
ಚಿಕ್ಕಬಳ್ಳಾಪುರ, ಅಕ್ಟೋಬರ್ 26: ಲಾಂಗ್ ಡ್ರೈವ್ ತೆರಳಿದ್ದಾಗ ಬೈಕ್ ಅಪಘಾತಗೊಂಡು ಮಹಿಳಾ ಟೆಕ್ಕಿ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಸಾದಲಿ ಕ್ರಾಸ್ನ ಬಳಿ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ನಡೆದಿದೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ ಮೂಲದ ಶ್ರೀನಿಧಿ ಭಟ್(23) ಮೃತಪಟ್ಟಿದ್ದು, ಉತ್ತರ ಭಾರತ ಮೂಲದ ಹರ್ಷ ಚೌಹಾಣ್ ಸ್ಥಿತಿ ಚಿಂತಾಜನಕವಾಗಿದೆ. ಪೆರೇಸಂದ್ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಶ್ರೀನಿಧಿ ಭಟ್ ಮತ್ತು ಹರ್ಷ ಚೌಹಾಣ್ ಇಬ್ಬರು ಲಾಂಗ್ ಡ್ರೈವ್ ತೆರಳಿದ್ದರು. ಈ ವೇಳೆ ಸಾದಲಿ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ಅತೀ ವೇಗ ಹಿನ್ನೆಲೆ ನಿಯಂತ್ರಣ ತಪ್ಪಿ ರಸ್ತೆ ಡಿವೈಡರ್ಗೆ ಬೈಕ್ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ ಎನ್ನಲಾಗಿದೆ.
ಇದನ್ನೂ ಓದಿ: ಪ್ರತ್ಯೇಕ ಘಟನೆ: ನೆಲಮಂಗದಲ್ಲಿ 23 ಸಿಲಿಂಡರ್ ಸ್ಫೋಟದಲ್ಲಿ ದಂಪತಿ ಸಾವು; ಶೃಂಗೇರಿಯಲ್ಲಿ ನವವಿವಾಹಿತ ದಾರುಣ ಸಾವು
ಈ ಭೀಕರ ಅಪಘಾತದಲ್ಲಿ ಶ್ರೀನಿಧಿ ಭಟ್ ಮೃತಪಟ್ಟಿದ್ದಾರೆ. ಬೈಕ್ ಚಲಾಯಿಸುತ್ತಿದ್ದ ಸಾಫ್ಟ್ವೇರ್ ಇಂಜಿನಿಯರ್ ಹರ್ಷ ಚೌಹಾಣ್ಗೆ ಸ್ಥಿತಿ ಚಿಂತಾಜನಕವಾಗಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯ ಬಳಿ ಮೃತ ಶ್ರೀನಿಧಿ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.
ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ತಾವರೆಕೆರೆಯ ರಾಷ್ಟ್ರೀಯ ಹೆದ್ದಾರಿ 48ರ ರಸ್ತೆಯಲ್ಲಿ ಅಪಘಾತದಲ್ಲಿ ವಿಜಯಪುರ ಮೂಲದ ಇಬ್ಬರು ಯುವತಿಯರು ದಾರುಣ ಅಂತ್ಯಕಂಡ ಘಟನೆ ನಡೆದಿದೆ. ನಿಸರ್ಗ(20) ಹಾಗೂ ರೂಪಾ(21) ಮೃತ ದುರ್ದೈವಿಗಳು. ಐವರಿಗೆ ಗಂಭೀರ ಗಾಯಗಳಾಗಿದ್ದು, ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ವಿಜಯಪುರ ಮೂಲದ ಇವರು ತನ್ನ ಸಹಪಾಟಿ ಪೂಜಾ ಎಂಬಾಕೆ ಜೊತೆ ಬೆಂಗಳೂರಿಗೆ ತೆರಳುತಿದ್ದರು. ಬಿ-ಫಾರ್ಮಾ ಮುಗಿಸಿದ್ದ ಮೂವರು ಇಂಟರ್ವ್ಯೂಗೆಂದು ಬೆಂಗಳೂರಿಗೆ ಕಾರ್ನಲ್ಲಿ ಬರುತ್ತಿದ್ದರು. ಆದರೆ ಕಾರು ಚಾಲಕ ಪವನ್ ಎಂಬಾತನ ಬೇಜವಾಬ್ದಾರಿಗೆ ದೊಡ್ಡ ದುರಂತ ನಡೆದಿದ್ದು, ಭೀಕರ ಅಪಘಾತ ನಡೆದಿದೆ. ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ತಾವರೆಕೆರೆಯಲ್ಲಿ ರಾಷ್ಟ್ರೀಯ ಹೆದ್ದಾರಿ 48ರ ರಸ್ತೆಯಲ್ಲಿ ನಿಯಂತ್ರಣ ತಪ್ಪಿದ ಕಾರು ಡಿವೈಡರ್ಗೆ ಹೊಡೆದು ಮುಂದೆ ಬರುತ್ತಿದ್ದ ಟಾಟಾ ಕಾರಿಗೆ ಡಿಕ್ಕಿ ಹೊಡೆದಿದ್ದು, ಪರಿಣಾಮ ರೂಪಾಮಾಳಿ ಹಾಗೂ ನಿಸರ್ಗ ಸಾವನಪ್ಪಿದ್ದಾರೆ.
ಇದನ್ನೂ ಓದಿ: ಚಿಕ್ಕಪೇಟೆಯಲ್ಲಿ ತಪ್ಪಿದ ಭಾರಿ ದುರಂತ: ಪಿ.ಎಸ್.ಲೇನ್ ರಸ್ತೆಯಲ್ಲಿ ಏಕಾಏಕಿ ಕುಸಿದ ಕಾಂಪೌಂಡ್; ಹಲವು ಬೈಕ್ಗಳು ಜಖಂ
ಇನ್ನು ರೂಪಾಗೆ ಮದುವೆ ಸಹ ನಿಶ್ಚಯವಾಗಿತ್ತು. ಮದುವೆ ದಿನಾಂಕ ಹಾಗೂ ಸಿದ್ಧತೆಯಲ್ಲಿದ್ದ ಪೊಷಕರಿಗೆ ಮಗಳ ಸಾವು ಬರಸಿಡಿಲು ಬಡಿದಂತಾಗಿದೆ. ಘಟನೆ ಸಂಬಂಧ ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹಗಳನ್ನ ಕುಟುಂಬಕ್ಕೆ ಹಸ್ತಾಂತರ ಮಾಡಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.