ಚಿಕ್ಕಬಳ್ಳಾಪುರ, ಅಕ್ಟೋಬರ್ 09: ಕನ್ನಡ ಕಿರಿತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 10 ಭಾನುವಾರ ಅದ್ದೂರಿಯಾಗಿ ಆರಂಭಗೊಂಡಿದೆ. ಹಲವಾರು ಸೆಲೆಬ್ರಿಟಿಗಳೊಂದಿಗೆ ಚಿಕ್ಕಬಳ್ಳಾಪುರ ಶಾಸಕ ಪ್ರದೀಶ್ ಈಶ್ವರಪ್ಪ (Pradeep Eshwar) ಕೂಡ ಬಿಗ್ ಬಾಸ್ ಮನೆಗೆ ಪ್ರವೇಶ ಪಡೆದಿದ್ದಾರೆ. ರಾಜ್ಯ ರಾಜಕೀಯದಲ್ಲಿ ಅನೇಕ ಬದಲಾವಣೆಗಳು ಮತ್ತು ಬೆಳವಣಿಗೆಗಳ ಮಧ್ಯೆ ಅವರು ದೊಡ್ಡ ಮನೆಗೆ ಹೋಗಿರುವುದಕ್ಕೆ ಈಗಾಗಲೇ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಸದ್ಯ ಪ್ರದೀಶ್ ಈಶ್ವರಪ್ಪ ವಿರುದ್ಧ ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ಗೆ ದೂರು ಸಲ್ಲಿಸಲಾಗಿದೆ.
ಕಿರುತೆರೆ ರಿಯಾಲಿಟಿ ಶೋನಲ್ಲಿ ಶಾಸಕ ಪ್ರದೀಪ್ ಈಶ್ವರ್ ಭಾಗಿ ಹಿನ್ನೆಲೆ ವಂದೇ ಮಾತರಂ ಸಮಾಜ ಸೇವಾ ಸಂಸ್ಥೆಯಿಂದ ವಿಧಾನಸಭೆ ಸ್ಪೀಕರ್ಗೆ ದೂರು ನೀಡಿದ್ದು, ಶಾಸಕ ಸ್ಥಾನದಿಂದ ವಜಾಗೊಳಿಸುವಂತೆ ಆಗ್ರಹಿಸಲಾಗಿದೆ.
ಇದನ್ನೂ ಓದಿ: Pradeep Eshwar : ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಬಿಗ್ ಬಾಸ್ಗೆ ಹೋಗಿದ್ದು ಸರಿಯೇ?
ಪ್ರದೀಪ್ ಈಶ್ವರ್ ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕರಾಗಿದ್ದಾರೆ. ರಾಜ್ಯ ಸರ್ಕಾರದಿಂದ ಅವರಿಗೆ ಸಂಬಳ ನೀಡಲಾಗುತ್ತಿದ್ದು, ಅವರು ಆ ಕ್ಷೇತ್ರದ ಜವಾಬ್ದಾರಿಯುತ ಪ್ರಜೆ ಮತ್ತು ವ್ಯಕ್ತಿಯಾಗಿದ್ದಾರೆ. ಆ ಕ್ಷೇತ್ರದ ಯಾವುದೇ ಒಂದು ಸಂದರ್ಭದಲ್ಲಿ ಜನರಿಗೆ ಸಮಸ್ಯೆಯಾದಾಗ ಅವರು ಸ್ಪಂದಿಸುವುದು ಆದ್ಯ ಕರ್ತವ್ಯವಾಗಿರುತ್ತದೆ. ಆದರೆ ಅವರು ತಮ್ಮ ಜವಾಬ್ದಾರಿಯನ್ನು ಅರಿಯದೇ ಬಿಗ್ ಬಾಸ್ ಎಂಬ ಮನೋರಂಜನೆ ಕಾರ್ಯಕ್ರಮಕ್ಕೆ ಹೋಗಿರುವುದರಿಂದ ಅವರನ್ನು ಶಾಸಕ ಸ್ಥಾನದಿಂದ ವಜಾ ಮಾಡಬೇಕು. ಅವರಿಗೆ ಯಾವುದೇ ರೀತಿಯ ಶಾಸಕ ಭತ್ಯೆಗಳನ್ನು ನೀಡಬಾರದು. ಈಗಿನಿಂದಲೇ ಅವರನ್ನು ಅಮಾನತ್ತು ಮಾಡುವಂತೆ ಲಿಖಿತ ದೂರು ನೀಡಲಾಗಿದೆ.
TV9ಗೆ ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಪ್ರತಿಕ್ರಿಯೆ ನೀಡಿದ್ದು, ಪ್ರದೀಪ್ ಈಶ್ವರ್ ಪೂರ್ಣಾವಧಿ ಕಲಾವಿದ. ರಾಜಕೀಯಕ್ಕೆ ಅಲ್ಪಾವಧಿಗೆ ಬಂದವರು. ರಾಜಕೀಯದಲ್ಲಿ ಅಂತಹ ನೈಪುಣ್ಯತೆ ಇಲ್ಲ. ರಾಜಕೀಯದಲ್ಲಿ ಹೇಗೆ ನಡೆದುಕೊಳ್ಳಬೇಕು, ಜೀವನದಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬ ಪ್ರಜ್ಞೆ ಇದ್ದಂತಿಲ್ಲ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ: ಬಿಗ್ ಬಾಸ್ ಮನೆಗೆ ಒಂದು ದಿನ ತಡವಾಗಿ ಎಂಟ್ರಿ ಕೊಟ್ಟ ಶಾಸಕ ಪ್ರದೀಪ್ ಈಶ್ವರ್
ನಾಟಕದ ಪಾತ್ರವನ್ನೇ ರಾಜಕೀಯದಲ್ಲೂ ಮಾಡುತ್ತಾರೆ ಅಂತಾ ಅನ್ನಿಸಿದೆ. ಮನರಂಜನಾ ಕಾರ್ಯಕ್ರಮದಲ್ಲಿ ಇಚ್ಚೆ ಇದ್ದರೆ ರಾಜೀನಾಮೆ ಕೊಟ್ಟು ಹೋಗಬೇಕಿತ್ತು. ಕ್ಷೇತ್ರದಲ್ಲಿ ಸಮಸ್ಯೆಗಳು ಬಹಳಷ್ಟು ಇವೆ. ಅವರು ಅನುಮತಿ ಪಡೆದು ಹೋಗಬೇಕಿತ್ತು. ಇದು ಜನರಿಗೆ ಮಾಡುವ ದ್ರೋಹ. ಆತನ ನಾಟಕಕ್ಕೆ ಮತ ಕೊಟ್ಟ ಅಲ್ಲಿನ ಜನರು ಧನ್ಯರು ಎಂದು ವಾಗ್ದಾಳಿ ಮಾಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.