ, ಹೆರಿಗೆ ವಿಬಾಗದಲ್ಲಿ ಔಷಧಿಗಳ ಕೊರತೆ ಕಮಡು ಬಂದಿದೆ.
ಟಿವಿ9 ವರದಿಯಿಂದ ಎಚ್ಚೆತ್ತ ನಿರ್ದೇಶಕ ಡಾ.ಮಂಜುನಾಥ್:
ಆಸ್ಪತ್ರೆಯ ಪಾರ್ಮಿಸಿಗೆ ಸರ್ಕಾರಿ ಮೆಡಿಕಲ್ ಕಾಲೇಜು ನಿರ್ದೇಶಕ ಡಾ.ಮಂಜುನಾಥ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು, ಯಾವಾಗಲೂ ಎಲ್ಲಾ ಔಷಧಿಗಳು ಇರಲು ಸಾಧ್ಯವಿಲ್ಲ. ಪಿಡಿಯಾಟ್ರಿಕ್ಸ್, ಆಂಟಿಬಯೋಟಿಕ್ಸ್ ವಿಭಾಗದ ಔಷಧಿಗಳ ಕೊರತೆ ಇರುವುದು ನಿಜ ಎಂದು ಆಸ್ಪತ್ರೆಯ ಪಾರ್ಮಸಿಸ್ಟ್ ಮಂಜುನಾಥ ನಿರ್ದೇಶಕ ಡಾ.ಮಂಜುನಾಥ್ ಗೆ ಮುಖಕ್ಕೆ ಹೊಡೆದ ಹಾಗೆ ಉತ್ತರ ನೀಡಿದ್ರು.
ಶಾಸಕರ ವಿರುದ್ಧವೂ ಅಸಮಧಾನ:
ಆಸ್ಪತ್ರೆಯಲ್ಲಿ ಔಷಧಿಗಳಿಲ್ಲದೆ ರೋಗಿಗಳು ಪರದಾಡುತ್ತಿದ್ದರೆ ಕ್ಷೇತ್ರದ ಶಾಸಕರು ಈ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಹಲವು ದಿನಗಳಿಂದ ಆಸ್ಪತ್ರೆಯ ಕಡೆಗೆ ಮುಖ ಕೂಡ ಮಾಡಿ ನೋಡಿಲ್ಲ. ಆದರೆ ಬಿಗ್ ಬಾಸ್ ಸೇರಿದಂತೆ ಖಾಸಗಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಕಾಲಹರಣ ಮಾಡುತ್ತಿದ್ದಾರೆ. ಕ್ಷೇತ್ರದ ಜನರನ್ನು ಕಡೆಗಣಿಸುತ್ತಿದ್ದಾರೆ ಎಂದು ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ರೋಗಿಗಳು ಅಸಮಧಾನ ವ್ಯಕ್ತಪಡಿಸುತ್ತಿದ್ದಾರೆ.
ಔಷಧಿಗಳು ಸಿಗದೆ ರೋಗಿಗಳು ಹೇಳಿಕೊಮಡಿದ್ದು ಹೀಗೆ:
1.ಹೊಟ್ಟೆ ನೋವಿಗೆ ಚಿಕೀತ್ಸೆ ಪಡೆಯಲು ಆಗಮಿಸಿದ್ದೇನೆ. ವೈದ್ಯೆ ಡಾ.ರೇಣುಕಾ ಬಳಿ ತೋರಿಸಿದ್ದೇನೆ. ವೈದ್ಯರು ಚೀಟಿ ಬರೆದುಕೊಟ್ಟು ಹೊರಗಡೆ ಮಾತ್ರೆ ತೆಗೆದುಕೊಳ್ಳಲು ಹೇಳಿದ್ದಾರೆ. 120 ರೂಪಾಯಿ ಕೊಟ್ಟು ಖಾಸಗಿ ಮೆಡಿಕಲ್ ಸಾಪ್ ನಲ್ಲಿ ಔಷಧಿ ಖರೀದಿ ಮಾಡಿದ್ದೇನೆ ಎಂದು ಟಿವಿ9 ಬಳಿ ಗಾಯತ್ರಿ ಎನ್ನುವ ರೋಗಿ ಅಳಲು ತೋಡಿಕೊಂಡರು.
2.ಇದು ಜಿಲ್ಲಾಸ್ಪತ್ರೆಯ ಕಾರಣ ಒಳ್ಳೆಯ ಚಿಕಿತ್ಸೆ ದೊರೆಯಬಹುದು ಎಂದು ಜಿಲ್ಲೆಯ ವಿವಿಧ ಕಡೆಯಿಂದ ರೋಗಿಗಳು ಆಗಮಿಸುತ್ತಾರೆ. ನಾನು ಕಿವಿ ನೋವಿಗೆ ಚಿಕೀತ್ಸೆ ಪಡೆಯಲು ಗೌರಿಬಿದನೂರಿನಿಂದ ಆಗಮಿಸಿದ್ದೇನೆ. ವೈದ್ಯರು ಬರೆದ ಔಷಧಿಗಳು ಆಸ್ಪತ್ರೆಯಲ್ಲಿ ಇಲ್ಲ. ಹೊರಗಡೆ ಔಷಧಿ ತೆಗೆದುಕೊಳ್ಳಲು 500 ರೂಪಾಯಿ ಕೇಳಿದ್ರು. ಕಾಸು ಇಲ್ಲದ ಕಾರಣ ಅರ್ಧದಷ್ಟು ಔಷಧಿ ಮಾತ್ರ ಖರೀದಿ ಮಾಡ್ತಿದ್ದೇನೆ. ಜಿಲ್ಲಾಸ್ಪತ್ರೆಯ ಸ್ಥಿತಿಯೇ ಈ ರೀತಿ ಆದರೆ ಹೇಗೆ? ಎಂದು ಗೌರಿಬಿದನೂರು ತಾಲೂಕಿನ ರೋಗಿ
ಹನುಮಂತಪ್ಪ ಹೇಳಿದರು.
3.ಮಗುವಿಗೆ ಹುಷಾರಿಲ್ಲದ ಕಾರಣ ಆಸ್ಪತ್ರೆಗೆ ಬಂದು ತೊರಿಸಿದ್ದೇನೆ. ಆಸ್ಪತ್ರೆಯಲ್ಲಿ ಔಷಧಿ ಇಲ್ಲದಿರುವುದರಿಂದ ಹೊರಗಡೆ ದುಡ್ಡು ಕೊಟ್ಟು ತೆಗೆದುಕೊಳ್ಳಲು ಕಷ್ಟವಾಗ್ತಿದೆ ಎಂದು ಚಿಕ್ಕಬಳ್ಳಾಪುರ ತಾಲೂಕಿನ ಹೊನ್ನೇನಹಳ್ಳಿ ಗ್ರಾಮದ ಮಹಿಳೆ ಹೇಳಿದರು.
4.ವೈದ್ಯರು ಬರೆದ ಕೆಲವು ಔಷಧಿಗಳು ಆಸ್ಪತ್ರೆಯಲ್ಲಿ ಇಲ್ಲ. ಆದ್ದರಿಂದ ಹೊರಗಡೆ ತೆಗೆದುಕೊಳ್ಳುತ್ತಿದ್ದೇನೆ. ಪ್ರಾಣ ಉಳಿಸಿಕೊಳ್ಳಲು ಏನಾದ್ರು ಮಾಡಿಕೊಳ್ಳಬೇಕು. ಆಸ್ತತ್ರೆಯಲ್ಲಿ ಔಷಧಿ ಇದ್ದಿದ್ರೆ ನ್ಯಾವ್ಯಾಕೆ ಹೊರಗಡೆ ಬರ್ತಿದ್ವಿ. ಆಸ್ಪತ್ರೆಯಲ್ಲಿ ಯಾರು ಕೇರ್ ಮಾಡಲ್ಲ ಎಂದು ಚಿಕ್ಕಬಳ್ಳಾಪುರ ತಾಲೂಕು ಪೆರೇಸಂದ್ರ ಗ್ರಾಮದ ನಾರಾಯಣಸ್ವಾಮಿ ಹೇಳಿದರು.
5 .ಸುಗರ್ ಕಾಯಿಲೆ ಇದೆ ಆಸ್ಪತ್ರೆಗೆ ಬಂದಿದ್ದೇನೆ. ವೈದ್ಯರು ಬರೆದ ಔಷಧಿ ಆಸ್ಪತ್ರೆಯಲ್ಲಿ ಇಲ್ಲ. ಏನ್ ಮಾಡೊದು ಹೊರಗಡೆ ಖರೀದಿ ಮಾಡ್ತಿದ್ದೇನೆ ಎಂದು ರಾಮಾಲಿಂಗಪ್ಪ ಹೇಳಿದರು.
6.ಕಾಲು ನೋವಿಗೆ ಚಿಕೀತ್ಸೆ ಪಡೆಯಲು ಬಂದಿದ್ದೇನೆ . ಔಷಧಿಯನ್ನು ಹೊರಗಡೆ ಖರೀದಿ ಮಾಡಲು ಹೇಳಿದ್ದಾರೆ. ಕೆಲವು ಮಾತ್ರೆಗಳನ್ನು ಖಾಸಗಿ ಮೆಡಿಕಲ್ ಶಾಪ್ ನಲ್ಲಿ ತೆಗೆದುಕೊಳ್ಳಲು ಹೇಳಿದ್ದಾರೆ ಎಂದು ಮರಿಮಾಕಲಹಳ್ಳಿ ನಿವಾಸಿ ಸರಸು ಅಸಮಧಾನ ವ್ಯಕ್ತಪಡಿಸುತ್ತಿದ್ದಾರೆ.
7.ಮಗುವಿಗೆ ವೈದ್ಯ ಡಾ.ಅಶೋಕ್ ಬಳಿ ಚಿಕಿತ್ಸೆ ಪಡೆಯಲಾಗಿದೆ. ಮೂರ್ಚೆ ರೋಗಕ್ಕೆ ಸೂಕ್ತ ಮಾತ್ರೆಗಳು ಇಲ್ಲವೆಂದರು. ಆಸ್ಪತ್ರೆಯ ಜನೌಷಧಿ ಹಾಗೂ ಪಾರ್ಮಸಿಯಲ್ಲಿ ಔಷಧಿ ಸಿಗಲಿಲ್ಲ. ಗ್ಯಾರಂಟಿ ಕೊಡುವುದಕ್ಕೆ ಮೊದಲು ಸರಕಾರಿ ಆಸ್ಪತ್ರೆಗಳಿಗೆ ಸಮರ್ಪಕವಾಗಿ ಔಷಧಿ ಪೂರೈಕೆ ಮಾಡಬೇಕು ಎಂದು ಶಿಡ್ಲಘಟ್ಟ ತಾಲೂಕು ರಾಚನಹಳ್ಳಿ ಸುಬ್ರಮಣಿ ಬೇಸರ ವ್ಯಕ್ತಪಡಿಸುತ್ತಿದ್ದಾರೆ.