ಭಾರತೀಯ ಸೇನೆಯ 2ನೇ ಅತ್ಯುನ್ನತ ಸ್ಥಾನಕ್ಕೇರಿದ ಬಿಎಸ್ ರಾಜು; ಹುಟ್ಟೂರು ಚಿಕ್ಕಮಗಳೂರಿನಲ್ಲಿ ಸಂಭ್ರಮಾಚರಣೆ

| Updated By: sandhya thejappa

Updated on: May 01, 2022 | 10:31 AM

ಬಿ.ಎಸ್ ರಾಜುರವರು ಇಂದು ಭಾರತೀಯ ಸೇನೆಯ ಉಪ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಳ್ಳುತ್ತಿದ್ದಾರೆ. ಮನೋಜ್ ನರವಣೆಯವರು ಸೇನೆಯ ಮುಖ್ಯಸ್ಥರಾಗಿ ನೇಮಕವಾದ ಬೆನ್ನಲ್ಲೇ ಅವರಿಂದ ತೆರವಾದ ಸ್ಥಾನವನ್ನ ಕನ್ನಡಿಗ ಬಿ.ಎಸ್ ರಾಜುರವರು ತುಂಬುತ್ತಿದ್ದಾರೆ.

ಭಾರತೀಯ ಸೇನೆಯ 2ನೇ ಅತ್ಯುನ್ನತ ಸ್ಥಾನಕ್ಕೇರಿದ ಬಿಎಸ್ ರಾಜು; ಹುಟ್ಟೂರು ಚಿಕ್ಕಮಗಳೂರಿನಲ್ಲಿ ಸಂಭ್ರಮಾಚರಣೆ
ಭಾರತೀಯ ಸೇನೆಯ 2ನೇ ಅತ್ಯುನ್ನತ ಸ್ಥಾನಕ್ಕೇರಿದ ಬಗ್ಗವಳ್ಳಿ ಸೋಮಶೇಖರ್ ರಾಜು
Follow us on

ಚಿಕ್ಕಮಗಳೂರು: ಸೇನೆ ಅಂದರೆ ಎಲ್ಲರಿಗೂ ವಿಶೇಷ ಗೌರವ, ಪ್ರೀತಿ ಜೊತೆಗೆ ಭಕ್ತಿ ಕೂಡ. ನಮ್ಮ ದೇಶದ ಸೈನಿಕರನ್ನ ನೋಡಿದರಂತೂ ಎದ್ದು ನಿಂತು ಕೈ ಮುಗಿಯುವ ಮನಸ್ಸು ಬರುತ್ತದೆ. ಇಂತಹ ಸೇನೆಯ ಎರಡನೇ ಅತ್ಯುನ್ನತ ಸ್ಥಾನವನ್ನ ನಮ್ಮ ಕನ್ನಡದವರೇ ಅಲಂಕರಿಸುತ್ತಿದ್ದಾರೆ ಅಂದರೆ ಇದು ಹೆಮ್ಮೆಯ ಸಂಗತಿ. ಕರುನಾಡಿನ ಹೆಮ್ಮೆಯ ಬಗ್ಗವಳ್ಳಿ ಸೋಮಶೇಖರ್ ರಾಜು ಅವರು ಭಾರತೀಯ ಸೇನೆಯ ಉಪ ಮುಖ್ಯಸ್ಥರಾಗಿ ನೇಮಕವಾಗಿದ್ದಾರೆ. ಹೀಗಾಗಿ ಬಿಎಸ್ ರಾಜು ಹುಟ್ಟೂರು ಜಿಲ್ಲೆಯ ಅಜ್ಜಂಪುರ ತಾಲೂಕಿನ ಬಗ್ಗವಳ್ಳಿಯಲ್ಲಿ ಸಂಭ್ರಮಾಚರಣೆ ಜೋರಾಗಿ ನಡೆದಿದೆ.

ಸೇನೆಯ ಉಪ ಮುಖ್ಯಸ್ಥರಾಗಿ ಬಗ್ಗವಳ್ಳಿ ಸೋಮಶೇಖರ್ ರಾಜು:
ಸೇನೆಗೆ ಸೇರುವುದೇ ಒಂದು ಸಾಹಸ. ಲಕ್ಷಾಂತರ ಸೈನಿಕರಿರುವ ನಮ್ಮ ಭಾರತೀಯ ಸೇನೆಯ ನೇತೃತ್ವ ವಹಿಸುವುದಂತೂ ನಿಜಕ್ಕೂ ಬೆಲೆಕಟ್ಟಲಾಗದ ಸಾಧನೆ. ನಮ್ಮ ದೇಶದ ಸೇನೆಯ ಉಪಮುಖ್ಯಸ್ಥರಾಗಿ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕಿನ ಬಗ್ಗವಳ್ಳಿಯ ರಾಜುರವರು ನೇಮಕವಾಗಿದ್ದಾರೆ. ಇದು ಕೇವಲ ಆ ಊರಿನ ಜನರು ಮಾತ್ರವಲ್ಲ, ಇಡೀ ರಾಜ್ಯವೇ ಹೆಮ್ಮೆ ಪಡುವಂತಹ ಕ್ಷಣ. ಬಿಎಸ್ ರಾಜುರವರು ಇಂದು (ಮೇ 1) ಭಾರತೀಯ ಸೇನೆಯ ಉಪ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಳ್ಳುತ್ತಿದ್ದಾರೆ. ಮನೋಜ್ ನರವಣೆಯವರು ಸೇನೆಯ ಮುಖ್ಯಸ್ಥರಾಗಿ ನೇಮಕವಾದ ಬೆನ್ನಲ್ಲೇ ಅವರಿಂದ ತೆರವಾದ ಸ್ಥಾನವನ್ನ ಕನ್ನಡಿಗ ಬಿ.ಎಸ್ ರಾಜುರವರು ತುಂಬುತ್ತಿದ್ದಾರೆ. ಪ್ರಪಂಚದಲ್ಲಿ ಮೂರನೇ ಶಕ್ತಿಯುತ ಸೇನೆಯಾಗಿರುವ ಭಾರತೀಯ ಸೇನೆಯ ಉಪ ಮುಖ್ಯಸ್ಥರಾಗುತ್ತಿರುವುದಕ್ಕೆ ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿ ಸೇರಿದಂತೆ ಎಲ್ಲರಿಂದಲೂ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.

ಬಗ್ಗವಳ್ಳಿಯಲ್ಲಿ ಮನೆಮಾಡಿದ ಸಂಭ್ರಮ:
ದೆಹಲಿಯಲ್ಲಿ ಬಿಎಸ್ ರಾಜುರವರು ಅಧಿಕಾರ ವಹಿಸಿಕೊಳ್ಳುತ್ತಲೇ, ಇತ್ತ ಅವರ ಗ್ರಾಮದಲ್ಲೂ ತಮ್ಮೂರಿನವರು ಸೇನೆಯ ಎರಡನೇ ಅತ್ಯುನ್ನತ ಸ್ಥಾನವನ್ನ ಅಲಂಕರಿಸುತ್ತಿರುವುದಕ್ಕೆ ಗ್ರಾಮಸ್ಥರು ಸಂಭ್ರಮಿಸಿದ್ದಾರೆ. ಸುದ್ದಿ ಗೊತ್ತಾಗುತ್ತಿದ್ದಂತೆ ಎಲ್ಲರೂ ಒಂದೆಡೆ ಸೇರಿ ಬಿಎಸ್ ರಾಜು ಅವರಿಗೆ ಅಭಿನಂದನೆ ಸಲ್ಲಿಸಿ, ಅವರು ನಡೆದು ಬಂದ ದಾರಿಯನ್ನ ಮೆಲುಕು ಹಾಕಿ, ಸಿಹಿ ಹಂಚಿ ಸಂಭ್ರಮಪಟ್ಟರು. ಅಷ್ಟೇ ಅಲ್ಲದೇ ದೇಶಕ್ಕೆ, ಬಿಎಸ್ ರಾಜು ಅವರಿಗೆ ಜಯಘೋಷ ಕೂಗಿ, ಮತ್ತಷ್ಟು ಎತ್ತರಕ್ಕೆ ಏರಲಿ ಅಂತಾ ಹಾರೈಸಿದರು. ಬಿಎಸ್ ರಾಜು ಅವರ ಕುಟುಂಬದವರ ಸಂತಸಕ್ಕಂತೂ ಪಾರವೇ ಇರಲಿಲ್ಲ.

ಕರುನಾಡಿನ ಹೆಮ್ಮೆಯ ಸೇನಾನಿ ನಡೆದು ಬಂದ ದಾರಿ:
1963ರಲ್ಲಿ ಬಿಎಸ್ ಸೋಮಶೇಖರ್-ವಿಮಲಾ ದಂಪತಿಯ ಪುತ್ರನಾಗಿ ಜನಿಸಿದ ಬಿಎಸ್ ರಾಜು ಅವರು, ಬಾಲ್ಯದಲ್ಲೇ ಸೈನ್ಯದ ಬಗ್ಗೆ ವಿಶೇಷ ಪ್ರೀತಿ ಹೊಂದಿದ್ದರು. ಹಾಗಾಗೀ 5ನೇ ತರಗತಿಗೆ ಬಿಜಾಪುರದ ಸೈನಿಕ ಶಾಲೆಗೆ ಸೇರಿ ಸೈನಿಕನಾಗುವ ಕನಸು ಕಂಡರು. ಆ ಬಳಿಕ 1984ರಲ್ಲಿ ಸೇನೆಗೆ ಸೇರಿದ ಬಿಎಸ್ ರಾಜು ಅವರು, ಸೇನೆಯಲ್ಲಿ ಕಲ್ಲು-ಮುಳ್ಳಿನ ಹಾದಿಯಲ್ಲಿ ಸಾಗಿದರು. 1999ರಲ್ಲಿ ನಡೆದ ಕಾರ್ಗಿಲ್ ಯುದ್ಧದಲ್ಲಿ ನಮ್ಮ ಸೇನೆ ಗೆಲ್ಲಲ್ಲು ಕರುನಾಡಿನ ಯೋಧನ ಪಾತ್ರ ಬಹು ದೊಡ್ದದು. ಆ ಬಳಿಕ ಶತ್ರು ದೇಶದ ವಿರುದ್ಧ ಆಗಾಗ ನಡೆಯುತ್ತಿದ್ದ ಕಾಳಗದಲ್ಲೂ ಕನ್ನಡಿಗನ ಮಾರ್ಗದರ್ಶನ ಸೈನಿಕರಿಗಿತ್ತು. ಇತ್ತಿಚೀಗೆ ಉರಿ ಪ್ರದೇಶದಲ್ಲಿ ನಡೆದ ಸರ್ಜಿಕಲ್ ಸ್ಟ್ರೈಕ್​ನಲ್ಲೂ ಬಿಎಸ್ ರಾಜುರವರ ಬುದ್ಧಿವಂತಿಕೆ ಕೆಲಸ ಮಾಡಿತ್ತು ಅನ್ನೋದನ್ನ ಅವರನ್ನ ಹತ್ತಿರದಿಂದ ಬಲ್ಲವರು ಹೇಳುತ್ತಾರೆ. ಇನ್ನೂ ಪ್ರತಿಯೊಬ್ಬ ಯಶಸ್ವಿ ಪುರಷನ ಹಿಂದೆ ಮಹಿಳೆಯೊಬ್ಬರು ಇರುತ್ತಾರೆ ಎಂಬ ಮಾತಿನಂತೆ ಬಿಎಸ್ ರಾಜುರವರ ಎಲ್ಲಾ ಸಾಧನೆಗಳ ಹಿಂದೆ ಪತ್ನಿ ಶಕುಂತಲಾ ಸ್ಫೂರ್ತಿಯಾಗಿಯಾಗಿದ್ದಾರೆ. ರಾಜು-ಶಕುಂತಲಾ ದಂಪತಿಗೆ ಪೂರ್ವಿ ಎಂಬ ಮಗಳು ಹಾಗೂ ಶೇಖರ್ ಎಂಬ ಮಗ ಕೂಡ ಇದ್ದಾರೆ.

ಬಿಎಸ್ ರಾಜು ಅವರಿಗೆ ಒಲಿದು ಬಂದ ಪ್ರಶಸ್ತಿ ಪುರಸ್ಕಾರಗಳು:
* ಉತ್ತಮ್ ಯೋಧ ಸೇವಾ ಮೇಡಲ್ UYSM
* ಅತಿ ವಿಶಿಷ್ಠ ಸೇವಾ ಮೇಡಲ್ AVSM
* ಯುದ್ಧ ಸೇವಾ ಮೇಡಲ್ YSM ಸೇರಿದಂತೆ ಹತ್ತು ಹಲವು ಪ್ರತಿಷ್ಠಿತ ಪ್ರಶಸ್ತಿಗಳು ಬಿಎಸ್ ರಾಜು ಅವರ ಕಾರ್ಯದಕ್ಷತೆಗೆ ಒಲಿದಿವೆ.

ಬಿಎಸ್ ರಾಜು ಸಿಂಪಲ್ ಮ್ಯಾನ್:
ಬಿಎಸ್ ರಾಜುರವರು ತಮ್ಮ ತಂದೆಯ ಹೆಸರಿನಲ್ಲಿ ಟ್ರಸ್ಟ್​ವೊಂದನ್ನ ಮಾಡಿಕೊಂಡು ಸ್ವಗ್ರಾಮ ಬಗ್ಗವಳ್ಳಿಯ ಸರ್ಕಾರಿ ಪ್ರೌಢಶಾಲೆಗೆ ಪ್ರತಿ ವರ್ಷ ಲಕ್ಷಾಂತರ ರೂಪಾಯಿ ಹಣಕಾಸಿನ ನೆರವನ್ನ ಒದಗಿಸಿ, ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸಹಾಯ ಮಾಡುತ್ತಲೇ ಬರುತ್ತಿದ್ದಾರೆ. ಅಲ್ಲದೇ ತುಂಬಾ ಸರಳ ಜೀವಿಯಾಗಿರುವ ಬಿಎಸ್ ರಾಜುರವರು ಪ್ರತಿವರ್ಷ ರಜೆಯಲ್ಲಿ ಊರಿಗೆ ತಪ್ಪದೇ ಬರುತ್ತಿರುತ್ತಾರೆ. ಹೀಗೆ ಬಂದಾಗ ಹೆಚ್ಚು ತೋಟದಲ್ಲೇ ಸಮಯ ಕಳೆಯುತ್ತಾರೆ. ಸಾಮಾನ್ಯರಂತೆ ಎಲ್ಲರ ಜೊತೆ ಓಡಾಡಿಕೊಂಡಿರುತ್ತಾರೆ. ಬಹುತೇಕರಿಗೆ ಇವರೇ ಬಿಎಸ್ ರಾಜು ಹಾಗೂ ಇವರು ಸೇವೆ ಸಲ್ಲಿಸುತ್ತಿದ್ದ ಹುದ್ದೆಯ ಗರಿಮೆಯೇ ಗೊತ್ತೆ ಇಲ್ಲವಂತೆ. ಬಿಎಸ್ ರಾಜು ಅವರು ಎಲ್ಲೂ ಕೂಡ ತಮ್ಮ ಗುರುತನ್ನ ಹೇಳಿಕೊಳ್ಳದೇ ಸಾಮಾನ್ಯರಲ್ಲಿ ಸಾಮಾನ್ಯರಂತೆ ಇರುತ್ತಿದ್ದ ವ್ಯಕ್ತಿ ಅನ್ನೋದು ಅವರನ್ನ ಹತ್ತಿರದಿಂದ ಬಲ್ಲವರ ಮಾತು.

ದೇಶದ ಉದ್ದಗಲ್ಲಕ್ಕೂ ಪಸರಿಸಿದ ಬಗ್ಗವಳ್ಳಿಯ ಕೀರ್ತಿ ಪತಾಕೆ:
ಬಗ್ಗವಳ್ಳಿಯ ಕೀರ್ತಿ ಪತಾಕೆಯನ್ನ ದೇಶ-ವಿದೇಶಕ್ಕೂ ಗೊತ್ತಾಗುವಂತೆ ಮಾಡಿದ ಬಿಎಸ್ ರಾಜುರವರ ಸಾಧನೆಯನ್ನ ಗ್ರಾಮಸ್ಥರು ಕೊಂಡಾಡಿದ್ದಾರೆ. ಬಗ್ಗವಳ್ಳಿ ಎಂಬ ಕುಗ್ರಾಮದ ಸಾಮಾನ್ಯ ಕುಟುಂಬದಲ್ಲಿ ಹುಟ್ಟಿದ ಬಿಎಸ್ ರಾಜು ಅವರು ಇಂದು ರಾಜ್ಯ, ದೇಶವೇ ಹೆಮ್ಮೆ ಪಡುವ ಮಟ್ಟಕ್ಕೆ ಸಾಧನೆ ಮಾಡಿದ್ದಾರೆ. ದೇಶದ ಜನರು ಸೇರಿದಂತೆ ಶತ್ರು ದೇಶಗಳು ಕೂಡ ಬಿಎಸ್ ರಾಜು ಅವರ ಪೂರ್ವಪರ ತಿಳಿಯಲು ಗೂಗಲ್ ಮಾಡುವ ಸಂದರ್ಭ ಬಂದೊದಾಗಿದೆ. ಸದ್ಯ ದೇಶದ ರಕ್ಷಣೆಯನ್ನ ಮತ್ತಷ್ಟು ಬಲಪಡಿಸಲು ಕರುನಾಡಿನ ರಿಯಲ್ ಹೀರೋ ಪಣ ತೊಡಲಿದ್ದಾರೆ.

ವರದಿ: ಪ್ರಶಾಂತ್

ಇದನ್ನೂ ಓದಿ:

SRH vs CSK: ಐಪಿಎಲ್​​ನಲ್ಲಿಂದು ಎರಡು ಪಂದ್ಯ: ಎಸ್​ಆರ್​​ಹೆಚ್-ಸಿಎಸ್​ಕೆ ಪಂದ್ಯದ ಮೇಲೆ ಎಲ್ಲರ ಕಣ್ಣು

Ramadan Eid 2022 Decoration Ideas: ರಂಜಾನ್ ಹಬ್ಬಕ್ಕೆ ನಿಮ್ಮ ಮನೆಯನ್ನು ಮತ್ತಷ್ಟು ಸುಂದರ ಹಾಗೂ ಹಬ್ಬದ ಕಳೆ ತರಿಸಲು ಇಲ್ಲಿದೆ ಐಡಿಯಾ

Published On - 10:22 am, Sun, 1 May 22