ಚಿಕ್ಕಬಳ್ಳಾಪುರ: ಹೆರಿಗೆ ಲಂಚ ಪ್ರಕರಣವನ್ನು ಮುಚ್ಚು ಹಾಕಲು ಯತ್ನಿಸಿದರಾ ವೈದ್ಯರು?
ಆಸ್ಪತ್ರೆಯ ವೈದ್ಯರ ಲಂಚವತಾರವನ್ನು ರವಿಕುಮಾರ್ ಟಿವಿ-9 ಮುಂದೆ ಎಳೆಎಳೆಯಾಗಿ ಬಿಡಿಸಿಟ್ಟು ಸಹಾಯಕ್ಕೆ ಅವಲತ್ತುಕೊಂಡಿದ್ದರು. ಟಿವಿ-9ನಲ್ಲಿ ವೈದ್ಯರ ಲಂಚವತಾರ ಆರೋಪ ಪ್ರಕರಣ ಪ್ರಸಾರವಾಗುತ್ತಿದ್ದಂತೆ ಅಮೃತ ಗಂಡ ರಘು, ಪತ್ನಿ ಅಮೃತ, ಮಾವ ರವಿಕುಮಾರ್, ಅತ್ತೆ ರತ್ನಮ್ಮ ಮೇಲೆ ಕ್ಯಾತೆ ತೆಗೆದು ಗಲಾಟೆ ಮಾಡಿದ್ದನು.
ಚಿಕ್ಕಬಳ್ಳಾಪುರ ಸೆ.30: ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ನಗರದ ಹಿರೇಬಿದನೂರು ನಿವಾಸಿ ಎನ್.ಅಮೃತಗೆ ಸಿಜರಿಯನ್ ಹೆರಿಗೆ ಮಾಡಲು ಚಿಕ್ಕಬಳ್ಳಾಪುರ ಸರ್ಕಾರಿ ವೈದ್ಯಕೀಯ ಕಾಲೇಜಿನ ವೈದ್ಯೆಯೊಬ್ಬರು 6000 ರೂಪಾಯಿ ಲಂಚ ಕೇಳಿ, 4000 ರೂಪಾಯಿಗೆ ಒಪ್ಪಿಕೊಂಡು, 2000 ರೂಪಾಯಿ ಲಂಚ ನೀಡಿದ ಮೇಲೆ ಸಿಜರಿಯನ್ ಹೆರಿಗೆ ಮಾಡಿಸಿ, ನಂತರ ಬಾಕಿ ಲಂಚಕ್ಕಾಗಿ ಚಿಕಿತ್ಸೆ ನೀಡದೇ ಸತಾಯಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಟಿವಿ-9 ಡಿಜಿಟಲ್ನಲ್ಲಿ ವರದಿ ಪ್ರಸಾರ ಮಾಡಿತ್ತು. ವರದಿಯಿಂದ ಎಚ್ಚೆತ್ತ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಂ.ಸಿ.ಸುಧಾಕರ್ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದರು.
ಬಾಣಂತಿಯ ಸಾಕು ತಂದೆ ರವಿಕುಮಾರ್ ಲಂಚದ ಬಗ್ಗೆ ಮಾಹಿತಿ ನೀಡಿದ್ದರು
ಬಾಣಂತಿ ಅಮೃತಳ ತಾಯಿ ರತ್ನಮ್ಮಳನ್ನು ಗೌರಿಬಿದನೂರು ತಾಲ್ಲೂಕು ಶಂಭುಖನಗರ ನಿವಾಸಿ ನಿವಾಸಿ ರವಿಕುಮಾರ್ ರತ್ನಮ್ಮಳನ್ನು 2ನೇ ವಿವಾಹವಾಗಿದ್ದು, ಅಮೃತ 6 ವರ್ಷದವಳಾಗಿದ್ದಾಗಿನಿಂದಲೂ ರವಿಕುಮಾರ್ ಅಮೃತಳನ್ನೇ ತನ್ನ ಮಗಳೆಂದು ಸಾಕಿ ಸಲುಹಿದ್ದರು. ಇನ್ನು ಮಗಳ ಹೆರಿಗೆ ಸಮಯದಲ್ಲಿ ಮಗಳ ಜೊತೆಯೆ ಇದ್ದು, ಆಸ್ಪತ್ರೆಯ ವೈದ್ಯರ ಲಂಚವತಾರ ಎಳೆಎಳೆಯಾಗಿ ಬಿಡಿಸಿಟ್ಟು ಸಹಾಯಕ್ಕೆ ಅವಲತ್ತುಕೊಂಡಿದ್ದರು.
ವೈದ್ಯರ ಜೊತೆ ಶಾಮೀಲಾದನ ಅಮೃತಾ ಗಂಡ ರಘು
ಆಸ್ಪತ್ರೆಯ ವೈದ್ಯರ ಲಂಚವತಾರವನ್ನು ರವಿಕುಮಾರ್ ಟಿವಿ-9 ಮುಂದೆ ಎಳೆಎಳೆಯಾಗಿ ಬಿಡಿಸಿಟ್ಟು ಸಹಾಯಕ್ಕೆ ಅವಲತ್ತುಕೊಂಡಿದ್ದರು. ಟಿವಿ-9ನಲ್ಲಿ ವೈದ್ಯರ ಲಂಚವತಾರ ಆರೋಪ ಪ್ರಕರಣ ಪ್ರಸಾರವಾಗುತ್ತಿದ್ದಂತೆ ಅಮೃತ ಗಂಡ ರಘು, ಪತ್ನಿ ಅಮೃತ, ಮಾವ ರವಿಕುಮಾರ್, ಅತ್ತೆ ರತ್ನಮ್ಮ ಮೇಲೆ ಕ್ಯಾತೆ ತೆಗೆದು ಗಲಾಟೆ ಮಾಡಿದ್ದ. ತನ್ನ ಮಾನ ಮರ್ಯಾದೆ ಹೋಯಿತೆಂದು ತಪ್ಪಾಗಿ ಬಾವಿಸಿಕೊಂಡು ಬಾಣಂತಿ ಪತ್ನಿಗೆ ಒದ್ದು, ಅತ್ತೆ ರತ್ನಮ್ಮಳ ತಲೆ ಹಾಗೂ ಮುಖಕ್ಕೆ ಹೊಡೆದಿದ್ದಾನೆ. ರತ್ನಮ್ಮಳ ಮುಖದ ಮೇಲೆ ಗಾಯವಾಗಿದೆ. ಹಿರೇಬಿದನೂರಿನಲ್ಲಿ ಅತ್ತೆ-ಮಾವನ ಜೊತೆ ಗಲಾಟೆ ಮಾಡಿಕೊಂಡಿದ್ದಾನೆ.
ಇದನ್ನೂ ಓದಿ: ಚಿಕ್ಕಬಳ್ಳಾಪುರ: ಹೆರಿಗೆ ಲಂಚಕ್ಕಾಗಿ ಗರ್ಭಿಣಿ ಪತಿಯ ಮೊಬೈಲ್ ಅಡವಿಟ್ಟುಕೊಂಡ ವೈದ್ಯರು
ಅಮೃತಳ ಗಂಡ ರಘು ಹೇಳಿಕೆ ಪಡೆದುಕೊಂಡು ಪ್ರಕರಣವನ್ನು ಮುಚ್ಚಿ ಹಾಕಲು ಷಡ್ಯಂತ್ರ
ಇನ್ನು ಪ್ರಕರಣದಲ್ಲಿ ವೈದ್ಯರ ಲಂಚಾವತಾರವನ್ನು ಬಿಡಿಸಿಟ್ಟಿದ್ದ ಅಮೃತಳ ಸಾಕು ತಂದೆ ರವಿಕುಮಾರ್ ನನ್ನು ವಿಚಾರಣೆಗೆ ಕರೆಯದ ಚಿಕ್ಕಬಳ್ಳಾಪುರ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಡೀನ್ ಡಾ. ಮಂಜುನಾಥ್ ಹಾಗೂ ತಂಡ ಅಮೃತಳ ಗಂಡ ರಘುವನ್ನು ಮಾತ್ರ ಕರೆಯಿಸಿ, ಆತನಿಗೆ ಆಮೀಷವೊಡ್ಡಿ ತಮಗೆ ಬೇಕಾದಂತೆ ಹೇಳಿಕೆ ಪಡೆದುಕೊಂಡು ರವಿಕುಮಾರ್ ಹೇಳಿದಂತೆ ಘಟನೆ ನಡೆದಿಲ್ಲವೆಂದು ಪ್ರಕರಣ ಮುಚ್ಚಿಹಾಕಲು ಯತ್ನಿಸಿರುವ ಬಗ್ಗೆ ಟಿವಿ-9ಗೆ ಖಚಿತ ಮಾಹಿತಿ ಲಭ್ಯವಾಗಿದೆ.
ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳು ವೈದ್ಯರ ಲಂಚವತಾರದ ಬಗ್ಗೆ ಸಮಗ್ರ ತನಿಖೆ ನಡೆಸಬೇಕು
ಚಿಕ್ಕಬಳ್ಳಾಪುರ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಸಿಜರಿಯನ್ ಹೆರಿಗೆಗೆ ಲಂಚ ಪಡೆದಿರುವ ಬಗ್ಗೆ ತನಿಖೆಯ ಹೊಣೆ ಹೊತ್ತಿರುವ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳಾದ ಪಿ.ಎನ್.ರವೀಂದ್ರರವರು ಬಾಣಂತಿಯ ಸಾಕು ತಂದೆ ರವಿಕುಮಾರ್‍ರನ್ನು ಕರೆಯಿಸಿ ಸಮಗ್ರ ವಿಚಾರಣೆ ನಡೆಸಬೇಕಿದೆ. ಆಸ್ಪತ್ರೆಯ ಕೆಲ ವೈದ್ಯರು ಹಾಗೂ ಸಿಬ್ಬಂದಿಗಳು ಬಾಣಂತಿಯ ಪತಿ ರಘುಗೆ ಆಮೀಷವೊಡ್ಡಿ ತಿರುಚಿದ ಹೇಳಿಕೆಯನ್ನು ಪಡೆಯಲು ಯತ್ನಿಸಿರುವ ಆರೋಪ ಕೇಳಿಬಂದಿದೆ. ಇನ್ನು ಪ್ರಕರಣದ ಬಗ್ಗೆ ಬಾಯಿಬಿಡದಂತೆ ರಘು ತನ್ನ ಅತ್ತೆ ರತ್ನಮ್ಮ ಹಾಗೂ ಮಾವ ರವಿಕುಮಾರ್ ಮೇಲೆ ಒತ್ತಡ ಹೇರಿ ಬೆದರಿಕೆ ಹಾಕಿರುವ ಆರೋಪ ಕೇಳಿಬಂದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ