ಚಿಂತಾಮಣಿ: ಸೈಬರ್ ವಂಚಕರನ್ನು ನಂಬಿ ಸ್ವತಃ 16 ಲಕ್ಷ ರೂಪಾಯಿ ಕಳೆದುಕೊಂಡ ಖಾಸಗಿ ಬ್ಯಾಂಕ್ ಉದ್ಯೋಗಿ
Chintamani cyber fraud: ಆನ್‍ಲೈನ್ ವಂಚಕರು, ಸೈಬರ್ ವಂಚಕರು, ಬ್ಯಾಂಕ್‍ಗಳ ಹೆಸರಿನಲ್ಲಿ ಮೋಸ ಹೋಗುವ ಜನರಿಗೆ ಜಾಗೃತಿ ಮೂಡಿಸಿ ವಂಚನೆಯನ್ನು ತಡೆಯಬೇಕಿದ್ದ ಬ್ಯಾಂಕ್ ಉದ್ಯೋಗಿಯೋರ್ವ ಸ್ವತಃ ತಾನೇ ಸೈಬರ್ ವಂಚಕರನ್ನು ನಂಬಿ 16,27,849 ರೂಪಾಯಿಗಳನ್ನು ಕಳೆದುಕೊಂಡ ಪ್ರಸಂಗ ನಡೆದಿದೆ.
ಚಿಕ್ಕಬಳ್ಳಾಪುರ, ಅಕ್ಟೋಬರ್ 9: ಆನ್‍ಲೈನ್ ವಂಚಕರು, ಸೈಬರ್ ವಂಚಕರು, ಬ್ಯಾಂಕ್‍ಗಳ ಹೆಸರಿನಲ್ಲಿ ಮೋಸ ಹೋಗುವ ಜನರಿಗೆ ಜಾಗೃತಿ ಮೂಡಿಸಿ ವಂಚನೆಯನ್ನು (cyber fraudsters) ತಡೆಯಬೇಕಿದ್ದ ಬ್ಯಾಂಕ್ ಉದ್ಯೋಗಿಯೋರ್ವ ಸ್ವತಃ ತಾನೇ ಸೈಬರ್ ವಂಚಕರನ್ನು ನಂಬಿ 16,27,849 ರೂಪಾಯಿಗಳನ್ನು ಕಳೆದುಕೊಂಡ ಪ್ರಸಂಗ ನಡೆದಿದೆ. ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ (Chintamani) ತಾಲ್ಲೂಕು ಚನ್ನಭೈರೇನಹಳ್ಳಿ ಗ್ರಾಮದ ಕೋಟಕ್ ಮಹೇಂದ್ರ ಬ್ಯಾಂಕ್ ಉದ್ಯೋಗಿ (private bank employee) ಶ್ರೀನಿವಾಸ್ ಸಿ.ವಿ. ಮೋಸ ಹೋದ ಬ್ಯಾಂಕ್ ಉದ್ಯೋಗಿ.
ಹೇಗೆ ಮೋಸ ಮಾಡಲಾಗಿದೆ, ಮೋಡಸ್ ಆಪರೆಂಡಿ ಏನು?
‘ಸುಮ್ಮನಿರಲಾರದೇ ಮೈಗೆ ಇರುವೆ ಬಿಟ್ಟುಕೊಂಡರು’ ಎನ್ನುವಾಗೆ ಶ್ರೀನಿವಾಸ್ ತನ್ನ ಮೊಬೈಲ್‍ಗೆ ಬಂದ ಈ-ಸ್ಕೈ ಆಪ್ ಓಪನ್ ಮಾಡಿದ್ದಾನೆ. ಅದರಲ್ಲಿ ವಿವಿಧ ಏರ್ಲೈನ್ಗಳಿಗೆ ಸ್ಯಾಟಿಸ್ಪೈ ಆಗಿರುವ ಬಗ್ಗೆ ರೇಟಿಂಗ್ಸ್ ನೀಡಿದರೆ ಹಣ ನೀಡುವುದಾಗಿ ಆಮಿಷವೊಡ್ಡಲಾಗಿದೆ. ಅದನ್ನು ನಂಬಿದ ಬ್ಯಾಂಕ್ ಉದ್ಯೋಗಿ ಶ್ರೀನಿವಾಸ್ ಈ-ಸ್ಕೈ ಆಪ್ ಇನ್ಸ್ಟಾಲ್ ಮಾಡಿಕೊಂಡು ಅವರು ಹೇಳಿದಂತೆ ಮಾಡಿದ್ದಾನೆ!
ಇವರು ಹಾಕಿದ ಹಣಕ್ಕೆ ಅವರು ಪ್ರಾಫಿಟ್ ತೋರಿಸುತ್ತಾ ಹೋಗಿದ್ದಾರೆ. ಆದರೆ ಡ್ರಾ ಮಾಡಿಕೊಳ್ಳುವ ಅವಕಾಶವಿರಲಿಲ್ಲ. ಕೊನೆಗೆ ಪ್ರಾಫಿಟ್ ಹಣ ಡ್ರಾ ಮಾಡಿಕೊಳ್ಳಲು ಶೇ. 50 % ರಷ್ಟು ಹಣ ಸಂದಾಯ ಮಾಡಿದರೆ ಪೂರಾ ಹಣ ಖಾತೆಗೆ ಬರುವುದಾಗಿ ತಿಳಿಸಿದ್ದಾರೆ. ಅದನ್ನೂ ನಂಬಿದ ಶ್ರೀನಿವಾಸ್ ತನ್ನ 3 ಬ್ಯಾಂಕ್ ಖಾತೆಗಳು, ಜೊತೆಗೆ ಸಾಲದು ಅಂತಾ ತನ್ನ ಸ್ನೇಹಿತರ ಖಾತೆಗಳಿಂದಲೂ ಬರೋಬ್ಬರಿ 16,27,849 ರೂಪಾಯಿಗಳನ್ನು ಖದೀಮನ ಆಪ್ ಖಾತೆಗೆ ಹಾಕಿದ್ದಾನೆ.
ಕೊನೆಗೆ ಅದು ಸೈಬರ್ ವಂಚನೆ ಎಂದು ಗೊತ್ತಾಗುತ್ತಿದ್ದಂತೆ ಚಿಕ್ಕಬಳ್ಳಾಪುರ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿ ನ್ಯಾಯಕ್ಕಾಗಿ ಅಂಗಲಾಚಿದ್ದಾನೆ/ ಅಲೆದಾಡುತ್ತಿದ್ದಾನೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ