ಚಿಕ್ಕಮಗಳೂರಿನಲ್ಲಿ ದಲಿತನ ಮೇಲೆ ಹಲ್ಲೆ: ನಾಲ್ವರ ಬಂಧನ

| Updated By: ವಿವೇಕ ಬಿರಾದಾರ

Updated on: Jan 05, 2024 | 11:58 AM

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಗೇರಮರಡಿ ಗ್ರಾಮದ ಗೊಲ್ಲರ ಬೀದಿಗೆ ಬಂದಿದ್ದ ದಲಿತ ಯುವಕನ ಮೇಲೆ ಹಲ್ಲೆ ಮಾಡಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. 11 ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಪ್ರಕರಣ ಸಂಬಂಧ ದಲಿತ ಸಂಘಟನೆ ಕಾರ್ಯಕರ್ತರು ಊರಿನ ತುಂಬಾ ಮೆರವಣಿಗೆ ನಡೆಸಿದ್ದರು.

ಚಿಕ್ಕಮಗಳೂರಿನಲ್ಲಿ ದಲಿತನ ಮೇಲೆ ಹಲ್ಲೆ: ನಾಲ್ವರ ಬಂಧನ
ಬಂಧಿತ ಆರೋಪಿಗಳು
Follow us on

ಚಿಕ್ಕಮಗಳೂರು, ಜನವರಿ 05: ಗೊಲ್ಲರ ಬೀದಿಗೆ ಕೆಲಸಕ್ಕೆ ತೆರಳಿದ್ದ ದಲಿತ ಯುವಕನ (Dalit Youth) ಮೇಲೆ ಹಲ್ಲೆ ಮಾಡಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು (Police) ಬಂಧಿಸಿದ್ದಾರೆ. ಶಿವರಾಮ್, ರಾಜಪ್ಪ, ಶಂಕರ್, ತಮ್ಮಯ್ಯ ಬಂಧಿತ ಆರೋಪಿಗಳು. ತಲೆಮರೆಸಿಕೊಂಡ 11ಜನರ ಬಂಧನಕ್ಕೆ ಡಿವೈಎಸ್​ಪಿ ನೇತೃತ್ವದಲ್ಲಿ ತಂಡ ರಚಿಸಲಾಗಿದೆ.

ಜನವರಿ 1 ರಂದು ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಗೇರಮರಡಿ ಗ್ರಾಮದ ಗೊಲ್ಲರ ಬೀದಿಗೆ ದಲಿತ ಯುವಕ ಮಾರುತಿ ಜೆಸಿಬಿ ಜೊತೆ ಕೆಲಸಕ್ಕೆ ಬಂದಿದ್ದನು. ಮಾರುತಿ ದಲಿತ ಯುವಕ ಎಂದು ತಿಳಿಯುತ್ತಿದ್ದಂತೆ ಗೊಲ್ಲರ ಬೀದಿ ನಿವಾಸಿಗಳು ಆತನ ಮೇಲೆ ಹಲ್ಲೆ ನಡೆಸಿದ್ದರು. ಹಲ್ಲದೆ ಆತನ ಬಳಿ‌ ಇದ್ದ 20 ಸಾವಿರ ಹಣವನ್ನ ದಂಡವಾಗಿ ಕಟ್ಟಿಸಿಕೊಂಡಿದ್ದರು. ಹಲ್ಲೆಗೊಳಗಾದ ಯುವಕನಿಗೆ ತರೀಕೆರೆ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಪ್ರಕರಣ ಸಂಬಂಧ ಜನವರಿ 2ರಂದು ತರೀಕೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. 15ಜನರ ವಿರುದ್ಧ ಎಫ್​ಐಆರ್​ ದಾಖಲಾಗಿತ್ತು. ದೂರು ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸಿದ್ದು, ನಾಲ್ವರನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: ಬೈಕ್​ನಲ್ಲಿ ಹೊರಟಿದ್ದ ದಲಿತ ಯುವಕರನ್ನು ತಡೆದು, ಥಳಿಸಿ, ಮೊಬೈಲ್, ಹಣ ಕಸಿದುಕೊಂಡು, ಮೂತ್ರ ವಿಸರ್ಜನೆ ಮಾಡಿದ ದುಷ್ಕರ್ಮಿಗಳು

ದಲಿತರ ಪ್ರತಿಭಟನೆ ತೀವ್ರ, ಉದ್ವಿಗ್ನ ಪರಿಸ್ಥಿತಿ

ಪ್ರಕರಣ ಸಂಬಂಧ ದಲಿತ ಸಂಘಟನೆ ಕಾರ್ಯಕರ್ತರು ಊರಿನ ತುಂಬಾ ಮೆರವಣಿಗೆ ನಡೆಸಿದ್ದರು. ಗೊಲ್ಲರಹಟ್ಟಿ ತುಂಬಾ ಓಡಾಡಿದ ದಲಿತ ಯುವಕರು ಬಳಿಕ ದೇವಸ್ಥಾನಕ್ಕೆ ಹೋಗಲೇಬೇಕು ಎಂದು ದಲಿತ ಯುವಕರು ಪಟ್ಟು ಹಿಡಿದಿದ್ದಲ್ಲದೆ, ಒಳ ಪ್ರವೇಶಿಸಲು ಮುಂದಾಗಿದ್ದರು. ಆದರೆ, ದೇವಸ್ಥಾನ ಪ್ರವೇಶಕ್ಕೆ ದಲಿತರಿಂದಲೇ ವಿರೋಧ ವ್ಯಕ್ತವಾಗಿತ್ತು. ಬಾಗಿಲು ಹಾಕಿದೆ ಬೇಡ, ಇನ್ನೊಮ್ಮೆ ಬರೋಣ ಎಂದು ಕೆಲವರು ಮನವಿ ಮಾಡಿದ್ದರು. ಆದಾಗ್ಯೂ ಕೆಲ ದಲಿತ ಯುವಕರು ದೇವಸ್ಥಾನಕ್ಕೆ ಹೋಗಲೇ ಬೇಕು ಅಂತ ಪಟ್ಟು ಹಿಡಿದ್ದರು. ಬಳಿಕ ತಹಶೀಲ್ದಾರ್, ಪೊಲೀಸರ ಮಧ್ಯ ಪ್ರವೇಶದಿಂದ ವಾತಾವರಣ ತಿಳಿಯಾಗಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 11:58 am, Fri, 5 January 24