GT vs RCB: ಗುಜರಾತ್ ವಿರುದ್ಧ ಆರ್‌ಸಿಬಿ ಸೋಲಲು ಕಾರಣವಾಯಿತೆ ಆ ಒಂದು ನಿರ್ಧಾರ?
Royal Challengers Bangalore, IPL 2022: ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಟಾಸ್ ಗೆದ್ದ ಆರ್‌ಸಿಬಿ ನಾಯಕ ಫಾಫ್ ಡುಪ್ಲೆಸಿಸ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಐಪಿಎಲ್ 2022 ರಲ್ಲಿ ಟಾಸ್ ಗೆದ್ದ ತಂಡ ಮೊದಲು ಬ್ಯಾಟಿಂಗ್ ಮಾಡಿದ್ದು ಇದು ಎರಡನೇ ಬಾರಿಯಷ್ಟೆ. ಆರ್‌ಸಿಬಿ ಇಲ್ಲೇ ಎಡವಿತು ಎಂಬುದು ಅನೇಕರ ವಾದ.
ಇಂಡಿಯನ್ ಪ್ರೀಮಿಯರ್ ಲೀಗ್ 2022 ರಲ್ಲೂ (IPL 2022) ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡದ ನೀರಸ ಪ್ರದರ್ಶನ ಮುಂದುವರೆದಿದೆ. ಹಿಂದಿನ ಸೀಸನ್ನಂತೆ ಈ ಬಾರಿ ಕೂಡ ಆರ್‌ಸಿಬಿ ತಂಡದ್ದು ಅದೇ ತಪ್ಪು. ಬ್ಯಾಟ್ಸ್ಮನ್ಗಳು ರನ್ ಗಳಿಸಿದರೆ ಬೌಲರ್ಗಳು ಕೂಡ ರನ್ ನೀಡುತ್ತಿದ್ದಾರೆ. ಬೌಲರ್ಗಳು ಅದ್ಭುತ ಪ್ರದರ್ಶನ ತೋರಿದರೆ ಬ್ಯಾಟ್ಸ್ಮನ್ಗಳು ವೈಫಲ್ಯ ಅನುಭವಿಸುತ್ತಿದ್ದಾರೆ. ಐಪಿಎಲ್ 2022ರ 43ನೇ ಪಂದ್ಯದಲ್ಲೂ ನಡೆದಿದ್ದು ಇದೆ. ಗುಜರಾತ್ ಟೈಟಾನ್ಸ್ ವಿರುದ್ಧ ಬೆಂಗಳೂರು (GT vs RCB) ಉತ್ತಮ ಮೊತ್ತ ಕಲೆಹಾಕಿದರೂ ಎದುರಾಳಿಗರನ್ನು ತಡೆದು ಹಾಕುವಲ್ಲಿ ಎಡವಿತು. ಕೊನೆಯ ಹಂತದಲ್ಲಿ ಫಾಫ್ ಪಡೆಯ ಬೌಲರ್ಗಳು ದುಬಾರಿಯಾದರು. ಇದರಿಂದ ಆರ್‌ಸಿಬಿ ಆಡಿದ 10 ಪಂದ್ಯಗಳ ಪೈಕಿ ತಲಾ ಐದರಲ್ಲಿ ಸೋಲು-ಗೆಲುವು ಕಂಡು ಐದನೇ ಸ್ಥಾನದಲ್ಲಿದ್ದು ಪ್ಲೇ ಆಫ್ ಹಾದಿಯನ್ನ ಮತ್ತಷ್ಟು ಕಠಿಣ ಮಾಡಿಕೊಂಡಿದೆ. ಬೆಂಗಳೂರಿಗೆ ಉಳಿದಿರುವುದು 4 ಪಂದ್ಯ. ಈ 4 ರಲ್ಲೂ ಗೆದ್ದರೆ ಪ್ಲೇಆಫ್ ಖಚಿತವಾಗಲಿದೆ. ಮೂರು ಅಥವಾ ಎರಡು ಗೆದ್ದರೆ ಇತರೆ ತಂಡಗಳ ಸೋಲು-ಗೆಲುವಿನ ಮೇಲೆ ಆರ್‌ಸಿಬಿ ಭವಿಷ್ಯ ನಿರ್ಧಾರವಾಗಲಿದೆ.
ನಿನ್ನೆಯ ಪಂದ್ಯದಲ್ಲಿ ಟಾಸ್ ಗೆದ್ದ ಆರ್‌ಸಿಬಿ ನಾಯಕ ಫಾಫ್ ಡುಪ್ಲೆಸಿಸ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಐಪಿಎಲ್ 2022 ರಲ್ಲಿ ಟಾಸ್ ಗೆದ್ದ ತಂಡ ಮೊದಲು ಬ್ಯಾಟಿಂಗ್ ಮಾಡಿದ್ದು ಇದು ಎರಡನೇ ಬಾರಿಯಷ್ಟೆ. ಆರ್‌ಸಿಬಿ ಇಲ್ಲೇ ಎಡವಿತು ಎಂಬುದು ಅನೇಕರ ವಾದ. ತಂಡದ ಸೋಲಿಗೆ ಇದುವೇ ಪ್ರಮುಖ ಕಾರಣ ಎಂಬುದು ಅನೇಕರ ಮಾತು. ಯಾಕೆಂದರೆ ಆರ್ಸಿಬಿಗಿಂತ ಉತ್ತಮ ಫಿನಿಶರ್ಗಳು ಗುಜರಾತ್ ತಂಡದಲ್ಲಿದ್ದಾರೆ. ಹೀಗಾಗಿ ಬ್ಯಾಟಿಂಗ್ ಆಯ್ಕೆ ಮಾಡುವುದು ಬಿಟ್ಟು ಬೌಲಿಂಗ್ ತೆಗೆದುಕೊಂಡಿದ್ದರೆ ಪಂದ್ಯ ಫಲಿತಾಂಶ ಬೇರೆ ಆಗಿರುತ್ತಿತ್ತು ಎಂದು ಹೇಳುತ್ತಿದ್ದಾರೆ.
IPL 2022: ರವೀಂದ್ರ ಜಡೇಜಾ ನಾಯಕತ್ವ ತೊರೆಯಲು ಇದುವೇ ಕಾರಣ
ಆರ್‌ಸಿಬಿ ಪರ ಮೊದಲು ಬ್ಯಾಟಿಂಗ್ ಇಳಿದ ನಾಯಕ ಫಾಫ್ ಡುಪ್ಲೆಸಿಸ್ ಶೂನ್ಯಕ್ಕೆ ಔಟಾಗುವ ಮೂಲಕ ಭಾರೀ ನಿರಾಸೆ ಮೂಡಿಸಿದರು. ಆದರೆ ಮಾಜಿ ನಾಯಕ ವಿರಾಟ್ ಕೊಹ್ಲಿ ಫಾರ್ಮ್‌ಗೆ ಮರಳಿದ್ದು ಪ್ರಸಕ್ತ ಸೀಸನ್‌ನಲ್ಲಿ ಮೊದಲ ಅರ್ಧಶತಕ ದಾಖಲಿಸಿ ತಂಡಕ್ಕೆ ಆಸರೆಯಾದರು. ರಜತ್ ಪಾಟಿದಾರ್ ಜೊತೆಗೆ ಬೊಂಬಾಟ್ ಇನ್ನಿಂಗ್ಸ್ ಆಡಿದ ಕೊಹ್ಲಿ ಬೌಂಡರಿಗಳನ್ನ ಕಲೆಹಾಕುತ್ತಾ ಅರ್ಧಶತಕದ ಗಡಿದಾಟಿದರು. 53 ಎಸೆತಗಳಲ್ಲಿ 58 ರನ್ ಕಲೆಹಾಕಿದ ಕೊಹ್ಲಿ ಇನ್ನಿಂಗ್ಸ್‌ನಲ್ಲಿ 6 ಬೌಂಡರಿ ಮತ್ತು 1 ಅಮೋಘ ಸಿಕ್ಸರ್ ಇತ್ತು. ವಿರಾಟ್ ಜೊತೆಗೆ ಆರ್‌ಸಿಬಿ ಪರ ಬ್ಯಾಟಿಂಗ್ ಬಡ್ತಿ ಪಡೆದು ಕಣಕ್ಕಿಳಿದ ರಜತ್ ಪಾಟೀದಾರ್ ಅಬ್ಬರದ ಆಟವಾಡಿದರು. 32 ಎಸೆತಗಳಲ್ಲಿ 52 ರನ್ ಕಲೆಹಾಕಿ ಐಪಿಎಲ್‌ನಲ್ಲಿ ಚೊಚ್ಚಲ ಅರ್ಧಶತಕ ದಾಖಲಿಸಿದರು.
ಮ್ಯಾಕ್ಸ್‌ವೆಲ್ 18 ಎಸೆತಗಳಲ್ಲಿ 33ರನ್ ಚಚ್ಚಿದರೆ ಕಾರ್ತಿಕ್ ಕೇವಲ 2ರನ್‌ಗೆ ಔಟಾದರು. ಮಹಿಪಾಲ್ ಲೊಮ್ರಾರ್ ಉತ್ತಮ ರನ್ ಕಾಣಿಕೆ ನೀಡಿದರು. 8 ಎಸೆತಗಳಲ್ಲಿ 16 ರನ್ ಸಿಡಿಸಿದರು. ಆರ್‌ಸಿಬಿ ಆರು ವಿಕೆಟ್ ಕಳೆದುಕೊಂಡರು ಗುಜರಾತ್‌ಗೆ 171 ರನ್ ಟಾರ್ಗೆಟ್ ನೀಡಿತು. ಗುರಿ ಬೆನ್ನಟ್ಟಿದ ಗುಜರಾತ್ ತಂಡಕ್ಕೆ ವೃದ್ಧಿಮಾನ್ ಸಹಾ (29) ಹಾಗೂ ಶುಭ್ಮನ್ ಗಿಲ್ (31) ಉತ್ತಮ ಆರಂಭವೊದಗಿಸಿದರು. ಇವರಿಬ್ಬರು ಮೊದಲ ವಿಕೆಟ್‌ಗೆ 51 ರನ್ ಪೇರಿಸಿದರು. ನಾಯಕ ಹಾರ್ದಿಕ್ ಪಾಂಡ್ಯ (3) ಹಾಗೂ ಸಾಯಿ ಸುದರ್ಶನ್ (20) ಹೆಚ್ಚುಹೊತ್ತು ಕ್ರೀಸ್ನಲ್ಲಿ ನಿಲ್ಲಿಲ್ಲ. ಪರಿಣಾಮ 95ಕ್ಕೆ ನಾಲ್ಕು ವಿಕೆಟ್ ಕಳೆದುಕೊಂಡ ಗುಜರಾತ್ ಸಂಕಷ್ಟಕ್ಕೊಳಗಾಯಿತು.
ಈ ವೇಳೆ ಜೊತೆಗೂಡಿದ ಡೇವಿಡ್ ಮಿಲ್ಲರ್ ಹಾಗೂ ರಾಹುಲ್ ತೆವಾಟಿಯಾ ಅಮೂಲ್ಯ ಜೊತೆಯಾಟದಲ್ಲಿ ಭಾಗಿಯಾದರು. ನಿರ್ಭಿತಿಯಿಂದ ಬ್ಯಾಟ್ ಬೀಸಿದ ಈ ಜೋಡಿ ಆರ್‌ಸಿಬಿ ಬೌಲರ್‌ಗಳನ್ನು ದಂಡಿಸಿದರು. ನಿಧಾನವಾಗಿ ಪಂದ್ಯದಲ್ಲಿ ಆರ್‌ಸಿಬಿ ಹಿಡಿತವನ್ನು ಕಳೆದುಕೊಂಡಿತು. ಮುರಿಯದ ಐದನೇ ವಿಕೆಟ್‌ಗೆ 79 ರನ್‌ಗಳ ಜೊತೆಯಾಟ ಕಟ್ಟಿದ ಮಿಲ್ಲರ್ ಹಾಗೂ ತೆವಾಟಿಯಾ ತಂಡವನ್ನು ಗೆಲುವಿನ ದಡ ಸೇರಿಸಿದರು. 25 ಎಸೆತಗಳನ್ನು ಎದುರಿಸಿದ ತೆವಾಟಿಯಾ 5 ಬೌಂಡರಿ ಹಾಗೂ 2ಸಿಕ್ಸರ್ ನೆರವಿನಿಂದ ಅಜೇಯ 43 ರನ್ ಗಳಿಸಿದರೆ 24 ಎಸೆತಗಳನ್ನು ಎದುರಿಸಿದ ಮಿಲ್ಲರ್ 4 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ ಅಜೇಯ 39 ರನ್ ಸಿಡಿಸಿದರು.
ಕ್ರೀಡಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:53 am, Sun, 1 May 22