ಚಿಕ್ಕಮಗಳೂರು: ಕಾರ್ಮಿಕ ಮಹಿಳೆ ಮೇಲೆ ಹುಲಿ ದಾಳಿ (tiger attack) ಮಾಡಿರುವಂತಹ ಘಟನೆ ತಾಲೂಕಿನ ಮುಳ್ಳಯ್ಯನಗಿರಿ ತಪ್ಪಲಿನ ಪಂಡರವಳ್ಳಿಯ ಕಾಫಿ ತೋಟದಲ್ಲಿ ನಡೆದಿದೆ. ಅಸ್ಸಾಂ ಮೂಲದ ಮಹಿಳೆಯ ಹಣೆ, ಮುಖಕ್ಕೆ ಗಾಯಗಳಾಗಿದ್ದು ಗಂಭೀರ ಸ್ಥಿತಿಯಲ್ಲಿದ್ದಾರೆ. ಸದ್ಯ ಗಾಯಾಳು ಮಹಿಳೆಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕಾಫಿ ತೋಟದಲ್ಲಿ ಮಹಿಳೆ ಕೆಲಸ ಮಾಡುತ್ತಿದ್ದಾಗ ಏಕಾಏಕಾ ಹುಲಿ ದಾಳಿ ಮಾಡಿದ್ದು, ಇತರೆ ಕಾರ್ಮಿಕರು ಕೂಗಾಡುತ್ತಿದ್ದಂತೆ ಹುಲಿ ಓಡಿಹೋಗಿದೆ.
8 ವರ್ಷದ ಹಿಂದೆ ಪಂಡರಹಳ್ಳಿಯಲ್ಲಿ ಹುಲಿ ದಾಳಿಗೆ ಓರ್ವ ಮಹಿಳೆ ಬಲಿಯಾಗಿದ್ದರು. ಇಂದು ಮತ್ತೆ ಹುಲಿ ದಾಳಿ ಮಾಡಿರುವುದರಿಂದ ಗ್ರಾಮಸ್ಥರಲ್ಲಿ ಆತಂಕ ಮೂಡಿದೆ.
ಜಿಲ್ಲೆಯ ಮಲೆನಾಡು ಭಾಗದ ಕಾಡಾಂಚಿನ ಗ್ರಾಮದಲ್ಲಿ ಜನರು ಕಾಡು ಪ್ರಾಣಿಗಳ ಉಪಟಳಕ್ಕೆ ಜೀವ ಭಯದಲ್ಲಿ ಬದುಕುವುದರ ಜೊತೆಗೆ ಬದುಕನ್ನು ಕಳೆದುಕೊಳ್ಳುತ್ತಿದ್ದಾರೆ. ನಿರಂತರವಾಗಿ ಕಾಡಾನೆ, ಹುಲಿ ಕಾಟಕ್ಕೆ ಸುಸ್ತಾಗಿ ಹೋಗಿದ್ದಾರೆ. ಮೂಡಿಗೆರೆ ತಾಲೂಕಿನ ಬಣಕಲ್, ಗುತ್ತಿಹಳ್ಳಿ ಸೇರಿದಂತೆ ಹತ್ತಕ್ಕೂ ಅಧಿಕ ಗ್ರಾಮದಲ್ಲಿ ಕಾಡಾನೆ ಹಾವಳಿ ಇಟ್ಟು ಲಕ್ಷಾಂತರ ಮೌಲ್ಯದ ಅಡಿಕೆ ಬಾಳೆ, ಕಾಫಿ ಬೆಳೆ ನಾಶ ಮಾಡುತ್ತಿದ್ರೆ, ಇತ್ತ ಹುಲಿ ಜಾನುವಾರುಗಳ ಮೇಲೆ ದಾಳಿ ಮಾಡುತ್ತಿವೆ.
ಇದನ್ನೂ ಓದಿ: ಕಾಫಿನಾಡಿನ ಮಲೆನಾಡಿಗರಿಗೆ ಶಾಪವಾದ ಕಾಡು ಪ್ರಾಣಿಗಳು; ಹುಲಿ,ಕಾಡಾನೆ ಕಾಟಕ್ಕೆ ತತ್ತರಿಸಿದ ಮಲೆನಾಡಿಗರು
ಮೂಡಿಗೆರೆ ಸಮೀಪದ ಬಾಳೂರು, ಹೊರಟ್ಟಿ, ಭಾರತಿಬೈಲು, ಇತ್ತೀಚೆಗೆ ಮತ್ತಿಕಟ್ಟೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಹುಲಿ ಕಳೆದ ಒಂದು ತಿಂಗಳಿನಿಂದ ಸಂಚಾರ ಮಾಡುತ್ತಿತ್ತು. ಕಾಫಿ ತೋಟ, ಗ್ರಾಮದ ರಸ್ತೆಗಳಲ್ಲಿ ಹುಲಿ ಹೆಜ್ಜೆ ಪತ್ತೆಯಾಗುತ್ತಿದ್ದು ಜನ ಜೀವ ಭಾಯದಿಂದ ಗ್ರಾಮಸ್ಥರು ಬದುಕುತ್ತಿದ್ದಾರೆ.
ಮೂಡಿಗೆರೆ ತಾಲೂಕಿನ ಅನೇಕ ಗ್ರಾಮಗಳಲ್ಲಿ ವ್ಯಾಘ್ರ ಸಂಚಾರ ಮಾಡುತ್ತಿದ್ದು, ಕಾಫಿ ತೋಟದಲ್ಲಿ ಹುಲಿ ಹೆಜ್ಜೆ ಗುರುತು ಪತ್ತೆಯಾಗಿವೆ. ಇದರಿಂದ ಭಯ ಭೀತರಾಗಿರುವ ಕಾಫಿ ತೋಟದ ಕಾರ್ಮಿಕರು ಕಾಫಿ ತೋಟಕ್ಕೆ ಕೆಲಸಕ್ಕೆ ಬರಲು ಜೀವ ಭಯದಿಂದ ಹಿಂದೇಟು ಹಾಕುತ್ತಿದ್ದಾರೆ.
ಹುಲಿ ಒಂದು ಕಡೆ ಭಯ ಹುಟ್ಟಿಸುತ್ತಿದ್ದರೆ ಮತ್ತೊಂದು ಕಡೆ ಒಂಟಿ ಸಲಗ ಚಿಕ್ಕಮಗಳೂರು ಮತ್ತು ದಕ್ಷಿಣಕನ್ನಡ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಚಾರ್ಮುಡಿ ಘಾಟ್ನಲ್ಲಿ ಪ್ರತ್ಯಕ್ಷವಾಗುತ್ತಿದ್ದು, ವಾಹನ ಸವಾರರು ಆತಂಕದಲ್ಲೇ ಸಂಚಾರ ಮಾಡುತ್ತಿದ್ದಾರೆ. ಒಂದು ದಿಕ್ಕಿನಿಂದ ಹುಲಿ ಆತಂಕ ಮೂಡಿಸುತ್ತಿದ್ದರೆ ಮತ್ತೊಂದು ದಿಕ್ಕಿನಿಂದ ಮಲೆನಾಡಿಗರಿಗೆ ಕಾಡಾನೆ ನಿದ್ದೆ ಕೆಡಸಿವೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:13 pm, Tue, 6 June 23