ಖ್ಯಾತ ಪರಿಸರ ಹೋರಾಟಗಾರ ಡಿ.ವಿ.ಗಿರೀಶ್ ಮೇಲೆ ಚಿಕ್ಕಮಗಳೂರಿನಲ್ಲಿ ಹಲ್ಲೆ: ವ್ಯಾಪಕ ಖಂಡನೆ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Aug 31, 2021 | 9:26 PM

ನಡುರಸ್ತೆಯಲ್ಲಿ ಹಲ್ಲೆ ನಡೆಸುತ್ತಿದ್ದುದನ್ನು ಗಮನಿಸಿದ ಕಂಬಿಹಳ್ಳಿ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿ, ಗಿರೀಶ್ ಮತ್ತು ಅವರ ಗೆಳೆಯರನ್ನು ರಕ್ಷಿಸಿದರು.

ಖ್ಯಾತ ಪರಿಸರ ಹೋರಾಟಗಾರ ಡಿ.ವಿ.ಗಿರೀಶ್ ಮೇಲೆ ಚಿಕ್ಕಮಗಳೂರಿನಲ್ಲಿ ಹಲ್ಲೆ: ವ್ಯಾಪಕ ಖಂಡನೆ
ಡಿ.ವಿ.ಗಿರೀಶ್ ಅವರ ಮೇಲೆ ಹಲ್ಲೆ (ಸಂಗ್ರಹ ಚಿತ್ರ)
Follow us on

ಚಿಕ್ಕಮಗಳೂರು: ಜಿಲ್ಲೆಯ ಭದ್ರಾ ವನ್ಯಜೀವಿ ಅಭಯಾರಣ್ಯದ ಉಳಿವಿಗಾಗಿ ಜೀವನವನ್ನೇ ಮುಡಿಪಿಟ್ಟಿರುವ ಖ್ಯಾತ ಪರಿಸರ ಹೋರಾಟಗಾರ ಡಿ.ವಿ.ಗಿರೀಶ್ ಅವರ ಮೇಲೆ ಸೋಮವಾರ ಪುಂಡರು ಹಲ್ಲೆ ನಡೆಸಿದ್ದಾರೆ. ಈ ಸಂಬಂಧ ಪೊಲೀಸರು ಮಂಗಳವಾರ ದೂರು ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಚಿಕ್ಕಮಗಳೂರಿನ ಶೋಲಾ ಹುಲ್ಲುಗಾವಲು, ನೀರಿನ ಸೆಲೆಗಳನ್ನು ಉಳಿಸಲು ಅವಿರತ ಹೋರಾಡುತ್ತಿರುವ ಗಿರೀಶ್ ಅವರ ಮೇಲಿನ ಹಲ್ಲೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.

ಗಿರೀಶ್ ಅವರು ತಮ್ಮ ಜಿಪ್ಸಿಯಲ್ಲಿ ಕೆಮ್ಮಣ್ಣುಗುಂಡಿ ಸಮೀಪದ ಕಟ್ಟೆಹೊಳೆ ಎಸ್ಟೇಟ್​ನಿಂದ ಗೆಳೆಯರೊಂದಿಗೆ ಹಿಂದಿರುಗುವಾಗ ಸಂತವೇರಿ ತಿರುವಿನ ಸಮೀಪ ನಿಂತಿದ್ದ ಕೆಲ ಯುವಕರು ವಾಹನದಲ್ಲಿದ್ದ ಬಾಲಕಿಯ ಬಗ್ಗೆ ಅಶ್ಲೀಲವಾಗಿ ಮಾತನಾಡಿದರು. ಗಿರೀಶ್ ಅವರು ವಾಹನ ನಿಲ್ಲಿಸಿ, ಹೀಗೆ ಮಾತನಾಡಬಾರದು ಎಂದು ಯುವಕರಿಗೆ ಬುದ್ಧಿ ಹೇಳಿದರು. ಸ್ಥಳದಲ್ಲಿ ಗಿರೀಶ್ ಅವರ ಗೆಳೆಯರೊಬ್ಬರು ಬಂದಿದ್ದನ್ನು ಗಮನಿಸಿದ ಯುವಕರು ಸುಮ್ಮನಾದರು ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಹೇಳಲಾಗಿದೆ.

ಕೆಲ ಹೊತ್ತಿನ ನಂತರ ಬೈಕ್​ಗಳಲ್ಲಿ ಗಿರೀಶ್​ ಅವರ ಜಿಪ್ಸಿ ಬೆನ್ನಟ್ಟಿದ ದುಷ್ಟರು, ಕಂಬಿಹಳ್ಳಿ ಸಮೀಪ ಜೀಪ್​ ಅಡ್ಡಗಟ್ಟಿ ಅದರಲ್ಲಿದ್ದ ಗಿರೀಶ್ ಮತ್ತು ಕೀರ್ತಿ ಕುಮಾರ್​ ಸೇರಿದಂತೆ ಹಲವರ ಮೇಲೆ ಹಲ್ಲೆ ನಡೆಸಿದರು. ಗಿರೀಶ್​ ಅವರಿಗೆ ಕೆನ್ನೆಲೆಗೆ ಪೆಟ್ಟು ಬಿದ್ದು, ರಕ್ತಗಾಯವಾಯಿತು. ಜಿಪ್ಸಿಯಲ್ಲಿದ್ದ ಬಾಲಕಿಯನ್ನು ದುಷ್ಟರು ಹಿಡಿದು ಎಳೆಯಲು ಯತ್ನಿಸಿದರು ಎಂದು ದೂರಲಾಗಿದೆ.

ನಡುರಸ್ತೆಯಲ್ಲಿ ಹಲ್ಲೆ ನಡೆಸುತ್ತಿದ್ದುದನ್ನು ಗಮನಿಸಿದ ಕಂಬಿಹಳ್ಳಿ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿ, ಗಿರೀಶ್ ಮತ್ತು ಅವರ ಗೆಳೆಯರನ್ನು ರಕ್ಷಿಸಿದರು. ಈ ವೇಳೆ ‘ನಿಮ್ಮನ್ನು ಸಾಯಿಸದೇ ಬಿಡುವುದಿಲ್ಲ’ ಎಂದು ಜೀವ ಬೆದರಿಕೆ ಹಾಕಿ ದುಷ್ಕರ್ಮಿಗಳು ಅಲ್ಲಿಂದ ಹೋದರು ಎಂದು ಗಿರೀಶ್ ಅವರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಡಿ.ವಿ.ಗಿರೀಶ್ ಅವರ ಮೇಲಿನ ಹಲ್ಲೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದ್ದು, ‘ದುಷ್ಕರ್ಮಿಗಳನ್ನು ಪೊಲೀಸರು ಶೀಘ್ರ ಪತ್ತೆಹಚ್ಚಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕು’ ಎಂದು ಕರ್ನಾಟಕ ವನ್ಯಜೀವಿ ಮಂಡಳಿಯ ಮಾಜಿ ಸದಸ್ಯ ಸ.ಗಿರಿಜಾಶಂಕರ ಟಿವಿ9 ಕನ್ನಡ ಡಿಜಿಟಲ್​ಗೆ ಪ್ರತಿಕ್ರಿಯಿಸಿದರು.

ಡಿ.ವಿ.ಗಿರೀಶ್ ಯಾರು?
ಪರಿಸರ ಸಂರಕ್ಷಣೆ ಚಳವಳಿಯಲ್ಲಿ ಸಕ್ರಿಯರಾಗಿರುವ ಗಿರೀಶ್ ಹಲವು ಸಂಸ್ಥೆಗಳಿಗೆ ಸಂಪನ್ಮೂಲ ವ್ಯಕ್ತಿಯಾಗಿ ಹೆಸರುವಾಸಿಯಾಗಿದ್ದಾರೆ. ಭದ್ರಾ ಅಭಯಾರಣ್ಯ ಹಾಗೂ ಚಿಕ್ಕಮಗಳೂರಿನ ಪರಿಸರ ಸಂರಕ್ಷಣೆಗಾಗಿ ಯಾವುದೇ ರಾಜಿಯಿಲ್ಲದ ಅವರು ನಡೆಸಿದ ಸುದೀರ್ಘ ಹೋರಾಟವನ್ನು ಗೌರವಿಸಿ ಹಲವು ಪುರಸ್ಕಾರಗಳು ಅವರನ್ನು ಹುಡುಕಿಕೊಂಡು ಬಂದಿವೆ.

ಸ್ಕಾಟ್ಲೆಂಡ್‌ನ ಪ್ರತಿಷ್ಠಿತ ದಿ ರಾಯಲ್ ಬ್ಯಾಂಕ್ ಆಫ್ ಸ್ಕಾಟ್ಲೆಂಡ್ ‘ಪ್ರೊಟೆಕ್ಟ್ ದಿ ಟೈಗರ್’ ಪ್ರಶಸ್ತಿ ಅದರಲ್ಲಿ ಪ್ರಮುಖವಾದುದು. ಇದರ ಜೊತೆಗೆ ವೈಲ್ಡ್‌ಲೈಫ್ ಕನ್ಸರ್​ವೇಶನ್ ಸೊಸೈಟಿ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕಾರ್ಲ್ ಜೀಸ್ ವೈಲ್ಡ್ ಲೈಫ್ ಕನ್ಸರ್ವೇಶನ್ ಅವಾರ್ಡ್, ಟೈಗರ್ ಗೋಲ್ಡ್ ಸೇರಿದಂತೆ ಹತ್ತಾರು ಪುರಸ್ಕಾರಗಳು ಸಂದಿವೆ. ನೂರಾರು ಯುವಜನರಲ್ಲಿ ಪರಿಸರ ಪ್ರೀತಿಯನ್ನು ಬಿತ್ತಿ, ಮಾರ್ಗದರ್ಶನ ಮಾಡಿದ್ದಾರೆ.

ಪಶ್ಚಿಮಘಟ್ಟದ ಕುದುರೆಮುಖ- ಮುತ್ತೋಡಿ ಅಭಯಾರಣ್ಯಗಳ ಉಳಿವಿಗೆ ಗಿರೀಶ್ ನೀಡಿದ ಕೊಡುಗೆ ದೊಡ್ಡದು. 2001-02ರಲ್ಲಿ ಭದ್ರ ಅಭಯಾರಣ್ಯದಲ್ಲಿದ್ದ 450ಕ್ಕೂ ಹೆಚ್ಚು ಕುಟುಂಬಗಳ ಸ್ವಯಂ ಪ್ರೇರಿತ ಪುನರ್ವಸತಿ ವಿಚಾರದಲ್ಲಿ ಅವರು ವಹಿಸಿದ ಪಾತ್ರ ವಿಶ್ವಮಟ್ಟದಲ್ಲಿ ಸುದ್ದಿಯಾಗಿತ್ತು. 2001-02ರಲ್ಲಿ ಮುತ್ತೋಡಿ ವ್ಯಾಪ್ತಿಯ 13 ಹಳ್ಳಿಗಳ (ಮುತ್ತೋಡಿ, ಕೆಸವೆ, ಮಾಡ್ಲ, ದಬ್ಬಗಾರು, ಕರ್ವಾನಿ, ಹೆಬ್ಬೆ, ಕಂಚಿಗಾರು, ಹೆಗ್ಗಾರು, ಮತ್ವಾನಿ, ಹಿರೇಬೆಳ್ಳು, ಒಡ್ಡಿಹಟ್ಟಿ, ಪರದೇಶಪ್ಪನಮಠ, ಹಿಪ್ಲಾ) ಜನರಿಗೆ ತರೀಕೆರೆ ತಾಲ್ಲೂಕು ಲಕ್ಕವಳ್ಳಿ ಸಮೀಪ ಯೋಗ್ಯ ರೀತಿಯಲ್ಲಿ ಪುನರ್ವಸತಿ ಕಲ್ಪಿಸಲಾಯಿತು. ಇದು ನಮ್ಮ ದೇಶದ ಅತ್ಯುತ್ತಮ ಪುನರ್ವಸತಿ ಎಂದೇ ಪರಿಗಣಿತವಾಗಿದೆ. ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದ ಜೈರಾಂ ರಮೇಶ್ ಸಹ ಲಕ್ಕವಳ್ಳಿಗೆ ಭೇಟಿ ನೀಡಿ ಪುನರ್ವಸತಿ ಪರಿಶೀಲಿಸಿದ್ದರು.

(Attack on Wildlife Conservation Activist DV Girish noted for his efforts to save grasslands of Chikmagalur)

ಇದನ್ನೂ ಓದಿ: Karnataka Tourism: ನೀವು ಭೇಟಿ ನೀಡಲೇ ಬೇಕಾದ ಕರ್ನಾಟಕದ 15 ಪ್ರವಾಸಿ ತಾಣಗಳು ಇಲ್ಲಿವೆ!

ಇದನ್ನೂ ಓದಿ: ಆಧುನಿಕ ತಂತ್ರಜ್ಞಾನದ ಅಳವಡಿಕೆಯಿಂದ ಪರಿಸರ ಸಂರಕ್ಷಣೆ ಸಾಧ್ಯ -ಉಲ್ಲಾಸ ಕಾರಂತ

ಡಿ.ವಿ.ಗಿರೀಶ್ ಅವರ ಮೇಲೆ ದುಷ್ಕರ್ಮಿಗಳ ಹಲ್ಲೆ ನಡೆಸುತ್ತಿರುವ ದೃಶ್ಯವನ್ನು ಸ್ಥಳೀಯರು ಮೊಬೈಲ್​ನಲ್ಲಿ ಸೆರೆಹಿಡಿದಿದ್ದಾರೆ. ವಿಡಿಯೊ ಇಲ್ಲಿದೆ.

Published On - 9:20 pm, Tue, 31 August 21