Pradeep Eshwar : ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಬಿಗ್ ಬಾಸ್ಗೆ ಹೋಗಿದ್ದು ಸರಿಯೇ?
Congress MLA pradeep Eshwar: ಆಗಾಗ ಕ್ಷೇತ್ರ ಸಂಚಾರ ಮಾಡುವ ಮೂಲಕ ಸುದ್ದಿಯಲ್ಲಿರುವ ಚಿಕ್ಕಬಳ್ಳಾಪುರ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಅವರು ಇದೀಗ ಕನ್ನಡ ಬಿಗ್ ಬಾಸ್ ಮನೆಯಲ್ಲಿ ಬಂಧಿಯಾಗಿದ್ದಾರೆ. ಕರ್ನಾಟಕದಲ್ಲಿ ಜನಪ್ರತಿಯೊಬ್ಬರು ಇದೇ ಮೊದಲ ಬಾರಿಗೆ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡಿದ್ದಾರೆ. ಆದ್ರೆ, ಇತ್ತ ಕ್ಷೇತ್ರದ ಗತಿ ಏನು ಎಂದು ಚರ್ಚೆಗಳು ಶುರುವಾಗಿವೆ. ಹಾಗಾದ್ರೆ, ಪ್ರದೀಪ್ ಈಶ್ವರ್ ಬಿಗ್ ಬಾಸ್ಗೆ ಹೋಗಿರುವುದು ಸರಿಯೇ?
ಬೆಂಗಳೂರು, (ಅಕ್ಟೋಬರ್ 09): ಇತ್ತ ರಾಜ್ಯ ರಾಜಕೀಯದಲ್ಲಿ ಅನೇಕ ಬದಲಾವಣೆಗಳು, ಬೆಳವಣಿಗೆಗಳು ನಡೆಯುತ್ತಿದ್ದರೆ, ಇತ್ತ ಚಿಕ್ಕಬಳ್ಳಾಪುರದಲ್ಲಿ ಸದಾ ಒಂದಿಲ್ಲೊಂದು ರೀತಿಯಲ್ಲಿ ಶಾಸಕ ಪ್ರದೀಪ್ ಈಶ್ವರ್ (Pradeep Eshwar) ಸುದ್ದಿಯಲ್ಲಿರುತ್ತಾರೆ. ಆಗಾಗ ಕ್ಷೇತ್ರ ಸಂಚಾರ ಮಾಡುವ ಮೂಲಕ ಸುದ್ದಿಯಲ್ಲಿರುವ ಅವರು, ಈಗ ಕನ್ನಡ ಬಿಗ್ ಬಾಸ್ ಸೀಸನ್ 10ರಲ್ಲಿ (Bigg Boss Kannada Season 10) ಬಂಧಿಯಾಗಿದ್ದಾರೆ. ಹೌದು… ಡಾ ಸುಧಾಕರ್ ಅವರನ್ನು ಮಣಿಸಿ ಭಾರೀ ಸದ್ದು ಮಾಡಿರುವ ಪ್ರದೀಶ್ ಈಶ್ವರಪ್ಪ ಚಿಕ್ಕಬಳ್ಳಾಪುರದಲ್ಲಿ ಮನೆ-ಮನೆ ತೆರಳಿ ಜನರ ಕಷ್ಟ, ಸಮಸ್ಯೆಗಳನ್ನು ಆಲಿಸಿದ್ದರು. ಆದ್ರೆ, ಇದೀಗ ಅವರು ಬಿಗ್ ಬಾಸ್ ರಿಯಾಲಿಟಿ ಶೋಗೆ ಹೋಗಿದ್ದಾರೆ. ಜನಪ್ರತಿನಿಧಿಯೊಬ್ಬರು ರಿಯಾಲಿಟಿ ಶೋಗೆ ಹೋಗಿರುವುದು ಕರ್ನಾಟಕದಲ್ಲಿ ಇವರೇ ಮೊದಲಿಗರು. ಈ ವಿಷಯ ಏನು ಅಂದ್ರೆ ತಿಂಗಳಾನುಗಟ್ಟಲೇ ಬಿಗ್ ಬಾಸ್ ಮನೆಯಲ್ಲಿದ್ದರೆ ಇತ್ತ ಚಿಕ್ಕಬಳ್ಳಾಪುರ ಕ್ಷೇತ್ರದ ಜನರ ಗತಿ ಏನು? ಕ್ಷೇತ್ರದಲ್ಲಿ ಜನರ ಸಮಸ್ಯೆ ಕೇಳುವವರು ಯಾರು? ಎನ್ನುವ ಪ್ರಶ್ನೆಗಳು, ಚರ್ಚೆಗಳು ಶುರುವಾಗಿವೆ.
ಯಾಕಂದ್ರೆ ಬಿಗ್ ಬಾಸ್ ಮನೆಗೆ ಹೋದವರು ಆಚೆ ಯಾವಾಗ ಬರುತ್ತಾರೋ ಎನ್ನುವುದು ಖಚಿತತೆ ಇಲ್ಲ. ತಿಂಗಳಾನುಗಟ್ಟಲ್ಲೇ ಆಗಬಹುದು. ರಿಯಾಲಿ ಶೋ ಮುಗಿಸಿಕೊಂಡು ವಾಪಸ್ ಕ್ಷೇತ್ರಕ್ಕೆ ಬರುವುದಿದ್ದರೆ ಏನು ಸಮಸ್ಯೆ ಇರಲಿಲ್ಲ. ಆದ್ರೆ, ಒಮ್ಮೆ ಬಿಗ್ ಬಾಸ್ ಮನೆಯೊಳಗೆ ಸೇರಿದರೆ ಆಚೆ ಬರುವುದೇ ಎಲಿಮಿನೇಷನ್ ಆದ ಮೇಲೆ. ಇಲ್ಲದಿದ್ದರೆ ಹಾಗೇ ಬಿಗ್ ಬಾಸ್ ಮನೆಯಲ್ಲಿ ಇರಲೇ ಬೇಕಾಗುತ್ತಾದೆ. ಹೀಗೆ ತಿಂಗಳಾನುಗಟ್ಟಲೇ ಹೋದರೆ ಇತ್ತ ಕ್ಷೇತ್ರದ ಗತಿ ಏನು? ಎನ್ನುವ ಪ್ರಶ್ನೆಗಳು ಸಾರ್ವಜನಿಕರ ವಲಯದಲ್ಲಿ ಹುಟ್ಟುಕೊಂಡಿವೆ.
ಇದನ್ನೂ ಓದಿ: ಬಿಗ್ ಬಾಸ್ ಮನೆಗೆ ಒಂದು ದಿನ ತಡವಾಗಿ ಎಂಟ್ರಿ ಕೊಟ್ಟ ಶಾಸಕ ಪ್ರದೀಪ್ ಈಶ್ವರ್
ಈಗಾಗಲೇ ಮಳೆ ಇಲ್ಲದೇ ರೈತರು ಸಂಕಷ್ಟ ಸಿಲುಕಿದ್ದಾರೆ. ಮತ್ತೊಂದೆಡೆ ಬರ ವೀಕ್ಷಣೆಗೆಂದು ಕೇಂದ್ರ ತಂಡ ಪರಿಶೀಲನೆಗೆಂದು ರಾಜ್ಯಕ್ಕೆ ಆಗಮಿಸಿದೆ. ಇವೆಲ್ಲವುಗಳ ಮಧ್ಯೆ ಪ್ರದೀಪ್ ಈಶ್ವರ್ ಬಿಗ್ ಬಾಸ್ ರಿಯಾಲಿಟಿ ಶೋಗೆ ಹೋಗಿರುವುದು ಎಷ್ಟು ಸರಿಯೇ? ಎನ್ನುವ ಚರ್ಚೆಗಳು ಶುರುವಾಗಿವೆ. ಅಲ್ಲದೇ ಪ್ರದೀಪ್ ಈಶ್ವರ್ ನಡೆಗೆ ವಿರೋಧ ಪಕ್ಷಗಳ ನಾಯಕರು ತರಾಟೆಗೆ ತೆಗೆದುಕೊಂಡಿದ್ದಾರೆ.
ಡಾ ಕೆ ಸುಧಾಕರ್ ಹೇಳಿದ್ದೇನು?
ಶಾಸಕ ಪ್ರದೀಪ್ ಈಶ್ವರ್ ಬಿಗ್ ಬಾಸ್ ಗೆ ಹೋಗಿರುವ ಬಗ್ಗೆ ಎದುರಾಳಿ ಅಭ್ಯರ್ಥಿಯಾಗಿದ್ದ ಡಾ ಕೆ ಸುಧಾಕರ್ ಪ್ರತಿಕ್ರಿಯಿಸಿ, ಶಾಸಕರ ನಡೆ ನಗೆಪಾಟಲಿಗೆ ಈಡಾಗುವಂತೆ ಮಾಡಿದೆ. ರಾಜ್ಯ ದೇಶದಲ್ಲಿ ಯಾವುದೇ ಶಾಸಕರು ಈ ರೀತಿ ಮಾಡಿಲ್ಲ. ಜಿಲ್ಲೆಯಲ್ಲಿ ತೀವ್ರ ಬರ ಇದರೂ ಸಹ ಶಾಸಕರು ಬಿಗ್ ಬಾಸ್ ಗೆ ಹೋಗಿದ್ದಾರೆ ಎಂದು ಕಿಡಿಕಾರಿದರು.
ಛಲವಾದಿ ನಾರಾಯಣಸ್ವಾಮಿ ಕಿಡಿ
ಇನ್ನು ಈ ಬಗ್ಗೆ ಟಿವಿ9ಗೆ ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಪ್ರದೀಪ್ ಈಶ್ವರ್ ಪೂರ್ಣಾವಧಿ ಕಲಾವಿದ. ರಾಜಕೀಯಕ್ಕೆ ಅಲ್ಪಾವಧಿಗೆ ಬಂದವರು. ರಾಜಕೀಯದಲ್ಲಿ ಅಂತಹ ನೈಪುಣ್ಯತೆ ಇಲ್ಲ. ರಾಜಕೀಯದಲ್ಲಿ ಹೇಗೆ ನಡೆದುಕೊಳ್ಳಬೇಕು, ಜೀವನದಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬ ಪ್ರಜ್ಞೆ ಇದ್ದಂತಿಲ್ಲ. ನಾಟಕದ ಪಾತ್ರವನ್ನೇ ರಾಜಕೀಯದಲ್ಲೂ ಮಾಡುತ್ತಾರೆ ಎಂದು ಅನ್ನಿಸಿದೆ. ಮನರಂಜನಾ ಕಾರ್ಯಕ್ರಮದಲ್ಲಿ ಇಚ್ಚೆ ಇದ್ದರೆ ರಾಜೀನಾಮೆ ಕೊಟ್ಟು ಹೋಗಬೇಕಿತ್ತು. ಕ್ಷೇತ್ರದಲ್ಲಿ ಸಮಸ್ಯೆಗಳು ಬಹಳಷ್ಟು ಇವೆ. ಅವರು ಅನುಮತಿ ಪಡೆದು ಹೋಗಬೇಕಿತ್ತು. ಇದು ಜನರಿಗೆ ಮಾಡುವ ದ್ರೋಹ. ಆತನ ನಾಟಕಕ್ಕೆ ಮತ ಕೊಟ್ಟ ಅಲ್ಲಿನ ಜನರು ಧನ್ಯರು ಎಂದರು.
ಒಟ್ಟಿನಲ್ಲಿ ಇದುವರೆಗೂ ಕರ್ನಾಟಕದ ಜನಪ್ರತಿನಿಧಿಯೊಬ್ಬರು ಒಂದು ರಿಯಾಲಿಟಿ ಶೋಗೆ ಹೋಗಿರುವ ಉದಾಹರಣೆಗಳಿಲ್ಲ. ಇದೀಗ ಪ್ರದೀಶ್ ಈಶ್ವರ್ ಎಂಟ್ರಿಕೊಟ್ಟಿದ್ದು, ಭಾರೀ ಚರ್ಚೆಗೆ ಗ್ರಾಸವಾಗಿದೆ. ಹಾಗಾದ್ರೆ, ಪ್ರದೀಪ್ ಈಶ್ವರ್ ಬಿಗ್ಬಾಸ್ ಮನೆಗೆ ಹೋಗಿರುವುದು ಸರಿ ನಾ? ತಪ್ಪಾ? ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನ ಕಮೆಂಟ್ನಲ್ಲಿ ತಿಳಿಸಬಹುದು.
ಮತ್ತಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:21 pm, Mon, 9 October 23