ಚಿಕ್ಕಮಗಳೂರು: ಪೊಲೀಸ್ ಬಿಗಿ ಭದ್ರತೆಯಲ್ಲಿ ಶಾಂತಿಯುತವಾಗಿ ತೆರೆಕಂಡ ದತ್ತಮಾಲಾ ಅಭಿಯಾನ

| Updated By: ಕಿರಣ್ ಹನುಮಂತ್​ ಮಾದಾರ್

Updated on: Nov 05, 2023 | 6:32 PM

ವಿವಾದಿತ ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾವನ್ನು ಸಂಪೂರ್ಣವಾಗಿ ಹಿಂದೂಗಳಿಗೆ ಒಪ್ಪಿಸುವಂತೆ ಆಗ್ರಹಿಸಿ ಶ್ರೀ ರಾಮಸೇನೆಯ 20 ನೇ ವರ್ಷದ ದತ್ತಮಾಲಾ ಅಭಿಯಾನ, ಪೊಲೀಸ್ ಬಿಗಿ ಭದ್ರತೆಯಲ್ಲಿ ಶಾಂತಿಯುತವಾಗಿ ತೆರೆಕಂಡಿದೆ. ಚಿಕ್ಕಮಗಳೂರು ನಗರದಲ್ಲಿ ಧರ್ಮ ಸಭೆ ,ಶೋಭಾಯಾತ್ರೆ ನಡೆಸಿದ ಕಾರ್ಯಕರ್ತರು, ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾದಲ್ಲಿ ದತ್ತ ಪಾದುಕೆ ದರ್ಶನ ಪಡೆದು ದತ್ತಪೀಠ ಹಿಂದೂ ಪೀಠದ ಸಂಕಲ್ಪ ಮಾಡಿದರು.

ಚಿಕ್ಕಮಗಳೂರು: ಪೊಲೀಸ್ ಬಿಗಿ ಭದ್ರತೆಯಲ್ಲಿ ಶಾಂತಿಯುತವಾಗಿ ತೆರೆಕಂಡ ದತ್ತಮಾಲಾ ಅಭಿಯಾನ
ದತ್ತಪೀಠ
Follow us on

ಚಿಕ್ಕಮಗಳೂರು, ನ.05:  ಚಿಕ್ಕಮಗಳೂರು(Chikkamagalur) ತಾಲೂಕಿನ ವಿವಾದಿತ ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾದಲ್ಲಿ ನಡೆಯುತ್ತಿದ್ದ ದತ್ತಮಾಲಾ ಅಭಿಯಾನದ ಮುಕ್ತಾಯದ ದಿನವಾದ ಇಂದು ಸರ್ಕಾರ ಮುಸ್ಲಿಮರ ಓಲೈಕೆಗೆ ಮುಂದಾಗಿದೆ. ದಾಖಲಾತಿಗಳನ್ನು ಕೂಲಂಕುಶವಾಗಿ ಪರಿಶೀಲಿಸಿ ದತ್ತಪೀಠ(Datta Peetha)ವನ್ನ ಹಿಂದೂಗಳಿಗೆ ಒಪ್ಪಿಸಬೇಕೆಂದು ಆಗ್ರಹಿಸಿ ಧರ್ಮ ಸಭೆಯಲ್ಲಿ ಕೇಳಿ ಬಂದಿದೆ. ದತ್ತಪೀಠ ಸಂಪೂರ್ಣ ಹಿಂದುಗಳ ಪೀಠವಾಗಬೇಕು. ಸರ್ಕಾರ ಒಂದು ವೇಳೆ ದತ್ತಪೀಠ ಎಂಬ ನಾಮಪಾಲಕವನ್ನು ತೆಗೆದರೆ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ. ಇಲ್ಲಿರುವ ಗೋರಿಗಳನ್ನು ನಾಗೇನಹಳ್ಳಿಗೆ ಸ್ಥಳಾಂತರಿಸಿ ಹಿಂದೂಗಳ ಪೂಜೆಗೆ ಅನುಕೂಲ ಮಾಡಿಕೊಡಬೇಕೆಂದು ಪ್ರಮೋದ್ ಮುತಾಲಿಕ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪ್ರಮೋದ್ ಮುತಾಲಿಕ್‌, ಗಂಗಾಧರ್ ಕುಲಕರ್ಣಿ ನೇತೃತ್ವದಲ್ಲಿ ಸಾವಿರಾರು ಕಾರ್ಯಕರ್ತರ ಸಮ್ಮುಖದಲ್ಲಿ ಧರ್ಮ ಸಭೆ

ಇಂದು(ನ.05) ಬೆಳಗ್ಗೆ ಚಿಕ್ಕಮಗಳೂರು ನಗರದ ಶಂಕರಮಠದ ಬಳಿ ಶ್ರೀ ರಾಮ ಸೇನೆಯ ಪ್ರಮೋದ್ ಮುತಾಲಿಕ್‌ ಗಂಗಾಧರ್ ಕುಲಕರ್ಣಿ ನೇತೃತ್ವದಲ್ಲಿ ಸಾವಿರಾರು ಕಾರ್ಯಕರ್ತರ ಸಮ್ಮುಖದಲ್ಲಿ ಧರ್ಮ ಸಭೆ ನಡೆಸಿದ್ದರು. ಧರ್ಮ ಸಭೆಯ ಬಳಿಕ ಆರಂಭಗೊಂಡ ಶೋಭಾಯಾತ್ರೆ ನಗರದ ಪ್ರಮುಖ ಬೀದಿಗಳಲ್ಲಿ ಸಾಗಿ ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾಕ್ಕೆ ತೆರಳಿ, ಮಳೆಯಲ್ಲೇ ದತ್ತ ಪಾದುಕೆ ದರ್ಶನ ಪಡೆದರು. ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾದ ಬಳಿಯಿರುವ ಹೋಮ ಮಂಟಪದಲ್ಲಿ ಹೋಮ-ಹವನ ನಡೆಸಿದರು. ಮಾಲಾಧಾರಿಗಳ ಜೊತೆ ಶೋಭಾಯಾತ್ರೆಯಲ್ಲಿ ಭಾಗವಹಿಸಿದ್ದು, ವಿವಿಧ ಮಠಗಳ ಸ್ವಾಮೀಜಿಗಳು, ದತ್ತಪೀಠವನ್ನ ಹಿಂದುಗಳಿಗೆ ಒಪ್ಪಿಸಬೇಕು. ಇಲ್ಲವಾದ್ರೆ, ಸರ್ಕಾರದ ವಿರುದ್ಧ ಹೋರಾಡೋದಾಗಿ ಎಚ್ಚರಿಸಿದರು.

ಇದನ್ನೂ ಓದಿ:ಮತ್ತೆ ಮುನ್ನಲೆಗೆ ಬಂದ ದತ್ತಪೀಠ ವಿವಾದ: ಇಸ್ಲಾಂ ಆಚರಣೆಗೆ ಶ್ರೀರಾಮಸೇನೆ ವಿರೋಧ

ರಾಜ್ಯದ ಮೂಲೆ ಮೂಲೆಗಳಿಂದ ಐದು ಸಾವಿರಕ್ಕೂ ಅಧಿಕ ದತ್ತಮಾಲಾ ಧರಿಗಳು ಆಗಮಿಸಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾ ಸೇರಿದಂತೆ ಜಿಲ್ಲೆಯಾದ್ಯಂತ 2 ಸಾವಿರಕ್ಕೂ ಅಧಿಕ ಪೊಲೀಸರನ್ನ ನಿಯೋಜನೆ ಮಾಡಲಾಗಿದ್ದು, ದತ್ತಮಾಲಾ ಅಭಿಯಾನ ಪೊಲೀಸ್ ಬಿಗಿ ಭದ್ರತೆಯಲ್ಲಿ ಶಾಂತಿಯುತವಾಗಿ ತೆರೆ ಕಂಡಿದೆ. ಒಟ್ಟಾರೆ, ಕಳೆದೊಂದು ವಾರದಿಂದ ಕೆಸರಿಮಯವಾಗಿದ್ದ ಕಾಫಿನಾಡು, ಪೊಲೀಸರು ಸರ್ಪಗಾವಲಿನಿಂದ ಯಾವುದೇ ಅಹಿತಕರ ಘಟನೆ ನಡೆಯದೇ ಎಲ್ಲಾ ಶಾಂತರೀತಿಯಲ್ಲಿ ಶ್ರೀ ರಾಮ ಸೇನೆ ದತ್ತಮಾಲಾ ಅಭಿಯಾನಕ್ಕೆ ತೆರೆ ಬಿದ್ದಿದ್ದು. ಪ್ರತಿ ವರ್ಷದಂತೆ ಈ ವರ್ಷವೂ ದತ್ತಪೀಠ ಹಿಂದುಗಳ ಪೀಠ, ಅದನ್ನ ಹಿಂದೂಗಳಿಗೆ ಒಪ್ಪಿಸಬೇಕೆಂಬ ಕೂಗು ಬಲವಾಗಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ