SRH vs CSK: ಐಪಿಎಲ್ನಲ್ಲಿಂದು ಎರಡು ಪಂದ್ಯ: ಎಸ್ಆರ್ಹೆಚ್-ಸಿಎಸ್‌ಕೆ ಪಂದ್ಯದ ಮೇಲೆ ಎಲ್ಲರ ಕಣ್ಣು
DC vs LSG, IPL 2022: ಐಪಿಎಲ್ನಲ್ಲಿಂದು ಎರಡು ಪಂದ್ಯ ನಡೆಯಲಿದೆ. ಮೊದಲ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಲಖನೌ ಸೂಪರ್ ಜೇಂಟ್ಸ್ ತಂಡ ಮುಖಾಮುಖಿ ಆಗಲಿದೆ. ಮತ್ತೊಂದು ಪಂದ್ಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಆಯೋಜಿಸಲಾಗಿದ್ದು ಚೆನ್ನೈ ಸೂಪರ್ ಕಿಂಗ್ಸ್ ತಂಡ ಸನ್‌ರೈಸರ್ಸ್ ಹೈದರಾಬಾದ್ ಅನ್ನು ಎದುರಿಸಲಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ 2022 ರಲ್ಲಿಂದು ಎರಡು ರಣ ರೋಚಕ ಕದನ ನಡೆಯಲಿದೆ. ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿರುವ ಮೊದಲ ಪಂದ್ಯದಲ್ಲಿ ರಿಷಭ್ ಪಂತ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಕೆಎಲ್ ರಾಹುಲ್ ನೇತೃತ್ವದ ಲಖನೌ ಸೂಪರ್ ಜೇಂಟ್ಸ್ ತಂಡ (DC vs LSG) ಮುಖಾಮುಖಿ ಆಗಲಿದೆ. ಮತ್ತೊಂದು ಪಂದ್ಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಆಯೋಜಿಸಲಾಗಿದ್ದು ಚೆನ್ನೈ ಸೂಪರ್ ಕಿಂಗ್ಸ್ ತಂಡ ಸನ್‌ರೈಸರ್ಸ್ ಹೈದರಾಬಾದ್ (SRH vs CSK) ಅನ್ನು ಎದುರಿಸಲಿದೆ. ಸಿಎಸ್ಕೆಗೆ ಇದು ಮಹತ್ವದ ಪಂದ್ಯವಾಗಿದೆ. ಅಲ್ಲದೆ ರವೀಂದ್ರ ಜಡೇಜಾ ತಮ್ಮ ನಾಯಕತ್ವವನ್ನು ಪುನಃ ಎಂಎಸ್ ಧೋನಿಗೆ (MS Dhoni) ಹಸ್ತಾಂತರಿಸಿದ್ದು, ಕ್ಯಾಪ್ಟನ್ ಕೂಲ್ ಸಾರಥ್ಯದಲ್ಲಿ ಯಾವರೀತಿ ಪ್ರದರ್ಶನ ನೀಡುತ್ತೆ ಎಂಬುದು ಕುತೂಹಲ ಕೆರಳಿಸಿದೆ. ಇತ್ತ ಪ್ಲೇಆಫ್ ಅವಕಾಶ ವೃದ್ಧಿಸಿಕೊಳ್ಳುವ ದೃಷ್ಟಿಯಿಂದ ಗೆಲುವಿನ ಲಯ ಕಾಯ್ದುಕೊಳ್ಳಲು ಡೆಲ್ಲಿ ಹಾಗೂ ಲಖನೌ ತಂಡಗಳು ಹೋರಾಡಲಿವೆ.
ಡೆಲ್ಲಿ vs ಲಖನೌ:
ಕೆಎಲ್ ರಾಹುಲ್ ಅದ್ಭುತ ಫಾರ್ಮ್ನ ಬಲದಲ್ಲಿರುವ ಲಖನೌ ಇದೇ ಕೂಟದಲ್ಲಿ ಈ ಮೊದಲು ಡೆಲ್ಲಿಯನ್ನು ಮಣಿಸಿತ್ತು. ಹೀಗಾಗಿ ಅದೇ ಪ್ರದರ್ಶನ ಮುಂದುವರಿಸಿಕೊಂಡು ಹೋಗುವ ವಿಶ್ವಾಸದಲ್ಲಿದೆ. ಪಂಜಾಬ್ ವಿರುದ್ಧದ ಗೆಲುವಿನ ಬಳಿಕ ತಂಡದಲ್ಲಿ ಬದಲಾವಣೆಯ ನಿರೀಕ್ಷೆ ಇಲ್ಲ. ಆದರೂ ಬ್ಯಾಟಿಂಗ್ ನಿರ್ವಹಣೆ ಸುಧಾರಣೆ ದೃಷ್ಟಿಯಿಂದ ಬ್ಯಾಟರ್‌ಗಳ ಕ್ರಮಾಂಕ ಬದಲಾವಣೆ ಕಂಡರೆ ಅಚ್ಚರಿ ಇಲ್ಲ. ಇತ್ತ ಡೆಲ್ಲಿ ಕಳೆದ ಪಂದ್ಯದಲ್ಲಿ ಗೆದ್ದು ಕೊಂಚ ಚೇತರಿಕೆ ಕಂಡಿದ್ದು, ಹಳೆಯ ಸೋಲಿಗೆ ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ. ಒಂದು ವೇಳೆ ಡೆಲ್ಲಿ ಇಂದು ಗೆದ್ದರೆ ಮತ್ತೆ ಅಗ್ರ ನಾಲ್ಕರೊಳಗೆ ಸ್ಥಾನ ಪಡೆಯಲು ಪೈಪೋಟಿ ನಡೆಸಲಿದೆ. ಚೇಸಿಂಗ್‌ನಲ್ಲಿ ಎಡವಿರುವುದು ಡೆಲ್ಲಿಗೆ ಹಿನ್ನಡೆ ತಂದಿದೆ. ಆಲ್ರೌಂಡರ್ ಮಿಚೆಲ್ ಮಾರ್ಷ್ ನಿರೀಕ್ಷಿತ ನಿರ್ವಹಣೆ ತೋರದಿರುವುದು ಕೂಡ ಪಂತ್ ಪಡೆಯನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಸ್ಪಿನ್ನರ್ ಕುಲದೀಪ್ ಯಾದವ್ ಪ್ರಮುಖ ಅಸ್ತ್ರವಾಗಿದ್ದಾರೆ. ಇತ್ತ ಕೆಕೆಆರ್ ಎದುರು ಗೆದ್ದ ಹೊರತಾಗಿಯೂ ಲಖನೌದಲ್ಲಿ ಕೆಲ ಬದಲಾವಣೆ ನಿರೀಕ್ಷೆ ಇದೆ. ಬ್ಯಾಟಿಂಗ್‌ನಲ್ಲಿ ಉಪಯುಕ್ತ ಕೊಡುಗೆ ನೀಡದಿರುವ ಲಲಿತ್ ಯಾದವ್ ಬದಲು ಸ್ಥಾನ ಪಡೆಯಬಹುದು.
Faf Duplessis: ಹ್ಯಾಟ್ರಿಕ್ ಸೋಲು: ಪಂದ್ಯ ಮುಗಿದ ಬಳಿಕ ಆರ್ಸಿಬಿ ನಾಯಕ ಡುಪ್ಲೆಸಿಸ್ ಆಡಿದ ಮಾತುಗಳೇನು ನೋಡಿ
ಎಸ್ಆರ್ಹೆಚ್ vs ಸಿಎಸ್‌ಕೆ:
ಟೂರ್ನಿಯ ಇತಿಹಾಸದಲ್ಲಿ ಸಿಎಸ್‌ಕೆ ತಂಡವೇ ಪ್ರಭುತ್ವ ಹೊಂದಿದ್ದರೂ ಸದ್ಯದ ಸ್ಥಿತಿಯಲ್ಲಿ ಸನ್‌ರೈಸರ್ಸ್ ತಂಡವೇ ಉತ್ತಮ ಫಾರ್ಮ್‌ನಲ್ಲಿದೆ. ಇಲ್ಲಿ ಚೆನ್ನೈ ಸೋತರೆ ಅದು ಟೂರ್ನಿಯಿಂದ ತನ್ನ ನಿರ್ಗಮನವನ್ನು ಬಹುತೇಕ ಖಚಿತಗೊಳಿಸಲಿದೆ. ಇನ್ನೊಂದೆಡೆ ಕೇನ್ ವಿಲಿಯಮ್ಸನ್ ಪಡೆಯ ಟಾಪ್-4 ಸ್ಥಾನ ಇನ್ನಷ್ಟು ಗಟ್ಟಿಯಾಗಲಿದೆ. ಫಲಿತಾಂಶವೇನಾದರೂ ಉಲ್ಟಾ ಹೊಡೆದರೆ ಧೋನಿ ಟೀಮ್‌ಗೆ ಒಂದು ಲೈಫ್‌ಲೈನ್ ಲಭಿಸಿದಂತಾಗುತ್ತದೆ. ಹೈದರಾಬಾದ್‌ಗೆ ಹೇಳಿಕೊಳ್ಳುವಂಥ ಹಿನ್ನಡೆಯೇನೂ ಆಗುವುದಿಲ್ಲ. ಬಲಿಷ್ಠ ಬೌಲಿಂಗ್ ಪಡೆ ಹೊಂದಿರುವ ಹೈದರಾಬಾದ್ ತಂಡಕ್ಕೆ ಬ್ಯಾಟರ್‌ಗಳಿಂದ ಮತ್ತಷ್ಟು ಬೆಂಬಲದ ಅವಶ್ಯಕತೆಯಿದೆ. ಅನುಭವಿ ವೇಗಿ ಭುವನೇಶ್ವರ್ ಕುಮಾರ್ ಮತ್ತಷ್ಟು ಚುರುಕಾಗಬೇಕಿದ್ದು, ಮಾರ್ಕೋ ಜಾನ್ಸೆನ್, ಉಮ್ರಾನ್ ಮಲಿಕ್, ಟಿ.ನಟರಾಜನ್ ತಂಡಕ್ಕೆ ಆಸರೆಯಾಗುತ್ತಿದ್ದಾರೆ. ಕಳೆದ ಪಂದ್ಯದಲ್ಲಿ 22 ರನ್ ಬಿಟ್ಟುಕೊಟ್ಟಿದ್ದ ಜಾನ್ಸೆನ್ ಮತ್ತೊಂದು ಅವಕಾಶದ ನಿರೀಕ್ಷೆಯಲ್ಲಿದ್ದಾರೆ. ನಾಯಕ ಕೇನ್ ವಿಲಿಯಮ್ಸನ್, ಅಭಿಷೇಕ್ ಶರ್ಮ, ಏಡನ್ ಮಾರ್ಕ್ರಮ್, ರಾಹುಲ್ ತ್ರಿಪಾಠಿ ಹಾಗೂ ನಿಕೋಲಸ್ ಪೂರನ್ ಮತ್ತಷ್ಟು ಜವಾಬ್ದಾರಿಯುತವಾಗಿ ಬ್ಯಾಟ್ ಬೀಸಬೇಕಿದೆ.
ಇತ್ತ ಸಿಎಸ್‌ಕೆ ತಂಡ ಯಾರ ಮೇಲೆ ವಿಶ್ವಾಸವಿರಿಸಿತ್ತೋ ಅವರ್ಯಾರೂ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ನೀಡುತ್ತಿಲ್ಲ. ಗಾಯಕ್ವಾಡ್, ಉತ್ತಪ್ಪ, ಮೊಯಿನ್ ಅಲಿ, ಶಿವಂ ದುಬೆ, ಬ್ರಾವೊ, ಜಡೇಜ, ಸ್ಯಾಂಟ್ನರ್, ಜೋರ್ಡನ್ ಪ್ರಿಟೋರಿಯಸ್ ಎಲ್ಲರೂ ತಮ್ಮ ಜವಾಬ್ದಾರಿಯನ್ನು ಮರೆತಂತೆ ಆಡುತ್ತಿದ್ದಾರೆ. ಸಿಕ್ಕ ಅವಕಾಶಗಳನ್ನು ಸೂಕ್ತವಾಗಿ ಬಳಸಿಕೊಳ್ಳಲು ವಿಫಲವಾಗಿರುವ ಮಿಚೆಲ್ ಸ್ಯಾಂಟ್ನರ್ ಬದಲಿಗೆ ಮೊಯಿನ್ ಅಲಿ ಮತ್ತೆ ತಂಡ ಸೇರಿಕೊಂಡರೆ ಅಚ್ಚರಿ ಪಡಬೇಕಿಲ್ಲ.
ಕ್ರೀಡಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ