ಮೂರು ದಿನಗಳ ಹಿಂದೆ ರೈಲ್ವೆ ಹಳಿಗಳ ಮೇಲೆ ತಂದೆ ತಾಯಿ ಹಾಗೂ ಮಗಳ (Family) ಮೃತದೇಹ ಪತ್ತೆಯಾಗಿತ್ತು. ಆದ್ರೆ ಅವರು ಯಾರು? ಯಾವ ಊರಿನವರು? ಯಾಕೆ ಆತ್ಮಹತ್ಯೆ ಮಾಡಿಕೊಂಡರು? ಎಂಬುದು ತಕ್ಷಣಕ್ಕೆ ಗೊತ್ತಾಗಿರಲಿಲ್ಲ. ಇನ್ನು ಅದು ಸಾಮೂಹಿಕ ಆತ್ಮಹತ್ಯೆಯಾ (Suicide) ಅಥವಾ ಕೊಲೆಯಾ ಎಂಬ ಅನುಮಾನವೂ ಮೂಡಿತ್ತು. ಆದ್ರೆ ಈಗ ಎಲ್ಲದಕ್ಕೂ ಉತ್ತರ ಸಿಕ್ಕಿದೆ. ಅಷ್ಟಕ್ಕೂ ಅವರು ಯಾರು ಯಾಕೆ ರೈಲ್ವೆ ಹಳಿಯ ಮೇಲೆ ಹೆಣವಾದರು ಅಂತ ನೋಡುವುದಾದರೆ…
ಚಿಕ್ಕಬಳ್ಳಾಪುರ (Chikkaballapur) ಜಿಲ್ಲೆ ಗೌರಿಬಿದನೂರು (Gauribidanur) ತಾಲೂಕಿನ ತೊಂಡೆಬಾವಿ ರೈಲ್ವೆ ಹಳಿಯ ಮೇಲೆ ಮೂರು ದಿನಗಳ ಹಿಂದೆ ಒಬ್ಬರಲ್ಲ ಇಬ್ಬರಲ್ಲ ಮೂವರ ಶವಗಳು ಕಾಣಿಸಿ ಅಚ್ಚರಿ ಮೂಡಿಸಿತ್ತು. ಚಲಿಸುವ ರೈಲಿಗೆ ಸಿಲುಕಿ ಮೂವರೂ ದೇಹಗಳು ಛಿದ್ರವಾಗಿದ್ದವು. ಇದ್ರಿಂದ ಮೃತರ ಗುರುತು ಪತ್ತೆಯಾಗಿರಲಿಲ್ಲ. ಆದ್ರೆ ಮೂರು ದಿನಗಳ ನಂತರ ಇಂದು ಮೃತರ ಗುರುತು ಪತ್ತೆಯಾಗಿದ್ದು, ಮೃತರು ತೊಂಡೆಬಾವಿ ಗ್ರಾಮದ ಮೈಲಾರಪ್ಪ, ಪುಷ್ಪಲತಾ ಹಾಗೂ ಅವರ ಕಿರಿಯ ಪುತ್ರಿ ದಾಕ್ಷಾಯಿಣಿ ಎಂದು ಗುರುತು ಪತ್ತೆಯಾಗಿರುವುದಾಗಿ ಚಿಕ್ಕಬಳ್ಳಾಪುರ ಎಸ್ಪಿ ಡಿ.ಎಲ್. ನಾಗೇಶ ಮಾಹಿತಿ ನೀಡಿದ್ದಾರೆ.
ಇನ್ನು ಮೃತರು ಗ್ರಾಮದಲ್ಲಿ ಕೂಲಿನಾಲಿ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದರು. ಹೇಳಿಕೊಳ್ಳವಂಥ ಸಮಸ್ಯೆಯೇನೂ ಇರಲಿಲ್ಲ, ಆದ್ರೂ ಮೂವರು ಮನೆಯಲ್ಲಿ ಡೆತ್ ನೋಟ್ ಬರೆದಿಟ್ಟು, ರೈಲ್ವೆ ಹಳಿಯ ಮೇಲೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ನೋಟ್ ನಲ್ಲಿ ರೇಷನ್ ಅಕ್ಕಿಯಲ್ಲಿ ನಮಗೆ ಮಾತ್ರ ಪಾಸ್ಟಿಕ್ ಅಕ್ಕಿ ಮಿಕ್ಸ್ ಮಾಡಿ ಕೊಡ್ತಾರೆ. ಮತ್ತೊಂದು ಕಡೆ ನಮ್ಮದೇನು ತಪ್ಪಿಲ್ಲ ಬೇಕಾದರೆ ತನಿಖೆ ಮಾಡಿ… ಇನ್ನೊಂದು ಕಡೆ ನಮ್ಮ ಸಾವಿಗೆ ನಾವೇ ಕಾರಣ ಬೇರೆ ಯಾರೂ ಅಲ್ಲ, ಓಂ ನಮಃ ಶಿವಾಯ ಎಂದೆಲ್ಲಾ ಓತಪ್ರೋತವಾಗಿ ಗೀಚಿದ್ದಾರೆ. ಇದನ್ನ ಅಧರಿಸಿ ಯಶವಂತಪುರ ರೈಲ್ವೆ ಪೊಲೀಸರು ಪ್ರಕರಣದ ತನಿಖೆ ನಡೆಸಿದ್ದಾರೆ.
ಒಟ್ನಲ್ಲಿ ಮಾನಸಿಕ ಖಿನ್ನತೆ ಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರಾ? ಇಲ್ಲಾ ಕೆಲವರ ಜೊತೆ ವೈಷಮ್ಯವಿಟ್ಟುಕೊಂಡು ಆತ್ಮಹತ್ಯೆಗೆ ಶರಣಾದರಾ? ಡೆತ್ ನೋಟ್ ಆಧಾರವಾಗಿಟ್ಟುಕೊಂಡು ರೈಲ್ವೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ವರದಿ: ಭೀಮಪ್ಪ ಪಾಟೀಲ, ಟಿವಿ 9, ಚಿಕ್ಕಬಳ್ಳಾಪುರ