ಚಿಕ್ಕಮಗಳೂರು: ರಸ್ತೆ ಅಗಲೀಕರಣ ಮತ್ತು ಲೇಯೌಟ್ ನಿರ್ಮಾಣಕ್ಕೆ ಅಧಿಕಾರಿಗಳು ಸ್ಪಂದಿಸದ ಕಾರಣ ಪ್ರತಿಭಟನಾರ್ಥವಾಗಿ ಚಿಕ್ಕಮಗಳೂರು (Chikmagalur) ಜಿಲ್ಲೆ ಕೊಪ್ಪ (Koppa) ತಾಲೂಕಿನ ಗುಡ್ಡತೋಟ (Guddethota) ಗ್ರಾಮ ಪಂಚಾಯಿತಿಯ 10 ಮಂದಿ ಸದಸ್ಯರು ರಾಜೀನಾಮೆ ನೀಡಿದ್ದಾರೆ. ಅಧ್ಯಕ್ಷರು, ಉಪಾಧ್ಯಕ್ಷರು ಸೇರಿದಂತೆ 10 ಜನ ರಾಜೀನಾಮೆ ನೀಡಿದ್ದು, ರಾಜೀನಾಮೆ ಪತ್ರವನ್ನು ತಾಲೂಕು ಪಂಚಾಯಿತಿ ಇಓಗೆ ಕಳುಹಿಸಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಮನನೊಂದು ಈ ಕ್ರಮ ಕೈಗೊಂಡಿರುವುದಾಗಿ ಅವರು ತಿಳಿಸಿದ್ದಾರೆ.
ರಸ್ತೆ ಅಗಲೀಕರಣ, ಲೇಯೌಟ್ ನಿರ್ಮಾಣ, ಮಳೆಯಿಂದಾಗಿ ಕುಸಿದಿದ್ದ 17 ಮನೆಗಳಿಗೆ ಇತೆರೆಡೆ ಜಾಗ ನೀಡುವುದು ಸೇರಿದಂತೆ ತುರ್ತು ಕೆಲಸಗಳಿಗೆ ಅಧಿಕಾರಿಗಳು ಸಹಕಾರ ನೀಡುತ್ತಿಲ್ಲ ಎಂದು ಸದಸ್ಯರು ದೂರಿದ್ದಾರೆ. ಪ್ರಾಮಾಣಿಕವಾಗಿ ಸೇವೆ ಸಲ್ಲಿಸಲು ಸಾಧ್ಯವಾಗದ ಕಾರಣ ರಾಜೀನಾಮೆ ನೀಡುತ್ತಿದ್ದೇವೆ ಎಂದು ಅಸಮಾಧಾನ ಹೊರಹಾಕಿದ್ದಾರೆ. ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಈ ಬೆಳವಣಿಗೆ ನಡೆದಿದೆ.
ಈ ಮಧ್ಯೆ, ಚಿಕ್ಕಮಗಳೂರಿನಲ್ಲಿ ಬಿಜೆಪಿ ಶಾಸಕ ಸಿಟಿ ರವಿ ಮತ್ತು ಅವರ ಮಾಜಿ ಆಪ್ತ ಎಚ್ಡಿ ತಮ್ಮಯ್ಯ ಮಧ್ಯೆ ವಾಕ್ಸಮರ ಮುಂದುವರಿದಿದೆ. ಬಿಜೆಪಿ ತೊರೆದು ಕಾಂಗ್ರೆಸ್ ಸೇರಿರುವ ತಮ್ಮಯ್ಯ, ರವಿ ವಿರುದ್ಧ ಬದಲಾವಣೆ ಸಂಕಲ್ಪ ಎಂದು ಬುಧವಾರ ಬೈಕ್ ರ್ಯಾಲಿ ನಡೆಸಿದ್ದಾರೆ. ಬಳಿಕ ರವಿ ವಿರುದ್ಧ ಕಿಡಿಕಾರಿರುವ ಅವರು, ನನ್ನ ಜೊತೆ ಸಿಟಿ ರವಿ ಬಹಳ ವಿಷಯ ಹಂಚಿಕೊಂಡಿದ್ದಾರೆ. ನಾನು ಅವನ್ನೆಲ್ಲಾ ಈಗ ಹೇಳಲ್ಲ. ಅವರು ಒಮ್ಮೆ ಅವರ ಆತ್ಮವನ್ನು ಮುಟ್ಟಿ ನೋಡಿಕೊಳ್ಳಲಿ. ಅವರು ಪಕ್ಷದಲ್ಲೇ ಇದ್ದು ಮೂಡಿಗೆರೆ ಕ್ಷೇತ್ರದ ಬಗ್ಗೆ ಯಾವ ರೀತಿ ನಡೆದುಕೊಂಡಿದ್ದಾರೆ ಎಂದು ಆ ಶಾಸಕರೇ ಹೇಳಿದ್ದಾರೆ. 2004, 2008, 2108ರಲ್ಲಿ ಯಾರ ಹೆಸರೇಳಿಕೊಂಡು ನೀವು ಗೆದ್ದದ್ದು ನೀವು. ಯಡಿಯೂರಪ್ಪ ಹೆಸರು ಹೇಳಿಕೊಂಡು ಗೆದ್ದು, ಈಗ ನೀವು ಲೇವಡಿ ಮಾಡುತ್ತಿರುವುದು ಯಾರನ್ನು ಎಂದು ಗುಡುಗಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ