ಚಿಕ್ಕಬಳ್ಳಾಪುರ: ಬೆಳೆಗಳಿಗೆ ಔಷಧಿ ಸಿಂಪಡಿಸಬೇಕು ಅಂದರೆ ಒಂದೆಡೆ ಕೂಲಿಕಾರ್ಮಿಕರ ಸಮಸ್ಯೆ, ಮತ್ತೊಂದೆಡೆ ನುರಿತ ಕಾರ್ಮಿಕರ ಅಲಭ್ಯ ಇದೆ. ಇನ್ನು ಅಗತ್ಯಕ್ಕಿಂತ ಅನಗತ್ಯವಾಗಿ ಖರ್ಚಾಗುವ ಔಷಧಿಯ ಸಮಸ್ಯೆಯೂ ಕೂಡ ಬೆಳೆಗಾರರನ್ನು ಕಾಡುತ್ತಿದೆ. ಇವೆಲ್ಲದಕ್ಕೂ ಪರಿಹಾರ ಎಂಬಂತೆ, ಈಗ ವಿನೂತನ ಮಾದರಿಯ ಡ್ರೋನ್ಗಳು ರೈತರ ಬೆಳೆಗಳಿಗೆ, ಔಷಧಿ, ಗೊಬ್ಬರ ಸಿಂಪಡಿಸುವ ಪ್ರಯೋಗದಲ್ಲಿ ಯಶಸ್ವಿಯಾಗಿದೆ ಏನಿದು ಡ್ರೋನ್ ಔಷಧಿ ಸಿಂಪಡಣೆ ಅಂತೀರಾ ಈ ವರದಿ ನೋಡಿ
ಪಾಸ್ಟ್ ಫುಡ್, ಬೇಡಿಕೆ ನೀಗಿಸುವುದರಿಂದ ಹಿಡಿದು, ಮನುಷ್ಯನಿಗೆ ಬೇಕಾಗಿರುವ ಔಷಧಿ ಸರಬರಾಜು ಮಾಡುವವರೆಗೆ ಅತ್ಯಾಧುನಿಕ ಮಾದರಿಯ ಡ್ರೋನ್ಗಳು ಯಶಸ್ವಿ ಪ್ರಯೋಗ ನಡೆಸಿ ಸೈ ಎನಿಸಿಕೊಂಡಿವೆ. ಇನ್ನು ಒಂದು ಹೆಜ್ಜೆ ಮುಂದೆ ಹೋಗಿರುವ ಡ್ರೋನ್ಗಳು ಈಗ ರೈತರ ಅಗತ್ಯಕ್ಕೆ ತಕ್ಕಂತೆ ಕೆಲಸ ಮಾಡುವಲ್ಲಿ ಸೈ ಎನಿಸಿಕೊಂಡಿವೆ.
ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲ್ಲೂಕಿನ ಸಾದಲಿ ಬಳಿ ರೈತರ ಜಮೀನಿನಲ್ಲಿ ಡ್ರೋನ್ಗಳು ಕಮಾಲ್ ಮಾಡಿವೆ. ಅದರಲ್ಲೂ ರೈತರಿಗೆ ಅಗತ್ಯ ಹಾಗೂ ಜಟಿಲವಾಗಿದ್ದ, ಅವರ ಬೆಳೆಗಳಿಗೆ ಔಷಧಿ ಸಿಂಪಡಿಸುವ ಕಾರ್ಯಕ್ಕೆ ಡ್ರೋನ್ಗಳು ಇಳಿದಿವೆ. ಖಾಸಗಿ ಕ್ರಿಮಿನಾಶಕ ತಯಾರಿಕಾ ಸಂಸ್ಥೆಯೊಂದು, ಬಾಡಿಗೆ ಆಧಾರದ ಮೇಲೆ ರೈತರ ಬೆಳೆಗಳಿಗೆ ಕ್ರಿಮಿನಾಶಕ ಸಿಂಪಡಿಸುತ್ತಿದೆ. ಒಂದು ಎಕರೆ ಜಮೀನಿನಲ್ಲಿರುವ ಬೆಳೆಗೆ ಕೇವಲ 7 ನಿಮಿಷದಲ್ಲಿ, ಔಷಧಿ ಸಿಂಪಡಣೆ ಮಾಡುತ್ತದೆ. ಅದರಲ್ಲೂ ಔಷಧಿ ವ್ಯರ್ಥವಾಗದ ಹಾಗೆ ಬೆಳೆಗಳ ಮೇಲೆ ಔಷಧಿ ಸಿಂಪಡಿಸುತ್ತದೆ. ಇದರಿಂದ ರೈತರ ವಿವಿಧ ಸಮಸ್ಯೆಗಳಿಗೆ ಡ್ರೋನ್ಗಳು ರೈತಮಿತ್ರವಾಗುತ್ತಿವೆ ಎಂದು ಡ್ರೋನ್ ನಿರ್ವಾಹಕ ರಬ್ಬಾನಿ ಹೇಳಿದ್ದಾರೆ.
ಅಸಲಿಗೆ ಡ್ರೋನ್ಗಳಲ್ಲಿ 6 ಮಾಡೆಲ್ಗಳಿವೆ, 10 ಲೀಟರ್ ಸಾಮರ್ಥ್ಯದ ಡ್ರೋನ್, 16 ಲೀಟರ್ ಸಾಮರ್ಥ್ಯದ ಹೈಬ್ರಿಡ್ ಡ್ರೋನ್, 21 ಲೀಟರ್ ಸಾಮರ್ಥ್ಯದ ಡ್ರೋನ್ ಸೇರಿದಂತೆ, 22 ಕೆಜಿ ಹೊತ್ತು ಹಾರಾಡಬಲ್ಲ ಡ್ರೋನ್ಗಳಿವೆ. ಡ್ರೋನ್ ಬುಡದಲ್ಲಿ ಟ್ಯಾಂಕ್ ಒಂದನ್ನು ಅಳವಡಿಸಿದ್ದು, ಅದಕ್ಕೆ ಸ್ಪ್ರೇಯರ್ ಪಂಪ್ ಅಳವಡಿಸಲಾಗಿದೆ. ಬೆಳೆಗೆ ತಕ್ಕ ಎತ್ತರಕ್ಕೆ ಸೀಮಿತವಾಗಿ, ಡ್ರೋನ್ಗಳು ಕಾರ್ಯನಿರ್ವಹಿಸುತ್ತಿವೆ. ಇನ್ನು ಡ್ರೋನ್ಗೆ ಜಿಪಿಎಸ್ ಅಳವಡಿಸಲಾಗಿದೆ. ಜಮೀನಿನ ಮ್ಯಾಪ್ ಅನ್ನು ಡ್ರೋನ್ಗೆ ಅಳವಡಿಸಿದರೆ ಡ್ರೋನ್ ಆ ಜಮೀನು ಬಿಟ್ಟು ಅಕ್ಕಪಕ್ಕ ಜಮೀನಿಗೆ ಹೋಗಲ್ಲ. ಇದರಿಂದ ರೈತರು ಡ್ರೋನ್ ಕಾರ್ಯಕ್ಕೆ ಫೀದಾ ಆಗಿದ್ದಾರೆ.
ಕೃಷಿ ಹಾಗೂ ತೋಟಗಾರಿಕೆಯಲ್ಲಿ ಡ್ರೋನ್ ಬಳಕೆಗೆ ನಾಗರೀಕ ವಿಮಾನಯಾನ ಸಚಿವಾಲಯ ಅನುಮತಿ ನೀಡಿದೆ. 200 ಮೀಟರ್ ಎತ್ತರದ ವರೆಗೂ ಹಸಿರುವಲಯದಲ್ಲಿ ಡ್ರೋನ್ಗಳು ಹಾರಾಟ ನಡೆಸಬಹುದಾಗಿದೆ. ಆದರೆ ರೆಡ್ ಜೋನ್, ಯಲ್ಲೋ ಜೋನ್, ಸೇರಿದಂತೆ ನಿಷೇಧಿತ ಪ್ರದೇಶದಲ್ಲಿ ಡ್ರೋನ್ಗಳ ಹಾರಾಟಕ್ಕೆ ಅನುಮತಿ ನೀಡಿಲ್ಲ. ಒಟ್ಟಾರೆ ಕೃಷಿಗೆ ಡ್ರೋನ್ ಬಳಕೆಯಿಂದ ಕೃಷಿಯಲ್ಲಿ ಮತ್ತೊಂದು ಹೊಸ ಕ್ರಾಂತಿಯೇ ಸೃಷಿಯಾಗಿರುವುದಂತು ಸತ್ಯ.
ವರದಿ: ಭೀಮಪ್ಪ ಪಾಟೀಲ್
ಇದನ್ನೂ ಓದಿ:
Viral Video: ಈ ಡ್ರೋನ್ನಲ್ಲಿ ಮನುಷ್ಯರೂ ಕೂತು ಹಾರಬಹುದು! ವಿಡಿಯೋ ನೋಡಿ
ಜಮ್ಮು ದಾಳಿಯ ನಂತರ ಶ್ರೀನಗರದಲ್ಲಿ ಡ್ರೋನ್, ಮಾನವರಹಿತ ವಾಹನಗಳಿಗ ನಿಷೇಧ