ಮತ್ತೆ ಮುನ್ನಲೆಗೆ ಬಂದ ದತ್ತಪೀಠ ವಿವಾದ: ಇಸ್ಲಾಂ ಆಚರಣೆಗೆ ಶ್ರೀರಾಮಸೇನೆ ವಿರೋಧ
ದತ್ತಪೀಠ ವಿವಾದ ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ. ಶ್ರೀರಾಮಸೇನೆಯಿಂದ ದತ್ತಪೀಠದಲ್ಲಿ ಇಸ್ಲಾಂ ಆಚರಣೆಗೆ ವಿರೋಧ ವ್ಯಕ್ತಪಡಿಸಲಾಗಿದೆ. ಈ ಕುರಿತಾಗಿ ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ ಗಂಗಾಧರ್ ಕುಲಕರ್ಣಿ ಪ್ರತಿಕ್ರಿಯೆ ನೀಡಿದ್ದು, ದತ್ತಪೀಠ ಸಂಪೂರ್ಣ ಹಿಂದೂಪೀಠ, ಅಲ್ಲಿ ಯಾವ ಬಾಬಾಬುಡನ್ ಇಲ್ಲ ಎಂದು ಹೇಳಿದ್ದಾರೆ.
ಚಿಕ್ಕಮಗಳೂರು, ಅಕ್ಟೋಬರ್ 30: ದತ್ತಪೀಠ (dattapeeta) ವಿವಾದ ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ. ಶ್ರೀ ರಾಮಸೇನೆಯಿಂದ ದತ್ತಪೀಠದಲ್ಲಿ ಇಸ್ಲಾಂ ಆಚರಣೆಗೆ ವಿರೋಧ ವ್ಯಕ್ತಪಡಿಸಲಾಗಿದೆ. ಈ ಕುರಿತಾಗಿ ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ ಗಂಗಾಧರ್ ಕುಲಕರ್ಣಿ ಪ್ರತಿಕ್ರಿಯೆ ನೀಡಿದ್ದು, ನಿರಂತರವಾಗಿ 20 ವರ್ಷಗಳಿಂದ ದತ್ತಪೀಠ ಹಿಂದೂಗಳ ಪೀಠ ಆಗಬೇಕೆಂದು ಹೋರಾಟ ಮಾಡಿದ್ದೇವೆ. ಸಾಕಷ್ಟು ಹಂತದಲ್ಲಿ ಯಶಸ್ಸನ್ನು ಕೂಡ ಸಾಧಿಸಿದ್ದೇವೆ. ಇದೀಗ ದತ್ತಪೀಠಕ್ಕೆ ಅರ್ಚಕರ ನೇಮಕವೂ ಕೂಡ ಆಗಿದೆ. ದತ್ತಪೀಠ ಸಂಪೂರ್ಣ ಹಿಂದೂಪೀಠ, ಅಲ್ಲಿ ಯಾವ ಬಾಬಾಬುಡನ್ ಇಲ್ಲ ಎಂದು ಹೇಳಿದ್ದಾರೆ.
ಶಾಖಾದ್ರಿಯ ಕುಟುಂಬಕ್ಕೆ ದತ್ತಪೀಠದಲ್ಲಿ ಏನು ಕೆಲಸ ಇಲ್ಲ. ಶಾಖಾದ್ರಿ ಅವರು ನಾಗೇನಹಳ್ಳಿಗೆ ಹೋಗಬೇಕು. ನಾಗೇನಹಳ್ಳಿ ದರ್ಗಾದಲ್ಲಿ ನಿಮ್ಮ ಕಾರ್ಯ ಮುಂದುವರಿಸಿ. ಶಾಖಾದ್ರಿ ಕುಟುಂಬ ಜಿಂಕೆ ಮತ್ತು ಚಿರತೆ ಕೇಸ್ನಲ್ಲಿ ಸಿಲುಕಿದ್ದಾರೆ. ದತ್ತಪೀಠದ ಹೆಸರಿನಲ್ಲಿ ಅವ್ಯವಹಾರ ಮಾಡುತ್ತಿದ್ದಾರೆ, ದತ್ತ ಪೀಠದಲ್ಲಿರುವ ವನ್ಯಮೃಗ ಹಾಗೂ ವನ್ಯಜೀವಿಗಳನ್ನು ಲೂಟಿ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ಮಾಡಿದ್ದಾರೆ.
ಇದನ್ನೂ ಓದಿ: ಶ್ರೀರಾಮಸೇನೆಯ ದತ್ತಮಾಲಾ ಅಭಿಯಾನಕ್ಕೆ ಚಾಲನೆ, ನ.5 ರಂದು ಇನಾಂ ದತ್ತಾತ್ರೇಯ ಪೀಠದಲ್ಲಿ ದತ್ತಪಾದುಕೆ ದರ್ಶನ
ಶಾಖಾದ್ರಿಯನ್ನು ಹಿಂದೂ ಧರ್ಮ ಪೀಠದ ಒಳಗೆ ಒಪ್ಪಲು ಸಾಧ್ಯವಿಲ್ಲ. ಶಾಖಾದ್ರಿ ಕುಟುಂಬವನ್ನು ದತ್ತಪೀಠದಿಂದ ಜಿಲ್ಲಾಡಳಿತ ಹೊರಹಾಕುತ್ತೋ ಅಥವಾ ಶ್ರೀರಾಮ ಸೇನೆ ಹೊದ್ದು ಹೊರ ಹಾಕಬೇಕೋ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಾಖಾದ್ರಿ ಇರುವವರೆಗೂ ದತ್ತಪೀಠಕ್ಕೆ ಕಂಟಕವಿದೆ
ಮುಜರಾಯಿ ಇಲಾಖೆಗೆ ಸೇರಿದ ಇಲಾಖೆಯಲ್ಲಿ ಶಾಖಾದ್ರಿ ಕುಟುಂಬಕ್ಕೆ ಏನು ಕೆಲಸ. ಶಾಖಾದ್ರಿ ಅಕ್ರಮವಾಗಿ ಮತ್ತು ಅನೈತಿಕವಾಗಿ ದತ್ತಪೀಠದಲ್ಲಿ ವಾಸವಿದ್ದಾರೆ. ದತ್ತ ಪೀಠದಲ್ಲಿ ಬರುವ ಹಿಂದುಗಳನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಶಾಖಾದ್ರಿ ಇರುವವರೆಗೂ ದತ್ತಪೀಠಕ್ಕೆ ಕಂಟಕವಿದೆ. ಶಾಖಾದ್ರಿ ಕುಟುಂಬ ಕೋಮು ದ್ವೇಷ ಬಿತ್ತುತ್ತಿದೆ. ಶ್ರೀರಾಮ ಸೇನೆ ಶಾಖಾದ್ರಿಯನ್ನು ಓಡಿಸುವ ಕೆಲಸ ಮಾಡುತ್ತದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಚಿಕ್ಕಮಗಳೂರು: ಶಾಖಾದ್ರಿ ಮನೆಯಲ್ಲಿ ಚಿರತೆ, ಜಿಂಕೆ ಚರ್ಮ ಪತ್ತೆ; ಅರಣ್ಯ ಸಂರಕ್ಷಣಾ ಕಾಯ್ದೆ ಅಡಿ ಪ್ರಕರಣ ದಾಖಲು
ದತ್ತ ಪೀಠದಲ್ಲಿ ನಿತ್ಯವೂ ಅನ್ನದಾನ ನಡೆಯಬೇಕು. ದತ್ತ ಪೀಠದ ಸಾವಿರಾರು ಎಕರೆ ಜಮೀನನ್ನ ನುಂಗಿ ನೀರು ಕುಡಿಯಲಾಗಿದೆ. ದತ್ತಪೀಠದಲ್ಲಿ ಕೂಡಲೇ ವಸ್ತ್ರಸಂಹಿತೆ ಜಾರಿ ಮಾಡಬೇಕು. ಹಿಂದೂ ಸಂಸ್ಕೃತಿಯಲ್ಲಿರುವ ವಸ್ತ್ರವನ್ನೇ ಧರಿಸಿ ಬರಬೇಕು. ಮಹಿಳೆಯರು ಮೈಮುಚ್ಚುವ ಸೀರೆ ಧರಿಸಿ ಬರಬೇಕು. ಪುರುಷರು ಕೂಡ ಹಿಂದೂ ಸಂಸ್ಕೃತಿಯನ್ನು ಬಿಂಬಿಸುವ ಬಟ್ಟೆ ಧರಿಸಿ ಬರಬೇಕು.
ಹಿಂದೂ ಸಂಪ್ರದಾಯದ ವಸ್ತ್ರವನ್ನು ಹೊರತುಪಡಿಸಿ ಯಾವುದೆ ಬಟ್ಟೆ ಧರಿಸಿ ಬಂದರೆ ನಾವು ಬಿಡುವುದಿಲ್ಲ. ದತ್ತ ಪೀಠದ ಬಳಿ ಇರುವ ಗೋರಿಗಳನ್ನು ನಾಗೇನಹಳ್ಳಿಗೆ ಸ್ಥಳಾಂತರಿಸಬೇಕು. ದತ್ತಪೀಠಕ್ಕೂ ಉರುಸ್ಗೂ ಏನು ಸಂಬಂಧ? ದತ್ತಪೀಠದಲ್ಲಿ ಯಾಕೆ ಉರುಸ್ ಮಾಡಬೇಕು ಎಂದು ಕಿಡಿಕಾರಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 1:51 pm, Mon, 30 October 23