ಚಿಕ್ಕಬಳ್ಳಾಫುರ: ಸಿದ್ದರಾಮಯ್ಯ (Siddaramaiah) ನೇತೃತ್ವದ ಕಾಂಗ್ರೆಸ್ ಸರ್ಕಾರ ಮಹಿಳೆಯರ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಡುವ ಶಕ್ತಿ ಯೋಜನೆಗೆ (Shakti Scheme) ಇಂದು ಚಾಲನೆ ನೀಡಿದೆ. ಆದರೆ ಕೆಲವೊಂದು ಗ್ರಾಮಗಳಲ್ಲಿ ಸರ್ಕಾರಿ ಬಸ್ಗಳ ಸಂಪರ್ಕವೇ ಇಲ್ಲ ಎಂಬ ಆರೋಪ ಒಂದೆಡೆಯಾದರೆ, ಇನ್ನೊಂದೆಡೆ ಹೆಚ್ಚುವರಿ ಬಸ್ಗಳನ್ನು ಹಾಕದೆ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ. ಈ ಘಟನೆ ನಡೆದಿದ್ದು ಚಿಕ್ಕಬಳ್ಳಾಪುರ (Chikkaballapur) ಕೆಎಸ್ಆರ್ಟಿಸಿ (KSRTC) ಬಸ್ ನಿಲ್ದಾಣದಲ್ಲಿ.
ಶಕ್ತಿ ಯೋಜನೆ ಜಾರಿಯಾದ ಮೊದಲ ದಿನವೇ ಚಿಕ್ಕಬಳ್ಳಾಪುರದಿಂದ ಬೆಂಗಳೂರಿಗೆ ಸಮಪರ್ಕ ಬಸ್ಗಳಿಲ್ಲದೆ ಮಕ್ಕಳು ಮರಿಗಳನ್ನು ಎತ್ತಿಕೊಂಡು ಮಹಿಳಾ ಪ್ರಯಾಣಿಕರ ಪರದಾಟ ನಡೆಸುವ ಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ, ನೂರಾರು ಮಹಿಳೆಯರು ಬಸ್ ನಿಲ್ದಾಣದಲ್ಲಿ ಬಿಡು ಬಿಟ್ಟಿದ್ದಾರೆ. ಕಳೆದ ಎರಡು ಮೂರು ಗಂಟೆಗಳಿಂದ ಜನಸಂಖ್ಯೆ ಹೆಚ್ಚಾಗುತ್ತಿದ್ದರೂ ಹೆಚ್ಚುವರಿ ಬಸ್ಗಳನ್ನು ಹಾಕದೆ ಅಧಿಕಾರಿಗಳು ಮೂಕ ಪ್ರೇಕ್ಷಕರಂತೆ ನೋಡುತ್ತಿದ್ದಾರೆ. ಇದರಿಂದ ಆಕ್ರೋಶಗೊಂಡ ಪ್ರಯಾಣಿಕರು ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿದ್ದಾರೆ.
ಇದನ್ನೂ ಓದಿ: Shakti Scheme: ಪತ್ನಿಗೆ ಫ್ರೀ ಟಿಕೆಟ್, ಒಂದು ಪ್ಲೇಟ್ ತಿಂಡಿಯ ಹಣ ಉಳಿಯಿತು ಎಂದ ಪತಿ
ಚಿಕ್ಕಬಳ್ಳಾಪುರದಲ್ಲಿ ಮಾತ್ರವಲ್ಲದೆ, ಮಂಡ್ಯದಲ್ಲೂ ಬಸ್ಗಳ ಕೊರತೆ ಎದ್ದುಕಂಡಿದೆ. ಶಕ್ತಿ ಯೋಜನೆ ಜಾರಿಯಾದ ಮೊದಲ ದಿನವೇ ಸರ್ಕಾರದ ವಿರುದ್ದ ಮಂಡ್ಯದ ಮದ್ದೂರಿನ ಮಹಿಳೆಯರು ಆಕ್ರೋಶ ಹೊರಹಾಕಿದ್ದು, ಬಸ್ ಬರುತ್ತಿಲ್ಲ ಅಂದಮೇಲೆ ಶಕ್ತಿ ಯೋಜನೆ ಜಾರಿ ಮಾಡಿ ಪ್ರಯೋಜನವೇನು ಪ್ರಶ್ನಿಸಿದ್ದಾರೆ. ಬಸ್ಗಳ ಕೊರತೆ ಹಿನ್ನೆಲೆ ಬೆಂಗಳೂರು, ತುಮಕೂರು ಕಡೆ ತೆರಳಲು ಸರಿಯಾದ ಬಸ್ ಇಲ್ಲದೆ ಸುಮಾರು 40ಕ್ಕೂ ಹೆಚ್ಚು ಮಹಿಳಾ ಪ್ರಯಾಣಿಕರು ಬಸ್‌ಗಾಗಿ ಕಾದುಕುಳಿತ ಪ್ರಸಂಗ ನಡೆಯಿತು.
ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿಗಳಲ್ಲಿ ಪ್ರಮುಖ ಯೋಜನೆಯಾದ ಮಹಿಳೆಯರ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆಗೆ ರಾಜ್ಯದಾದ್ಯಂತ ಚಾಲನೆ ಸಿಕ್ಕಿದೆ. ಇದೇ ವೇಳೆ ಕಾರ್ಯಕ್ರಮದಲ್ಲಿ ಶಕ್ತಿ ಯೋಜನೆಯ ಲೋಗೋ, ಸ್ಟಿಕರ್ ಹಾಗೂ ಸ್ಮಾರ್ಟ್ ಕಾರ್ಡ್ ಮಾದರಿಯನ್ನು ಬಿಡುಗಡೆಗೊಳಿಸಲಾಯಿತು. ಇನ್ನು ಸಾಂಕೇತಿಕವಾಗಿ ಐದು ಮಹಿಳೆಯರಿಗೆ ಸ್ಮಾರ್ಟ್ ಕಾರ್ಡ್ ನೀಡಲಾಗಿದೆ. ಇದರೊಂದಿಗೆ ಇಂದಿನಿಂದ ಸರ್ಕಾರಿ ಸಾರಿಗೆ ಹಾಗೂ ಬಿಎಂಟಿಸಿ ಬಸ್ಗಳಲ್ಲಿ ಮಹಿಳೆಯರು ಉಚಿತವಾಗಿ ರಾಜ್ಯದ ಮೂಲೆ-ಮೂಲೆಗಳಲ್ಲಿ ಪ್ರಯಾಣಿಸಬಹುದಾಗಿದೆ.
ಫ್ರೀ ಬಸ್ ಪಾಸ್ಗಾಗಿ ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಿ ಸ್ಮಾರ್ಟ್ ಕಾರ್ಡ್ ಪಡೆದುಕೊಳ್ಳಬೇಕು. ಇದಕ್ಕೆ ಮೂರು ತಿಂಗಳು ಸಮಯ ನೀಡಲಾಗಿದ್ದು, ಬಳಿಕ ಮಹಿಳೆಯರು ಸ್ಮಾರ್ಟ್ ಕಾರ್ಡ್ ತೋರಿಸಿ ಬಸ್ನಲ್ಲಿ ಉಚಿತವಾಗಿ ಪ್ರಯಾಣ ಮಾಡಬಹುದು. ಇನ್ನು ಬಿಎಂಟಿಸಿ, KSRTC ಸೇರಿ 4 ಸಾರಿಗೆ ಸಂಸ್ಥೆಯಲ್ಲಿ ಫ್ರೀ ಪ್ರಯಾಣಕ್ಕೆ ಅವಕಾಶವಿದ್ದು, ಐಷಾರಾಮಿ ಬಸ್ಗಳಾದ ರಾಜಹಂಸ, Non AC ಸ್ಲೀಪರ್, AC ಸ್ಲೀಪರ್, ಐರಾವತ, ಐರಾವತ ಕ್ಲಬ್ ಕ್ಲಾಸ್, ಅಂಬಾರಿ, ಅಂಬಾರಿ ಡ್ರೀಮ್ ಕ್ಲಾಸ್ನಲ್ಲಿ ಉಚಿತ ಬಸ್ ಪಯಾಣಕ್ಕೆ ಅವಕಾಶವಿಲ್ಲ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:47 pm, Sun, 11 June 23