ಚಿಕ್ಕಮಗಳೂರು: 1200 ವರ್ಷಗಳ ಹಿಂದೆ ಕಾಶ್ಮೀರದ ಶಾರದಾ ಪೀಠದಿಂದ ಶಂಕರಾಚಾರ್ಯರು(Shankaracharya) ತಂದಿದ್ದರು ಎನ್ನುವ ಐತಿಹ್ಯವಿರುವ ಶೃಂಗೇರಿ ಶಾರದಾಂಬೆಯ(sharadamba) ಮೂರ್ತಿಯ ಪ್ರತಿರೂಪವನ್ನು ಶೃಂಗೇರಿ ಮಠದ ವತಿಯಿಂದ ಕಾಶ್ಮೀರದ ಶಾರದಾ ಪೀಠಕ್ಕೆ ಮಾಡಿಸಿ ಕೊಡಲು ಶೃಂಗೇರಿ ಮಠದ(sringeri mutt) ಗುರುವತ್ರಯರು ಒಪ್ಪಿಗೆ ಸೂಚಿಸಿದ್ದಾರೆ. ಕಾಶ್ಮೀರ ಶಾರದಾ ಸೇವಾ ಸಮಿತಿ ಅಧ್ಯಕ್ಷ ರವೀಂದ್ರ ಪಂಡಿತ್ ಶೃಂಗೇರಿಗೆ ಬಂದು ಮಠದ ಗುರವತ್ರಯರಾದ ಜಗದ್ಗುರು ಭಾರತೀ ತೀರ್ಥ ಹಾಗೂ ವಿಧುಶೇಖರ ಶ್ರೀಗಳ ಜೊತೆ ಈ ಕುರಿತು ಮಾತುಕತೆ ನಡೆಸಿದ್ದಾರೆ. ಈ ವೇಳೆ, ಶೃಂಗೇರಿ ಮಠದ ಗುರವತ್ರಯರು ಶೃಂಗೇರಿ ಶಾರದಾಂಬೆಯ ಮೂಲ ವಿಗ್ರಹದ ಪ್ರತಿಕೃತಿಯನ್ನು ಕಾಶ್ಮೀರ ಶಾರದಾ ಮಠಕ್ಕೆ ಕಳುಹಿಸಿಕೊಡಲು ಒಪ್ಪಿಗೆ ಸೂಚಿಸಿದ್ದಾರೆ.
ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಗಡಿಯ ಕುಪ್ವಾರ ಜಿಲ್ಲೆಯ ಟ್ವಿಟಾಲ್ನಲ್ಲಿ ಈ ದೇವಸ್ಥಾನ ನಿರ್ಮಾಣವಾಗಲಿದ್ದು, 2021ರ ಡಿಸೆಂಬರ್ನಲ್ಲೇ ದೇವಸ್ಥಾನಕ್ಕೆ ಶಂಕುಸ್ಥಾಪನೆ ಕೂಡ ನೆರವೇರಿದೆ. ದೇವಸ್ಥಾನ ನಿರ್ಮಾಣದ ಜವಾಬ್ದಾರಿ ಹೊತ್ತಿರುವ ಶಾರದಾ ಸೇವಾ ಸಮಿತಿ ಸದಸ್ಯರು ಶೃಂಗೇರಿಗೆ ಬಂದು ಶ್ರೀಗಳ ಜೊತೆ ಚರ್ಚಿಸಿದ್ದಾರೆ.
ಹಿಂದೆ ಕಾಶ್ಮೀರಿಯಲ್ಲಿದ್ದ ಶಾರದಾ ದೇವಿ ವಿಗ್ರಹ ನಂತರ ಶೃಂಗೇರಿ ಪೀಠಕ್ಕೆ ಸೇರಿತ್ತು. ಅಂದರೆ ಮೂಲ ವಿಗ್ರಹ ಈಗ ಶೃಂಗೇರಿ ಮಠದಲ್ಲಿದೆ. ಹಾಗಾಗಿ, ಅದೇ ರೂಪವನ್ನು ಹೋಲುವ ಶೃಂಗೇರಿ ಶಾರದಾಂಬೆಯ ಪ್ರತಿರೂಪದ ಮೂರ್ತಿಯನ್ನು ನಿರ್ಮಾಣ ಮಾಡಿಕೊಡಲಾಗುತ್ತದೆ ಎಂದು ಮಠದ ಗುರುಗಳು ಕಾಶ್ಮೀರ ಶಾರದಾ ಸೇವಾ ಸಮಿತಿಯ ರವೀಂದ್ರ ಪಂಡಿತ್‍ಗೆ ಭರವಸೆ ನೀಡಿದ್ದಾರೆ.
ಕಾಶ್ಮೀರದಲ್ಲಿ 2021ರ ಡಿಸೆಂಬರ್ 2 ರಂದೇ ಭೂಮಿ ಪೂಜೆ ನಡೆದಿದ್ದು, ದೇಗುಲದ ವಾಸ್ತುಶಿಲ್ಪ ಹಿಂದಿನ ಸರ್ವಜ್ಞ ಪೀಠದ ಮಾದರಿಯಲ್ಲೇ ಇರಲಿದೆ. ದೇವಾಲಯ ಕಲ್ಲುಗಳಿಂದ ನಿರ್ಮಾಣವಾಗಲಿದ್ದು, ನಾಲ್ಕು ದಿಕ್ಕಿಗೂ ನಾಲ್ಕು ಬಾಗಿಲು ಇರಲಿದೆ. ಚಳಿಗಾಲ ಹೊರತುಪಡಿಸಿ ಉಳಿದ ಎಲ್ಲಾ ಕಾಲದಲ್ಲೂ ದೇವರ ದರ್ಶನಕ್ಕೆ ಅವಕಾಶ ಇರಲಿದೆ.
ಇದನ್ನೂ ಓದಿ:
ಶೃಂಗೇರಿ ಶಾರದಾಂಬೆ ಸನ್ನಿಧಿಯಲ್ಲಿ 10 ಅಡಿ ಕಾಳಿಂಗ ಸರ್ಪ ಪ್ರತ್ಯಕ್ಷ! ವಿಡಿಯೋ ನೋಡಿ
Shocking News: ಕಾಳಿ ದೇವಿ ವಿಗ್ರಹದ ಪಾದದ ಮೇಲೆ ಕತ್ತರಿಸಿದ ತಲೆ ಪತ್ತೆ; ಉಳಿದ ದೇಹಕ್ಕಾಗಿ ಪೊಲೀಸರಿಂದ ಹುಡುಕಾಟ
Published On - 1:17 pm, Fri, 4 February 22