ಇನ್ಸ್ಟಾಗ್ರಾಮ್ ಲವ್ ಕಹಾನಿ: ಪ್ರಿಯತಮೆ 3 ಮಕ್ಕಳ ತಾಯಿ ಎಂದು ತಿಳಿದು ಯುವಕ ಶಾಕ್

ಯುವಕನಿಗೆ ಇನ್ಸ್ಟಾಗ್ರಾಮ್‌ನಲ್ಲಿ ಹುಟ್ಟಿಕೊಂಡ ಲವ್. ಈ ಲವ್​ ಮದ್ವೆಯಾಗುವ ಮಟ್ಟಕ್ಕೆ ಹೋಗಿತ್ತು. ಆದರೆ ಪ್ರಿಯತಮೆಯನ್ನ ಹುಡುಕಿಕೊಂಡು ಬಂದ ಯುವಕನಿಗೆ ಬಿಗ್ ಶಾಕ್ ಆಗಿದೆ. ಯಾಕಂದ್ರೆ ಇನ್ಸ್ಟಾಗ್ರಾಮ್‌ನಲ್ಲಿ ಸಿಕ್ಕ ಪ್ರೇಯಿಸಿ ಇನ್ನೂ ಯುವತಿ ಎಂದು ತಿಳಿದಿದ್ದ. ಆದ್ರೆ, ಪ್ರಿಯತಮೆಯನ್ನು ಹುಡಿಕೊಂಡು ಕಾಫಿನಾಡಿಗೆ ಬಂದಿದ್ದ ಯುವಕನಿಗೆ ಸತ್ಯ ತಿಳಿದು ನ್ಯಾಯ ಕೊಡಿಸುವಂತೆ ಎಸ್ಪಿ ಕಚೇರಿ ಮೊರೆ ಹೋಗಿದ್ದಾನೆ. ಅಷ್ಟಕ್ಕೂ ಇಲ್ಲಿ ಆಗಿರುವುದೇನು ಅಂತೀರಾ ಈ ಸ್ಟೋರಿ ನೋಡಿ.

ಇನ್ಸ್ಟಾಗ್ರಾಮ್ ಲವ್ ಕಹಾನಿ: ಪ್ರಿಯತಮೆ 3 ಮಕ್ಕಳ ತಾಯಿ ಎಂದು ತಿಳಿದು ಯುವಕ ಶಾಕ್
Chikkamgaluru Love Story
Updated By: ರಮೇಶ್ ಬಿ. ಜವಳಗೇರಾ

Updated on: Jul 16, 2025 | 4:55 PM

ಚಿಕ್ಕಮಗಳೂರು, (ಜುಲೈ 16): ಸೋಶಿಯಲ್ ಮೀಡಿಯಾ ಎನ್ನುವುದೇ ಹಾಗೆ ಜಗತ್ತಿನ ಯಾವುದೇ ಮೂಲೆಯಲ್ಲಿದ್ದವರನ್ನೂ ಒಂದು ಮಾಡೋ ಪ್ರೇಮ ಕೊಂಡಿಯಾಗಿ ಬದಲಾಗುತ್ತಿದೆ. ಈ ಸೋಶಿಯಲ್ ಮೀಡಿಯಾದಲ್ಲಿ ಪರಿಚಯವಾಗಿ, ಪರಿಚಯ ಪ್ರೇಮವಾಗಿ, ಒಬ್ರನ್ನೊಬ್ರು ಮದುವೆಯಾಗಿ ಬದುಕು ಕಟ್ಟಿಕೊಂಡ ಜೋಡಿಗಳೆಷ್ಟೋ. ಅದೇ ಸೋಶಿಯಲ್ ಮೀಡಿಯಾದಲ್ಲಿ ಬಣ್ಣ ಬಣ್ಣದ ತಳುಕು ಬಳುಕಿನ ಫೋಟೋ, ರೀಲ್ಸ್ ನೋಡಿ ಮಾಯಾಂಗನೆಯರ ಮೋಹಕ್ಕೆ ಬಿದ್ದು ದುಡ್ಡು, ಜೀವನ ಎರಡನ್ನೂ ಕಳ್ಕೊಂಡವರಿಗೇನು ಕಮ್ಮಿ ಇಲ್ಲ. ಹೌದು…ಕೋಲಾರದ ಯುವಕನೋರ್ವ, ಯುವತಿ ಎಂದು ಇನ್ಸ್ಟಾಗ್ರಾಮ್‌ನಲ್ಲಿ ಲವ್ ಮಾಡಿದ್ದು, ಮದುವೆಯಾಗಲು ನಿರ್ಧರಿಸಿದ್ದಾನೆ. ಆದ್ರೆ, ಖುದ್ದು ಭೇಟಿಗೆಂದು ಚಿಕ್ಕಮಗಳೂರಿಗೆ ಹೋದಾಗ ಪ್ರೇಯಿಸಿ ಯುವತಿ ಅಲ್ಲ ಮದುವೆಯಾಗಿ ಮೂವರು ಮಕ್ಕಳಿರುವ ಗೃಹಿಣಿ ಎಂದು ಗೊತ್ತಾಗಿದೆ. ಇದರಿಂದ ಯುವಕ ನವನೀತ್ ಶಾಕ್ ಆಗಿದ್ದು, ನ್ಯಾಯ ಕೊಡಿಸುವಂತೆ ಪೊಲೀಸ್ ಮೆಟ್ಟಿಲೇರಿದ್ದಾನೆ.

ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ದ್ವಾರಸಂದ್ರ ಗ್ರಾಮದ 25 ವರ್ಷದ ನವನೀತ್‌ಗೆ ಇನ್ಸ್ಟಾಗ್ರಾಮ್ ನಲ್ಲಿ ಕಾಫಿನಾಡು ‍‍ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಹೊಸಕೆರೆ ಗ್ರಾಮದ ಅಪೂರ್ವಳ ಪರಿಚಯವಾಗಿದೆ. ಪರಿಚಯವಾಗಿ ಇಬ್ಬರ ನಡುವೆ ಪ್ರೇಮ‌ಹುಟ್ಟಿದ್ದು, ಮದುವೆಯಾಗುವುದಾಗಿ ನಂಬಿಸಿದ್ದಾಳೆ. ಅಷ್ಟೇ ಅಲ್ಲದೇ ನವನೀತ್ ನಿಂದ ಹಣವನ್ನು ಹಾಕಿಸಿಕೊಂಡಿದ್ದಾಳೆ. ಬಳಿಕ ಅಪೂರ್ವ, ಕೆಲ ದಿನಗಳಿಂದ ನವನೀತ ನಂಬರ್ ಬ್ಲಾಕ್ ಲಿಸ್ಟ್​​​ ಗೆ ಹಾಕಿದ್ದಾಳೆ. ಬಳಿಕ ನವನೀತ್ ಪ್ರಿಯತಮೆ ಅಪೂರ್ಣ ಇರುವ ಊರಿಗೆ ಬಂದಿದ್ದು, ಪ್ರಿಯತಮೆಯ ಬಗ್ಗೆ ತಿಳಿದು ಕಂಗಾಲಾಗಿದ್ದಾನೆ.

ಇದನ್ನೂ ಓದಿ: ನನ್ನ ಗಂಡನನ್ನು ಕೊಲೆ ಮಾಡದಿದ್ರೆ ಆತ್ಮಹತ್ಯೆ: ಪ್ರಿಯಕರನೊಂದಿಗಿನ ಮಹಿಳೆಯ ನೌಟಂಕಿ ಆಟ ಬಯಲು

ಅಪೂರ್ವಾಗೆ ಈಗಾಗಲೇ ಮದುವೆಯಾಗಿ 3 ಮಕ್ಕಳಿದ್ದು, ಇದನ್ನ ನವನೀತ್​​ ಗೆ ಹೇಳದೇ ಮುಚ್ಚಿಟ್ಟಿದ್ದಳು. ಯಾವಾಗ ತಾನು ಹುಡುಕಿಕೊಂಡು ಬಂದ ಪ್ರಿಯತಮೆ ಹುಡುಗಿ ಅಲ್ಲ ಮೂರು ಮಕ್ಕಳ ಗೃಹಿಣಿ ಎನ್ನುವುದು ಗೊತ್ತಾಗುತ್ತಿದ್ದಂತೆಯೇ ಕಂಗಾಲಾದ ನವನೀತ್ ನ್ಯಾಯಕ್ಕಾಗಿ ಚಿಕ್ಕಮಗಳೂರು ಎಸ್ಪಿ ಕಚೇರಿಯಲ್ಲಿ ದೂರು ಕೊಟ್ಟಿದ್ದು, ಮದುವೆಯಾಗಿದ್ರೆ ಏನಂತೆ ಅವಳನ್ನೇ ಮದುವೆಯಾಗುತ್ತೇನೆ. ಮಕ್ಕಳನ್ನೂ ಸಾಕುತ್ತೇನೆ ಎಂದಿದ್ದಾನೆ.

ಒಟ್ಟಿನಲ್ಲಿ ಕೆಲಸ ಬಿಟ್ಟು ಇನ್ಸ್ಟಾಗ್ರಾಮ್ ನಲ್ಲಿ ಪರಿಚಯವಾದ ತನ್ನ ಪ್ರಿಯತಮೆಯನ್ನ ಹುಡುಕಿಕೊಂಡು ಮಂಗಳೂರು‍ ಬೆಂಗಳೂರು ಸುತ್ತಿ ಕೊನೆಗೆ ಚಿಕ್ಕಮಗಳೂರಿಗೆ ಬಂದ ಯುವಕನಿಗೆ ಪ್ರಿಯತಮೆಯ ಅಸಲಿ ಸತ್ಯ ತಿಳಿದು ಕಂಗಾಲಾಗಿದ್ದು, 3 ಮಕ್ಕಳ ತಾಯಿ ಆದ್ರೂ ಓಕೆ ಅವಳನ್ನೇ ಮದುವೆಯಾಗ್ತೀನಿ ಮಕ್ಕಳನ್ನೂ ಸಾಕುತ್ತೇನೆ ಎನ್ನುತ್ತಿದ್ದಾನೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ