ಚಿಕ್ಕಮಗಳೂರು: ನಗರದ ಹೃದಯಭಾಗದಲ್ಲಿರುವ ಜಾಗಕ್ಕಾಗಿ ಮಠ ಮತ್ತು ಮಸೀದಿ ಆಡಳಿತ ಮಂಡಳಿಗಳ ನಡುವೆ ವಿವಾದ ತಲೆದೋರಿದೆ. ಈ ಸಂಬಂಧ ಚರ್ಚಿಸಲು ಕರೆದಿದ್ದ ಸಭೆಯಲ್ಲಿ ನಾಟಕೀಯ ಬೆಳವಣಿಗೆಗಳು ನಡೆದು, ಮುಖಂಡರು ಪರಸ್ಪರ ಕೈಕೈ ಮಿಲಾಯಿಸುವ ಹಂತದಷ್ಟು ಗಲಾಟೆ ನಡೆಯಿತು. ಈ ಜಾಗ ಯಾರಿಗೆ ಸೇರಬೇಕು ಎನ್ನುವ ಬಗ್ಗೆ 40 ವರ್ಷಗಳಿಂದ ವಿವಾದವಿದೆ. ಚಿಕ್ಕಮಗಳೂರು ನಗರದ ಹೃದಯಭಾಗದಲ್ಲಿರುವ ಈ ಜಾಗದ ವಿಸ್ತೀರ್ಣ ಸುಮಾರು 2 ಎಕರೆ. ಈ ಜಾಗ ತಮ್ಮದೆಂದು ನಲ್ಲೂರು ಮಠ ಹಾಗೂ ಬಡಾಮಕಾನ್ ಮಸೀದಿಗಳು ವಾದಿಸುತ್ತಿವೆ. ಪ್ರಸ್ತುತ ಈ ಸ್ಥಳವು ಮಸೀದಿ ಆಡಳಿತ ಮಂಡಳಿಯ ಒಡೆತನದಲ್ಲಿದೆ. ಆದರೆ ಈ ಜಾಗ ನಮಗೆ ಸೇರಬೇಕು ಎಂದು ನಲ್ಲೂರು ಮಠದವರು ಒತ್ತಾಯಿಸುತ್ತಿದ್ದಾರೆ. ಮಠದ ಮನೆಯ ನಂಜಪ್ಪ ಎನ್ನುವವರು ಈ ವಿಚಾರದಲ್ಲಿ ಮತ್ತೊಮ್ಮೆ ಸರ್ವೆ ನಡೆಸಬೇಕು ಎಂದು ಆಗ್ರಹಿಸುತ್ತಿದ್ದಾರೆ.
ಆದರೆ ನಗರಸಭೆ ಸಿಬ್ಬಂದಿ ಸರ್ವೆ ಪ್ರಯತ್ನ ಆರಂಭಿಸಿದಾಗಿ ಮುಸ್ಲಿಂ ಮುಖಂಡರು ವಿರೋಧ ವ್ಯಕ್ತಪಡಿಸಿದರು. ಈ ವೇಳೆ ಎರಡೂ ಗುಂಪಿನ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಪರಸ್ಪರ ಕೈಕೈ ಮಿಲಾಯಿಸುವ ಹಂತಕ್ಕೆ ಗಲಾಟೆಯಾಯಿತು.. ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ನಿಯಂತ್ರಿಸಿದರು. ನಂತರ ಮುಸ್ಲಿಂ ಮುಖಂಡರ ವಿರುದ್ಧ ನಡುವೆಯೂ ನಗರಸಭೆಯಿಂದ ಸರ್ವೇ ಕಾರ್ಯ ಮುಂದುವರಿಯಿತು. ಈ ಜಾಗವು ಕಳೆದ ನಾಲ್ಕು ದಶಕಗಳಿಂದ ವಿವಾದದ ಕೇಂದ್ರಬಿಂದುವಾಗಿದೆ. ಸುಮಾರು ಒಂದು ಲಕ್ಷ ಚದರ ಅಡಿ ವಿಸ್ತೀರ್ಣದ ಈ ಆಸ್ತಿಯು ವಿವಾದದ ಕೇಂದ್ರಬಿಂದುವಾಗಿದೆ.
ಈ ಜಾಗವು ಒತ್ತುವರಿಯಾಗುವ ಮೊದಲು ನಲ್ಲೂರು ಮಠಕ್ಕೆ ಸೇರಿತ್ತು ಎನ್ನುವುದು ಮಠದವರ ವಾದವಾಗಿದೆ. ಜಾಗದ ಒಡೆತನವನ್ನು ಪ್ರಶ್ನಿಸಿ ಈ ಹಿಂದೆಯೇ ಮಠದವರು ಜಿಲ್ಲಾ ನ್ಯಾಯಾಲಯದ ಮೊರೆ ಹೋಗಿದ್ದರು. ಈ ಸಂಬಂಧ ನ್ಯಾಯಾಲಯದಲ್ಲಿ ತೀರ್ಪು ನಮ್ಮ ಪರ ಬಂದಿದೆ ಎಂದು ಮಠದ ಮನೆಯವರು ವಿವರಿಸುತ್ತಿದ್ದಾರೆ. ಆದರೆ ತೀರ್ಪನ್ನು ನಾವು ಹೈಕೋರ್ಟ್ನಲ್ಲಿ ಪ್ರಶ್ನಿಸಿದ್ದೇವೆ. ಅಲ್ಲಿ ನಮ್ಮ ಪರ ತೀರ್ಪು ಬಂದಿದೆ ಎಂದು ಮಸೀದಿ ಆಡಳಿತ ಮಂಡಳಿ ಹೇಳಿದೆ. ಈ ಮಧ್ಯೆ ವಸ್ತುಸ್ಥಿತಿಯ ಸತ್ಯಾಸತ್ಯತೆ ತಿಳಿಯಲು ಚಿಕ್ಕಮಗಳೂರು ನಗರಸಭೆ ಸರ್ವೆ ನಡೆಸಲು ಮುಂದಾಗಿದೆ.
ಇದನ್ನೂ ಓದಿ: ಚಿಕ್ಕಮಗಳೂರು: ಸಾವಿನಲ್ಲೂ ಸಾರ್ಥಕತೆ ಮೆರೆದ ನರ್ಸ್; ಮೆದುಳು ನಿಷ್ಕ್ರಿಯವಾಗಿರುವ ಯುವತಿಯಿಂದ ಅಂಗಾಗ ದಾನ