ಚಿಕ್ಕಮಗಳೂರು: ಈಗ ರಾಜ್ಯದೆಲ್ಲೆಡೆ ಹಿಜಾಬ್-ಕೇಸರಿದ್ದೇ ಮಾತು (Hijab Row). ಹಿಜಾಬ್ ಹಾಕ್ಲೇಬೇಕು, ಕೇಸರಿ ತೊಡ್ಲೇಬೇಕು ಅನ್ನೋ ವಾದ-ವಿವಾದ. ಅದು ಏನು ಹೋರಾಟ, ಅದೆಂತಹ ಪ್ರತಿಭಟನೆ ಅಂತೀರಾ..? ಇಡೀ ರಾಜ್ಯದಲ್ಲೇ ಕಾಲೇಜನ್ನೇ ಬಂದ್ ಮಾಡಿಸೋ ಮಟ್ಟಿಗೆ..! ಪ್ರಕರಣ ಹೈಕೋರ್ಟ್-ಸುಪ್ರೀಂ ಕೋರ್ಟ್ ತನಕ ಹೋಗೋವರೆಗೂ ವಿದ್ಯಾರ್ಥಿಗಳು ರಂಪಾಟ ಮಾಡಿಕೊಂಡಿದ್ದಾರೆ. ಆದ್ರೆ ಅಲ್ಲೊಂದು ಶಾಲೆಯ ಮಕ್ಕಳು ಮಾತ್ರ ನಿಮ್ಮ ದಮ್ಮಯ್ಯ, ನಮಗೆ ಈ ಹಿಜಾಬ್ ಬೇಡ, ಕೇಸರಿಯೂ ಬೇಡ.. ಈಗ್ಲೋ, ಆಗ್ಲೋ ಬೀಳೋ ಸ್ಥಿತಿಯಲ್ಲಿರುವ ಕೊಠಡಿಯನ್ನ ದುರಸ್ತಿ ಮಾಡಿಕೊಡಿ ಅಂತಾ ಅಂಗಲಾಚಿದ್ದಾರೆ. ಹಾಗಿದ್ರೆ ಯಾವ ಶಾಲೆ ಅದು ಅಂತೀರಾ..? ಸ್ವಲ್ಪ ಅಲ್ಲ, ಸಂಪೂರ್ಣ ಬಿದ್ದು ಹೋಗಿರೋ ಕ್ಲಾಸ್ ರೂಂ.! ಸಂಪೂರ್ಣ ಅಲ್ಲದಿದ್ರೂ ಅರ್ಧ ಬಿದ್ದು ಹೋಗಿರೋ ಮತ್ತೊಂದು ಕ್ಲಾಸ್ ರೂಂ..! ಇನ್ನೇನು ಈಗ್ಲೋ, ಆಗ್ಲೋ ಬೀಳುತ್ತೆ ಅನ್ನೋ ಸ್ಥಿತಿಯಲ್ಲಿರುವ ಮಗದೊಂದು ಕ್ಲಾಸ್ ರೂಂ.! ಅಲ್ಲೇ ಈ ಪುಟಾಣಿಗಳಿಗೆ ಪಾಠ, ಆಟ ಎಲ್ಲವೂ..! ಆ ತರಗತಿಯನ್ನ ನೋಡಿದ್ರೆ ಎಂಥವರಿಗೂ ಕೂಡ ಒಂದು ಕ್ಷಣ ಭಯವಾಗದೇ ಇರದು.! ಆದ್ರೂ ಅಂತಹ ತರಗತಿಯಲ್ಲೇ ಕುಳಿತು ಪಾಠ ಕೇಳುತ್ತಿರುವ ಮಕ್ಕಳ ಪಾಡು ನಿಜಕ್ಕೂ ಆ ದೇವರಿಗೆ ಪ್ರೀತಿ. ಅಂದಾಗೆ ಸದ್ಯ ಇಂತಹ ಹೀನಾಯ ಸ್ಥಿತಿಯಲ್ಲಿರುವ ಶಾಲೆ ಯಾವುದೆಂದರೆ, ಚಿಕ್ಕಮಗಳೂರು (Chikmagalur) ತಾಲೂಕಿನ ಸಂಗಮೇಶ್ವರ ಪೇಟೆಯ ದೇವದಾನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ (Devadana government primary school).
ಕಳೆದ ಮಳೆಗಾಲದಲ್ಲಿ ಈ ಶಾಲೆಯ ಎರಡು ಕೊಠಡಿಗಳು ಶಿಥಿಲಗೊಂಡು, ಒಂದು ಕೊಠಡಿಯಂತೂ ಸಂಪೂರ್ಣ ಬಿದ್ದು ಹೋಗಿದೆ. ಮತ್ತೊಂದು ಕೊಠಡಿ ಅರ್ಧ ಬಿದ್ದು ಹೋಗಿದೆ. ಈ ಕೊಠಡಿಗೆ ಹೊಂದಿಕೊಂಡಿರುವ ಮತ್ತೊಂದು ಕೊಠಡಿಯಲ್ಲಿ ಮುಂದೆ ಭವ್ಯ ಭಾರತದ ಪ್ರಜೆಗಳಾಗುವ ವಿದ್ಯಾರ್ಥಿಗಳು ಪಾಠ ಕೇಳಬೇಕಾದ ದುಃಸ್ಥಿತಿ ಬಂದೊದಾಗಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು, ಜಿಲ್ಲಾಧಿಕಾರಿಗಳು, ಜನಪ್ರತಿನಿಧಿಗಳ ಗಮನಕ್ಕೆ ಬಂದಿದ್ರೂ ಯಾರು ಕೂಡ ತಲೆಕೆಡಿಸಿಕೊಂಡಿಲ್ಲ.
ಹೀಗಾಗಿ ಅನಿವಾರ್ಯವಾಗಿ ಈ ಪುಟಾಣಿಗಳು ಅದೇ ಶಿಥಿಲಗೊಂಡಿರುವ ಕೊಠಡಿಯಲ್ಲಿ ಭಯ-ಆತಂಕದ ನಡುವೆ ಪಾಠ ಕೇಳಂಗಾಗಿದೆ. ಶಾಲಾ ಶಿಕ್ಷಕರನ್ನ ಕೇಳಿದ್ರೆ ಈ ಬಗ್ಗೆ ಎಲ್ಲರ ಗಮನ ಸೆಳೆಯಲಾಗಿದೆ ಅಂತಾರೆ, ಆದ್ರೆ ಯಾವುದೇ ಆಕ್ಷನ್ ಈ ಶಾಲೆಗೆ ಸಂಬಂಧಪಟ್ಟಂತೆ ಆಗಿಲ್ಲ. ಹೀಗಾಗಿ ವಿಧಿಯಿಲ್ಲದೇ ಪುಟಾಣಿಗಳು ಈಗ್ಲೋ, ಆಗ್ಲೋ ಬೀಳುವ ಹಂತದಲ್ಲಿರುವ ಕೊಠಡಿಯಲ್ಲಿ ಕುಳಿತು ಪಾಠ ಕೇಳುವ ದೌರ್ಭಾಗ್ಯ ಎದುರಾಗಿದೆ.
ಚಿಕ್ಕಮಗಳೂರು ತಾಲೂಕಿಗೆ ಒಳಪಡುವ ಈ ಶಾಲೆ, ಶೃಂಗೇರಿ ಕ್ಷೇತ್ರವನ್ನ ಪ್ರತಿನಿಧಿಸುವ ಟಿ.ಡಿ. ರಾಜೇಗೌಡ ವಿಧಾನಸಭಾ ಕ್ಷೇತ್ರಕ್ಕೆ ಬರುತ್ತೆ. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿಜಯ ಮಾಲೆ ಹಾಕಿಕೊಂಡಿರುವ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಶಾಲೆ ಕೂಡ ಹೌದು. ಹಾಗೆಯೇ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಿ.ಎನ್. ಜೀವರಾಜ್ ಅವರ ಕ್ಷೇತ್ರದ ವ್ಯಾಪ್ತಿಗೂ ಈ ಶಾಲೆ ಒಳಪಡುತ್ತೆ.
ಸಿ.ಟಿ. ರವಿ ಮನೆಯಿಂದ ಕೇವಲ 20 ಕಿ.ಮೀ. ದೂರದಲ್ಲೇ ಇದೆ ಈ ಬಡಶಾಲೆ!
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರ ಮನೆಯಿಂದ ಕೇವಲ 20 ಕಿಲೋ ಮೀಟರ್ ದೂರದಲ್ಲೇ ಈ ಬಡಶಾಲೆ ಇರೋದು ಮತ್ತೊಂದು ವಿಶೇಷ. ಹೀಗೆ ಒಬ್ಬರಿಗಿಂತ ಒಬ್ಬರು ಜಿಲ್ಲೆಯಲ್ಲಿ ಅತಿರಥ ಮಹಾರಥ ನಾಯಕರಿದ್ರೂ ಈ ಮಕ್ಕಳಿಗೆ ಕುಳಿತು ಕೊಳ್ಳಲು ಒಂದೊಳ್ಳೆ ಕೊಠಡಿಯಿಲ್ಲ ಅನ್ನೋದು ಮಾತ್ರ ನಿಜಕ್ಕೂ ನೋವಿನ ಸಂಗತಿ. ” ಮಳೆಗಾಲದಲ್ಲಿ ನಮ್ಮ ಕ್ಲಾಸ್ ರೂಂಗಳು ಬಿದ್ದು ಹೋಗಿವೆ.. ನಮಗೆ ಆ ಕೊಠಡಿಗಳಲ್ಲಿ ಕೂರುವುದಕ್ಕೆ ಭಯವಾಗುತ್ತಿದೆ, ಆದ್ರೂ ಬೇರೆ ದಾರಿ ಕಾಣದೇ ಅಲ್ಲೇ ಕುಳಿತು ಪಾಠ ಕೇಳಬೇಕಾಗಿದೆ, ಪ್ಲೀಸ್ ನಮಗೆ ಶಾಲೆಯ ಕೊಠಡಿಗಳನ್ನ ಕಟ್ಟಿಸಿಕೊಡಿ” ಅಂತಾ ವಿದ್ಯಾರ್ಥಿಗಳಾದ ಆತ್ಮೀಕಾ ಹಾಗೂ ಸಮಂಜಯ್ ಕೇಳಿಕೊಂಡಿದ್ದಾರೆ.
ಇದಕ್ಕೆ ಹೊಂದಿಕೊಂಡೇ ಇರುವ ಮೂರು ಕೊಠಡಿಗಳಲ್ಲಿ ಎರಡು ಕೊಠಡಿಗಳ ಗೋಡೆಗಳು ಬಿದ್ದಿವೆ. ಇನ್ನೊಂದು ಕೊಠಡಿಯಲ್ಲಿ ಮಕ್ಕಳು ಪಾಠ ಕೇಳುತ್ತಿದ್ದು, ಆ ಕ್ಲಾಸ್ ರೂಂ ಕೂಡ ಬೀಳುವ ಹಂತದಲ್ಲಿದೆ. ಒಂದು ವೇಳೆ ಏನಾದರೂ ಅಚಾತುರ್ಯ ಘಟಿಸಿ, ಅನಾಹುತ ಸಂಭವಿಸಿದ್ರೆ ಮಕ್ಕಳ ಜೀವಕ್ಕೆ ಕುತ್ತು ಬಂದ್ರೆ ಯಾರು ಹೊಣೆ. ಈ ಪ್ರಶ್ನೆಯನ್ನ ಟಿವಿ9 ಅಧಿಕಾರಿಗಳ ಬಳಿ ಕೇಳಿದಾಗ, ಈ ವಿಚಾರ ನಮಗೆ ಗೊತ್ತಿರಲಿಲ್ಲ, ಗಮನ ಹರಿಸುತ್ತೇವೆ ಎಂಬ ಉತ್ತರ ನೀಡಿದ್ದಾರೆ. ಅದೇನೆ ಇರಲಿ, ಈ ಶಾಲೆಯನ್ನ ನೋಡಿದಾಗ ರಾಜ್ಯ ಸರ್ಕಾರ ಕನ್ನಡ ಶಾಲೆ, ಸರ್ಕಾರಿ ಶಾಲೆಗಳ ಅಭಿವೃಧ್ಧಿಗೆ ಅಂತಾ ಕೋಟ್ಯಾಂತರ ರೂಪಾಯಿ ಹಣವನ್ನ ಬಿಡುಗಡೆ ಮಾಡುತ್ತೆ.
ಆದ್ರೆ ಆ ಹಣವೆಲ್ಲಾ ಎಲ್ಲಿಗೆ ಹೋಗಿ ಸೇರುತ್ತೆ ಅನ್ನೋ ಯಕ್ಷ ಪ್ರಶ್ನೆ ಎದುರಾಗುತ್ತೆ. ಇಂತಹ ಡಿಜಿಟಲ್ ಯುಗದಲ್ಲೂ ಈ ಮಕ್ಕಳು ಸಂಪೂರ್ಣ ಶಥಿಲಗೊಂಡಿರುವ ಈಗ್ಲೋ, ಆಗ್ಲೋ ಬೀಳುವ ಹಂತದಲ್ಲಿರುವ ಕೊಠಡಿಯಲ್ಲಿ ಕುಳಿತು ಪಾಠ ಕೇಳುವುದನ್ನ ನೋಡಿದ್ರೆ ಜನಸಾಮಾನ್ಯನ ಮೈಯಲ್ಲಿ ರಕ್ತ ಕುದಿಯುತ್ತೆ.
ಇನ್ನಾದ್ರೂ ಸಂಬಂಧಪಟ್ಟ ಅಧಿಕಾರಿಗಳು ಸೇರಿದಂತೆ ಶಿಕ್ಷಣ ಸಚಿವರು ಕೂಡಲೇ ಇತ್ತ ಗಮನಹರಿಸಿ ಅಪಾಯವನ್ನ ಮೈಮೇಲೆ ಎಳೆದುಕೊಂಡು ಪಾಠಕೇಳುತ್ತಿರುವ ಪುಟಾಣಿಗಳ ದನಿಗೆ ಸ್ಪಂದಿಸಬೇಕಿದೆ. ಒಟ್ಟಿನಲ್ಲಿ ಶಾಲೆ ಕಾಲೇಜುಗಳಲ್ಲಿ ಇರುವ ಸೌಲಭ್ಯಗಳ ಕೊರತೆ, ಶಿಕ್ಷಣದ ಅಸಮಾನತೆ ಸೇರಿದಂತೆ ಹತ್ತು ಹಲವು ಅನ್ಯಾಯಗಳ ವಿರುದ್ಧ ದನಿ ಎತ್ತಬೇಕಾದ ಯುವ ಸಮೂಹ ಕೆಲಸಕ್ಕೆ ಬಾರದ ಹೋರಾಟದಲ್ಲಿ ಮುಳಗಿರೋದು ನಿಜಕ್ಕೂ ದುರಂತವೇ ಸರಿ.
“ಶಾಲೆ ಕೊಠಡಿಗಳನ್ನ ದುರಸ್ತಿಗೊಳಿಸುವಂತೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದೇನೆ. ಆದರೆ ಯಾವುದೇ ಅನುದಾನ ಬಿಡುಗಡೆಯಾಗಿಲ್ಲ. ಮಕ್ಕಳನ್ನ ಶಿಥಿಲಗೊಂಡಿರುವ ಕೊಠಡಿಯಲ್ಲಿ ಕೂರಿಸಿಕೊಂಡು ಪಾಠ ಮಾಡುತ್ತಿರುವುದು ನನ್ನ ಗಮನಕ್ಕೆ ಬಂದಿಲ್ಲ, ಆ ರೀತಿ ನಡೀತಿದ್ರೆ ಖಂಡಿತವಾಗಿಯೂ ಪರ್ಯಾಯ ವ್ಯವಸ್ಥೆ ಮಾಡಲು ಹೇಳುತ್ತೇನೆ” ಎನ್ನುತ್ತಾರೆ ಮಂಜುನಾಥ್, ಬಿಇಒ, ಚಿಕ್ಕಮಗಳೂರು
“ಶಾಲೆಯ ಕೊಠಡಿ ಬಿದ್ದಿರುವ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳ ಗಮನಕ್ಕೆ ತಂದಿದ್ದೇವೆ. ಆದರೆ ಯಾರೂ ಕೂಡ ದುರಸ್ತಿ ಮಾಡಲು ಆಸಕ್ತಿ ತೋರಿಸುತ್ತಿಲ್ಲ. ಮಕ್ಕಳು ಭಯ ಹಾಗೂ ಆತಂಕದಲ್ಲೇ ಕುಳಿತು ಪಾಠ ಕೇಳಬೇಕಾದ ದುಃಸ್ಥಿತಿ ಬಂದಿದೆ. ಸರ್ಕಾರಕ್ಕೆ ಶಾಲೆಯನ್ನ ದುರಸ್ತಿ ಮಾಡಲು ಆಗದಿದ್ದರೆ ಹೇಳಲಿ, ಈ ಶಾಲೆಯ ಹಳೆ ವಿದ್ಯಾರ್ಥಿಗಳೆಲ್ಲಾ ಸೇರಿ ಹೇಗಾದ್ರೂ ಮಾಡಿ ಹಣ ಹೊಂದಿಸಿ ದುರಸ್ತಿ ಮಾಡುತ್ತೇವೆ” ಎಂದು ಹಳೆಯ ವಿದ್ಯಾರ್ಥಿ ಮಂಜು ಹೇಳಿದ್ದಾರೆ.
– ವಿಶೇಷ ವರದಿ, ಪ್ರಶಾಂತ್, ಟಿವಿ9 -ಚಿಕ್ಕಮಗಳೂರು
Published On - 7:41 am, Sat, 12 February 22