ಚಿಕ್ಕಮಗಳೂರು, ಜೂನ್.19: ಕಾಫಿನಾಡು ಚಿಕ್ಕಮಗಳೂರಿನಲ್ಲಿ ಡೆಂಗ್ಯೂ (Dengue) ಕೇಸ್ಗಳು ಉಲ್ಬಣಗೊಂಡಿವೆ. ಚಿಕ್ಕಮಗಳೂರು ನಗರದ ಮಲ್ಲೇಗೌಡ ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ನೂರಾರು ರೋಗಿಗಳು ಸಾಲುಗಟ್ಟಿ ನಿಂತಿದ್ದಾರೆ. ನೂರಾರು ಸಂಖ್ಯೆಯಲ್ಲಿ ಡೆಂಗ್ಯೂ ರೋಗಿಗಳು ಚಿಕಿತ್ಸೆಗೆ ಆಗಮಿಸಿದ್ದಾರೆ. ಒಳ ರೋಗಿಗಳ ವಾರ್ಡ್ ಸಂಪೂರ್ಣ ಭರ್ತಿಯಾಗಿದೆ.
ಇದೇ ಮೊದಲ ಬಾರಿಗೆ ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಡೆಂಗ್ಯೂ ಪ್ರಕರಣಗಳು ಹೆಚ್ಚಾಗಿವೆ. ಮಲ್ಲೇಗೌಡ ಜಿಲ್ಲಾಸ್ಪತ್ರೆಗೆ ಉಸ್ತುವಾರಿ ಸಚಿವ ಕೆ.ಜೆ ಜಾರ್ಜ್ ಭೇಟಿ ನೀಡಿ ಡೆಂಗ್ಯೂ ರೋಗಿಗಳ ಆರೋಗ್ಯ ವಿಚಾರಿಸಿದ್ದಾರೆ. ಚಿಕ್ಕಮಗಳೂರಿನಲ್ಲಿ ಡೆಂಗ್ಯೂ ಹೆಚ್ಚಳ ಹಿನ್ನೆಲೆ DHO ಸೇರಿದಂತೆ ವೈದ್ಯರು, ಶಾಸಕರ ಜೊತೆ ಕೆ.ಜೆ ಜಾರ್ಜ್ ಸಭೆ ನಡೆಸಿದ್ದಾರೆ.
ಕಳೆದ 15 ದಿನಗಳಲ್ಲಿ ಬೆಂಗಳೂರು ಸೇರಿ ರಾಜ್ಯಾದ್ಯಂತ ಒಟ್ಟು ಸಾವಿರಕ್ಕೂ ಹೆಚ್ಚು ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ. ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಓರ್ವ ವ್ಯಕ್ತಿ ಡೆಂಗ್ಯೂನಿಂದ ಮೃತಪಟ್ಟಿದ್ದಾರೆ ಎನ್ನಲಾಗುತ್ತಿದೆ.
ಕಳೆದ ವರ್ಷ ಇದೇ ಅವಧಿಯಲ್ಲಿ ಜನವರಿಯಿಂದ ಜೂ.16ರ ವರೆಗೆ 2 ಸಾವಿರ ಡೆಂಗ್ಯೂ ಪ್ರಕರಣಗಳು ವರದಿಯಾಗಿದ್ದವು. ಆದರೆ ಪ್ರಸಕ್ತ ಸಾಲಿನಲ್ಲಿ 4,885 ಮಂದಿಯಲ್ಲಿ ಡೆಂಗ್ಯೂ ಪಾಸಿಟಿವ್ ವರದಿಯಾಗಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ, ಈ ಬಾರಿ ದುಪ್ಪಟ್ಟು ಪ್ರಕರಣಗಳು ವರದಿಯಾಗಿವೆ.
ಇದನ್ನೂ ಓದಿ: ರೇಣುಕಾಸ್ವಾಮಿ ಮರಣೋತ್ತರ ವರದಿ ತಿರುಚಲು ಹಣ ಆಮಿಷ: ಈ ವಿಚಾರ ತಿಳಿದಿಲ್ಲ ಎಂದ ಗುಂಡೂರಾವ್
ಕಳೆದ ಕೆಲ ದಿನಗಳಿಗೆ ಹೋಲಿಸಿದರೆ ಜಿಲ್ಲೆಯಲ್ಲಿ ಈಗ ಡೆಂಗ್ಯೂ ಕೇಸ್ ಸ್ವಲ್ಪ ಇಳಿಮುಖವಾಗುತ್ತಿದೆ. ಕಡಿಮೆ ಮಾಡುವ ನಿಟ್ಟಿನಲ್ಲಿ ವೈದ್ಯರು ಕ್ರಮಕೈಗೊಳ್ಳುತ್ತಾರೆ. ಡಿಸಿ, ಡಿಹೆಚ್.ಓ ಬಳಿ ಮಾಹಿತಿ ಪಡೆದಿದ್ದೇನೆ. ನೀರು ಸ್ಟಾಕ್ ಮಾಡಿಕೊಳ್ಳುವುದರಿಂದ ಸೊಳ್ಳೆ ಹೆಚ್ಚುತ್ತವೆ. ನೀರು ಸ್ಟಾಕ್ ಮಾಡಿಕೊಳ್ಳದಂತೆ ಮಾಹಿತಿ ನೀಡಲಾಗಿದೆ. ಜಿಲ್ಲೆಯಾದ್ಯಂತ ಡೆಂಗ್ಯೂ ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಿದ್ದೇನೆ ಎಂದು ಚಿಕ್ಕಮಗಳೂರು ಮಲ್ಲೇಗೌಡ ಸರ್ಕಾರಿ ಆಸ್ಪತ್ರೆ ಭೇಟಿ ಬಳಿಕ ಕೆ.ಜೆ ಜಾರ್ಜ್ ತಿಳಿಸಿದರು.
ಮಳೆಗಾಲದಲ್ಲಿ ಸೊಳ್ಳೆಗಳ ಪ್ರಮಾಣ ಏರಿಕೆಯಾಗುತ್ತಿದ್ದಂತೆ ಸೊಳ್ಳೆಗಳಿಂದ ಹರಡುವ ಮಲೇರಿಯಾ, ಡೆಂಗ್ಯೂವಿನಂತಹ ಕಾಯಿಲೆಗಳು ಹೆಚ್ಚುತ್ತವೆ. ಡೆಂಗ್ಯೂ ಕಾಣಿಸಿದಾಗ ಪ್ಲೇಟ್ಲೇಟ್ ಸಂಖ್ಯೆ ಕ್ಷೀಣಿಸುವುದು ಸಹಜ. ಅಂತಹ ಸಮಯದಲ್ಲಿ ಪ್ಲೇಟ್ಲೇಟ್ ಸಂಖ್ಯೆ ವೃದ್ಧಿಯಾಗದೇ ಇದ್ದರೆ ಜೀವಕ್ಕೂ ಹಾನಿಯಾಗುವ ಸಾಧ್ಯತೆ ಹೆಚ್ಚಿದೆ.
ಡೆಂಗ್ಯೂ ರೋಗಿಗಳು ದೇಹದಲ್ಲಿ ಸಾಕಷ್ಟು ನೀರಿನಾಂಶ ಇರುವಂತೆ ನೋಡಿಕೊಳ್ಳುವುದು ಮುಖ್ಯವಾಗುತ್ತದೆ. ಡೆಂಗ್ಯೂ ಜ್ವರದ ಸಮಯದಲ್ಲಿ ಜ್ವರ, ಬೆವರುವಿಕೆ ಮತ್ತು ಸಂಭಾವ್ಯ ವಾಂತಿ ನಿರ್ಜಲೀಕರಣಕ್ಕೆ ಕಾರಣವಾಗುತ್ತದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 12:30 pm, Wed, 19 June 24