20 ಕೋಟಿ ರೂ. ವೆಚ್ಚದ ಸರ್ಕಾರಿ ವಸತಿ ಶಾಲೆ ನಿರ್ಮಾಣ; ಮಕ್ಕಳು, ಶಿಕ್ಷಕರಿಗೆ ಹೋಗಿ ಬರಲು 10 ಅಡಿ‌ ರಸ್ತೆ ಇಲ್ಲದೆ ಪರದಾಟ

|

Updated on: Jun 11, 2023 | 2:47 PM

ಅದು ಬರೋಬ್ಬರಿ 20 ಕೋಟಿ ವೆಚ್ಚದ ಸರ್ಕಾರಿ ವಸತಿ ಶಾಲೆ. ಕೋಟಿ-ಕೋಟಿ ಖರ್ಚು ಮಾಡಿ ಕಟ್ಟಿದ ಶಾಲೆಗೆ ಹೋಗಿ ಬರಲು 10 ಅಡಿ‌ ರಸ್ತೆ ಇಲ್ಲ.‌ ಹೌದು ಇತ್ತ ಖಾಸಗಿ ಜಮೀನು ಮಾಲೀಕ ರಸ್ತೆ ಬಿಡುತ್ತಿಲ್ಲ. ಇದರಿಂದ ಮಕ್ಕಳು, ಶಿಕ್ಷಕರು, ಪೋಷಕರು ಮಾತ್ರ ಕೂಗಳತೆ ದೂರದ ಶಾಲೆಗೆ ಹೋಗಲು 6 ಕಿ.ಮೀ. ಸುತ್ತಿ-ಬಳಸಿ ಓಡಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.

20 ಕೋಟಿ ರೂ. ವೆಚ್ಚದ ಸರ್ಕಾರಿ ವಸತಿ ಶಾಲೆ ನಿರ್ಮಾಣ; ಮಕ್ಕಳು, ಶಿಕ್ಷಕರಿಗೆ ಹೋಗಿ ಬರಲು 10 ಅಡಿ‌ ರಸ್ತೆ ಇಲ್ಲದೆ ಪರದಾಟ
ಸರ್ಕಾರಿ ವಸತಿ ಶಾಲೆ
Follow us on

ಚಿಕ್ಕಮಗಳೂರು: ಹೇಗಿದೆ ನೋಡಿ ಕಾಲೇಜು, ಸುಸಜ್ಜಿತ ಕಟ್ಟಡ, ಸುಂದರ ವಾತಾವರಣ. ಗಲಾಟೆ-ಗದ್ದಲ ಇಲ್ಲ. ಸ್ವಚ್ಛ ಮನಸ್ಸಿನಲ್ಲಿ ಪಾಠ ಕೇಳಲು ಅನುಕೂಲವಾಗಿದೆ. ಹಾಗಂತ ಇದು ಯಾವ್ದೋ ಖಾಸಗಿ ಶಾಲೆಯಲ್ಲ. ಖಾಸಗಿ ಶಾಲೆಗೂ ತೊಡೆ ತಟ್ಟುವ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ(Tarikere) ತಾಲೂಕಿನ ನಂದೀಪುರ ಗ್ರಾಮದ ಕಿತ್ತೂರು ರಾಣಿ ಚೆನ್ನಮ್ಮ ಸರ್ಕಾರಿ ವಸತಿ ಶಾಲೆ(Government School). ಆದ್ರೆ, ಇಲ್ಲಿಗೆ ಹೋಗಿಯೇ ಮಕ್ಕಳು-ಶಿಕ್ಷಕರು, ಪೋಷಕರಿಗೆ ಸುಸ್ತಾಗುತ್ತೆ. ಯಾಕೆಂದರೆ, ಶಾಲೆಯಿಂದ ಕೂಗಳತೆಯಲ್ಲಿರೋ ರಸ್ತೆಗೆ ಬರಬೇಕೆಂದರೆ 6 ಕಿ.ಮೀ ಸುತ್ತಿ ಬರಬೇಕು. ಹೌದು ಶಾಲೆ ಪಕ್ಕದ ಖಾಸಗಿ ಜಮೀನು ಮಾಲೀಕ ಶಾಲೆ ರಸ್ತೆಗೆ ಅಡ್ಡಲಾಗಿ ತಂತಿ ಬೇಲಿ ಹಾಕಿದ್ದಾರೆ.‌ ಇದರಿಂದ 20 ಕೋಟಿ ವೆಚ್ಚದ ಸರ್ಕಾರಿ ಶಾಲೆಗೆ ರಸ್ತೆಯೇ ಇಲ್ಲದಂತಾಗಿದೆ.

ಅಧಿಕಾರಿಗಳು ಎಡವಟ್ಟಿನಿಂದ ವಸತಿ ಶಾಲೆ ನಿರ್ಮಾಣ ಮಾಡಿದ ಪರಿಣಾಮ, ಇಂದು ಶಿಕ್ಷಕರು ಹಾಗೂ ಮಕ್ಕಳು ರಸ್ತೆ ಇಲ್ಲದೆ ಪರದಾಡುತ್ತಿದ್ದಾರೆ. 6 ವರ್ಷಗಳ ಹಿಂದೆ ಅಂದಿನ ಶಾಸಕ ಶ್ರೀನಿವಾಸ್, ಈ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ನಿರ್ಮಾಣ ಮಾಡಲು ಜಾಗ ಮಂಜೂರು ಮಾಡಿಸಿದ್ದರು. ಬಳಿಕ ಶಾಲೆ ಏನೋ ನಿರ್ಮಾಣ ಆಯ್ತು. ಆದ್ರೆ, ಶಾಲೆಗೆ ಹೋಗಲು ರಸ್ತೆ ಗಗನ ಕುಸುಮವಾಯ್ತು. ಜಮೀನು ಮಾಲೀಕ ಶಾಲೆ ಮುಖ್ಯರಸ್ತೆಗೆ ತಂತಿ ಬೇಲಿ ಹಾಕಿರೋ ಪರಿಣಾಮ ಮಕ್ಕಳು ಹಾಗೂ ಶಿಕ್ಷಕರು ಶಾಲೆಗೆ 6 ಕಿ.ಮೀ. ಸುತ್ತಿಕೊಂಡು ಬರುವಂತಾಗಿದೆ.

ಇದನ್ನೂ ಓದಿ:ಚಿಕ್ಕಮಗಳೂರು: ಕಳಪೆ ಗುಣಮಟ್ಟದ ಆಹಾರ ಸೇವಿಸಿ ತರೀಕೆರೆ ಮೊರಾರ್ಜಿ ವಸತಿ ಶಾಲೆ ವಿದ್ಯಾರ್ಥಿನಿಯರು ಅಸ್ವಸ್ಥ

ತರೀಕೆರೆಯ ರಾಜ್ಯ ಹೆದ್ದಾರಿಯ ಕೂಗಳತೆ ದೂರದಲ್ಲಿರೋ ಈ ಶಾಲೆಗೆ, ಮಕ್ಕಳು ಮುಖ್ಯರಸ್ತೆ ಮೂಲಕ ಬರುವುದು ತುಂಬಾ ಸಲೀಸು. ಆದರೆ, ಖಾಸಗಿ ಜಮೀನು ಮಾಲೀಕ ರಸ್ತೆಗೆ ಬೇಲಿ ಹಾಕಿರುವುದರಿಂದ ಮಕ್ಕಳು-ಶಿಕ್ಷಕರು ಸುತ್ತಿ ಬಳಸಿ ಓಡಾಡುವಂತಾಗಿದೆ. ಸರ್ಕಾರಿ ದಾಖಲೆ ಪ್ರಕಾರ ಶಾಲೆಯ ಮುಖ್ಯ ರಸ್ತೆಗೆ ನಕಾಶೆಯಲ್ಲಿ ರಸ್ತೆ ಇದೆ.‌ ಸರ್ಕಾರ ಹಾಗೂ ಅಧಿಕಾರಿಗಳು ಕೂಡ ರಸ್ತೆ ನಿರ್ಮಾಣದ ಕುರಿತು ಜಮೀನು ಮಾಲೀಕನಿಗೆ ಹಲವು ಬಾರಿ ಮನವಿ ಮಾಡಿದರು ಯಾವುದೇ ಪ್ರಯೋಜನ ಆಗಿಲ್ಲ. ಜಮೀನು ಮಾಲೀಕ ತನಗೆ ಬೇಕಾದಾಗ ಬೇಲಿ ಹಾಕುವುದು, ಬೇಡವೆಂದಾಗ ಬೇಲಿ ತೆಗೆಯುತ್ತಿದ್ದಾನೆ. ಇದರಿಂದ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.

ಕೂಡಲೇ ಸರ್ಕಾರ ಹಾಗೂ ಅಧಿಕಾರಿಗಳು ಸರ್ಕಾರಿ ದಾಖಲೆಯ ನಕಾಶೆಯಲ್ಲಿರೋ ರಸ್ತೆ ನಿರ್ಮಿಸಿ ಶಾಲೆಗೆ ಹೋಗುವ ಮಕ್ಕಳಿಗೆ ರಸ್ತೆ ನಿರ್ಮಿಸಿ ಕೊಡಬೇಕೆಂದು ಆಗ್ರಹಿಸಿದ್ದಾರೆ. ಒಟ್ಟಾರೆ, ಕೋಟಿ-ಕೋಟಿ ವೆಚ್ಚದಲ್ಲಿ ಸುಸಜ್ಜಿತ ವಸತಿ ಶಾಲೆ ನಿರ್ಮಾಣವಾದರೂ ಅಧಿಕಾರಿಗಳ ನಿರ್ಲಕ್ಷ ಹಾಗೂ ಮೈ ಮರೆತ ಪರಿಣಾಮ ರಸ್ತೆ ಇಲ್ಲದೆ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ನಿತ್ಯವೂ ಸುತ್ತಿ ಬಳಸಿ ಓಡಾಡುವ ಸ್ಥಿತಿ ನಿರ್ಮಾಣವಾಗಿರೋದು ನಿಜಕ್ಕೂ ದುರಂತ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ವಿದ್ಯಾರ್ಥಿಗಳಿಗೆ ಆಗುತ್ತಿರುವ ಸಮಸ್ಯೆಗೆ ಸ್ಪಂದಿಸಿ ರಸ್ತೆ ನಿರ್ಮಿಸಿ ಕೊಡಬೇಕೆಂದು ಸ್ಥಳಿಯರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ವರದಿ: ಅಶ್ವಿತ್ ಮಾವಿನಗುಣಿ ಟಿವಿ9 ಚಿಕ್ಕಮಗಳೂರು

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ