- Kannada News Photo gallery Cricket photos India vs New Zealand T20: Tilak Varma Injury Update and World Cup Impact
IND vs NZ: ಟಿ20 ಸರಣಿ ಮೊದಲ 3 ಪಂದ್ಯಗಳಿಂದ ತಿಲಕ್ ವರ್ಮಾ ಔಟ್; ಉಳಿದೆರಡು ಪಂದ್ಯಗಳಿಗೂ ಅನುಮಾನ!
Tilak Varma Out of NZ T20 Series: ಭಾರತ ಮತ್ತು ನ್ಯೂಜಿಲೆಂಡ್ ಟಿ20 ಸರಣಿ ಆರಂಭಕ್ಕೂ ಮುನ್ನ ಟೀಂ ಇಂಡಿಯಾಗೆ ಆಘಾತ ಎದುರಾಗಿದೆ. ಯುವ ಬ್ಯಾಟ್ಸ್‌ಮನ್ ತಿಲಕ್ ವರ್ಮಾ ಗಾಯಗೊಂಡು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಹೀಗಾಗಿ, ಅವರು ನ್ಯೂಜಿಲೆಂಡ್ ವಿರುದ್ಧದ ಮೊದಲ ಮೂರು T20 ಪಂದ್ಯಗಳಿಂದ ಹೊರಗುಳಿಯಲಿದ್ದಾರೆ. ಅವರ ಚೇತರಿಕೆ ವಿಳಂಬವಾಗಿದ್ದು, ಮುಂಬರುವ T20 ವಿಶ್ವಕಪ್‌ನಲ್ಲಿಯೂ ಆಡುವ ಅವಕಾಶ ಅನುಮಾನವಾಗಿದೆ. ಶ್ರೇಯಸ್ ಅಯ್ಯರ್‌ಗೆ ಅವಕಾಶ ಸಿಗುವ ಸಾಧ್ಯತೆ ಇದೆ.
Updated on: Jan 08, 2026 | 9:23 PM

ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿ ಇದೇ ಜನವರಿ 11 ರಿಂದ ಆರಂಭವಾಗಲಿದೆ. ಆ ಬಳಿಕ ಉಭಯ ತಂಡಗಳ ನಡುವೆ ಐದು ಪಂದ್ಯಗಳ ಟಿ20 ಸರಣಿಯೂ ನಡೆಯಲಿದೆ. ಸರಣಿಯ ಮೊದಲ ಪಂದ್ಯ ಜನವರಿ 21 ರಂದು ನಡೆಯಲಿದೆ. ಆದರೆ ಈ ಸರಣಿ ಆರಂಭಕ್ಕೂ ಮುನ್ನ ಭಾರತ ತಂಡಕ್ಕೆ ಆಘಾತ ಎದುರಾಗಿದೆ.

ವಿಜಯ್ ಹಜಾರೆ ಟ್ರೋಫಿ ಪಂದ್ಯದ ಸಮಯದಲ್ಲಿ ಗಂಭೀರ ಗಾಯಕ್ಕೆ ತುತ್ತಾಗಿದ್ದ ತಂಡದ ಯುವ ಬ್ಯಾಟ್ಸ್‌ಮನ್ ತಿಲಕ್ ವರ್ಮಾ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಅವರ ಚೇತರಿಕೆಗೆ ಇನ್ನು ಸಮಯ ಹಿಡಿಯಲಿದ್ದು, ಹೀಗಾಗಿ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯ ಮೊದಲ ಮೂರು ಪಂದ್ಯಗಳಿಂದ ಹೊರಗುಳಿಯಲಿದ್ದಾರೆ ಎಂದು ಬಿಸಿಸಿಐ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಮಾಹಿತಿ ನೀಡಿದೆ.

ಟಿ20 ಟೂರ್ನಿಯ ಮೊದಲ ಮೂರು ಪಂದ್ಯಗಳಲ್ಲಿ ತಿಲಕ್ ವರ್ಮಾ ಆಡುವುದಿಲ್ಲ ಎಂದು ಖಚಿತಪಡಿಸಿರುವ ಬಿಸಿಸಿಐ, ಸರಣಿಯ ಉಳಿದೆರಡು ಪಂದ್ಯಗಳಲ್ಲಿ ಅವರು ಆಡುವುದು ಅವರ ಫಿಟ್ನೆಸ್ ಮೇಲೆ ಅವಲಂಬಿತವಾಗಿರಲಿದೆ ಎಂದಿದೆ. ಇದರರ್ಥ ಈ ಸರಣಿಯಲ್ಲಿ ತಿಲಕ್ ಆಡುವುದು ಭಾಗಶಃ ಅನುಮಾನವಾಗಿದೆ. ಇದರ ಜೊತೆಗೆ ಆ ಬಳಿಕ ನಡೆಯಲಿರುವ ಟಿ20 ವಿಶ್ವಕಪ್ನಲ್ಲೂ ತಿಲಕ್ ಭಾಗವಹಿಸುವುದು ಅನುಮಾನ ಎಂತಲೇ ಹೇಳಬಹುದು.

ವಿಜಯ್ ಹಜಾರೆ ಟ್ರೋಫಿಯಲ್ಲಿ ಬಂಗಾಳ ವಿರುದ್ಧದ ಪಂದ್ಯದ ಸಮಯದಲ್ಲಿ ತಿಲಕ್ ವರ್ಮಾ ತೊಡೆಸಂದು ನೋವಿನಿಂದ ಬಳಲುತ್ತಿದ್ದರು. ಹೀಗಾಗಿ ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಆ ಬಳಿಕ ಅವರಿಗೆ ಶಸ್ತ್ರಚಿಕಿತ್ಸೆಯನ್ನು ಮಾಡಲಾಗಿದೆ. ಇದೀಗ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದರೂ, ಅವರು ಯಾವಾಗ ಮೈದಾನಕ್ಕೆ ಮರಳಲಿದ್ದಾರೆ ಎಂಬುದು ಖಚಿತವಾಗಿಲ್ಲ.

ಈ ತಿಂಗಳು ಟೀಂ ಇಂಡಿಯಾ, ನ್ಯೂಜಿಲೆಂಡ್ ವಿರುದ್ಧ ಟಿ20 ಸರಣಿಯನ್ನು ಆಡಲಿದ್ದು, ಆ ಬಳಿಕ ಫೆಬ್ರವರಿ 7 ರಿಂದ ಆರಂಭವಾಗುವ ಟಿ20 ವಿಶ್ವಕಪ್ನಲ್ಲಿ ಕಣಕ್ಕಿಳಿಯಲಿದೆ. ಹೀಗಾಗಿ ತಿಲಕ್ ವರ್ಮಾ ಶಸ್ತ್ರಚಿಕಿತ್ಸೆಗೆ ಒಳಗಾಗಿರುವುದು ತಂಡವನ್ನು ಸಂಕಷ್ಟಕ್ಕೀಡುಮಾಡಿದೆ. ಏಕೆಂದರೆ ತಿಲಕ್ ವರ್ಮಾ ಭಾರತ ಟಿ20 ತಂಡದ ಆಧಾರಸ್ತಂಭವೂ ಆಗಿದ್ದಾರೆ. ಒಂದು ವೇಳೆ ತಿಲಕ್ ವಿಶ್ವಕಪ್ ವೇಳೆಗೆ ಗುಣಮುಖರಾಗದಿದ್ದರೆ, ಅವರ ಬದಲಿಗೆ ಶ್ರೇಯಸ್ ಅಯ್ಯರ್‌ಗೆ ಆಡುವ ಅವಕಾಶ ಸಿಗಬಹುದು.

ಭಾರತ ಮತ್ತು ನ್ಯೂಜಿಲೆಂಡ್ ಟಿ20 ಸರಣಿ ಫೆಬ್ರವರಿ 21 ರಂದು ಆರಂಭವಾಗಲಿದೆ. ಮೊದಲ ಟಿ20 ನಾಗ್ಪುರದಲ್ಲಿ ನಡೆಯಲಿದ್ದು, ಎರಡನೇ ಟಿ20 ಜನವರಿ 23 ರಂದು ರಾಯ್ಪುರದಲ್ಲಿ, ಮೂರನೇ ಟಿ20 ಜನವರಿ 26 ರಂದು ಗುವಾಹಟಿಯಲ್ಲಿ ನಡೆಯಲಿದೆ. ಹಾಗೆಯೇ ನಾಲ್ಕನೇ ಟಿ20 ಜನವರಿ 28 ರಂದು ವೈಜಾಗ್‌ನಲ್ಲಿ ನಡೆದರೆ, ಅಂತಿಮ ಟಿ20 ಜನವರಿ 31 ರಂದು ತಿರುವನಂತಪುರದಲ್ಲಿ ನಡೆಯಲಿದೆ.
