ಚಿಕ್ಕಮಗಳೂರು: ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಚಿಕ್ಕಮಗಳೂರುಗಳನ್ನ ಸಂಪರ್ಕಿಸುವ ಪ್ರಮುಖ ಕೊಂಡಿ ಅಂದ್ರೆ ಚಾರ್ಮಡಿ ಘಾಟ್. ಆದ್ರೆ ಈ ಬಾರಿ ಸುರಿದ ರಣಭೀಕರ ಮಳೆಗೆ ಶತ ಶತಮಾನಗಳಿಂದಲೂ ಗಟ್ಟಿಮುಟ್ಟಾಗಿದ್ದ ಇಲ್ಲಿನ ರಸ್ತೆ ಅಲ್ಲೋಲ ಕಲ್ಲೋಲ ಆಗಿತ್ತು. ಚಾರ್ಮಾಡಿ ಘಾಟ್ ರಸ್ತೆಯ ಹಲವೆಡೆ ಗುಡ್ಡಗಳು ಕುಸಿದಿತ್ತು. ಅನೇಕ ಕಡೆ ರಸ್ತೆಯ ಅರ್ಧಭಾಗವೇ ಕೊಚ್ಚಿ ಹೋಗಿತ್ತು.
ಹೀಗಾಗಿ ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಮೊದಲ ಒಂದು ತಿಂಗಳು ಸಂಚಾರಕ್ಕೆ ಸಂಪೂರ್ಣ ನಿಷೇಧ ಹೇರಲಾಗಿತ್ತು. ಆ ಬಳಿಕ ಬೆಳಗ್ಗೆ 6ರಿಂದ ಸಂಜೆ 6ವರೆಗೆ ಮಾತ್ರ ಲಘು ವಾಹನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಇದೀಗ ಬರೋಬ್ಬರಿ ಮೂರುವರೆ ತಿಂಗಳುಗಳ ಬಳಿಕ ಲಘು ವಾಹನಗಳಿಗೆ ರಸ್ತೆ ಸಂಚಾರವನ್ನ ಸಂಪೂರ್ಣ ಮುಕ್ತಗೊಳಿಸಲಾಗಿದೆ.
ರಸ್ತೆ ಸಂಚಾರ ಬಂದ್ ಆಗಿದ್ದರಿಂದ ಜನಸಾಮಾನ್ಯರು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಸದ್ಯ ಲಘುವಾಹನಗಳ ಓಡಾಟಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿರೋದ್ರಿಂದ ಪ್ರಯಾಣಿಕರು, ವಾಹನ ಸವಾರರು ಸೇರಿದಂತೆ ಈ ಭಾಗದ ವ್ಯಾಪಾರಸ್ಥರು ಫುಲ್ ಖುಷ್ ಆಗಿದ್ದಾರೆ. ಆದ್ರೆ ತಕ್ಕಮಟ್ಟಿನ ದುರಸ್ತಿ ಕೆಲಸ ಮುಗಿದಿದ್ರೂ ಕೂಡ ರಸ್ತೆ ಕೊಚ್ಚಿ ಹೋಗಿರೋ ಬಹುತೇಕ ಕಡೆಗಳಲ್ಲಿ ಶಾಶ್ವತ ಕಾಮಗಾರಿ ನಡೆದಿಲ್ಲ, ಇದು ಅಪಾಯಕ್ಕೆ ಆಹ್ವಾನ ನೀಡಿದಂತಾಗಿದೆ.