ಪ್ರೇಯಸಿಗೆ ಕೈಕೊಟ್ಟು ಮತ್ತೊಬ್ಬಳ ಜತೆ ಕದ್ದುಮುಚ್ಚಿ ಮದ್ವೆ: ಪ್ರಿಯಕರನ್ನ ಜೈಲಿಗಟ್ಟಿದ ಯುವತಿ

10 ವರ್ಷ ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ, ಬಳಿಕ ಬೇರೊಬ್ಬಳನ್ನು ಮದುವೆಯಾಗಿದ್ದ ಯುವಕನನ್ನು ಜೈಲಿಗಟ್ಟುವ ಮೂಲಕ ಯುವತಿ ಯಶಸ್ವಿಯಾಗಿದ್ದಾಳೆ. ಆ ಮೂಲಕ ಯುವತಿಯ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದೆ. ಚಿಕ್ಕಮಗಳೂರಿನಲ್ಲಿ ಘಟನೆ ನಡೆದಿದೆ. ಮದುವೆಯ ವಿಷಯ ತಿಳಿದಿದ್ದ ಯುವತಿ ಕಲ್ಯಾಣ ಮಂಟಪಕ್ಕೆ ತೆರಳಲಿ ರಂಪಾಟ ಮಾಡಿದ್ದರು.

ಪ್ರೇಯಸಿಗೆ ಕೈಕೊಟ್ಟು ಮತ್ತೊಬ್ಬಳ ಜತೆ ಕದ್ದುಮುಚ್ಚಿ ಮದ್ವೆ: ಪ್ರಿಯಕರನ್ನ ಜೈಲಿಗಟ್ಟಿದ ಯುವತಿ
ಶರತ್, ನೊಂದ ಯುವತಿ
Edited By:

Updated on: Dec 23, 2025 | 10:40 PM

ಚಿಕ್ಕಮಗಳೂರು, ಡಿಸೆಂಬರ್​​ 23: ಅವರಿಬ್ಬರೂ 10 ವರ್ಷಗಳಿಂದ ಪ್ರೀತಿಸುತ್ತಿದ್ದರು (Love). ಮದುವೆಯಾಗುವುದಾಗಿ ನಂಬಿಸಿದ್ದ ಯುವಕ ಬಳಿಕ ಪ್ರೇಯಸಿಗೆ ಕೈ ಕೊಟ್ಟು ಮತ್ತೊಬ್ಬಳ ಜೊತೆ ಮದುವೆಯಾಗಿದ್ದ. ಬೇರೆಯವರನ್ನ ಮದುವೆಯಾಗುತ್ತಿದ್ದಂತೆ ಇತ್ತ ಪ್ರೇಯಸಿ ಹುಡುಗನ ಮನೆ, ಕಲ್ಯಾಣ ಮಂಟಪಕ್ಕೆ ಹೋಗಿ ನನ್ನನ್ನು ಮದುವೆಯಾಗುವಂತೆ ಪಟ್ಟು ಹಿಡಿದು ರಂಪಾಟ ಮಾಡಿರುವಂತಹ ಘಟನೆ ಚಿಕ್ಕಮಗಳೂರಿನ (Chikkamagaluru) ದೊಡ್ಡೇಗೌಡ ಕಲ್ಯಾಣ ಮಂಟಪದಲ್ಲಿ ನಡೆದಿದೆ. ಕಾನೂನು ಹೋರಾಟದ ಶಪತ ಮಾಡಿದ್ದ ನೊಂದ ಯುವತಿ, ಮೋಸ ಮಾಡಿದ್ದ ಲವರ್​​ನನ್ನು ಜೈಲಿಗೆ ಕಳುಹಿಸಿದ್ದಾರೆ.

ಚಿಕ್ಕಮಗಳೂರು ನಗರದ ಕಲ್ಯಾಣ ನಗರದ ನಿವಾಸಿ ಶರತ್​​​ ಮತ್ತು ಬೇಲೂರು ಮೂಲದ ಅಶ್ವಿನಿ ಇಬ್ಬರು ಕಳೆದ ಹತ್ತು ವರ್ಷಗಳಿಂದ ಪ್ರೀತಿಸುತ್ತಿದ್ದರು. ನಿನ್ನನ್ನೇ ಮದುವೆ ಮಾಡಿಕೊಳ್ಳುತ್ತೇನೆ ಎಂದು ಶರತ್​ ಭರವಸೆ ಕೂಡ ಕೊಟ್ಟಿದ್ದ. ಅಷ್ಟೇ ಅಲ್ಲದೆ ಅಶ್ವಿನಿಗೆ ಬಂದಿದ್ದ ಐದಾರು ಒಳ್ಳೆಯ ಸಂಬಂಧಗಳನ್ನು ಸಹ ತಪ್ಪಿಸಿದ್ದ. ಆದರೆ ಅಶ್ವಿನಿಗೆ ಗೊತ್ತಾಗದಂತೆ ಗುಪ್ತವಾಗಿ ಬೇರೊಬ್ಬ ಯುವತಿಯ ಜೊತೆ ಹಸೆಮಣೆ ಏರಲು ಸಿದ್ಧನಾಗಿದ್ದ.

ಇದನ್ನೂ ಓದಿ: ಮರ್ಯಾದೆ ಹತ್ಯೆ: ಮಾನ್ಯಾ ಜತೆ ಮಗುನೂ ಹೋಯ್ತು, ಪ್ರಾಣಕ್ಕಿಂತ ಹೆಚ್ಚು ಇಷ್ಟಪಡುವ ಅಮ್ಮನೂ ಸೀರಿಯಸ್

ಇತ್ತ ಶರತ್ ನನಗೆ ಕೈಕೊಟ್ಟು ಬೇರೆಯವಳನ್ನ ಮದುವೆಯಾಗುತ್ತಾನೆ ಅನ್ನೋದು ಗೊತ್ತಾಗ್ತಿದ್ದಂತೆ ಕಲ್ಯಾಣ ಮಂಟಪಕ್ಕೆ ಹೋಗಿ ಮದುವೆ ದಿನವೇ ಅಶ್ವಿನಿ ನ್ಯಾಯ ಕೇಳಿ ರಂಪಾಟ ಮಾಡಿದ್ದಾರೆ. ಆದರೆ ಅಷ್ಟರಲ್ಲಿ ಶರತ್ ಬೇರೆ ಹುಡುಗಿಯೊಂದಿಗೆ ಮದುವೆಯಾಗಿ ಹೋಗಿತ್ತು. ಈ ಸಂದರ್ಭದಲ್ಲಿ ಮಹಿಳಾ ಆಯೋಗ ಸೇರಿದಂತೆ ಕಾನೂನು ಹೋರಾಟದ ಶಪಥ ಮಾಡಿದ್ದ ಅಶ್ವಿನಿ, ಇದೀಗ ತನಗೆ ಮೋಸ ಮಾಡಿದ ಶರತ್​​ನನ್ನ ಜೈಲಿಗೆ ಕಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮನಸೋ ಇಚ್ಛೆ ಹಲ್ಲೆ: ದೂರು ದಾಖಲು

ತನಗೆ ಮೋಸ ಮಾಡಿ ಬೇರೊಬ್ಬ ಯುವತಿಯ ಜೊತೆ ಮದುವೆಯಾದ ಶರತ್ ವಿರುದ್ಧ ಅಶ್ವಿನಿ ಚಿಕಮಗಳೂರಿನ ಡಿಸಿಆರ್​ಇ ಠಾಣೆಯಲ್ಲಿ ದೂರು ನೀಡಿದ್ದರು. ನನನ್ನು ಮದುವೆಯಾಗುವುದಾಗಿ ಮೋಸ ಮಾಡಿ ಬೇರೊಬ್ಬ ಯುವತಿಯ ಜೊತೆ ಮದುವೆಯಾಗಿದ್ದು, ಅಷ್ಟೇ ಅಲ್ಲದೆ ಮದುವೆಯ ದಿನ ಕಲ್ಯಾಣಮಂಟಪದಲ್ಲಿ ನನ್ನ ಮೇಲೆ ಹಲ್ಲೆ ಮಾಡಲಾಗಿದೆ. ನಾನು ಕಲ್ಯಾಣ ಮಂಟಪದ ಒಳಗೆ ಹೋಗುತ್ತಿದ್ದಂತೆ ಬಾಗಿಲು ಹಾಕಿಕೊಂಡು ಒಬ್ಬ ಹೆಣ್ಣು ಅನ್ನೋದನ್ನ ಕೂಡ ನೋಡದೆ ಮನಸೋ ಇಚ್ಛೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಿದ್ದಾರೆ.

ಅಶ್ವಿನಿ ನೀಡಿದ ದೂರಿನನ್ವಯ ಶರತ್, ಶರತ್‌ನ ತಂದೆ-ತಾಯಿ ಹಾಗೂ ಆತನ ಪತ್ನಿ ಮತ್ತು ಪತ್ನಿಯ ಪೋಷಕರ ಮೇಲೂ FIR ದಾಖಲಾಗಿದ್ದು, ಸದ್ಯ ಶರತ್ ನನ್ನ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಡಿಸೆಂಬರ್ 14ರಂದು ಘಟನೆ ನಡೆದಿದ್ದು, ಸತತ 9 ದಿನದ ಕಾನೂನು ಹೋರಾಟದ ಬಳಿಕ ಶರತ್ ಅಂದರ್ ಆಗಿದ್ದಾರೆ. ಶರತ್ ತಂದೆ-ತಾಯಿ, ಪತ್ನಿ ಹಾಗೂ ಪತ್ನಿಯ ಪೋಷಕರನ್ನ ವಿಚಾರಣೆ ನಡೆಸಿ ಸಾಕ್ಷ್ಯ ಕಲೆ ಹಾಕಲಾಗಿದ್ದು, ಅವರನ್ನು ಅರೆಸ್ಟ್ ಮಾಡುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.

ಇದನ್ನೂ ಓದಿ: ತಂದೆಯಿಂದಲೇ ಗರ್ಭಿಣಿ ಮಗಳ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಹಂತಕನ ಪ್ಲಾನ್ ಏನಿತ್ತು ಗೊತ್ತಾದ್ರೆ ಬೆಚ್ಚಿಬೀಳ್ತೀರಿ!

ಒಟ್ಟಿನಲ್ಲಿ ಪ್ರೀತಿ-ಪ್ರೇಮದ ಹೆಸರಲ್ಲಿ ಯುವತಿ ಬಾಳಲ್ಲಿ ಚೆಲ್ಲಾಟವಾಡಿ ಕೈಕೊಟ್ಟು ಬೇರೊಬ್ಬ ಯುವತಿಯನ್ನ ಮದುವೆಯಾಗಿ ಸುಖ-ಸಂಸಾರ ನಡೆಸಬೇಕಿದ್ದ ಯುವಕ ಮಾಡಿದ ತಪ್ಪಿಗೆ ರಾತ್ರೋರಾತ್ರಿ ಜೈಲು ಸೇರುವ ಸ್ಥಿತಿ ಬಂದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.