ಚಿಕ್ಕಮಗಳೂರು, ಜು.15: ವೃದ್ಧೆಯ ಮೈತುಂಬ ಬಾಸುಂಡೆ ಗುರುತು, ತಲೆಗೆ ಗಂಭೀರ ಗಾಯ. ಚಿತ್ರ ಹಿಂಸೆ ನೀಡಿ ವೃದ್ಧೆಯ ಮೇಲೆ ಮನಸ್ಸೋ ಇಚ್ಛೆ ಥಳಿತ, ಇದರಿಂದ ಅಸ್ವಸ್ಥಗೊಂಡ ವೃದ್ಧೆಯನ್ನ ಚಿಕ್ಕಮಗಳೂರು(chikkamagaluru) ಮಲ್ಲೇಗೌಡ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿರುವ ಘಟನೆ ಜಿಲ್ಲೆಯ ಅನಾಥಾಶ್ರಮವೊಂದರಲ್ಲಿ ನಡೆದಿದೆ. ಹಾಸನ ಜಿಲ್ಲೆಯ ಚನ್ನಳ್ಳಿ ಗ್ರಾಮದ ರತ್ನಮ್ಮ (69) ಗಂಭೀರ ಗಾಯಗೊಂಡ ವೃದ್ಧೆ. ಇವರನ್ನ ಒಂದೂವರೆ ತಿಂಗಳ ಹಿಂದೆ, ಜಿಲ್ಲೆಯ ಎನ್ ಆರ್ ಪುರ ತಾಲೂಕಿನ ಹೊನ್ನೆಕೊಡಿಗೆ ಗ್ರಾಮದಲ್ಲಿರುವ ರಜಿನಾ ಸ್ನೇಹಾ ಆಶ್ರಮ ಟ್ರಸ್ಟ್ ಹೆಸರಿನ ಅನಾಥಾಶ್ರಮಕ್ಕೆ ಕುಟುಂಬಸ್ಥರು ಸೇರಿಸಿದ್ದರು. ಇದಾದ ಬಳಿಕ ವಾಪಸ್ ಮನೆಗೆ ಕರೆದುಕೊಂಡು ಹೋಗಲು ಬಂದಾಗ ಘಟನೆ ಬೆಳಕಿಗೆ ಬಂದಿದೆ.
ಇನ್ನು ಇತ್ತೀಚೆಗಷ್ಟೇ ಮಾನಸಿಕ ಕಾಯಿಲೆಗೆ ಚಿಕಿತ್ಸೆ ನೀಡುವುದಾಗಿ ಆಶ್ರಮಕ್ಕೆ ಸೇರಿಸಿಕೊಂಡಿದ್ದ ಲಿಜೇಶ್ ಎಂಬಾತ ಈ ಕೃತ್ಯ ಎಸಗಿದ್ದಾನೆ ಎಂದು ರತ್ನಮ್ಮ ಕುಟುಂಬಸ್ಥರು ಎನ್.ಆರ್ ಪುರ ಪೊಲೀಸ್ ಠಾಣೆಯಲ್ಲಿ ಲಿಜೇಶ್ ವಿರುದ್ಧ ಪ್ರಕರಣ ದಾಖಲು ಮಾಡಿದ್ದಾರೆ. ಇನ್ನು ಮೂಲಭೂತ ಸೌಕರ್ಯಗಳಿಲ್ಲದ ರಬ್ಬರ್ ತೋಟದಲ್ಲಿರುವ ಆಶ್ರಮದಲ್ಲಿ ಅನೇಕ ರೋಗದಿಂದ ಬಳಲುತ್ತಿರುವ 38 ವೃದ್ಧರು ಇದ್ದಾರೆ. ಇದೀಗ ಈ ಘಟನೆ ಬೆಳಕಿಗೆ ಬಂದಿದೆ.
ಇನ್ನು ಈ ಕುರಿತು ಮಾತನಾಡಿದ ವೃದ್ದೆಯ ಮಗಳು ‘ ನಮ್ಮ ತಾಯಿ ಸರಿಯಾಗಿ ಔಷಧಿ, ಆಹಾರ ಸೇವಿಸುತ್ತಿರಲಿಲ್ಲ. ಹೀಗಾಗಿ ನಾವು ಸಾಮಾಜಿಕ ಜಾಲತಾಣದಲ್ಲಿ ಈ ಆಶ್ರಮದ ಬಗ್ಗೆ ನೋಡಿ, ಕೆಲ ದಿನಗಳ ಹಿಂದೆ ಇಲ್ಲಿ ಸೇರಿಸಿದ್ದೇವು. ಬಹುಶಃ ಈಗ ಸರಿ ಹೋಗಿರಬಹುದೆಂದು ಕರೆದುಕೊಂಡ ಹೋಗಲು ಬಂದಿದ್ದೆ. ಈ ವೇಳೆ ಅಮ್ಮನ ಮೈ ಮೇಲೆ ಬಾಸುಂಡೆಗಳು ಮೂಡಿದ್ದು, ಜೊತೆಗೆ ತಲೆಗೆ ಗಂಭೀರವಾಗಿ ಗಾಯಗೊಂಡಿರುವುದು ಕಾಣಿಸಿದ್ದು, ಕೂಡಲೇ ಆಸ್ಪತ್ರೆಗೆ ಸೇರಿದ್ದೇನೆ ಮತ್ತು ಈ ಕುರಿತು ಪೊಲೀಸ್ ಠಾಣೆಗೂ ದೂರು ನೀಡಿರುವುದಾಗಿ ಹೇಳಿದರು.
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:38 am, Sat, 15 July 23