ಚಿಕ್ಕಬಳ್ಳಾಪುರ, ಅಕ್ಟೋಬರ್ 25: ಬಡ ರೋಗಿಗಳ ಚಿಕಿತ್ಸೆ ಹಾಗೂ ಔಷಧಿಗಳ ವಿತರಣೆ ವಿಚಾರದಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯ ಸಿಬ್ಬಂದಿ ಹಾಗೂ ವೈದ್ಯರುಗಳ ನಿರ್ಲಕ್ಷ್ಯ, ಆರೋಪ ಹಾಗೂ ದೂರುಗಳ ಬಗ್ಗೆ ಟಿವಿ9 ಕನ್ನಡ ಡಿಜಿಟಲ್ ಸರಣಿ ವರದಿಗಳ ಪ್ರಕಟ ಮಾಡಿದ್ದ ಕಾರಣ ಎಚ್ಚೆತ್ತ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಪ್ರದೀಪ್ ಈಶ್ವರ್ (Pradeep Eshwar) ರವರು, ಇಂದು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ಆಕಸ್ಮಿಕ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಆಸ್ಪತ್ರೆಯ ಸಿಬ್ಬಂದಿ ವೈದ್ಯರುಗಳ ಸಭೆ ನಡೆಸಿ ದೂರು ಹಾಗೂ ಆರೋಪಗಳ ಬಗ್ಗೆ ಎಚ್ಚರಿಕೆ ನೀಡಿದರು.
ಸಕಾಲಕ್ಕೆ ಸೂಕ್ತ ಚಿಕಿತ್ಸೆ ಸಿಗದೆ ಕೆಲವು ರೋಗಿಗಳು ಪರದಾಡುತ್ತಿರುವ ಬಗ್ಗೆ ಹಾಗೂ ರೋಗಿಗಳಿಗೆ ಔಷಧಿಗಳು ಸಿಗದಿರುವ ಬಗ್ಗೆ, ಹೆರಿಗೆ ವಿಭಾಗದ ಲಂಚಾವತಾರ ಸೇರಿ ಆಸ್ಪತ್ರೆಯಲ್ಲಿ ನಡೆಯುತ್ತಿರುವ ಕಮೀಷನ್ ದಂಧೆಯ ಬಗ್ಗೆ ಟಿವಿ9 ಕನ್ನಡ ಡಿಜಿಟಲ್ ಸಾಕ್ಷಾಧಾರಗಳ ಸಮೇತ ಸರಣಿ ವರದಿ ಪ್ರಸಾರ ಮಾಡಿತ್ತು. ಇದರಿಂದ ಎಚ್ಚೆತ್ತ ಸ್ಥಳೀಯ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಪ್ರದೀಪ್ ಈಶ್ವರ್, ಇಂದು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ಆಕಸ್ಮಿಕ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಆಸ್ಪತ್ರೆಯ ಸಿಬ್ಬಂದಿ ವೈದ್ಯರು ಆಡಳಿತ ಮಂಡಳಿಯ ಜೊತೆ ಸಭೆ ನಡೆಸಿ ದೂರು ಹಾಗೂ ಆರೋಪಗಳ ಬಗ್ಗೆ ಚರ್ಚೆ ನಡೆಸಿದ್ರು. ಇದೆ ವೇಳೆ ಮಾತನಾಡಿದ ಶಾಸಕ ಮುಂದೆ ಆರೋಪ ದೂರುಗಳು ಬರದಂತೆ ಕರ್ತವ್ಯ ನಿರ್ವಹಿಸಿ ಎಂದು ಎಚ್ಚರಿಕೆ ನೀಡಿದರು.
ಹೆರಿಗೆ ವಿಭಾಗದಲ್ಲಿ ನಡೆಯುತ್ತಿರುವ ಲಂಚವತಾರದ ಬಗ್ಗೆ ತಜ್ಞವೈದ್ಯೆಯೊಬ್ಬರನ್ನು ಶಾಸಕರು ಪ್ರಶ್ನೆ ಮಾಡಿದ್ರು. ಇದೆ ವೇಳೆ ವೈದ್ಯೆ ಮುಚ್ಚು ಮರೆಯಿಲ್ಲದೆ ಲಂಚ ಪಡೆಯುತ್ತಿದ್ದ ಬಗ್ಗೆ ತಿಳಿಸಿದರು. ರೋಗಿಗಳು ಕೊಟ್ಟಷ್ಟು ಹಣ ಪಡೆಯುತ್ತೇವೆ ಎಂದರು. ಮುಂದುವರೆದು ಸ್ವತಃ ಮೆಡಿಕಲ್ ಕಾಲೇಜು ನಿರ್ದೇಶಕರು ಹಾಗೂ ಡೀನ್ ಡಾ. ಮಂಜುನಾಥ್ ಮಾತನಾಡಿ, ನಾನು ರೌಂಡ್ಸ್ ಹೋದಾಗ ವೈದ್ಯರಿಗೆ ಹಣ ನೀಡಬೇಕೆಂದು ಆಶಾ ಕಾರ್ಯಕರ್ತೆಯೊಬ್ಬರು ಹಣ ಪಡೆಯುತ್ತಿದ್ದುದನ್ನು ಗಮನಿಸಿ ಬುದ್ಧಿವಾದ ಹೇಳಿದ್ದೇನೆಂದು ತಿಳಿಸಿದರು.
ಆಸ್ಪತ್ರೆಯ ಹೆರಿಗೆ ವಿಭಾಗದಲ್ಲಿ ಪದೆ ಪದೆ ದೂರುಗಳು ಕೇಳಿ ಬರುತ್ತಿವ ಕಾರಣ ಹೆರಿಗೆ ವಿಭಾಗದಲ್ಲಿ ಕೆಲಸ ಮಾಡುತ್ತಿರುವ 7 ಜನ ಗುತ್ತಿಗೆ ನೌಕರರನ್ನು ತಕ್ಷಣ ತೆಗೆದು ಹಾಕುವಂತೆ ಸೂಚಿಸಿದರು. ಇನ್ನೂ ಆಸ್ಪತ್ರೆಯಲ್ಲಿ 58 ಜನ ಡಿ-ಗ್ರೂಪ್ ಗುತ್ತಿಗೆ ನೌಕರ ಇದ್ದು ಅದರಲ್ಲಿ ಕೆಲವರಿಂದ ಆಸ್ಪತ್ರೆಗೆ ಕೆಟ್ಟೆ ಹೆಸರು ಬರ್ತಿದೆ ಅವರನ್ನು ಹಂತ ಹಂತವಾಗಿ ತೆಗೆದು ಹೊಸಬರನ್ನು ನೇಮಕ ಮಾಡಿಕೊಳ್ಳಲು ಸೂಚಿಸದರು.
ಇದನ್ನೂ ಓದಿ: ಚಿಕ್ಕಬಳ್ಳಾಪುರ: ಆಹಾರ ನಾಗರಿಕ ಸರಬರಾಜು ಇಲಾಖೆಯಲ್ಲಿ ಸರ್ವರ್ ಸಮಸ್ಯೆ, ಅನ್ನಬಾಗ್ಯ ಫಲಾನುಭವಿಗಳ ಪರದಾಟ
ಕೆಲವು ವೈದ್ಯರು ಹೇಳಿದ ಮಾತನ್ನೇ ನಿಜವೆಂದುಕೊಂಡಿರುವ ಶಾಸಕರು, ಆಸ್ಪತ್ರೆಯ ಒಳಗೆ ಮಾದ್ಯಮಗಳು ಅನುಮತಿ ಇಲ್ಲದೇ ಬರಬಾರದು, ವೈದ್ಯರು ರೋಗಿಗಳಿಗೆ ತೊಂದರೆ ಆಗುತ್ತದೆ. ಈ ಕುರಿತು ನ್ಯಾಯಾಲಯವೊಂದರ ಆದೇಶ ಇದೆ, ಸಣ್ಣ ಪುಟ್ಟ ಸಮಸ್ಯೆಗಳನ್ನು ದೊಡ್ಡದು ಮಾಡಿ ಸುದ್ದಿ ಮಾಡುತ್ತಿರುವ ಕಾರಣ ರಾಜ್ಯಮಟ್ಟದಲ್ಲಿ ಚಿಕ್ಕಬಳ್ಳಾಪುರ ಆಸ್ಪತ್ರೆಯ ಮಾನ-ಮರ್ಯಾದೆ ಹಾಳಾಗುತ್ತಿದೆ . ಅನುಮತಿ ಇಲ್ಲದೆ ಆಸ್ಪತ್ರೆಯ ಒಳಗೆ ಕ್ಯಾಮೆರಾ ಬರದಿರುವುದೆ ಸೂಕ್ತ ಎಂದರು.
ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ಬರುವ ಬಡರೋಗಿಗಳಿಗೆ ಸೂಕ್ತ ಚಿಕಿತ್ಸೆ ಹಾಗೂ ಔಷಧಿಗಳು ದೊರೆಯುತ್ತಿಲ್ಲ ಎನ್ನುವ ದೂರು ಹಾಗೂ ಆರೋಪಗಳು ದಿನೇದಿನೇ ಹೆಚ್ಚಾಗುತ್ತಿವೆ. ದೂರು ಹಾಗೂ ಆರೋಪಗಳನ್ನು ಮಾದ್ಯಮಗಳು ಪ್ರಸಾರ ಮಾಡುತ್ತಿವೆ. ಇದರಿಂದ ರಾಜ್ಯಮಟ್ಟದಲ್ಲಿ ಚಿಕ್ಕಬಳ್ಳಾಪುರದ ಮಾನ-ಮರ್ಯಾದೆ ಕಡಿಮೆಯಾಗುತ್ತಿದೆ ಎಂದುಕೊಂಡಿರುವ ಶಾಸಕ ಪ್ರದೀಪ್ ಈಶ್ವರ್ ರವರು ಹಾಗೂ ಆಸ್ಪತ್ರೆಯ ಆಡಳಿತ ಮಂಡಳಿ, ಸಮಸ್ಯೆಯನ್ನು ಗಂಭೀರವಾಗಿ ತೆಗೆದುಕೊಂಡು ಬಗೆಹರಿಸುವುದರ ಬದಲು ಮಾದ್ಯಮಗಳಿಗೆ ಕಡಿವಾಣ ಹಾಕಲು ಮುಂದಾಗಿರುವುದು ದುರಂತವೇ ಸರಿ ಎಂದು ಸಾರ್ವಜನಿಕರು ಅಸಮಧಾನ ವ್ಯಕ್ತಪಡಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.